ಕೊರಟಗೆರೆ
ರಾಜ್ಯ ಕೆಎಸ್ಆರ್ಟಿಸಿ ಬಸ್ಸುಗಳ ನಡುವೆ ಕೊರಟಗೆರೆ ಸರಕಾರಿ ಬಸ್ನಿಲ್ದಾಣದ ತಿರುವಿನಲ್ಲಿ ಮುಖಾಮುಖಿ ಡಿಕ್ಕಿಯಾಗಿ ಬಸ್ಸಿನ ಕಿಟಕಿ ಗಾಜುಗಳು ಪುಡಿಪುಡಿಯಾಗಿದ್ದು, ಪ್ರಯಾಣಿಕರು ಯಾವುದೇ ಅನಾಹುತವಿಲ್ಲದೆ ಪಾರಾಗಿರುವ ಘಟನೆ ಗುರುವಾರ ನಡೆದಿದೆ.
ಬೆಂಗಳೂರು-ನೆಲಮಂಗಲ-ದಾಬಸ್ಪೇಟ್ ಮೂಲಕ ಕೊರಟಗೆರೆಗೆ ಬಂದ ಕೆಎ-57, ಎಫ್-3893 ಕೆಎಸ್ಆರ್ಟಿಸಿ ಬಸ್, ಕೊರಟಗೆರೆ ಸರಕಾರಿ ಬಸ್ ನಿಲ್ದಾಣಕ್ಕೆ ಬಂದು ಟಿಸಿಗೆ ಪ್ರಯಾಣಿಕರ ಮಾಹಿತಿಯನ್ನು ನೀಡದೆ ಆತುರವಾಗಿ ತೆರಳುತ್ತಿದ್ದ ವೇಳೆ ತಿರುವಿನಲ್ಲಿ ಮತ್ತೊಂದು ಸರಕಾರಿ ಬಸ್ ಬಂದು, ಪರಸ್ಪರ ಡಿಕ್ಕಿ ಹೊಡೆದಿರುವ ಪರಿಣಾಮ ಕಿಟಕಿಯ ಗಾಜುಗಳು ಹೊಡೆದಿವೆ.
ಕೊರಟಗೆರೆ ಸರಕಾರಿ ಬಸ್ ನಿಲ್ದಾಣದೊಳಗೆ ಬಸ್ಸ್ಸುಗಳು ಬರುವ ತಿರುವಿನಲ್ಲಿ ಅಪಘಾತವಾಗಿದೆ. ಬಸ್ಸಿನಲ್ಲಿದ್ದ ಪ್ರಯಾಣಿಕರು ಗಾಬರಿಯಾಗಿ ಬಸ್ಸಿನಿಂದ ಕೆಳಗೆ ಇಳಿದಿದ್ದಾರೆ. ಅತಿವೇಗ ಮತ್ತು ಅಜಾಗರೂಕತೆಯಿಂದ ಅಪಘಾತ ಮಾಡಿದ ಮತ್ತೊಂದು ಸರಕಾರಿ ಬಸ್ಸಿನ ಚಾಲಕ ಬಸ್ಸು ನಿಲ್ಲಿಸದೆ ಏಕಾಏಕಿ ಪರಾರಿ ಆಗಲು ಯತ್ನಿಸಿದ್ದಾನೆ. ಆಗ ಸ್ಥಳೀಯ ನಾಗರಿಕರು ಮತ್ತು ಸರಕಾರಿ ಬಸ್ಸಿನ ಚಾಲಕ ಅಪಘಾತ ಮಾಡಿದ ಬಸ್ಸನ್ನು ಹಿಂಬಾಲಿಸಿ ಸರಕಾರಿ ಆಸ್ಪತ್ರೆಯ ಬಳಿ ತಡೆದು ಚಾಲಕನ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಸ್ತೆಯಲ್ಲಿಯೇ ಸರಕಾರಿ ಬಸ್ಸಿನ ಚಾಲಕರ ನಡುವೆ ವಾಗ್ವಾದ ಪ್ರಾರಂಭವಾಗಿದೆ. ಪೋಲೀಸರ ಪ್ರವೇಶದಿಂದ ಪರಿಸ್ಥಿತಿ ತಿಳಿಯಾಗಿ, ಸರಕಾರಿ ಬಸ್ಸನ್ನು ತಾಲ್ಲೂಕು ಕಚೇರಿ ಬಳಿ ನಿಲ್ಲಿಸಿದ್ದಾರೆ.
ತಾಲ್ಲೂಕು ಕಚೇರಿ ಮುಂಭಾಗದ ಮುಖ್ಯರಸ್ತೆಯಲ್ಲಿಯೇ ಸರಕಾರಿ ಬಸ್ಸಿನ ಚಾಲಕರು ಅಪಘಾತದ ವಿಚಾರವಾಗಿ ವಾಗ್ವಾದಕ್ಕೆ ಇಳಿದು, ಅರ್ಧಗಂಟೆಗೂ ಹೆಚ್ಚು ಸಮಯ ಗೊಂದಲ ಸೃಷ್ಟಿಸಿದ್ದಾರೆ. ಅಪಘಾತ ಮಾಡಿ ಪರಾರಿ ಆಗಲು ಯತ್ನಿಸಿದ ಬಸ್ಸಿನಲ್ಲಿದ್ದ ಪ್ರಯಾಣಿಕರನ್ನು ಮತ್ತೊಂದು ಬಸ್ಸಿನ ಮೂಲಕ ತೆರಳಲು ವ್ಯವಸ್ಥೆ ಮಾಡಿ, ಚಾಲಕ ಮತ್ತು ನಿರ್ವಾಹಕಿ ಸರಕಾರಿ ಬಸ್ಸಿನ ನಿಲ್ದಾಣಕ್ಕೆ ಬಂದು ಪರಿಸ್ಥಿತಿಯ ವಿವರಣೆ ನೀಡಿದ್ದಾರೆ.
ಕೊರಟಗೆರೆ ಸರಕಾರಿ ಬಸ್ಸಿನ ನಿಲ್ದಾಣಕ್ಕೆ ಪ್ರವೇಶಿಸಿ ಟಿಸಿಗೆ ಪ್ರಯಾಣಿಕರ ಮಾಹಿತಿ ನೀಡದೆ ಅತಿವೇಗದಿಂದ ತೆರಳಲು ಯತ್ನಿಸಿದ ಕೆಎ-57, ಎಫ್-3893 ಬಸ್ಸಿನ ಚಾಲಕ ನಾಗರಾಜು ಮತ್ತು ನಿರ್ವಾಹಕಿ ಹೇಮಾ ವಿರುದ್ದ ಕ್ರಮ ಜರುಗಿಸುವಂತೆ ಒತ್ತಾಯ ಮಾಡಲಾಗಿದೆ. ಅತಿವೇಗ ಮತ್ತು ಹೆಚ್ಚಿನ ಪ್ರಯಾಣಿಕರನ್ನು ಸಾಗಿಸುವ ಚಾಲಕರ ವಿರುದ್ದ ತಪಾಸಣಾ ಅಧಿಕಾರಿ ವರ್ಗ ಪರಿಶೀಲನೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
