ಕಿರಾಣಿ ಅಂಗಡಿಗಳ ಮೇಲೆ ಆರೋಗ್ಯ ಮತ್ತು ಪೊಲೀಸ್ ಇಲಾಖೆಗಳಿಂದ ದೌರ್ಜನ್ಯ..!

ಬೆಂಗಳೂರು

    ದೇಶದ ಆರ್ಥಿಕ ಪರಿಸ್ಥಿತಿ ಅಲ್ಲೋಲ ಕಲ್ಲೋಲವಾಗಿರುವ ಸಂದರ್ಭದಲ್ಲೇ ರಾಜ್ಯದಲ್ಲಿ ಹತ್ತು ಲಕ್ಷ ಕುಟುಂಬಗಳ ಆಧಾರ ಸ್ಥಂಭವಾಗಿರುವ ರಾಜ್ಯದ ಕಿರಾಣಿ ಅಂಗಡಿಗಳ ಬೀಡಿ, ಸಿಗರೇಟು ಮಾರಾಟಗಾರರ ಮೇಲೆ ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಕಿರುಕುಳ ನೀಡುತ್ತಿದ್ದು, ಲಕ್ಷಾಂತರ ಜನ ಬೀದಿಗೆ ಬೀಳುವಂತಾಗಿದೆ ಎಂದು ರಾಜ್ಯದ ಸಣ್ಣ ಬೀಡಿ ಮತ್ತು ಸಿಗರೇಟು ಮಾರಾಟಗಾರರ ಸಂಘ ಗಂಭೀರ ಆರೋಪ ಮಾಡಿದೆ.

    ಸರ್ಕಾರದಿಂದ ಯಾವುದೇ ರೀತಿಯ ಸೌಕರ್ಯ ಪಡೆಯದೇ, ಬ್ಯಾಂಕ್ ಗಳಿಂದ ಸಾಲ ಸೌಲಭ್ಯಗಳನ್ನೂ ಪಡೆಯದೇ ಲೇವಾದೇವಿಗಾರರ ಬಳಿ ಸಾಲ ಸೋಲ ಮಾಡಿ ಸ್ವಯಂ ಉದ್ಯೋಗ ಮಾಡಿ ಸ್ವಾವಲಂಬಿ ಬದುಕು ಸಾಗಿಸುತ್ತಿರುವ ಬೀಡಿ ಸಿಗರೇಟು ಮಾರಾಟಗಾರರ ಮೇಲೆ ಆರೋಗ್ಯ ಮತ್ತು ಪೊಲೀಸ್ ಇಲಾಖೆ ಗದಾ ಪ್ರಹಾರ ಮಾಡುತ್ತಿದೆ ಎಂದು ಆರೋಪಿಸಿದೆ.

     ಸಾರ್ವಜನಿಕವಾಗಿ ಧೂಮಪಾನ ನಿಷೇಧ ಮಾಡಿದ್ದು, ಇದಕ್ಕಾಗಿ ಆರೋಗ್ಯ ಇಲಾಖೆ ಕೋಟ್ಪಾ ಕಾಯ್ದೆ ಜಾರಿಗೆ ತಂದಿದೆ. ಸಾರ್ವಜನಿಕ ಆರೋಗ್ಯ ರಕ್ಷಿಸುವ ಸಲುವಾಗಿ ಕೈಗೊಂಡಿರುವ ಕ್ರಮವನ್ನು ನಾವು ವಿರೋಧಿಸುವುದಿಲ್ಲ. ಆದರೆ ಈ ಕಾಯ್ದೆಯನ್ನು ಬೆಂಗಳೂರಿನಲ್ಲಿ ಬಿಬಿಎಂಪಿ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ರಾಜ್ಯಾದ್ಯಂತ ಪೊಲೀಸರು ಸಹ ಕಾಯ್ದೆಯನ್ನು ದುರ್ಬಳಕೆ ಮಾಡಿಕೊಂಡು ಬೀಡಿ – ಸಿಗರೇಟು ವ್ಯಾಪಾರಿಗಳಿಗೆ ಕಿರುಕುಳ ನೀಡುತ್ತಿದ್ದಾರೆ. ನಮ್ಮಂತಹ ಸಣ್ಣ ಸಣ್ಣ ವ್ಯಾಪಾರಿಗಳ ಮೇಲೆ ದೇಶದ ಆರ್ಥಿಕ ಪರಿಸ್ಥಿತಿ ನಿಂತಿದೆ. ನಮ್ಮಂತಹವರ ಮೇಲೆ ಕ್ರಮ ಕೈಗೊಂಡರೆ ದೇಶದ ಅರ್ಥ ವ್ಯವಸ್ಥೆ ಮತ್ತಷ್ಟು ಹದಗೆಡುತ್ತದೆ ಎಂದು ದೂರಿದೆ.

     ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಮುಖಂಡ ಮುರಳಿ ಕೃಷ್ಣ, ಬೆಂಗಳೂರಿನ ಅಂಗಡಿ ಮುಂದೆ ಬಿದ್ದಿದ್ದ ಬೀಡಿ, ಸಿಗರೇಟು ತುಂಡುಗಳನ್ನು ಲೆಕ್ಕ ಹಾಕಿ ಬಿಬಿಎಂಪಿ ಅಧಿಕಾರಿಗಳು ಕಿರಾಣಿ ಅಂಗಡಿ ಮಾಲೀಕರೊಬ್ಬರಿಗೆ ಬರೋಬ್ಬರಿ 25 ಸಾವಿರ ರೂ ದಂಡ ವಿಧಿಸಿದ್ದಾರೆ. ಜತೆಗೆ ಬಿಡಿಬಿಡಿಯಾಗಿ ಒಂದು ಅಥವಾ ಎರಡು ಸಿಗರೇಟು, ಬೀಡಿ ಮಾರಾಟ ಮಾಡುವಂತಿಲ್ಲ ಎಂದು ದಂಡ ವಿಧಿಸುವ ಪರಿಪಾಠ ಆರಂಭಿಸಿದೆ. ಆದರೆ ಈ ಬಗ್ಗೆ ರಾಜ್ಯ ಸರ್ಕಾರ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಸರ್ಕಾರದ ಆದೇಶ ಸಹ ಜಾರಿಯಾಗಿಲ್ಲ. ಆದರೂ ಚಿಲ್ಲರೆ ಮಾರಾಟಗಾರರ ಮೇಲೆ ವಿನಾಕಾರಣ ದಂಡ ವಿಧಿಸಿ ಕ್ರಮ ತೆಗೆದುಕೊಳ್ಳುತ್ತಿರುವುದು ಸರಿಯಲ್ಲ ಎಂದರು.

     ಧೂಮಪಾನ ಮಾಡುವವರು ಪ್ಯಾಕ್ ಗಟ್ಟಲೆ ಖರೀದಿಸಲು ನಮ್ಮ ದೇಶದ ಆರ್ಥಿಕ ಪರಿಸ್ಥಿತಿ ಹೇಗಿದೆ ಎಂಬುದು ಗೊತ್ತಿದೆ. ವಿದೇಶಗಳಂತೆ ನಮ್ಮಲ್ಲಿ ಪ್ಯಾಕ್ ಗಟ್ಟಲೆ ಖರೀದಿ ಸಾಮರ್ಥ್ಯ ಬಂದಿಲ್ಲ. ಸರ್ಕಾರದ ಮಟ್ಟದಲ್ಲಿ ಹೀಗೆ ಅವೈಜ್ಞಾನಿಕವಾಗಿ ಚರ್ಚೆ ನಡೆಸಿ ಗೊಂದಲ ಸೃಷ್ಟಿಸುವುದು ಸಲ್ಲದು. ಕೋಟ್ಪಾ ಕಾಯ್ದೆ ಉಲ್ಲಂಘಿಸುತ್ತಿರುವ ವ್ಯಾಪಾರಸ್ಥರ ಮೇಲೆ ವಿಧಿಸುತ್ತಿರುವ ದಂಡದ ರಶೀದಿ ನೋಡಿದರೆ ಒಂದೊಂದು ರಶೀದಿ ಒಂದೊಂದು ಕಥೆ ಹೇಳುತ್ತದೆ. ಸಾರ್ವಜನಿಕವಾಗಿ ಧೂಮಪಾನ ಮಾಡಿದರೆ ಗರಿಷ್ಠ 200 ರೂ ದಂಡ ವಿಧಿಸಲು ಅವಕಾಶವಿದೆ. ಆದರೆ ಕಳೆದ ವಾರ ಪೊಲೀಸರು ಇಂತಹ ವ್ಯಕ್ತಿಗೆ 800 ರೂ ದಂಡ ವಿಧಿಸಿದ್ದಾರೆ. ಹೀಗೆ ಮನಸೋ ಇಚ್ಚ ದಂಡ ವಿಧಿಸುತ್ತಿರುವ ಇವರನ್ನು ಹೇಳುವವರು, ಕೇಳುವವರು ಯಾರು ಇಲ್ಲದಂತಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

     ನಮ್ಮ ಮೇಲೆ ನಡೆಯುತ್ತಿರುವ ನಿರಂತರ ಕಿರುಕುಳ ಹೀಗೆಯೇ ಮುಂದುವರೆದರೆ ಎಲ್ಲಾ ಅಂಗಡಿಗಳನ್ನು ಬಂದ್ ಮಾಡಿ ಕುಟುಂಬ ಸಮೇತರಾಗಿ ಬೀದಿಗಿಳಿದು ಹೋರಾಟ ಮಾಡುತ್ತೇವೆ. ನಾವೇನು ಕಳ್ಳತನ ಮಾಡುತ್ತಿಲ್ಲ. ದರೋಡೆಗಿಳಿದಿಲ್ಲ. ಮಾನವಂತರಾಗಿ ಬದುಕುತ್ತಿರುವ ನಮ್ಮ ಮೇಲೆ ಕಿರಿಕುಳ ನಿಲ್ಲಿಸಬೇಕು ಎಂದು ಸಂಘದ ಪ್ರಮುಖರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap