ತುಮಕೂರು:
ಕೊರಟಗೆರೆ ತಾಲ್ಲೂಕಿನ ಹೊಳವನಹಳ್ಳಿ ಹೋಬಳಿಯಾದ್ಯಂತ ಕಳೆದ ಮೂರ್ನಾಲ್ಕು ದಿನಗಳಿಂದ ಬೀಳುತ್ತಿರುವ ಮಳೆಯಿಂದಾಗಿ ಹಳ್ಳ, ಕೊಳ್ಳಗಳೆಲ್ಲಾ ತುಂಬಿ ಹರಿಯುತ್ತಿದ್ದು, ಬಹುತೇಕ ಕೆರೆಗಳಿಗೆ ನೀರು ಬಂದಿದೆ. ಮಳೆಯ ರಭಸಕ್ಕೆ ಚರಂಡಿಯಲ್ಲಿರುವ ಕಸಕಡ್ಡಿಯಲ್ಲಾ ಕೊಚ್ಚಿಕೊಂಡು ಹೋಗಿದೆ.
ಹೊಳವನಹಳ್ಳಿ, ಕೋಡ್ಲಹಳ್ಳಿ, ಶಕುನಿತಿಮ್ಮನಹಳ್ಳಿ, ಬಿ.ಡಿ.ಪುರ, ಕರಕಲಘಟ್ಟ, ಬುಡ್ಡೇನಹಳ್ಳಿ, ಗೊಡ್ರಹಳ್ಳಿ, ಬೈಚಾಪುರ, ಅಕ್ಕಿರಾಂಪುರ, ತೊಗರಿಘಟ್ಟ, ಪಣ್ಣೇನಹಳ್ಳಿ ಮತ್ತಿತರ ಗ್ರಾಮಗಳಲ್ಲಿ ಸುರಿದ ಭಾರಿ ಮಳೆಗೆ ಹಳ್ಳ ಕೊಳ್ಳಗಳು ತುಂಬಿ ಹರಿದವು. ಈ ಭಾಗದ ಬಹುತೇಕ ಕೆರೆಗಳಿಗೆ ನೀರು ಬಂದಿದ್ದು, ಹೀಗೆಯೇ ಇನ್ನೆರಡು ದಿನ ಮಳೆ ಬಂದರೆ ಕೆರೆಗಳು ಭರ್ತಿಯಾಗುವುದರಲ್ಲಿ ಸಂಶಯವಿಲ್ಲ.
ಸುಮಾರು 1000 ಅಡಿಗಳು ಬೋರ್‍ವೆಲ್ ಕೊರೆದರೂ ಈ ಭಾಗದಲ್ಲಿ ನೀರು ಸಿಗದೆ ಅನೇಕ ರೈತರ ಅಡಿಕೆ, ತೆಂಗಿನ ತೋಟಗಳು ಒಣಗಿ ಹೋದವು. ಕೆಲವು ರೈತರು ತೋಟಗಳನ್ನು ಉಳಿಸಿಕೊಳ್ಳಲು ಮನೆಯಲ್ಲಿದ್ದ ಒಡವೆಗಳನ್ನೆಲ್ಲಾ ಒತ್ತೆ ಇಟ್ಟು ಬೋರ್‍ವೆಲ್‍ಗೆ ಸುರಿದಿದ್ದರು. ಅನೇಕ ರೈತರು ತೋಟಗಳನ್ನು ಉಳಿಸಿಕೊಳ್ಳಲು ಬ್ಯಾಂಕ್‍ಗಳಲ್ಲಿ ಸಾಲ ಮಾಡಿ ಕಟ್ಟಲಾಗದ ಸ್ಥಿತಿಯಲ್ಲಿ ನಲುಗಿದ್ದರು.
ಸುಮಾರು 25 ವರ್ಷಗಳಿಂದಲೂ ಇಂತಹ ಮಳೆ ಬಂದಿರಲಿಲ್ಲ. ಈಗ ಮಳೆರಾಯ ಕರುಣಿಸಿದ್ದಾನೆ. ಕುಡಿಯಲಿಕ್ಕೂ ನೀರು ಸಿಗದಂತಹ ಪರಿಸ್ಥಿತಿ ಈ ಭಾಗದಲ್ಲಿ ನಿರ್ಮಾಣವಾಗಿತ್ತು. ಆದರೆ ಈಗ ಸುರಿಯುತ್ತಿರುವ ಮಳೆಯಿಂದ ನಮಗೆ ಸಂತೋಷವಾಗಿದೆ ಎನ್ನುತ್ತಾರೆ ರೈತರು.
ಕೆಲವು ಕಡೆಗಳಲ್ಲಿ ಮಳೆಯ ಅವಾಂತರಕ್ಕೆ ಬೆಳೆಗಳು ನೆಲ ಕಚ್ಚಿವೆ. ಜೋಳ, ರಾಗಿ, ಶೇಂಗಾ ಸೇರಿದಂತೆ ಅನೇಕ ಬೆಳೆಗಳು ನೀರಿನಲ್ಲಿ ಮುಳುಗಿವೆ. ಈಗಾಗಲೇ ಸಾಕಷ್ಟು ಬೆಳೆದಿರುವ ಮುಸುಕಿನ ಜೋಳ ಹಾಗೂ ರಾಗಿಗೆ ನೀರು ಹೆಚ್ಚಾದರೆ ಜೋಪು ಹಿಡಿದು ಕಾಳು ಕಟ್ಟುವುದಿಲ್ಲ. ಇದೊಂದು ರೀತಿಯ ಹಾನಿ. ಆದರೂ ಸಮೃದ್ಧ ಮಳೆ ಬಿದ್ದಿದೆಯಲ್ಲಾ ಈ ವರ್ಷ ಹಾಳಾದರೂ ಮುಂದಿನ ವರ್ಷವಾದರೂ ಉತ್ತಮ ಬೆಳೆ ಬೆಳೆಯಬಹುದು ಎನ್ನುತ್ತಾರೆ ರೈತರು.
ಈ ಭಾಗದಲ್ಲಿ ಹರಿಯುವ ಜಯಮಂಗಲಿ ನದಿ ಹರಿದಿದ್ದೇ ಆದಲ್ಲಿ ಸುಮಾರು 5 ವರ್ಷಗಳ ಕಾಲ ನೀರಿಗೆ ಬರವಿಲ್ಲ. ಅದೇ ರೀತಿ ಮಾವತ್ತೂರು, ತೀತಾ, ಚಿಕ್ಕಾವಳ್ಳಿ ಕೆರೆ, ಕಾಲೋನಿ ಕರೆಗಳು ಭತಿಯಾದರೆ ಈ ಭಾಗದಲ್ಲಿ ನೀರಿಗೆ ಬರವೇ ಇರುವುದಿಲ್ಲ.
ಸೇತುವೆ ನಿರ್ಮಾಣವಾಗಲಿ:
ಹೊಳವನಹಳ್ಳಿಯಿಂದ ಗೌರಿಬಿದನೂರಿಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಅಂದರೆ ಕರಕಲಘಟ್ಟ, ಪಣ್ಣೇನಹಳ್ಳಿ, ತೊಗರಿಘಟ್ಟದ ಮೂಲಕ ಗೌರಿಬಿದನೂರಿಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಜಯಮಂಗಲಿ ನದಿಗೆ ಸೇತುವೆ ನಿರ್ಮಿಸುವಂತೆ ಈ ಭಾಗದ ಗ್ರಾಮಸ್ಥರು ಸಂಬಂಧಪಟ್ಟ ಜನಪ್ರತಿನಿಧಿಗಳಲ್ಲಿ ಮನವಿ ಮಾಡಿದ್ದಾರೆ.
ದಿನಂಪ್ರತಿ ನೂರಾರು ವಾಹನಗಳು ಓಡಾಡುವ ಈ ರಸ್ತೆಗೆ ಈ ಸೇತುವೆ ಅತ್ಯವಶ್ಯಕವಾಗಿತ್ತು. ಆದರೆ ಗೆದ್ದ ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯದಿಂದ ಇದುವರೆಗೂ ಈ ಕೆಲಸ ಆಗಿಲ್ಲ. ಈ ಹಿಂದೆ ಜಯಮಂಗಲಿ ನದಿಯಲ್ಲಿ ಅನೇಕ ಮಂದಿ ರಸ್ತೆ ದಾಟಲು ಹೋಗಿ ಕೊಚ್ಚಿಕೊಂಡು ಹೋಗಿರುವ ಸಾಕಷ್ಟು ಉದಾಹರಣೆಗಳಿದ್ದರೂ ಸಹ ಅದೇಕೋ ಸೇತುವೆ ನಿರ್ಮಿಸುವಲ್ಲಿ ವಿಫಲರಾಗಿದ್ದಾರೆ. ಚುನಾವಣೆಯಲ್ಲಿ ಗೆದ್ದು ಹೋದ ಶಾಸಕರಾದ ಡಾ.ಜಿ.ಪರಮೇಶ್ವರ್ ಅವರು ಈ ಕಡೆ ತಿರುಗಿಯೂ ನೋಡದೆ ಇರುವುದು ನಿಜಕ್ಕೂ ವಿಪರ್ಯಾಸವೇ ಸರಿ. ಇನ್ನಾದರೂ ಶಾಸಕರು ನಮ್ಮ ಗ್ರಾಮಗಳ ಕಡೆ ಮುಖ ಮಾಡಲಿ ಎಂದು ಗ್ರಾಮಸ್ಥರು ತಮ್ಮ ನೋವನ್ನು ತೋಡಿಕೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ