ದ್ವೇಷ ಸಾಧನೆ ಬೇಡ, ಆರೋಗ್ಯಕರ ಸ್ಪರ್ಧೆ ಇರಲಿ

ದಾವಣಗೆರೆ

         ಕ್ರೀಡಾಪಟುಗಳು ಕ್ರೀಡೆಗಳಲ್ಲಿ ಆರೋಗ್ಯಕರ ಪೈಪೋಟಿ ನಡೆಸಬೇಕೆ ಹೊರತು, ದ್ವೇಷ ಸಾಧಿಸಬಾರದು ಎಂದು ಅಪರ ಜಿಲ್ಲಾಧಿಕಾರಿ ಪದ್ಮಾ ಬಸವಂತಪ್ಪ ಕರೆ ನೀಡಿದರು.

         ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಗುರುವಾರದಿಂದ ಏರ್ಪಡಿಸಿರುವ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾ ಕೂಟವನ್ನು ಪಾರಿವಾಳ ಹಾರಿ ಬಿಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಕ್ರೀಡೆ ಸೇರಿದಂತೆ ಯಾವುದೇ ಸ್ಪರ್ಧೆಗಳು ನಡೆಯಲಿ ಅವರು ಆರೋಗ್ಯಕರ ಪೈಪೋಟಿಯಿಂದ ಕೂಡಿರಬೇಕೇ, ಹೊರತು ದ್ವೇಷ ಸಾಧನೆಗೆ ವೇದಿಕೆಯಾಗಬಾರದು. ಆದ್ದರಿಂದ ಕ್ರೀಡಾಪಟುಗಳು ಸೋಲು-ಗೆಲುವುಗಳನ್ನು ಲೆಕ್ಕಿಸದೇ, ಕ್ರೀಡಾ ಮನೋಭಾವದಿಂದ ಪಾಲ್ಗೊಳ್ಳಬೇಕೆಂದು ಸಲಹೆ ನೀಡಿದರು.

        ಮಾನಸಿಕ ಹಾಗೂ ದೈಹಿಕ ಸದೃಢತೆಯ ಜತೆಗೆ ಜೀವನೋತ್ಸಾಹ ಹೆಚ್ಚಿಸಲು ಕ್ರೀಡೆ ಸಹಕಾರಿಯಾಗಿದೆ. ಅಲ್ಲದೆ, ಶಿಸ್ತು ಪಾಲನೆಯು ಜೀವನಕ್ಕೆ ಉತ್ತಮ ದಾರಿದೀಪವಾಗಿದೆ. ಆರೋಗ್ಯ, ಹುಮ್ಮಸ್ಸಿನಿಂದ ಬದುಕಲು ಕ್ರೀಡೆ ಎಲ್ಲರಿಗೂ ಅಗತ್ಯ. ಜೊತೆಗೆ ಶಿಸ್ತು ಕೂಡ ಅಷ್ಟೇ ಮುಖ್ಯ ಎಂದರು.

        ವೈಯಕ್ತಿಕ ಬದುಕೇ ಆಗಲಿ ಅಥವಾ ವೃತ್ತಿ ಜೀವನವೇ ಆಗಲಿ ಶಿಸ್ತಿನಿಂದ ಕೂಡಿದ್ದರೆ ಒತ್ತಡ ಇರುವುದಿಲ್ಲ. ಪೊಲೀಸ್ ಇಲಾಖೆ ಮೊದಲಿನಿಂದಲೂ ಶಿಸ್ತು ಬದ್ಧತೆಯನ್ನು ಪಾಲನೆ ಮಾಡಿಕೊಂಡು ಬಂದಿದೆ. ಕ್ರೀಡಾಪಟುಗಳು ಈ ಮೂರು ದಿನಗಳ ಕ್ರೀಡಾಕೂಟದಲ್ಲಿ ಶಿಸ್ತಿನಿಂದ, ಸಂತೋಷದಿಂದ ಪಾಲ್ಗೊಳ್ಳುವ ಮೂಲಕ ಉತ್ತಮ ಸಾಧನೆ ಮಾಡಬೇಕೆಂದು ಸಲಹೆ ನೀಡಿದರು.

        ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್.ಆರ್ ಮಾತನಾಡಿ, ಕ್ರೀಡೆ ಸೇರಿದಂತೆ ಜೀವನದ ಯಾವುದೇ ಹಂತದಲ್ಲಿ ಸೋಲು ಮತ್ತು ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವವನ್ನು ಪ್ರತಿಯೊಬ್ಬರೂ ರೂಢಿಸಿಕೊಳ್ಳಬೇಕು. ಸೋಲು ಅಥವಾ ಗೆಲುವು ಮುಖ್ಯವಲ್ಲ. ಬದಲಾಗಿ ಕ್ರೀಡೆಗಳಲ್ಲಿ ಭಾಗವಹಿಸುವುದು ಮುಖ್ಯ ಎಂದರು.

        ಈ ಹಿಂದೆ ಕೆಲವೇ ಕ್ರೀಡಾಪಟುಗಳಿಗೆ ಜಿಲ್ಲಾ ಕ್ರೀಡಾಕೂಟದಲ್ಲಿ ಭಾಗವಹಿಸಲು ಅವಕಾಶವಿತ್ತು. ಇನ್ನಷ್ಟು ಉತ್ತಮ ಪ್ರತಿಭೆಗಳಿಗೆ ಅವಕಾಶ ದೊರೆಯಲೆಂದು ಇದೀಗ ಉಪ ವಿಭಾಗ ಮಟ್ಟದಲ್ಲೂ ಕ್ರೀಡಾಕೂಟ ಆಯೋಜಿಸಿ ಅಲ್ಲಿ ಆಯ್ಕೆಯಾದವರಿಗೆ ಜಿಲ್ಲಾ ಕ್ರೀಡಾಕೂಟದಲ್ಲಿ ಅವಕಾಶ ಒದಗಿಸಲಾಗಿದೆ. ಮೂರು ದಿನಗಳ ಕಾಲ ನಡೆಯುವ ಈ ಕ್ರೀಡಾಕೂಟದಲ್ಲಿ ಕ್ರೀಡಾಪಟುಗಳು ಜಿಲ್ಲಾ ಮಟ್ಟದಲ್ಲಿ ಅತ್ಯುತ್ತಮವಾಗಿ ಪ್ರದರ್ಶನ ನೀಡಿ ರಾಜ್ಯ ಮಟ್ಟಕ್ಕೆ ಆಯ್ಕೆ ಆಗಿ ಪದಕಗಳನ್ನು ತರುವ ಮೂಲಕ ಜಿಲ್ಲೆಗೆ ಕೀರ್ತಿ ತರಬೇಕೆಂದು ಹೇಳಿದರು.

        ಇದೇ ಸಂದರ್ಭದಲ್ಲಿ ಕ್ರೀಡಾ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಉದೇಶ್ ಟಿ.ಜೆ, ನಗರ ಡಿವೈಎಸ್‍ಪಿ ನಾಗರಾಜ್, ಗ್ರಾಮಾಂತರ ಡಿವೈಎಸ್‍ಪಿ ಮಂಜುನಾಥ್ ಗಂಗಲ್, ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು, ಕ್ರೀಡಾಪಟುಗಳು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap