ಹಾನಗಲ್ಲ: ಹೆಚ್ಚಾದ ಖಾಸಗಿ ವಾಹನಗಳ ಹಾವಳಿ..!!

ಹಾನಗಲ್ಲ :

     ಪಟ್ಟಣದ ಹೊಸ ಬಸ್ ನಿಲ್ದಾಣದ ಸುತ್ತಲಿನ ಪ್ರದೇಶದಲ್ಲಿ ಖಾಸಗಿ ವಾಹನಗಳ ಹಾವಳಿ ಹೆಚ್ಚಾಗಿದ್ದು, ಪ್ರಯಾಣಿಕರನ್ನು ಸೆಳೆಯಲು ಎಲ್ಲೆಂದರಲ್ಲಿ ಮೆಟಡೋರ್‍ಗಳನ್ನು ನಿಲ್ಲಿಸಿ ಸಂಚಾರಕ್ಕೆ ಕಿರಿಕಿರಿ ಉಂಟುಮಾಡುತ್ತಿದ್ದಾರೆ. ಕೂಡಲೇ ಜಿಲ್ಲಾಧಿಕಾರಿಗಳ ಆದೇಶವನ್ನು ಪಾಲಿಸುವಂತೆ ಕ್ರಮ ಕೈಕೊಳ್ಳಲು ಸೂಚಿಸಿ ಎಂದು ಸಾರ್ವಜನಿಕರು ಸೋಮವಾರ ಪುರಸಭೆ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

    ಹೊಸ ಬಸ್ ನಿಲ್ದಾಣದ ಹುಬ್ಬಳ್ಳಿ ಹಾಗೂ ಹಾವೇರಿ ಮಾರ್ಗದ ರಸ್ತೆಯುದ್ದಕ್ಕೂ ಖಾಸಗಿ ಮೆಟಡೋರ್‍ಗಳು ರಸ್ತೆಯುದ್ದಕ್ಕೂ ನಿಂತು ಪ್ರಯಾಣಿಕರಿಗಾಗಿ ಕಾಯುತ್ತ ವಾಹನ ಸಂಚಾರಕ್ಕೆ ತೊಂದರೆಯುಂಟುಮಾಡುತ್ತಿವೆ. ಬೆಳಗಿನ ವೇಳೆಯಲ್ಲಿ ಈ ಮಾರ್ಗದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಕಚೇರಿ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಹೆಚ್ಚು ಓಡಾಡುವ ಅತ್ಯಂತ ಜನಸಂದಣಿಯಿರುವ ಪ್ರದೇಶವಾಗಿದೆ.

    ಅದೇ ಸಮಯದಲ್ಲಿ ಮೆಟಡೋರ್‍ಗಳು ರಸ್ತೆಯಲ್ಲಿಯೇ ನಿಂತು ಸಾರ್ವಜನಿಕ ಸಮಸ್ಯೆ ಸೃಷ್ಟಿಸುತ್ತಿವೆ. ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ನಿಲ್ಲಿಸುವ ಈ ವಾಹನಗಳಿಂದಾಗಿ ಪಾದಚಾರಿಗಳು ಮತ್ತು ಬೈಕ್ ಚಾಲಕರಿಗೂ ದಾರಿ ಸಿಗದಂಥ ಪರಿಸ್ಥಿತಿ ಉಂಟಾಗುತ್ತಿದೆ. ಖಾಸಗಿ ವಾಹನಗಳನ್ನು ಬಸ್ ನಿಲ್ದಾಣದಿಂದ 500 ಮೀಟರ್ ದೂರದಲ್ಲಿ ನಿಲ್ಲಿಸಬೇಕೆಂದು ಜಿಲ್ಲಾಧಿಕಾರಿಗಳ ಆದೇಶದ ಫಲಕ ಹಾಕಲಾಗಿದ್ದರೂ ಅದನ್ನು ಯಾರೂ ಪಾಲಿಸುತ್ತಿಲ್ಲ. ಪೊಲೀಸ್ ಇಲಾಖೆ, ಪುರಸಭೆ ಈ ಆದೇಶವನ್ನು ಕಡ್ಡಾಯವಾಗಿ ಪಾಲಿಸುವಂತೆ ಖಾಸಗಿ ವಾಹನಗಳ ಮಾಲೀಕರಿಗೆ ಸೂಚನೆ ನೀಡಬೇಕು ಎಂದು ತಿಳಿಸಿದ್ದಾರೆ.

      ಮಹಾತ್ಮಾಗಾಂಧಿ ವೃತ್ತದಲ್ಲಿ ಹಾವೇರಿ, ತಿಳವಳ್ಳಿ, ಆನವಟ್ಟಿ, ಶಿರಶಿ, ಚಿಕ್ಕಾಂಶಿಹೊಸೂರ ಸೇರಿದಂತೆ ಈ ಮಾರ್ಗದಲ್ಲಿ ಚಲಿಸುವ ಎಲ್ಲ ವಾಹನಗಳು ನಿಂತು ಪ್ರಯಾಣಿಕರಿಗಾಗಿ ಕಾಯುತ್ತವೆ. ಪ್ರತಿದಿನದ ಈ ಕಿರಿಕಿರಿಯಿಂದ ಟ್ರಾಫಿಕ್‍ಜಾಮ್ ಸಮಸ್ಯೆ ಸೃಷ್ಟಿಯಾಗುತ್ತಿದೆ. ಇದರೊಂದಿಗೆ ರಸ್ತೆ ಪಕ್ಕದ ಅಂಗಡಿಗಳ ವ್ಯಾಪಾರ-ವಹಿವಾಟಿಗೂ ತೊಂದರೆಯಾಗುತ್ತಿದೆ.

     ವಾಣಿಜ್ಯ ಮಳಿಗೆಗಳ ಎದುರು ವಾಹನ ನಿಲುಗಡೆ ಮಾಡದಂತೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ವಾಹನ ಮಾಲಕರು ಹಾಗೂ ಚಾಲಕರೊಂದಿಗೆ ಪ್ರತಿದಿನ ಗಲಾಟೆಯಾಗುತ್ತಿವೆ. ಇದನ್ನು ತಪ್ಪಿಸಲು ಪೊಲೀಸ್ ಹಾಗೂ ಪುರಸಭೆ, ಕಂದಾಯ ಇಲಾಖೆಗಳು ಕ್ರಮ ಕೈಗೊಳ್ಳಬೇಕು.

      ಇದಲ್ಲದೇ ರಸ್ತೆ ಮಧ್ಯದಲ್ಲೇ ಮಲಗಿಕೊಳ್ಳುವ ಬಿಡಾಡಿದನಗಳಿಂದ ವಾಹನ ಸಂಚಾರಕ್ಕೆ ವ್ಯತ್ಯಯವಾಗುತ್ತಿದೆ. ಇವುಗಳಿಂದಾಗಿ ವಾಹನ ಅಪಘಾತಗಳು ನಡೆಯುತ್ತಿವೆ. ಅವುಗಳನ್ನು ಹಿಡಿದು ಬೇರೆಡೆ ಸ್ಥಳಾಂತರಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ. ಮನವಿ ಸಲ್ಲಿಸುವ ಸಂದರ್ಭದಲ್ಲಿ ಯಲ್ಲಪ್ಪ ಮೆಹರವಾಡೆ, ಮಹದೇವ ಮೆಹರವಾಡೆ, ಕೆ.ಪಿ.ಸಿಂಗ್, ಮಾಲತೇಶ ದೇಸಾಯಿ, ಅರುಣ ಕಲಾಲ, ಪುನೀತ್ ಸಂಕಪಾಳೆ, ಪ್ರಮೋದ್ ಕೊಲ್ಲಾಪುರ, ಜಗದೀಶ ಕೊಲ್ಲಾಪುರ, ಇತರರು ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap