ಚಳ್ಳಕೆರೆ
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಆರೂ ಕ್ಷೇತ್ರಗಳಲ್ಲಿ ಭಾರತೀಯ ಜನತಾ ಪಕ್ಷ ಗೆಲುವು ಸಾಧಿಸಬೇಕಿದ್ದು, ಅನಿವಾರ್ಯ ಕಾರಣಗಳಿಂದ ಚಳ್ಳಕೆರೆ ಕ್ಷೇತ್ರವನ್ನು ಗೆಲಲ್ಲು ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಎ.ನಾರಾಯಣಸ್ವಾಮಿಯವರಿಗೆ ಈ ಕ್ಷೇತ್ರದಿಂದ ಅತಿ ಹೆಚ್ಚು ಮತಗಳು ಲಭಿಸುವ ನಿಟ್ಟಿನಲ್ಲಿ ಎಲ್ಲಾ ಕಾರ್ಯಕರ್ತರು ಸಂಘಟಿತರಾಗಿ ಕಾರ್ಯನಿರ್ವಹಿಸಬೇಕೆಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಕೆ.ಎಸ್.ನವೀನ್ ತಿಳಿಸಿದರು.
ಅವರು, ಭಾನುವಾರ ಇಲ್ಲಿನ ಎಚ್.ಜಗಲ್ಯೂರಯ್ಯ ಸಮುದಾಯ ಭವನದಲ್ಲಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪ್ರಮುಖ ಕಾರ್ಯಕರ್ತರ ಶಕ್ತಿ ಕೇಂದ್ರಗಳ ಮುಖಂಡರ ಸಮಾವೇಶವನ್ನು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಕಳೆದ 20 ವರ್ಷಗಳ ಬಿಜೆಪಿ ಸಾಧನೆಯನ್ನು ಗಮನಿಸಿದಾಗ ಚಿತ್ರದುರ್ಗ ಜಿಲ್ಲೆಯಲ್ಲಿ ಮೊದಲ ಬಾರಿಗೆ ಈ ಕ್ಷೇತ್ರದಲ್ಲಿ 1999ರಲ್ಲಿ ಮಾಜಿ ಶಾಸಕ ಜಿ.ಬಸವರಾಜ ಮಂಡಿಮಠ್ ಬಿಜೆಪಿಗೆ ಮೊದಲ ಗೆಲುವು ತಂದುಕೊಟ್ಟ ಹಿರಿಯರಾಗಿದ್ದಾರೆ.
ನಂತರ ಈ ಕ್ಷೇತ್ರದಲ್ಲಿ ಮಾಜಿ ಶಾಸಕ ತಿಪ್ಪೇಸ್ವಾಮಿ ಒಂದು ಬಾರಿ ಗೆಲುವು ಸಾಧಿಸಿದ್ದು ಬಿಟ್ಟರೆ ಕಳೆದ 2018ರ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಯ ನಿರ್ಲಕ್ಷತನದಿಂದ ಈ ಕ್ಷೇತ್ರವನ್ನು ಕಳೆದುಕೊಳ್ಳಬೇಕಾಯಿತು. ಈ ಕ್ಷೇತ್ರ ಬಿಜೆಪಿ ಪಾಲಾಗಿದ್ದರೆ ರಾಜ್ಯದಲ್ಲಿ ದಾಖಲೆಯ ವಿಜಯವನ್ನು ಪಡೆದ ಜಿಲ್ಲೆಗಳಲ್ಲಿ ಚಿತ್ರದುರ್ಗ ಜಿಲ್ಲೆಯೂ ಸಹ ಒಂದಾಗುತ್ತಿತ್ತು. ಈ ಬಾರಿ ಎಲ್ಲಾ ಕಾರ್ಯಕರ್ತರು ಅತಿ ಹೆಚ್ಚು ಉತ್ಸಾಹದಿಂದ ಕಾರ್ಯನಿರ್ವಹಿಸಿದಲ್ಲಿ ಬಿಜೆಪಿಯ ಗೆಲುವು ಸಾಧ್ಯವಾಗುತ್ತದೆ. ನಿಮ್ಮೆಲ್ಲರ ಪರಿಶ್ರಮ ಕಾರ್ಯಚಟುವಟಿಕೆಗಳ ಮೇಲೆ ಪಕ್ಷದ ಗೆಲುವು ಆದರಿಸಿದೆ. ಇಂದು ಇಡೀ ದೇಶವೇ ಮತ್ತೊಮ್ಮೆ ಪ್ರಧಾನಿಯಾಗಿ ನರೇಂದ್ರಮೋದಿ ಎಂಬ ಘೋಷಣೆ ನಿಜವಾಗಬೇಕಾದಲ್ಲಿ ನಿಮ್ಮ ಪರಿಶ್ರಮ ಮುಖ್ಯವೆಂದರು.
ಚಿತ್ರದುರ್ಗ ಕ್ಷೇತ್ರದ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿ, ಜಿಲ್ಲೆಯಲ್ಲಿ ಭಾರತೀಯ ಜನತಾ ಪಕ್ಷ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಎಲ್ಲಾ ಮತದಾರರ ವಿಶ್ವಾಸವನ್ನು ಗಳಿಸುವಲ್ಲಿ ಯಶಸ್ಸಿಯಾಗಿದೆ. ಲೋಕಸಭಾ ಚುನಾವಣೆ ಮತದಾನ ಇನ್ನು ಕೇವಲ 18 ದಿನಗಳು ಬಾಕಿ ಇದ್ದು ಈ ಅವಧಿಯಲ್ಲಿ ಪಕ್ಷದ ಕಾರ್ಯಕರ್ತರು ಪಕ್ಷದ ಗೆಲುವಿಗಾಗಿ ಹೆಚ್ಚು ಶ್ರಮಪಡಬೇಕಿದೆ. ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ಪಕ್ಷದ ಶಾಸಕರಿದ್ದು, ಚಳ್ಳಕೆರೆ ಕ್ಷೇತ್ರದಲ್ಲಿ ಶಾಸಕರು ಇಲ್ಲವೆಂಬ ಭಾವನೆ ಯಾರಿಗೂ ಬೇಡ.
ಪಕ್ಷಕ್ಕೆ ಶಕ್ತಿಯನ್ನು ತುಂಬಲು ಎಲ್ಲಾ ಕಾರ್ಯಕರ್ತರು ಯೋಜನೆಯಂತೆ ಕಾರ್ಯನಿರ್ವಹಿಸಿದಲ್ಲಿ ಸಾಧ್ಯವಾಗುತ್ತದೆ. ಈ ಕ್ಷೇತ್ರದಲ್ಲಿ ಮಾಜಿ ಶಾಸಕ ಬಸವರಾಜ ಮಂಡಿಮಠ್ ಹೆಚ್ಚು ಪ್ರಭಾವ ಹೊಂದಿದ್ದು, ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಮತಗಳಿಸಲು ಸಾಧ್ಯವಾಗುತ್ತದೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕಿಂತ ಮತಗಳ ಗಳಿಕೆಯಲ್ಲಿ ಬಿಜೆಪಿ ಮುನ್ನಡೆ ಸಾಧಿಸುವುದು ಖಾತರಿಯಾಗಿದೆ. ಇದು ಶಾಸಕ ಟಿ.ರಘುಮೂರ್ತಿಯವರಿಗೆ ಎಚ್ಚರಿಕೆ ಗಂಟೆಯಾಗಲಿದೆ ಎಂದರು.
ಲೋಕಸಭಾ ಚುನಾವಣಾ ಉಸ್ತುವಾರಿ, ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್.ಶಿವಯೋಗಿಸ್ವಾಮಿ ಮಾತನಾಡಿ, ಪ್ರಧಾನ ಮಂತ್ರಿ ನರೇಂದ್ರಮೋದಿಯವರ 5 ವರ್ಷಗಳ ಸಾಧನೆಯ ಅಂಶಗಳನ್ನು ಬೂತ್ ಮಟ್ಟದ ಕಾರ್ಯಕರ್ತರು ಪ್ರತಿಯೊಂದು ಮನೆಗೆ, ಪ್ರತಿಯೊಬ್ಬ ಮತದಾರರನಿಗೆ ತಿಳಿಸಬೇಕಿದೆ. ಭಾರತೀಯ ಜನತಾ ಪಕ್ಷ ಬೇರೆ ಪಕ್ಷಗಳಿಗಿಂತ ವಿಭಿನ್ನವಾಗಿದ್ದು, ಇಲ್ಲಿ ಪಕ್ಷದ ಕಾರ್ಯಕರ್ತರ ಜೀವಾಳವಾಗಿದ್ಧಾರೆ. ಬಿಜೆಪಿಯ ಗೆಲುವಿನಲ್ಲಿ ಪ್ರಮುಖ ಪಾತ್ರ ಶಕ್ತಿ ಕೇಂದ್ರಗಳ ಪ್ರಮುಖರದ್ದಾಗಿರುತ್ತದೆ. ವಿಶೇಷವಾಗಿ ಮಹಿಳೆಯರು ಮತ್ತು ಯುವಕರು ಬಿಜೆಪಿಗೆ ಹೆಚ್ಚು ಮತ ಹಾಕುವರು ಎಂಬ ವಿಶ್ವಾಸ ನಮಗೆ ಇದೆ ಎಂದರು.
ಮಾಜಿ ಶಾಸಕ ಜಿ.ಬಸವರಾಜಮಂಡಿಮಠ ಮಾತನಾಡಿ, ಪಕ್ಷದ ಉತ್ತಮ ಸಂಘಟನೆಯಿಂದ ಮಾತ್ರ ಮತಗಳಿಕೆ ಕಾರ್ಯಸುಲಭವಾಗುತ್ತದೆ. ಈ ಕ್ಷೇತ್ರದಲ್ಲಿ ಬಿಜೆಪಿ ಎಂದೂ ಹಿನ್ನಡೆ ಸಾಧಿಸಿಲ್ಲ. ಕಳೆದ 2018ರ ಚುನಾವಣೆಯಲ್ಲಿ ಮಾತ್ರ ಪಕ್ಷದ ಹಿನ್ನೆಡೆ ಅನುಭವಿಸಿದೆ. ಆದರೆ, ಪ್ರಧಾನ ಮಂತ್ರಿ ನರೇಂದ್ರಮೋದಿಯವರ ಪ್ರಭಾವ ವಿಶ್ವಮಟ್ಟದಲ್ಲಿ ಖ್ಯಾತಿಯಾಗಿದ್ದು, ಇಂದು ಭಾರತೀಯ ಜನತಾ ಪಕ್ಷ ರಾಷ್ಟ್ರದ 130 ಕೋಟಿ ಜನರ ವಿಶ್ವಾಸವನ್ನು ಗಳಿಸಲು ಸಾಧ್ಯವಾಗಿದೆ.
ಗ್ರಾಮೀಣ ಮಟ್ಟದಿಂದ ನಗರದ ಮಟ್ಟದ ತನಕ ಎಲ್ಲಾ ವರ್ಗದ ಮತದಾರರಲ್ಲಿ ಮೋದಿಯ ಕಾರ್ಯಸಾಧನೆ ಬಗ್ಗೆ ಪ್ರಶಂಸೆ ವ್ಯಕ್ತವಾಗುತ್ತಿದ್ದು, ಇದು ಮತವಾಗಿ ಪರಿವರ್ತನೆಯಾಗಲಿದೆ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ರಾಜ್ಯ ಸ್ಲಂ ಮೋರ್ಚಾ ಉಪಾಧ್ಯಕ್ಷ ಸಿದ್ದೇಶ್‍ಯಾದವ್, ಪಕ್ಷದ ಗೆಲುವು ಕಾರ್ಯಕರ್ತರ ಕಾರ್ಯದ ಮೇಲೆ ಅಲಂಬಿತವಾಗಿದೆ. ಮೋದಿಯವರ ಸಾಧನೆ ಪಕ್ಷವನ್ನು ಜನರತ್ತ ತೆಗೆದುಕೊಂಡು ಹೋಗಲು ಸಹಕಾರಿಯಾಗಿದೆ. ವಿಶೇಷವೆಂದರೆ ವಿರೋಧ ಪಕ್ಷದ ಕೆಲವರು ಸಹ ಮೋದಿ ಕಾರ್ಯದ ಬಗ್ಗೆ ವಯುಕ್ತಿಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ಧಾರೆಂದರು.
ವಿಭಾಗ ಉಸ್ತುವಾರಿ ಜಿ.ಎಂ.ಸುರೇಶ್ ಮಾತನಾಡಿ, ಇಂದು ರಾಷ್ಟ್ರದೆಲ್ಲೆಡೆ ಮತ್ತೊಮ್ಮೆ ಮೋದಿ ಎಂಬ ಕೂಗು ಎಲ್ಲೆಡೆ ಕೇಳಿ ಬರುತ್ತಿದೆ. ರಾಷ್ಟ್ರದ ಇತಿಹಾಸದಲ್ಲಿ ರಾಜಕೀಯ ಕ್ಷೇತ್ರದಲ್ಲಿ ಹೆಚ್ಚು ಮನ್ನಣೆ ಗಳಿಸಿದ ಧೀಮಂತ ನಾಯಕರಾಗಿ ಪ್ರಧಾನ ಮಂತ್ರಿ ನರೇಂದ್ರಮೋದಿ ಹೊರಹೊಮ್ಮುತ್ತಾರೆ. ರಾಷ್ಟ್ರದ 50 ಕೋಟಿ ಮಹಿಳೆಯರಿಗೆ ಉಜ್ವಲ ಗ್ಯಾಸ್ ಉಚಿತವಾಗಿ ನೀಡುವ ಮೂಲಕ ಮಹಿಳೆಯರ ಸಂಕಷ್ಟವನ್ನು ದೂರ ಮಾಡಿದ್ಧಾರೆ. ಕಾರ್ಯಕರ್ತರೇ ಪಕ್ಷದ ಗೆಲುವಿನ ಬಗ್ಗೆ ದೃಢ ಸಂಕಲ್ಪ ಮಾಡಿ ಕಾರ್ಯ ಪ್ರಾರಂಭಿಸುವಂತೆ ಮನವಿ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಡಲಾಧ್ಯಕ್ಷ ಬಿ.ವಿ.ಸಿರಿಯಣ್ಣ ವಹಿಸಿ ಮಾತನಾಡುತ್ತಾ, ಪಕ್ಷದ ಇಂದು ಹೊಸ ಆತ್ಮವಿಶ್ವಾಸದಿಂದ ಕಾರ್ಯನಿರ್ವಹಿಸುವ ಅವಕಾಶ ಒದಗಿ ಬಂದಿದೆ. ಎಲ್ಲರೂ ಸೇರಿ ನಾರಾಯಣಸ್ವಾಮಿಯವರ ವಿಜಯಕ್ಕೆ ಕಠಿಬದ್ದರಾಗಿ ದುಡಿಯಬೇಕೆಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಬಿ.ಎಸ್.ಶಿವಪುತ್ರಪ್ಪ, ಬಾಳೆಮಂಡಿ ರಾಮದಾಸ್, ಜಿಲ್ಲಾ ಪಂಚಾಯಿತಿ ಸದಸ್ಯ ಶಿವಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯಪಾಲಯ್ಯ, ಶ್ರೀನಿವಾಸ್‍ಯಾದವ್, ಸೋಮಶೇಖರ್‍ಮಂಡಿಮಠ, ನಗರಸಭಾ ಸದಸ್ಯ ಎಸ್.ಜಯಣ್ಣ, ಸಿ.ಬಿ.ಆದಿಭಾಸ್ಕರಶೆಟ್ಟಿ, ಸೂರನಹಳ್ಳಿ ವಿಜಯಣ್ಣ ಮುಂತಾದವರು ಭಾಗವಹಿಸಿದ್ದರು. ಕರೀಕೆರೆ ತಿಪ್ಪೇಸ್ವಾಮಿ ಸ್ವಾಗತಿಸಿ, ವಂದಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2019/03/31CLK01P.gif)