ಅಡಮಾನ ಸಾಲ ಸಬ್ಸಿಡಿ ಸ್ಥಗಿತಕ್ಕೆ ಹೆಚ್‍ಡಿಕೆ ಖಂಡನೆ

ಬೆಂಗಳೂರು

     ಕೃಷಿ ಭೂಮಿಯ ಪಹಣಿ ದಾಖಲೆ ಹಾಗೂ ಒಡವೆಗಳನ್ನು ಬ್ಯಾಂಕ್‍ಗಳಲ್ಲಿ ಇಟ್ಟು ಪಡೆಯುತ್ತಿದ್ದ ಸಾಲಕ್ಕೆ ನೀಡುತ್ತಿದ್ದ ಸಬ್ಸಿಡಿಯನ್ನು ಕೇಂದ್ರ ಸರ್ಕಾರ ಸ್ಥಗಿತಗೊಳಿಸಿದ್ದು, ಕೇಂದ್ರದ ನಡೆಯನ್ನು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತೀವ್ರವಾಗಿ ಖಂಡಿಸಿದ್ದಾರೆ.

    ರೈತರ ಬೆಳೆ ಮತ್ತು ಒಡವೆ ಸಾಲಗಳ ಬಡ್ಡಿಗೆ ನೀಡಬೇಕಾದ ಸಬ್ಸಿಡಿಯನ್ನು ನಿಲ್ಲಿಸಿರುವ ಸರ್ಕಾರ ರೈತರನ್ನು ಲೇವಾದೇವಿದಾರರಿಗೆ ಶರಣಾಗುವಂತೆ ಮಾಡಿದೆ. ಇನ್ನೊಂದೆಡೆ ಬ್ಯಾಂಕ್‍ಗಳಲ್ಲಿರುವ ಬಡವರ ಚಿನ್ನವನ್ನು ಹರಾಜಿನ ಮೂಲಕ ಕೇಂದ್ರ ಸರ್ಕಾರ ಲಪಟಾಯಿಸುತ್ತಿದೆ” ಕುಮಾರಸ್ವಾಮಿ ಆರೋಪಿಸಿದ್ದಾರೆ.

    ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿ ಆಗಿದ್ದಾಗ ರೈತರ ಸಾಲಮನ್ನಾ ಬಗ್ಗೆ ಬಿಜೆಪಿ ಅನುದಿನವೂ ಕಿತಾಪತಿ ಮಾಡಿತು. ಸಾಲಮನ್ನಾ ಆಗಿಲ್ಲ ಎಂದು ಭಾಷಣವೀರ ಮೋದಿ ಕೂಡ ಹೇಳಿದ್ದರು. ಆದರೆ ಇಂದು ಕೇಂದ್ರ ಬಿಜೆಪಿ ಸರ್ಕಾರ ರೈತರ ಬೆಳೆ-ಒಡವೆ ಸಾಲದ ಬಡ್ಡಿ ಮೇಲಿನ ಸಬ್ಸಿಡಿಗೆ ಮಣ್ಣು ಹಾಕಿದೆ ಎಂದು ಟ್ವಿಟರ್‍ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ರೈತರ ಬೆಳೆ ಮತ್ತು ಒಡವೆ ಸಾಲಗಳ ಬಡ್ಡಿಗೆ ನೀಡಬೇಕಾದ ಸಬ್ಸಿಡಿಯನ್ನು ನಿಲ್ಲಿಸಿರುವ ಸರ್ಕಾರ ರೈತರನ್ನು ಲೇವಾದೇವಿದಾರರಿಗೆ ಶರಣಾಗುವಂತೆ ಮಾಡಿದೆ. ಇನ್ನೊಂದೆಡೆ ಬ್ಯಾಂಕ್‍ಗಳಲ್ಲಿರುವ ಬಡವರ ಚಿನ್ನವನ್ನು ಹರಾಜಿನ ಮೂಲಕ ಕೇಂದ್ರ ಸರ್ಕಾರ ಲಪಟಾಯಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ,

     “ಪ್ರಮಾಣ ವಚನದಲ್ಲಿ ಹಸಿರು ಶಾಲು ಹೊದ್ದು ಹಲ್ಲು ಕಿರಿದರೆ ಸಾಲದು, ಕಿಸಾನ್ ಸಮ್ಮಾನ್ ಎಂಬ ಹೆಸರಲ್ಲಿ ಪ್ರಧಾನಿ ಬೂಟಾಟಿಕೆ ಮಾಡಿದರೆ ಆಗದು. ಕೇಂದ್ರ ಸರ್ಕಾರ ಕೂಡಲೇ ರೈತರ ಬೆಳೆ-ಒಡವೆ ಸಾಲದ ಬಡ್ಡಿಯ ಮೇಲಿನ ಸಬ್ಸಿಡಿ ಬಿಡುಗಡೆ ಮಾಡಬೇಕು.ಇಲ್ಲವೇ ರಾಜ್ಯವೇ ಅದನ್ನು ಭರಿಸಬೇಕು. ಇಲ್ಲದಿದ್ದರೆ ಬಿಜೆಪಿ ರೈತ ವಿರೋಧಿ ಎಂಬುದನ್ನು ಒಪ್ಪಬೇಕು” ಕುಮಾರಸ್ವಾಮಿ ಹೇಳಿದ್ದಾರೆ.

ಏನಿದು ಯೋಜನೆ:

      2004-05ರಿಂದ ಖಾಸಗಿ ಹಣಕಾಸು ಸಂಸ್ಥೆಗಳು ಮತ್ತು ಲೇವಾಲೇವಿಗಾರರಿಂದ ರೈತರನ್ನು ರಕ್ಷಣೆ ಮಾಡಲು ಕೇಂದ್ರ ಸರ್ಕಾರ ಸಬ್ಸಿಡಿ ನೀಡುತ್ತಿತ್ತು. ರಾಷ್ಟ್ರೀಕೃತ ಮತ್ತು ಸಹಕಾರಿ ಬ್ಯಾಂಕುಗಳಲ್ಲಿ ದಾಖಲೆ ಮತ್ತು ಒಡವೆ ಇಟ್ಟರೆ ರೈತರಿಗೆ ಶೇ 7ರ ಬಡ್ಡಿದರದಲ್ಲಿ 3 ಲಕ್ಷದ ತನಕ ಸಾಲ ದೊರೆಯುತ್ತಿತ್ತು. ಇದಕ್ಕೆ ರೈತರು ಶೇ 4ರಷ್ಟು ಬಡ್ಡಿಯನ್ನು ಪಾವತಿಸಬೇಕಿತ್ತು. ಉಳಿದಿದ್ದನ್ನು ಕೇಂದ್ರ ಸರ್ಕಾರ ಭರಿಸುತ್ತಿತ್ತು.ಈಗ ಕೇಂದ್ರ ಸರ್ಕಾರ ಇದನ್ನು ನಿಲ್ಲಿಸಿದೆ.

ಟ್ವೀಟ್ ಮೂಲಕವೇ ಗಣರಾಜ್ಯೋತ್ಸವಕ್ಕೆ ಶುಭಾಶಯ ಕೋರಿದ ಕುಮಾರಸ್ವಾಮಿ

     ಭಾರತೀಯ ಪ್ರಜಾಪ್ರಭುತ್ವದ ಆತ್ಮ ಸಂವಿಧಾನ ಜಾರಿಗೆ ಬಂದ ದಿನವಿದು. ಎಲ್ಲರನ್ನೂ ಸಮಾನರೆಂದು ನೋಡುವ, ಸಮಾನ ಅವಕಾಶ ನೀಡುವ ಸಂವಿಧಾನದ ಆಶಯಗಳನ್ನೇ ಬಳಸಿಕೊಂಡು ಅಧಿಕಾರಕ್ಕೆ ಬಂದ ಶಕ್ತಿಗಳು ಇಂದು ಅದರ ಆತ್ಮಕ್ಕೇ ಕೈ ಹಾಕಿ ಕೊಲ್ಲುವ ಮಟ್ಟಕ್ಕಿಳಿದಿವೆ. ಈ ಮೂಲಕ ಶಾಶ್ವತ ಅಧಿಕಾರ ರಕ್ಷಣೆಗೆ ಮುಂದಾಗಿವೆ. ಇದರ ವಿರುದ್ಧ ಹೋರಾಡುವ ಪಣ ನಮ್ಮದಾಗಲಿ ಎಂದು ಆಶಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap