ಜಿಲ್ಲೆ ಅಭಿವೃದ್ಧಿಗೆ ಹೆಚ್‍ಡಿಡಿ ಅನಿವಾರ್ಯ: ಮುರುಳೀಧರ ಹಾಲಪ್ಪ

ತುಮಕೂರು:

       ಜಿಲ್ಲೆಯನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಬೇಕಾದರೆ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿಸಿರುವ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರ ಗೆಲುವು ಅನಿವಾರ್ಯವಾಗಿದ್ದು, ಮೈತ್ರಿ ಅಭ್ಯರ್ಥಿ ಗೆಲ್ಲಿಸಲು ಒಟ್ಟಾಗಿ ಕೆಲಸ ಮಾಡಬೇಕಿದೆ ಎಂದು ಕೆಪಿಸಿಸಿ ವಕ್ತಾರ ಮುರುಳೀಧರ ಹಾಲಪ್ಪ ತಿಳಿಸಿದ್ದಾರೆ.

       ನಗರದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಜೆಡಿಎಸ್‍ನೊಂದಿಗೆ ನೆಂಟಸ್ಥಿಕೆ ಮಾಡಿಕೊಂಡಿರುವುದರಿಂದ ಎಲ್ಲವನ್ನು ಸರಿದೂಗಿಸಿಕೊಂಡು ಹೋಗಬೇಕಾಗಿದೆ. ಉಪ ಮುಖ್ಯಮಂತ್ರಿಗಳು ಸರಿದೂಗಿಸುವ ಪ್ರಯತ್ನ ಮಾಡುತ್ತಿದ್ದು, ಅದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಸಹಕಾರ ನೀಡಬೇಕಿದ್ದು, ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವ ಹೊಣೆಗಾರಿಕೆ ಕಾಂಗ್ರೆಸ್ಸಿಗರ ಮೇಲಿದೆ ಎಂದರು.

       ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ವಿಷಕಂಠರಾಗಿ ಎಲ್ಲವನ್ನು ಸಹಿಸಿಕೊಂಡು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರ ಹೆಸರಿಗೆ ಧಕ್ಕೆ ಉಂಟಾಗದಂತೆ ಕಾರ್ಯನಿರ್ವಹಿಸುವ ಮೂಲಕ ನಿರ್ಣಾಯಕ ಹೋರಾಟಕ್ಕೆ ಸಿದ್ಧರಾಗಬೇಕಿದೆ. ಜಿಲ್ಲೆಯಲ್ಲಿ ಕಾಂಗ್ರೆಸ್‍ಗೆ ಅನ್ಯಾಯವಾಗಿದೆ ಆದರೆ ಮೈತ್ರಿ ಧರ್ಮ ಪಾಲಿಸುವ ನಿಟ್ಟಿನಲ್ಲಿ ತ್ಯಾಗವನ್ನು ಮಾಡುವ ಮೂಲಕ, ಜೆಡಿಎಸ್‍ನೊಂದಿಗೆ ಹೊಂದಿಕೊಂಡು ಚುನಾವಣೆಯನ್ನು ಎದುರಿಸಬೇಕಿದೆ ಎಂದು ಹೇಳಿದರು.

       ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ ಮಾತನಾಡಿ ಮಾಜಿ ಪ್ರಧಾನಿ ದೇವೇಗೌಡ ಅವರ ಸ್ಪರ್ಧೆಯಿಂದು ಜಿಲ್ಲೆ ತಾರಾಮೌಲ್ಯವುಳ್ಳ ಕ್ಷೇತ್ರವಾಗಿ ಪರಿವರ್ತನೆಗೊಂಡಿದ್ದು, ದೇಶದ ಗಮನ ಈಗ ತುಮಕೂರು ಜಿಲ್ಲೆಯ ಮೇಲಿದೆ. ಮೈತ್ರಿ ಅಭ್ಯರ್ಥಿ ಗೆಲುವಿನ ಬಗ್ಗೆ ವಿರೋಧ ಪಕ್ಷಗಳು ಅನುಮಾನ ವ್ಯಕ್ತಪಡಿಸುತ್ತಿದ್ದು, ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರು ಒಟ್ಟಾಗಿ ನಮ್ಮ ಶಕ್ತಿಯನ್ನು ಪ್ರದರ್ಶಿಸುವುದರ ಜೊತೆಗೆ ಮೈತ್ರಿ ಅಭ್ಯರ್ಥಿಯನ್ನು ಬಹು ಅಂತರದಿಂದ ಗೆಲ್ಲಿಸುವತ್ತ ಪ್ರಾಮಾಣಿಕ ಪ್ರಯತ್ನವನ್ನು ಮಾಡಬೇಕು ಎಂದು ಕರೆ ನೀಡಿದರು.

       ತಿಪಟೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಶಶಿಧರ್ ಮಾತನಾಡಿ, ಮೈತ್ರಿ ಮಾಡಿಕೊಳ್ಳುವುದು ಪಕ್ಷದ ನಿರ್ಣಯ, ಕೋಮುವಾದಿ ಬಿಜೆಪಿಯನ್ನು ಸೋಲಿಸಲು ಮೈತ್ರಿ ಧರ್ಮ ಪಾಲಿಸಬೇಕಿದೆ. ಅದಕ್ಕಾಗಿ ಮತದಾನ ಮಾಡಿಸೋಣ ಆದರೆ ಬೂತ್ ಮಟ್ಟದಲ್ಲಿರುವ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಮುಖಂಡರು ಗಮನ ಹರಿಸಬೇಕಿದೆ. ಯಾರನ್ನು ವೈಭವೀಕರಿಸದೇ ಡಿಸಿಎಂ ಅವರಿಗಾಗಿ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಪರವಾಗಿ ಕಾರ್ಯನಿರ್ವಹಿಸಬೇಕಾಗಿ ಎಂದು ಹೇಳಿದರು.

       ಚುನಾವಣೆಯಲ್ಲಿ ಹಣ, ಜಾತಿ ಬಿಟ್ಟು ರಾಜಕಾರಣ ನಡೆಯೋದಿಲ್ಲ, ಮೈತ್ರಿ ಅಭ್ಯರ್ಥಿ ಗೆಲುವಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುವ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರನ್ನು ಗೌರವದಿಂದ ನಡೆಸಿಕೊಳ್ಳಬೇಕಾದ ಜವಾಬ್ದಾರಿ ಜೆಡಿಎಸ್ ಮೇಲಿದೆ, ಕಾರ್ಯಕರ್ತರನ್ನು ಸರಿಯಾಗಿ ನೋಡಿಕೊಳ್ಳದಿದ್ದರೆ ನೆಂಟಸ್ಥಿಕೆಗೆ ಡೈವೋರ್ಸ್ ರೆಡಿಯಾಗಬೇಕಾಗುತ್ತದೆ ಎಂಬ ಎಚ್ಚರವಿರಲಿ ಎಂದರು.

       ಸಭೆಯಲ್ಲಿ ಜಿಲ್ಲಾ ವಕ್ಫ್ ಸಮಿತಿ ಅಧ್ಯಕ್ಷ ಮುಸ್ತಾಕ್ ಅಹ್ಮದ್, ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮೋಹನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಜಾತ, ಮರಿಚೆನ್ನಮ್ಮ, ಕೃಷ್ಣಮೂರ್ತಿ, ಪುರುಷೋತ್ತಮ್, ಮೋಹನ್, ಶಿವಾಜಿ, ಶಿವಮೂರ್ತಿ, ಜಿಲ್ಲಾ ವಕ್ತಾರ ರಾಜೇಶ್‍ದೊಡ್ಮನೆ, ದರ್ಶನ್ ಸೇರಿದಂತೆ ವಿವಿಧ ತಾಲ್ಲೂಕುಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.  

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap