ಮನುಷ್ಯನಿಗೆ ಆರೋಗ್ಯವು ಸಿರಿಸಂಪತ್ತಿದ್ದಂತೆ

ಚಿಕ್ಕನಾಯಕನಹಳ್ಳಿ

     ಮನುಷ್ಯನಿಗೆ ಆರೋಗ್ಯವು ಸಿರಿಸಂಪತ್ತು ಇದ್ದಂತೆ. ಜನರ ಉದಾಸೀನತೆಯಿಂದ ಅನಾರೋಗ್ಯವನ್ನು ತಂದುಕೊಂಡು ಬಳಲುತ್ತಾರೆ. ಶರೀರದಲ್ಲಾಗುವ ಏರುಪೇರನ್ನು ಗಮನಿಸಿ ವೈದ್ಯರನ್ನು ಭೇಟಿಮಾಡಿ ಸೂಕ್ತ ಚಿಕಿತ್ಸೆಯನ್ನು ಪಡೆಯಬೇಕು ಎಂದು ಶಾಸಕ ಹಾಗೂ ನವೋದಯ ವಿದ್ಯಾಸಂಸ್ಥೆ ಅಧ್ಯಕ್ಷ ಜೆ.ಸಿ.ಮಾಧುಸ್ವಾಮಿ ಹೇಳಿದರು.

     ಪಟ್ಟಣದ ನವೋದಯ ಕಾಲೇಜಿನ ಆವರಣದಲ್ಲಿ ನವೋದಯ ವಿದ್ಯಾಸಂಸ್ಥೆ ಹಾಗೂ ಬೆಂಗಳೂರು ಗೊರಗುಂಟೆಪಾಳ್ಯದ ಪೀಪಲ್ ಟ್ರೀ ಹಾಸ್ಪಿಟಲ್ ಸಂಯುಕ್ತಾಶ್ರಯದಲ್ಲಿ ಉಚಿತ ಆರೋಗ್ಯ ಶಿಬಿರದಲ್ಲಿ ಮಾತನಾಡಿದರು.

     ಜೀವನದಲ್ಲಿ ನೆಮ್ಮದಿಯಾಗಿ ಬಾಳಲು ಹಣಕ್ಕಿಂತ ಮಿಗಿಲಾಗಿ ಆರೋಗ್ಯ ಭಾಗ್ಯವು ಮನುಷ್ಯನಿಗೆ ಅಗತ್ಯವಾಗಿ ಬೇಕಾಗಿದೆ. ದೇಹದಲ್ಲಿನ ಕಾಯಿಲೆಯು ಉಲ್ಬಣವಾಗುವುದಕ್ಕಿಂತ ಮುಂಚೆ ಶರೀರದಲ್ಲಾಗುವ ಆರೋಗ್ಯದ ಬದಲಾವಣೆಯ ಲಕ್ಷಣಗಳು ಗೋಚರಿಸಿದಾಗ ಉದಾಸೀನ ಮಾಡದಂತೆ ವೈದ್ಯರನ್ನು ಭೇಟಿ ಮಾಡುವುದು ಸೂಕ್ತವಾಗಿರುತ್ತದೆ. ಸಣ್ಣದರಲ್ಲಿ ಬೇಕಾದ ಔಷಧೋಪಚಾರವನ್ನು ಪಡೆದರೆ ದೀರ್ಘಕಾಲ ಆರೋಗ್ಯವಂತರಾಗಿ ಬದುಕಬಹುದು ಎಂದರು.

      ನವೋದಯ ವಿದ್ಯಾಸಂಸ್ಥೆಯು ವಿದ್ಯೆ ಮತ್ತು ಬೋಧಕೇತರ ಚಟುವಟಿಕೆಯಲ್ಲಿ ಸೇವೆ ಸಲ್ಲಿಸುವುದರ ಜೊತೆಗೆ ಕಲೆ, ಸಾಹಿತ್ಯ, ಸಂಸ್ಕøತಿಯಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಸಾರ್ವಜನಿಕರಿಗೆ ಸಕ್ರಿಯವಾಗಿ ಉಚಿತ ಆರೋಗ್ಯ ಶಿಬಿರಗಳನ್ನು ಮಾಡಿಕೊಂಡು ಬಂದಿರುವ ಹಿನ್ನೆಲೆಯಲ್ಲಿ ಜನರಿಗೆ ಅನುಕೂಲತೆಗಳಾಗಿವೆ. ಬಡವ ಶ್ರೀಮಂತ ಎಂಬ ಭೇದವಿಲ್ಲದೆ ಇಂತಹ ಉಚಿತ ಆರೋಗ್ಯ ಶಿಬಿರಗಳಲ್ಲಿ ಭಾಗವಹಿಸಿ ಅನುಕೂಲತೆಯನ್ನು ಪಡೆದುಕೊಳ್ಳಬೇಕೆಂದರು.

        ಶಿಬಿರದ ಸಂಚಾಲಕರಾದ ಡಾ.ಗೌರಿಶಂಕರ್ ಮಾತನಾಡಿ, ವೈದ್ಯರುಗಳು ಬೆಂಗಳೂರು ನಗರದಲ್ಲಿ ಸೇವೆ ಸಲ್ಲಿಸುವ ಜೊತೆಗೆ ಗ್ರಾಮೀಣ ಭಾಗದ ಜನರ ಸೇವೆಯನ್ನು ಮಾಡುವ ದೃಷ್ಟಿಯಿಂದ ಉಚಿತ ಆರೋಗ್ಯ ಶಿಬಿರಗಳಲ್ಲಿ ಪ್ರಾಮಾಣಿಕವಾಗಿ ಸೇವಾ ಮನೋಭಾವದಿಂದ ಭಾಗವಹಿಸುತ್ತಾರೆ.

         ನವೋದಯ ವಿದ್ಯಾಸಂಸ್ಥೆಯಲ್ಲಿ ನಡೆದ ಈ ಶಿಬಿರದಲ್ಲಿ 350ಕ್ಕೂ ಹೆಚ್ಚು ಜನರು ಭಾಗವಹಿಸಿದ್ದು ಅದರಲ್ಲಿ ಕಣ್ಣಿನಲ್ಲಿ ಪೊರೆಬಂದಿರುವ 20 ಜನರನ್ನು ಗುರ್ತಿಸಿ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಉಚಿತ ಶಸ್ತ್ರಚಿಕಿತ್ಸೆಯನ್ನು ಮಾಡಿಸಿ ಕಳುಹಿಸಲಾಗುವುದು. ಮುಂದಿನ ದಿನಗಳಲ್ಲಿ ಪ್ರತಿ ಎರಡು ತಿಂಗಳಿಗೊಮ್ಮೆ ಸಕ್ರಿಯವಾಗಿ ಶಿಬಿರವನ್ನು ನಡೆಸಲಾಗುವುದು ಎಂದು ತಿಳಿಸಿದರು.

          ಡಾ.ಜೆ.ಎಂ.ಅಭಿಜ್ಞಾ ಮಾತನಾಡಿ, ವೈದ್ಯೋ ನಾರಾಯಣೋ ಹರಿ ಎಂಬಂತೆ ಜನರ ಭಾವನೆಯಲ್ಲಿ ವೈದ್ಯರನ್ನು ದೇವರೆಂದು ಕಾಣುತ್ತಾರೆ. ನಮ್ಮನ್ನು ನಂಬಿ ಬರುವ ರೋಗಿಗಳಿಗೆ ಧೈರ್ಯ ತುಂಬುವುದು ನಮ್ಮ ಮೊದಲ ಕೆಲಸವಾಗಬೇಕು, ಸರಿಯಾಗಿ ರೋಗದ ಲಕ್ಷಣಗಳನ್ನು ಗಮನಿಸಿ ಕಾಯಿಲೆಯನ್ನು ಗುರುತಿಸಿ ಸೂಕ್ತ ಚಿಕಿತ್ಸೆ ನೀಡುವುದರಿಂದ ವ್ಯಕ್ತಿಯು ಗುಣಮುಖನಾಗುತ್ತಾನೆ. ಉಚಿತ ಆರೋಗ್ಯ ಶಿಬಿರಗಳು ಮೌಲ್ಯವನ್ನು ಹೊಂದಿರುತ್ತದೆ ಎಂದರು.

        ಚಿ.ನಾ.ಹಳ್ಳಿ ಮಾರುತಿ ಮೆಡಿಕಲ್ಸ್ ಮಾಲೀಕ ಸುರೇಶ್ ಶಿಬಿರದಲ್ಲಿ ಭಾಗವಹಿಸಿದ ಎಲ್ಲಾ ಜನರಿಗೆ ಉಚಿತವಾಗಿ ಔಷಧಿಗಳನ್ನು ನೀಡಿದರು.

        ಪೀಪಲ್ ಟ್ರೀ ಹಾಸ್ಪಿಟಲ್‍ನ ವೈದ್ಯರುಗಳಾದ ದಿನೇಶ್, ರಾಜೇಶ್, ಹರೀಶ್ ಮತ್ತು ಸಿಬ್ಬಂದಿ ವರ್ಗ ನವೋದಯ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಚಂದ್ರಶೇಖರ್, ಪ್ರಾಂಶುಪಾಲರಾದ ಹೆಚ್.ಎಸ್.ಶಿವಯೋಗಿ, ಮೋಹನ್ ಕುಮಾರ್, ಅಂಬಿಕಾ, ಈಶ್ವರಪ್ಪ, ರವಿಕುಮಾರ್ ಹಾಗೂ ನವೋದಯ ವಿದ್ಯಾಸಂಸ್ಥೆಯ ಸಿಬ್ಬಂದಿ ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap