ದಾವಣಗೆರೆ :
ಆರೋಗ್ಯಕರ ಜೀವನಕ್ಕಾಗಿ ಹಿತಮಿತವಾಗಿ ಆಹಾರ ಸೇವಿಸಬೇಕೆಂದು ವಿರಕ್ತಮಠದ ಶ್ರೀಬಸವಪ್ರಭು ಸ್ವಾಮೀಜಿ ಕರೆ ನೀಡಿದರು.ನಗರದ ವಿರಕ್ತ ಮಠದಲ್ಲಿ ಭಾನುವಾರ ಕರುಣಾ ಜೀವ ಕಲ್ಯಾಣ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ 200ನೇ ಯಶಸ್ವಿ ಆರೋಗ್ಯ ತಪಾಸಣಾ ಶಿಭಿರದ ಸಂಭ್ರಮಾಚರಣೆಯ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಮನುಷ್ಯನ ಆರೋಗ್ಯ ಚೆನ್ನಾಗಿರಬೇಕಾದರೆ, ಯಾವುದೇ ದುಶ್ಚಟಗಳಿಗೆ ಬಲಿಯಾಗಬಾರದು ಹಾಗೂ ಹಿತಮಿತ ಆಹಾರ ಸೇವಿಸಬೇಕೆಂದು ಕಿವಿಮಾತು ಹೇಳಿದರು.
ಎಲ್ಲದಕ್ಕಿಂತ ದೊಡ್ಡ ಸಂಪತ್ತು ಆರೋಗ್ಯವಾಗಿದೆ. ಮನುಷ್ಯನ ದೇಹ ಒಂದು ಬಾರಿ ರಿಪೇರಿಗೆ ಬಂದರೆ, ಅದನ್ನು ಮೊದಲಿನಂತೆ ಮಾಡಲಾಗುವುದಿಲ್ಲ. ಆದ್ದರಿಂದ ದೇವರು ಕೊಟ್ಟಿರುವ ದೇಹವನ್ನು ಅತೀ ಎಚ್ಚರಿಕೆಯಿಂದ ಕಾಪಾಡಿಕೊಳ್ಳಬೇಕಾಗಿದೆ. ಆದರೆ, ಇಂದು ಯುವಕರಲ್ಲಿ ಆರೋಗ್ಯದ ನಿರ್ಲಕ್ಷ್ಯ ಹೆಚ್ಚಾಗುತ್ತಿದ್ದು, ಕಲ್ಲು ತಿಂದರೂ ಅರಿಗಿಸಿಕೊಳ್ಳ ಬಲ್ಲೇ ಎಂಬ ಅಹಮ್ಮಿನಿಂದ ದುಶ್ಚಟಗಳ ದಾಸರಾಗುತ್ತಿರುವುದು ನಿಜಕ್ಕೂ ವಿಪರ್ಯಾಸ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಸ್ತುತ ಶ್ರಮ ರಹಿತ ಜೀವನದಿಂದಾಗಿ, ಶರೀರ ರೋಗದ ಗೂಡಾಗಿ ಮಾರ್ಪಟ್ಟಿದೆ. ಬಹುತೇಕರು ಚೆನ್ನಾಗಿ ಊಟ ಮಾಡುತ್ತಾರೆ. ಆದರೆ, ಅದನ್ನು ಪಚನ ಮಾಡಿಕೊಳ್ಳುವಷ್ಟು ದೇಶಕ್ಕೆ ಶ್ರಮ ನೀಡದಿರುವುದರಿಂದ ಅದು ಕೊಬ್ಬು ಆಗಿ ಮಾರ್ಪಟ್ಟು, ಅತೀ ಹೆಚ್ಚು ಕೊಬ್ಬು ಶೇಖರಣೆಯಾಗಿ ಡೊಳ್ಳು ಹೊಟ್ಟೆಯಾಗಿ ಬಿಡುತ್ತದೆ. ಹೀಗೆ ಅತಿಯಾದ ಆಹಾರ ಸೇವನೆ ಹಾಗೂ ಬೊಜ್ಜಿನಿಂದ ಸಕ್ಕರೆ ಕಾಯಿಲೆ ಉಂಟಾಗಿ, ದೇಹದ ಒಂದೊಂದೇ ಅಂಗಾಗವನ್ನು ಕೊಲ್ಲುತ್ತಾ ಹೋಗುವುದಲ್ಲದೇ, ರಕ್ತದೊತ್ತಡ ಹೆಚ್ಚಾಗಿ, ಹೃದಯ ಸಂಬಂಧಿ ಕಾಯಿಲೆಗಳಿಗೆ ದೇಹ ತುತ್ತಾಗುತ್ತದೆ.
ಆದ್ದರಿಂದ ಮನುಷ್ಯ ಆರೋಗ್ಯಯುತ ಜೀವನಕ್ಕೆ ಊಟದಲ್ಲಿ ನಿಯಂತ್ರಣ ಹೊಂದುವುದರ ಜೊತೆಗೆ, ಶಾರೀರಿಕ ಶ್ರಮ ಹಾಕಬೇಕು. ದೇಹವನ್ನು ಶ್ರಮಕ್ಕೆ ಒಳಪಡಿಸಿದಾಗ ದೇಹದಿಂದ ಬೇವರು ಹೋದರೆ, ಯಾವುದೇ ರೋಗಗಳು ಬರುವುದಿಲ್ಲ. ಆದರೆ, ಮನುಷ್ಯ ಊಟ ಮಾಡುವಾಗ ಬೇವರು ಬರುವುದು ರೋಗದ ಲಕ್ಷಣವಾಗಿದೆ ಎಂದರು.
ಕರುಣಾ ಜೀವ ಕಲ್ಯಾಣ ಟ್ರಸ್ಟ್ ವತಿಯಿಂದ ಉಚಿತ ಆರೋಗ್ಯ ಶಿಬಿರ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯವಾಗಿದೆ. ಇನ್ನೊಬ್ಬರ ಸೇವೆ ಮಾಡುವುದರಿಂದ ಮನುಷ್ಯ ಜನ್ಮ ಸಾರ್ಥಕವಾಗಲಿದೆ. ಹಸಿದವರ, ಕಷ್ಟದಲ್ಲಿದ್ದವರ ಸೇವೆ ಮಾಡುವುದು ದೇವರ ಪೂಜೆ ಮಾಡಿದಷ್ಟೇ ಸಮಾನ ಎಂದರು.
ಕರುಣಾ ಜೀವ ಕಲ್ಯಾಣ ಟ್ರಸ್ಟ್‍ನ ಅಧ್ಯಕ್ಷ ಡಾ.ಬಿ.ಎಂ.ವಿಶ್ವನಾಥ್ ಮಾತನಾಡಿ, ದಾನಿಗಳು, ವೈದ್ಯರು ಹಾಗೂ ಔಷಧ ಮಾರಾಟ ಪ್ರತಿನಿಧಿಗಳಿಂದ ಟ್ರಸ್ಟ್‍ನಿಂದ 200 ಆರೋಗ್ಯ ತಪಾಸಣಾ ಶಿಬಿರಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದೇವೆ. ಪ್ರತಿ ಶಿಬಿರಕ್ಕೂ 15ರಿಂದ 20 ನ ಹೊಸಬರು ಬರುತ್ತಾರೆ. ಆದರೆ, ನಮ್ಮ ಬಳಿಯಲ್ಲಿರುವ ಔಷಧಗಳಿಂದ 80ರಿಂದ 100 ಜನರಿಗೆ ಮಾತ್ರ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿದೆ. ಅದರಲ್ಲಿಯೂ ನಾವು ಪ್ರತಿ ತಿಂಗಳು 120 ಜನರ ಆರೋಗ್ಯ ತಪಾಸಣೆ ನಡೆಸಿ, ಔಷದೋಪಚಾರ ಮಾಡುತ್ತಿದ್ದೇವೆ ಎಂದು ಮಾಹಿತಿ ನೀಡಿದರು.
ನಾನು ನಗರದ ಎಂಸಿಸಿ ಎ ಬ್ಲಾಕ್‍ನ ಸೂಪರ್ ಮಾರ್ಕೇಟ್‍ನ ಮಳಿಗೆಯಲ್ಲಿ ಪ್ರತಿವಾರ ಬುಧವಾರದಂದು ಬೆಳಿಗ್ಗೆ 2 ಗಂಟೆಗಳ ಕಾಲ ಉಚಿತ ತಪಾಸಣೆ ನಡೆಸುತ್ತೇನೆ. ಹೀಗಾಗಿ ಈ ಶಿಬಿರದಲ್ಲಿ ತಪಾಸಣೆಗೆ ಒಳಗಾಗಲು ಸಾಧ್ಯವಾಗದವರು ಅಲ್ಲಿ ಬಂದು ತಪಾಸಣೆ ಮಾಡಿಕೊಳ್ಳಬಹುದು ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಹುಬ್ಬಳ್ಳಿ ಕಾರಟಗಿ ಆಸ್ಪತ್ರೆಯ ವೈದ್ಯ ಡಾ.ರಾಮಚಂದ್ರ ಕಾರಟಗಿ ಮಾತನಾಡಿ, ಅರ್ಹರಿಗೆ ನೀಡುವ ಸೇವೆ ಸ್ಮರಣೀಯವಾಗಿರುತ್ತದೆ.ಇದರಿಂದ ಬದುಕು ಸಾರ್ಥಕವಾಗುತ್ತದೆ.12ನೇ ಶತಮಾನದಲ್ಲೇ ಬಸವಣ್ಣ ನವರು ಕಾಯಕನಿಷ್ಠೆಯ ತತ್ವ ಬೋಧಿಸಿದ್ದರು.ದಯವೇ ಧರ್ಮದ ಮೂಲ ಎಂದು ಅವರು ಹೇಳಿದ್ದಾರೆ. ಅದರಂತೆ ನಾವು ನಡೆದು ಕೊಳ್ಳಬೇಕು. ಬಡವರಿಗೆನೊಂದವರಿಗೆ ನೆರವು ನೀಡುವುದರಿಂದ ಸಾರ್ಥಕತೆ ಲಭಿಸುತ್ತದೆ.ಮಾನವರಾಗಿ ಜನ್ಮತಾಳಿದ ಮೇಲೆ ಪರಸ್ಪರರಿಗೆ ಸಹಾಯ ನೀಡುವುದು ನಮ್ಮ ಧರ್ಮ.ಈ ನಿಟ್ಟಿನಲ್ಲಿ ಕರುಣಾ ಜೀವ ಕಲ್ಯಾಣ ಟ್ರಸ್ಟ್ ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದರು.
ಹರಿಹರ ತಾಲೂಕು ಆಸ್ಪತ್ರೆ ವೈದ್ಯೆ ಡಾ.ಸವಿತಾ ಮಾತನಾಡಿ, ಇಂದು ಇಲ್ಲಿ ನನಗೆ ಸನ್ಮಾನ ಸ್ವೀಕರಿಸಲು ನಿಜಕ್ಕೂ ಮುಜುಗರವಾಗುತ್ತಿದೆ. ಏಕೆಂದರೆ, ನಾನು ಪ್ರತಿಫಲಾಪೇಕ್ಷೆ ಇಲ್ಲದೇ ಈ ವರೆಗೂ ಸೇವೆ ಮಾಡಿಲ್ಲ. ನಾನು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಸೇವೆ ಮಾಡಿರಬಹುದು.
ಆದರೆ, ಸರ್ಕಾರದಿಂದ ಸಂಭಾವನೆ ಪಡೆದು ಮಾಡಿದ್ದೇನೆ. ಆದ್ದರಿಂದ ಇನ್ನೂ ಮುಂದೆ ನಿಮ್ಮ ಟ್ರಸ್ಟ್ ಜೊತೆಗೆ ನನ್ನನ್ನು ತೊಡಗಿಸಿಕೊಂಡು ಸೇವೆ ಮಾಡಲು ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದರು.ಈ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಅತೀ ಹೆಚ್ಚು ಸೇವೆ ನೀಡಿರುವ ಹರಿಹರ ತಾಲೂಕು ಆಸ್ಪತ್ರೆಯ ವೈದ್ಯೆ ಡಾ.ಸವಿತಾ ಹಾಗೂ ಯೋಧರು ಮತ್ತು ಹಿರಿಯ ನಾಗರೀಕರಿಗೆ ಉಚಿತ ಸೇವೆ ನೀಡುತ್ತಿರುವ ಹುಬ್ಬಳ್ಳಿಯ ವೈದ್ಯ ಡಾ.ರಾಮಚಂದ್ರ ಕಾರಟಗಿ ಅವರಿಗೆ ಕರುಣಾ ಸೇವಾ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ಟ್ರಸ್ಟ್‍ನ ಕಾರ್ಯದರ್ಶಿ ಶಿವನಕೆರೆ ಬಸವಲಿಂಗಪ್ಪ ಪ್ರಾಸ್ತಾವಿಕ ಮಾತನಾಡಿದರು. ಗೌರವಾಧ್ಯಕ್ಷೆ ಡಾ.ಶಾರದಾ ಶೆಟ್ಟಿ, ಸಿ.ಜಿ.ದಿನೇಶ್ ಉಪಸ್ಥಿತರಿದ್ದರು. ಮಂಜುಳಾ ಬಸವಲಿಂಗಪ್ಪ ಸನ್ಮಾನಿತರನ್ನು ಪರಿಚಯಿಸಿದರು. ಶಿವಪ್ಪ ಸ್ವಾಗತಿಸಿದರು, ವೀಣಾ ಕೃಷ್ಣಮೂರ್ತಿ ಕಾರ್ಯಕ್ರಮ ನಿರೂಪಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
