ಹೆದ್ದಾರಿ ಕಾಮಗಾರಿಗೆ ಕೆರೆ ಮಣ್ಣು ಬಳಕೆಗೆ ರೈತರ ವಿರೋಧ

ಹುಳಿಯಾರು

     ಸಣ್ಣ್ಣ ನೀರಾವರಿ ಇಲಾಖೆಯ ಅನುಮತಿ ಇಲ್ಲದೆ ಹೆದ್ದಾರಿ ಕಾಮಗಾರಿಗೆ ಕೆರೆ ಮಣ್ಣು ಬಳಕೆ ಮಾಡುತ್ತಿರುವುದನ್ನು ವಿರೋಧಿಸಿ ಮಣ್ಣು ಸಾಗಿಸುತ್ತಿದ್ದ ಲಾರಿ ತಡೆದು ಅಧಿಕಾರಿಗಳ ವಶಕ್ಕೆ ನೀಡಿದ ಘಟನೆ ಹುಳಿಯಾರು ಹೋಬಳಿಯ ಚಿಕ್ಕಬಿದರೆಯಲ್ಲಿ ಜರುಗಿದೆ.

    ಬೀದರ್- ಶ್ರೀರಂಗಪಟ್ಟಣ 150 ಹೆದ್ದಾರಿ ಕಾಮಗಾರಿಯು ಚಿಕ್ಕನಾಯಕನಹಳ್ಳಿಯಿಂದ ಹುಳಿಯಾರುವರೆಗೆ ನಡೆಯುತ್ತಿದ್ದು, ಈ ರಸ್ತೆಯ ಉಬ್ಬು ತಗ್ಗುಗಳಿಗೆ ಮಣ್ಣು ಹಾಕಲು ಚಿಕ್ಕಬಿದರೆ ಗ್ರಾಮದ ಕೆರೆಯಿಂದ ಗುತ್ತಿಗೆದಾರರು ಲಾರಿ ಮೂಲಕ ಮಣ್ಣು ರವಾನೆ ಮಾಡುತ್ತಿದ್ದರು. ಇದೇ ಮಾರ್ಗದಲ್ಲಿ ತೆರಳುತ್ತಿದ್ದ ರಾಜ್ಯ ರೈತ ಸಂಘದ ಅಧ್ಯಕ್ಷ ಹೊಸಹಳ್ಳಿ ಚಂದ್ರಣ್ಣ ಇದನ್ನು ಗಮನಿಸಿ ಲಾರಿ ತಡೆದು ಇಲಾಖೆಯ ಅನುಮತಿ ಪತ್ರ ಕೇಳಿದರು.

   ಲಾರಿಯ ಚಾಲಕ ನಮ್ಮ ಓನರ್ ಹೇಳಿದ್ದಾರೆ ನಾನು ಲೋಡ್ ಮಾಡಿಕೊಂಡು ಬರುತ್ತಿದ್ದೇನೆ. ಇದು ಸಾರ್ವಜನಿಕ ಉಪಯೋಗಕ್ಕೆ ಬರುವ ರಸ್ತೆಗೆ ಹಾಕುತ್ತಿದ್ದೇವೆಯೇ ವಿನಹ ಸ್ವಂತಕ್ಕೆ ಬಳಸುತ್ತಿಲ್ಲ ಎಂದು ಸಬೂಬು ಹೇಳಿದ್ದಾರೆ. ಇದರಿಂದ ಆಕ್ರೋಶಗೊಂಡ ರೈತರು ರಸ್ತೆ ಮಾಡಲು ಸರ್ಕಾರ ನಿಮಗೆ ದುಡ್ಡು ಕೊಡುತ್ತದೆ. ನೀವೇನು ಪುಕ್ಕಟೆ ರೋಡ್ ಮಾಡ್ತಿಲ್ಲ. ಅದೂ ಅಲ್ಲದೆ ಮಣ್ಣಿಗೂ ಇಂತಿಷ್ಟು ದುಡ್ಡು ಕೊಡುತ್ತದೆ ಎಂದು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡು ಅಧಿಕಾರಿಗಳಿಗೆ ಸ್ಥಳಕ್ಕೆ ಆಗಮಿಸುವಂತೆ ಪಟ್ಟು ಹಿಡಿದರು.

     ರಾಜ್ಯ ರೈತ ಸಂಘದ ಹೊಸಹಳ್ಳಿ ಚಂದ್ರಣ್ಣ ಮಾತನಾಡಿ, ಕೆರೆಯ ಹೂಳನ್ನು ಕೃಷಿ ಕೆಲಸಗಳಿಗೆ ರೈತರು ತೆಗೆದುಕೊಂಡು ಹೋಗಲು ಅನುಮತಿ ಇದೆ. ಆದರೆ ಸರ್ಕಾರಿ ರಸ್ತೆಯ ನೆಪದಲ್ಲಿ 10 ಅಡಿ ಆಳದಷ್ಟು ಕೆರೆ ಬಗೆದು ಮಣ್ಣು ಸಾಗಿಸುತ್ತಿದ್ದಾರೆ. ಇದು ಅಪರಾಧವಾಗಿದ್ದು ಗುತ್ತಿಗೆದಾರರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಅಧಿಕಾರಿಗಳನ್ನು ಒತ್ತಾಯಿಸಿದರು.

      ಸ್ಥಳಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ದೀಪಾ ಭೇಟಿ ನೀಡಿ ಕೆರೆಯಿಂದ ಮಣ್ಣು ಸಾಗಿಸುತ್ತಿರುವುದು ಅಕ್ರಮವಾಗಿದ್ದು, ಇವರಿಗೆ ಇಲಾಖೆಯಿಂದ ಅನುಮತಿ ಕೊಟ್ಟಿಲ್ಲ ಎಂದು ಲಾರಿಯನ್ನು ಪೋಲೀಸರಿಗೆ ಒಪ್ಪಿಸಿ, ಪ್ರಕರಣ ದಾಖಲಿಸುವಂತೆ ತಿಳಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap