ಪಿ-447 ಸಂಚರಿಸಿರುವ ಪ್ರದೇಶಗಳಲ್ಲಿ ಆರೋಗ್ಯ ಸಮೀಕ್ಷೆ : ಡಿ ಸಿ

ತುಮಕೂರು

    ಜಿಲ್ಲೆಯಲ್ಲಿ ಕೋವಿಡ್-19ರ ಸೋಂಕಿತ ಪಿ-447 ವ್ಯಕ್ತಿ ಪ್ರಯಾಣಿಸಿರುವ ತುಮಕೂರು ನಗರದ ಮರಳೂರುದಿಣ್ಣೆ ಮತ್ತು ಮಂಡಿಪೇಟೆಯನ್ನು ಬಫರ್‍ಜೋನ್ ಎಂದು ಪರಿಗಣಿಸಿ ಅಲ್ಲಿನ ನಿವಾಸಿಗಳಿಗೂ ಆರೋಗ್ಯ ಸಮೀಕ್ಷೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ: ಕೆ. ರಾಕೇಶ್ ಕುಮಾರ್ ಅವರು ತಿಳಿಸಿದ್ದಾರೆ.

    ಗುಜರಾತ್ ಮೂಲದ ಸೋಂಕಿತ ಪಿ-447ಯು ಸಂಚರಿಸಿರುವ ಈ ಎರಡು ಪ್ರದೇಶಗಳಿಗೆ ಆಶಾ ಮತ್ತು ಆರೋಗ್ಯ ಸಿಬ್ಬಂದಿಗಳು ಪ್ರತಿನಿತ್ಯ ಮನೆಮನೆಗೆ ತೆರಳಿ ಜ್ವರ, ಕೆಮ್ಮು ಮತ್ತು ಶೀತ ಸೇರಿದಂತೆ ರೋಗ ಲಕ್ಷಣಗಳಿರುವ ಬಗ್ಗೆ ಸಮೀಕ್ಷೆ ನಡೆಸಲಿದ್ದಾರೆ. ಇವರು ಬಂದಾಗ ಸಾರ್ವಜನಿಕರು ಸಹಕರಿಸುವಂತೆ ಅವರು ಮನವಿ ಮಾಡಿದರು.

    ಪಿ-447 ಇದ್ದ ಪಿ.ಹೆಚ್.ಕಾಲೋನಿಯನ್ನು ಕಂಟೈನ್‍ಮೆಂಟ್ ಜೋನ್ ಆಗಿ ಪರಿವರ್ತಿಸಿದ್ದು, ಈ ಪ್ರದೇಶದಲ್ಲಿ 452 ಮನೆಗಳಿವೆ. 1900ಕ್ಕೂ ಹೆಚ್ಚು ಜನರು ವಾಸವಿದ್ದಾರೆ. ಇವರಿಗೆ ಅಗತ್ಯವಿರುವ ವಸ್ತುಗಳನ್ನು ಹೊರಗಡೆಯಿಂದ ಪೂರೈಸಲಾಗುತ್ತಿದೆ. ಈ ವಸ್ತುಗಳನ್ನು ಕಂಟೈನ್‍ಮೆಂಟ್ ವಲಯದಲ್ಲಿಯೇ ಇರುವ 15 ಮಂದಿ ಸ್ವಯಂ ಸೇವಕರ ಮೂಲಕ ಹಂಚಿಕೆ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.

    ಇದು ರಂಜಾನ್ ತಿಂಗಳು ಆಗಿರುವುದರಿಂದ ಅಲ್ಲಿನ ನಿವಾಸಿಗಳಿಗೆ ಕಷ್ಟಕರವಾಗಿರಬಹುದು. ಕೋವಿಡ್-19ರ ನಿಯಂತ್ರಿಸಬೇಕಾದರೆ ಜನರು ಸಹಿಸಿಕೊಳ್ಳಬೇಕು ಎಂದ ಅವರು, ಕಂಟೈನ್‍ಮೆಂಟ್ ಜೋನ್, ಅಲ್ಲದೆ ಸುತ್ತಮುತ್ತಲಿನ 1 ಕಿ.ಮೀ. ವ್ಯಾಪ್ತಿಯನ್ನು ಇಂಟೆಂಸೀವ್ ಬಫರ್ ಜೋನ್ ಎಂದು ಪರಿಗಣಿಸಿದ್ದು, ಈ ವಲಯದಲ್ಲಿ 860 ಮನೆಗಳಿವೆ. ಈ ವಲಯದಲ್ಲಿ ಆರೋಗ್ಯ ಸಮೀಕ್ಷೆ ಮಾಡಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

   ಈ ಪ್ರದೇಶಗಳಲ್ಲಿ ಮೇ 3ರವರೆಗೆ ಸಂಪೂರ್ಣ ಲಾಕ್‍ಡೌನ್ ಜಾರಿಯಲ್ಲಿರುತ್ತದೆ. ಅಲ್ಲಿಯವರೆಗೂ ಯಾವುದೇ ಅಂಗಡಿಗಳನ್ನು ತೆರೆಯಲು ಅವಕಾಶ ನೀಡುವುದಿಲ್ಲ. ಕಂಟೈನ್‍ಮೆಂಟ್ ಜೋನ್ ಹೊರತುಪಡಿಸಿ ಬೇರೆಡೆಗಳಲ್ಲಿ ಸರ್ಕಾರದ ನಿರ್ದೇಶನದಂತೆ ಕೆಲವೊಂದು ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗುವುದು. ಕೇಂದ್ರ ಸರ್ಕಾರದಿಂದ ಬಂದಿರುವ ಆದೇಶದಂತೆ ಎಲ್ಲ ಅಂಗಡಿಗಳನ್ನು ತೆರೆಯುವ ಕುರಿತು ರಾಜ್ಯ ಸರ್ಕಾರ ಸದ್ಯದಲ್ಲಿಯೇ ನಿರ್ಧಾರ ಕೈಗೊಳ್ಳಲಿದೆ. ತದನಂತರ ನಮ್ಮ ಜಿಲ್ಲೆಯಲ್ಲಿ ಯಾವ ರೀತಿ ಅನುಷ್ಠಾನವಾಗಬೇಕು ಎಂಬುದರ ಬಗ್ಗೆ ಆದೇಶ ಹೊರಡಿಸಲಿದ್ದೇನೆ ಎಂದು ಅವರು ತಿಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link