ತುಮಕೂರು:
ಕರೊನಾ ಹೆಮ್ಮಾರಿ ಭಾರತದಲ್ಲಿಯೂ ತನ್ನ ರುದ್ರ ನರ್ತನ ಪ್ರದರ್ಶಿಸುತ್ತಿದೆ. ದೇಶಾದ್ಯಂತ ಸೋಂಕಿತರ ಸಂಖ್ಯೆ 400 ದಾಟಿದೆ. ಪ್ರಕರಣಗಳನ್ನು ತಡೆಯಲು ಸರ್ಕಾರಗಳು ಇನ್ನಿಲ್ಲದ ಕಸರತ್ತು ನಡೆಸುತ್ತಿವೆ. ಲಾಕ್‍ಡೌನ್ ನಂತಹ ಅನಿವಾರ್ಯ ಕ್ರಮಗಳಿಗೆ ಮುಂದಾಗಿವೆ. ಸರ್ಕಾರದ ಆದೇಶಗಳನ್ನು ಪಾಲಿಸುವುದು ಪ್ರಜೆಗಳಾದ ನಮ್ಮೆಲ್ಲರ ಕರ್ತವ್ಯವಾಗಬೇಕು.
ಚೀನಾ ನಂತರ ಇಟಲಿಯ ಪರಿಸ್ಥಿತಿಯನ್ನು ಒಮ್ಮೆ ಅವಲೋಕಿಸಿದರೆ ಆತಂಕ ಎದುರಾಗುತ್ತದೆ. ಒಂದೇ ದಿನಕ್ಕೆ ನೂರಾರು ಜನ ಅಲ್ಲಿ ಬಲಿಯಾಗುತ್ತಿದ್ದಾರೆ. ಭಾರತದಲ್ಲಿ ಈಗ ಇನ್ನೂ ಎರಡನೇ ಹಂತದಲ್ಲಿ ಈ ವೈರಾಣು ಸೋಂಕು ಹಬ್ಬುತ್ತಿದೆ. ಒಂದು ವೇಳೆ ಮೂರನೇ ಹಂತಕ್ಕೆ ಜಿಗಿದರೆ ಪರಿಸ್ಥಿತಿ ಕೈಮೀರಿ ಹೋಗುವುದರಲ್ಲಿ ಯಾವುದೇ ಸಂಶಯವಿಲ್ಲ. ಈ ಕಾರಣಕ್ಕಾಗಿಯೇ ಸರ್ಕಾರಗಳು ವಿವಿಧ ಹಂತದ ನಿರ್ಬಂಧಗಳನ್ನು ಹೇರುತ್ತಲೇ ಬರುತ್ತಿವೆ. ಸರ್ಕಾರ ಹೇರುವ ಬದಲು ನಮಗೆ ನಾವೇ ಕೆಲವು ನಿರ್ಬಂಧಗಳನ್ನು ಹೇರಿಕೊಳ್ಳುವ ತುರ್ತು ಅಗತ್ಯ ಇಂದು ಅನಿವಾರ್ಯ. ಈ ಬಗ್ಗೆ ಪ್ರತಿಯೊಬ್ಬರೂ ಚಿಂತಿಸಲೇಬೇಕಿದೆ.
ಇಂದು ಈ ಜಿಲ್ಲೆಯಲ್ಲಿ ಕರೊನಾ ವೈರಸ್ ಸೋಂಕು ವ್ಯಕ್ತಿಗಳು ಇಲ್ಲದೆ ಇರಬಹುದು. ಹಾಗಂತ ಆರಾಮಾಗಿ ಇರಲು ಸಾಧ್ಯವಿಲ್ಲ. ನಾಳೆ ಎಲ್ಲಿಂದ ಹೇಗೆ ಬೇಕಾದರೂ ಇದು ನುಸುಳಬಹುದು. ಏಕೆಂದರೆ ಈ ಭಯಾನಕ ರೋಗಾಣು ಎಲ್ಲಿರುತ್ತೆ ಎಂದು ಹೇಳಲಾಗದು. ಎಲ್ಲಿಂದಲೋ ಬರುವ ಒಬ್ಬ ವ್ಯಕ್ತಿಗೆ ವೈರಾಣು ಸೋಂಕಿದ್ದರೆ ಆತ ನಮ್ಮಲ್ಲಿಗೆ ಬಂದರೆ ಬಹುಬೇಗನೆ ಅದು ಅಂಟಿಕೊಳ್ಳುವ ಎಲ್ಲಾ ಸಾಧ್ಯತೆಗಳೂ ಇರುತ್ತವೆ. ಈ ಕಾರಣಕ್ಕಾಗಿಯೇ ಜನರು ಸೇರಬಾರದು, ಪರಸ್ಪರ ಹತ್ತಿರ ವ್ಯವಹರಿಸಬಾರದು ಎಂಬ ನಿರ್ಬಂಧಗಳನ್ನು ಹಾಕುತ್ತಿರುವುದು.
ಮನುಷ್ಯರನ್ನು ಮುಟ್ಟಲೇಬೇಕೆಂದಿಲ್ಲ. ವೈರಾಣು ಸೋಂಕಿತ ವ್ಯಕ್ತಿ ಮುಟ್ಟಿದ ಯಾವುದೇ ವಸ್ತುಗಳನ್ನು ಮುಟ್ಟಿದರೂ ಆ ವೈರಾಣು ಸೋಂಕಿ ಹರಡುವ ಸಾಧ್ಯತೆಗಳು ಹೆಚ್ಚು. ನಮ್ಮ ದೇಶದ ಜನಸಂಖ್ಯೆ, ರಾಜ್ಯದ ಜನಸಂಖ್ಯೆಯನ್ನು ಗಮನಿಸಿದರೆ ಅತಿ ಹೆಚ್ಚು ಜನಸಾಂದ್ರತೆಯನ್ನು ನಾವು ಹೊಂದಿದ್ದೇವೆ.
ಇಲ್ಲಿ ಏನಾದರೂ ಚೀನಾದಂತೆ, ಇಟಲಿಯಂತೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಾ ಹೋದರೆ ವಿಶೇಷ ವಾರ್ಡ್‍ಗಳನ್ನು ಎಲ್ಲಿಂದ ತರುವುದು? ವೆಂಟಿಲೇಟರ್‍ಗಳನ್ನು ಅಳವಡಿಸುವುದಾದರೂ ಹೇಗೆ? ಇಂತಹ ಹಲವು ಹತ್ತು ಪ್ರಶ್ನೆಗಳು ಮತ್ತು ಸಮಸ್ಯೆಗಳು ಎದುರಾಗುತ್ತವೆ. ಬೆಂಗಳೂರಿನಲ್ಲಿಯೇ ಒಂದು ಕೋಟಿಗೂ ಮೀರಿದ ಜನಸಂಖ್ಯೆ ಇದೆ. ಅಲ್ಲಿರುವ ಜನಸಂಖ್ಯೆಗೆ ವಿಶೇಷ ಚಿಕಿತ್ಸಾ ವಾರ್ಡ್‍ಗಳನ್ನು ಸಿದ್ಧಪಡಿಸುವುದು ಹೇಗೆ? ಇವೆಲ್ಲವೂ ಅತ್ಯಂತ ಗಂಭೀರ ಸಮಸ್ಯೆಗಳಾಗಿವೆ. ಈ ಕಾರಣಕ್ಕಾಗಿಯೇ ವೈರಾಣು ಉಲ್ಬಣವಾಗದಂತೆ ನೋಡಿಕೊಳ್ಳಬೇಕಾದ ಎಚ್ಚರಿಕೆ ಪ್ರತಿಯೊಬ್ಬರ ಮೇಲೆಯೂ ಇದೆ.
ಇನ್ನು ಕೂಲಿ ಕಾರ್ಮಿಕರ ಹಾಗೂ ಇತರೆ ಬಡಬಗ್ಗರ ಜೀವನ ಸ್ಥಿತಿ ಅತ್ಯಂತ ಅಯೋಮಯವಾಗಿದೆ. ಆದರೂ ಜೀವ ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಇರುವುದರಿಂದ ಇಂತಹವರಿಗೆಲ್ಲ ಪರ್ಯಾಯ ಮಾರ್ಗಗಳನ್ನು ಹುಡುಕಲೇಬೇಕು. ಸರ್ಕಾರಗಳು ಈ ನಿಟ್ಟಿನಲ್ಲಿ ಹೆಚ್ಚು ಕಾರ್ಯೋನ್ಮುಖವಾಗಬೇಕು. ಕೇರಳ ಸರ್ಕಾರ ಮನೆ ಬಾಗಿಲಿಗೆ ಕೆಲವು ಅಗತ್ಯ ವಸ್ತುಗಳನ್ನು ನೀಡಿ ನೌಕರ, ಕಾರ್ಮಿಕ ವರ್ಗಕ್ಕೆ ವಿಶೇಷ ಒತ್ತು ನೀಡಿರುವಂತೆ ಇಲ್ಲಿಯೂ ಕ್ರಮ ಕೈಗೊಳ್ಳಬೇಕು. ದೇಶದ ಎಲ್ಲ ಕಡೆಯೂ ಕೆಲವು ದಿನಗಳ ಕಾಲ ಅಗತ್ಯ ವಸ್ತುಗಳನ್ನು ವಿತರಿಸುವ ವ್ಯವಸ್ಥೆ ಆಗಬೇಕು.
ಹಿಂದೆಲ್ಲಾ ಪ್ಲೇಗ್ ಮಹಾಮಾರಿ ಬಂದು ಊರಿಗೆ ಊರೇ ನಿರ್ನಾಮವಾಗುತ್ತಿದ್ದವು. ಆನಂತರ ವಿವಿಧ ಹೆಸರಿನ ಕಾಯಿಲೆಗಳು ವಕ್ಕರಿಸಿದರೂ ಅದಕ್ಕೆ ಚಿಕಿತ್ಸೆಗಳನ್ನು ಕಂಡು ಹಿಡಿಯಲಾಯಿತು. ಈಗ ಕರೊನಾ ಹೆಸರಿನಲ್ಲಿ ಮಹಾಮಾರಿ ವಕ್ಕರಿಸಿದೆ. ಈ ಮಹಾಮಾರಿಯನ್ನು ಅತ್ಯಂತ ಜಾಗ್ರತೆಯಿಂದ ನಮಗೆ ನಾವೇ ಕೆಲವು ನಿರ್ಬಂಧಗಳನ್ನು ಹಾಕಿಕೊಂಡು ತಡೆಗಟ್ಟುವುದು ಹೆಚ್ಚು ಸೂಕ್ತ. ಮನೆ ಬಿಟ್ಟು ಎಲ್ಲಿಗೋ ಹೋಗುವುದು, ಹೇಗೆಂದರೆ ಹಾಗೆ ತಿರುಗಾಡುವುದು, ಆರೋಗ್ಯ ಸೂಚನೆಗಳನ್ನು ಪಾಲಿಸದೆ ಇರುವುದು, ವೈರಾಣು ನನಗೆ ಬರಲು ಸಾಧ್ಯವೇ ಇಲ್ಲ ಎಂಬ ಧೋರಣೆ ತೋರುವುದು ಇವೆಲ್ಲವೂ ಸದ್ಯಕ್ಕೆ ಒಳ್ಳೆಯ ಲಕ್ಷಣಗಳಂತೂ ಅಲ್ಲ. ಕೆಲವು ನಿರ್ಬಂಧ ಮತ್ತು ಮುಂಜಾಗರೂಕತೆ ಕ್ರಮಗಳನ್ನು ಪ್ರತಿಯೊಬ್ಬರೂ ಕೈಗೊಳ್ಳುವ ಮೂಲಕ ಈ ಮಹಾಮಾರಿಯನ್ನು ತಡೆಗಟ್ಟಲು ಕೈಜೋಡಿಸಬೇಕಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
