ಆರೋಗ್ಯ ಇಲಾಖೆ ಗುತ್ತಿಗೆ ನೌಕರರು ತೋಳಿಗೆ ಕಪ್ಪುಪಟ್ಟಿ ಧರಿಸಿ ಕೆಲಸ

ಹುಳಿಯಾರು:

       ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ಇಲಾಖೆ ಗುತ್ತಿಗೆ ನೌಕರರು ತೋಳಿಗೆ ಕಪ್ಪುಪಟ್ಟಿ ಧರಿಸಿ ಕೆಲಸ ಮಾಡುವ ಮೂಲಕ ವಿಜಯಪುರದಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಬೆಂಬಲ ಸೂಚಿಸಿದರು.

         ವಿಜಯಪುರದ ಜಿಲ್ಲಾ ಆಸ್ಪತ್ರೆಯಲ್ಲಿ ಕಳೆದ ಎರಡು ವರ್ಷಗಳಿಂದ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಡಿ ದರ್ಜೆ ನೌಕರನನ್ನು ಕೆಲಸದಿಂದ ತೆಗೆದು ಹೊಸ ಗುತ್ತಿಗೆ ನೌಕರರನ್ನು ನೇಮಕ ಮಾಡಿಕೊಳ್ಳುವುದಾಗಿ ತಿಳಿಸಿದ್ದರಿಂದ ಆತ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸೇವಾ ಅಭದ್ರತೆಯಿಂದ ಸಾವು ನೋವಿನ ನಡುವೆ ಹೋರಾಡುತ್ತಿರುವ ಗುತ್ತಿಗೆ ನೌಕರ ಬಂಧುವನ್ನು ಬೆಂಬಲಿಸಿ ರಾಜ್ಯದೆಲ್ಲೆಡೆ ಆರೋಗ್ಯ ಇಲಾಖೆ ಗುತ್ತಿಗೆ ನೌಕರರು ತೋಳಿಗೆ ಕಪ್ಪುಪಟ್ಟಿ ಧರಿಸಿ ಕೆಲಸ ಮಾಡಬೇಕೆಂದು ತೀರ್ಮಾನಿಸಿದ್ದರ ಹಿನ್ನಲೆಯಲ್ಲಿ ಹುಳಿಯಾರು ಸೇರಿದಂತೆ ತಾಲ್ಲೂಕಿನ ಚಿಕ್ಕನಾಯಕನಹಳ್ಳಿ ಆಸ್ಪತ್ರೆ ಸೇರಿದಂತೆ ದಸೂಡಿ, ದೊಡ್ಡ ಎಣ್ಣೆಗೆರೆ ಆಸ್ಪತ್ರೆಯಲ್ಲಿ ಕೂಡ ಕಪ್ಪು ಪಟ್ಟಿ ಧರಿಸಿ ಕೆಲಸ ಮಾಡುವ ಮೂಲಕ ಪ್ರತಿಭಟನೆಗೆ ಬೆಂಬಲ ಸೂಚಿಸಲಾಯಿತು.

         ಕೆಲಸಕ್ಕೆ ಸೇರುವ ಮುನ್ನ ಸೇವೆಯನ್ನು ಖಾಯಂಗೊಳಿಸುವ ಭರವಸೆ ನೀಡಿ ನಂತರ ಕೆಲಸದಿಂದ ತೆಗೆದು ಹಾಕುವ ಕಾರ್ಯ ನ್ಯಾಯಯುತವಲ್ಲ, ಹೊರ ಹಾಗೂ ಒಳ ಗುತ್ತಿಗೆ ನೌಕರರಿಗೆ ಸೇವಾ ಭದ್ರತೆ ಇಲ್ಲದಿದ್ದರೆ ಕೆಲಸ ಮಾಡುವುದು ಹೇಗೆ ಎಂದು ಪ್ರಶ್ನಿಸಿದ ಇಲ್ಲಿನ ಸಿಬ್ಬಂದಿಗಳು ಗುತ್ತಿಗೆ ನೌಕರರನ್ನು ಹೀನಾಯವಾಗಿ ನಡೆಸಿಕೊಳ್ಳುತ್ತಿರುವುದರ ಬಗ್ಗೆ ಖಂಡನೆ ವ್ಯಕ್ತಪಡಿಸಿದರು.

         ಡಾ.ಚಂದನ, ನಾಗರತ್ನಮ್ಮ, ಕಮಲಮ್ಮ, ಕಲ್ಲೇಶ್, ಕೃಷ್ಣ ಸೇರಿದಂತೆ 7 ಮಂದಿ ಹೊರ ಗುತ್ತಿಗೆ ನೌಕರರು ಕಪ್ಪು ಪಟ್ಟಿ ಧರಿಸಿ ಕೆಲಸ ಮಾಡುವ ಮೂಲಕ ಪ್ರತಿಭಟನೆಗೆ ಬೆಂಬಲ ಸೂಚಿಸಿದರು. ಗುತ್ತಿಗೆ ನೌಕರರು ಕಪ್ಪು ಪಟ್ಟಿ ಧರಿಸಿ ಸೇವೆ ಸಲ್ಲಿಸಿದ್ದರಿಂದ ಆಸ್ಪತ್ರೆಯ ಸೇವೆಯಲ್ಲಿ ಯಾವುದೇ ವ್ಯತ್ಯಯವಾಗಲಿಲ್ಲ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap