ಹುಳಿಯಾರು:
ಹುಳಿಯಾರಿನ ಕರ್ನಾಟಕ ಪಬ್ಲಿಕ್ ಸ್ಕೂಲ್‍ನ ಎಲ್‍ಕೆಜಿ ಪ್ರವೇಶಕ್ಕೆ ಬುಧವಾರ ಅರ್ಜಿ ವಿತರಣಾ ಕಾರ್ಯ ಆರಂಭವಾಗಿದ್ದು ಮೊದಲ ದಿನವೇ ಅರ್ಜಿ ಪಡೆಯಲು ನೂಕು ನುಗ್ಗಲು ಏರ್ಪಟ್ಟಿತ್ತು.
ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸಿ ಎಂದು ಮನೆಮನೆಗೆ ಭೇಟಿ ನೀಡುವುದು, ಊರಿನ ಪ್ರಮುಖ ಬೀದಿಯಲ್ಲಿ ಜಾಥ ಮಾಡುವುದು ಸೇರಿದಂತೆ ಶಿಕ್ಷಕರು ವಿವಿಧ ಕಸರತ್ತು ಮಾಡುತ್ತಿದ್ದರೂ ಇತ್ತೀಚಿನ ದಿನಗಳಲ್ಲಿ ಪೋಷಕರು ಸರ್ಕಾರಿ ಶಾಲೆಗಳ ಕಡೆ ಮುಖ ಮಾಡುತ್ತಿರಲಿಲ್ಲ. ಆದರೆ ಇಂದು ಶಾಲೆಗೆ ಬಾಗಿಲು ತೆರೆಯುವ ಮೊದಲೇ ಪೋಷಕರ ದಂಡು ಶಾಲೆಯ ಬಳಿ ನೆರಿದಿದ್ದು ಶಿಕ್ಷಕರಲ್ಲೇ ಅಚ್ಚರಿ ಮತ್ತು ಸಂಭ್ರಮ ಉಂಟು ಮಾಡಿತ್ತು.
ಇದಕ್ಕೆ ಸರ್ಕಾರ ಕರ್ನಾಟಕ ಪಬ್ಲಿಕ್ ಸ್ಕೂಲ್ ಮೂಲಕ ಸರ್ಕಾರಿ ಶಾಲೆಯಲ್ಲಿ ಇಂಗ್ಲೀಷ್ ಮೀಡಿಯಂ ಆರಂಭಿಸಿರುವುದು ಮುಖ್ಯ ಕಾರಣವಾಗಿದೆ. ಶುಲ್ಕವೇ ಇಲ್ಲದೆ ಪುಕ್ಕಟ್ಟೆಯಾಗಿ ತಮ್ಮ ಮಕ್ಕಳಿಗೆ ಇಂಗ್ಲೀಷ್ ಶಿಕ್ಷಣ ಕಲಿಸುತ್ತೇವೆಂದರೆ ಯಾರು ತಾನೇ ಬೇಡವೆಂದಾರು ಹೇಳಿ. ಹಾಗಾಗಿ ಸರ್ಕಾರಿ ಎಲ್‍ಕೆಜಿಗೆ ತಮ್ಮ ತಮ್ಮ ಮಕ್ಕಳನ್ನು ಸೇರಿಸಲು ನಾಮುಂದು ತಾಮುಂದು ಎಂದು ನೂರಾರು ಮಂದಿ ಜಮಾಯಿಸಿ ಅರ್ಜಿ ಪಡೆಯಲು ನೂಕು ನುಗ್ಗಲು ಸೃಷ್ಠಿಸಿದ್ದರು.
ಪೋಷಕರೇನೋ ತಮ್ಮ ಮಕ್ಕಳಿಗೆ ಇಂಗ್ಲೀಷ್ ಕಲಿಸುವ ಆಸೆಯಲ್ಲಿ ಅರ್ಜಿಯನ್ನು ಉತ್ಸುಕತೆಯಿಂದ ಪಡೆದುಕೊಂಡರು. ಆದರೆ ಸರ್ಕಾರದ ನಿಯಮದ ಪ್ರಕಾರ ಕೇವಲ 30 ಮಂದಿಗೆ ಮಾತ್ರ ಪ್ರವೇಶ ಕಲ್ಪಿಸಲು ಅವಕಾಶವಿದ್ದು ಲಾಟರಿ ಮೂಲಕ 30 ಮಂದಿಗೆ ಸೀಟು ಕೊಡಲಾಗುತ್ತದೆ. ಹಾಗಾಗಿ ಅರ್ಜಿ ಹಾಕಿದ ಅಷ್ಟೂ ಮಂದಿಗೆ ಸರ್ಕಾರಿ ಎಲ್‍ಕೆಜಿಯಲ್ಲಿ ಸೀಟು ಸಿಗೋದಿಲ್ಲ ಎಂಬುದು ಬೇಸರದ ಸಂಗತಿಯಾಗಿದೆ.
ಲಾಟರಿ ಮೂಲಕ ಸೀಟು ಹಂಚಿಕೆ ಎಂದೋಡದೆ ಅರ್ಜಿ ಪಡೆಯಲು ಬಂದಾಗಿದ್ದ ಪೋಷಕರ ಉತ್ಸಾಹ ಕ್ಷಣಾರ್ಧದಲ್ಲಿ ಕಾಣೆಯಾಗಿತ್ತು. ಸರ್ಕಾರದಿಂದ ಮತ್ತೊಂದು ವಿಭಾಗ ಮಾಡಲು ಅನುಮತಿ ಪಡೆದು ಎಲ್ಲರಿಗೂ ಪ್ರವೇಶ ಕೊಡಿ ಎನ್ನುವ ಒತ್ತಡ ಈ ಸಂದರ್ಭದಲ್ಲಿ ಕೇಳಿಬಂತು. ಇದಕ್ಕೆ ಪ್ರತಿಯಾಗಿ ಪ್ರಾಚಾರ್ಯ ಪ್ರಸನ್ನಕುಮಾರ್ ಅವರು ಇಲ್ಲೇ ಮಕ್ಕಳ ಮನೆ ನಡೆಯುತ್ತದೆ ಸೀಟು ಸಿಗದವರು ಅಲ್ಲಿಗೆ ಸೇರಿಸಿ ಇಂಗ್ಲೀಷ್ ಶಿಕ್ಷಣ ಕೊಡಿಸಿ ಎಂದು ಸಲಹೆ ನೀಡಿದರು.
ಒಟ್ಟಾರೆ ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಮೀಡಿಯಂ ಆರಂಭಿಸಿದರೆ ಪುನಃ ಸರ್ಕಾರಿ ಶಾಲೆಗಳಿಗೆ ಗತಕಾಲದ ವೈಭವ ಮರುಕಳಿಸುತ್ತದೆ ಎನ್ನುವುದು ಇದರಿಂದ ಸಾಬೀತಾಗಿದೆ. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ತಂದು ಇಂಗ್ಲೀಷ್ ಮಾಧ್ಯಮ ಆರಂಭಿಸಬೇಕು ಎನ್ನುವುದು ಪೋಷಕರ ಒತ್ತಾಯವಾಗಿದೆ.