ಕೊನೆ ಭಾಗಕ್ಕೆ ತಲುಪದ ನೀರು: ಹೆದ್ದಾರಿ ತಡೆ

ದಾವಣಗೆರೆ:

       ಭದ್ರಾ ನಾಲೆಯ ಕೊನೆ ಭಾಗಕ್ಕೆ ನೀರು ತಲುಪಿಸುವಲ್ಲಿ ವಿಫಲವಾಗಿರುವ ನೀರಾವರಿ ಇಲಾಖೆಯ ಅಧಿಕಾರಿಗಳ ಕ್ರಮ ಖಂಡಿಸಿ, ಕೊನೆ ಭಾಗದ ರೈತರು ಬುಧವಾರ ರಾಷ್ಟ್ರೀಯ ಹೆದ್ದಾರಿ-4ರಲ್ಲಿ ಹೆದ್ದಾರಿ ತಡೆ ನಡೆಸಿ ಪ್ರತಿಭಟಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದದರು.

         ನಗರದ ಹೊರ ವಲಯದ ಕುಂದುವಾಡ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿ-4ರಲ್ಲಿ ಜಮಾಯಿಸಿದ ಕೊನೆ ಭಾಗದ ರೈತರು ದಿಢೀರ್ ಹೆದ್ದಾರಿ ತಡೆಯುವ ಮೂಲಕ ನೀರಾವರಿ ಇಲಾಖೆ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗುವ ಆಕ್ರೋಶ ವ್ಯಕ್ತಪಡಿಸಿದರು. ಸುಮಾರು 30 ನಿಮಿಷಕ್ಕೂ ಹೆಚ್ಚು ಕಾಲ ಹೆದ್ದಾರಿ ತಡೆ ನಡೆಸಿದ್ದರಿಂದ ಸುಮಾರು ಕಿಮೀ ದೂರದವರೆಗೂ ವಾಹನ ಸಾಲುಗಟ್ಟಿ ನಿಂತ ಕಾರಣ ವಾಹನ ಸಂಚಾರದಲ್ಲಿ ಕೆಲ ಕಾಲ ವ್ಯತ್ಯಯ ಉಂಟಾಗಿತ್ತು.

      ಈ ಸಂದರ್ಭದಲ್ಲಿ ಮಾತನಾಡಿದ ಕೊನೆ ಭಾಗದ ರೈತರು, ಕಾಡಾ ನಿರಂತರವಾಗಿ ನೀರು ಹರಿಸುವುದಾಗಿ ಭರವಸೆ ನೀಡಿದ ಕಾರಣ ಬತ್ತ ನಾಟಿ ಮಾಡಲಾಗಿದೆ. ಆದರೆ, ಕೊನೆ ಭಾಗಕ್ಕೆ ಇನ್ನೂ ನೀರು ತಲುಪದ ಕಾರಣ ಬತ್ತದ ಪೈರು ಸಂಪೂರ್ಣ ಒಣಗಿ ಹೋಗಿದೆ ಎಂದು ಆರೋಪಿಸಿದರು.

       ಸರದಿ ಪ್ರಕಾರ ನೀರು ಬಿಟ್ಟು 4 ದಿನ ಕಳೆದರೂ ಭದ್ರಾ ನಾಲೆಯಲ್ಲಿ 3.5 ಸಹ ನೀರು ಬರುತ್ತಿಲ್ಲ. ಇನ್ನಾದರೂ ನಿರಂತರವಾಗಿ ಕನಿಷ್ಟ 4.5 ಅಡಿ ಗೇಜ್ ಕಾಯ್ದುಕೊಂಡು ನೀರು ಬಿಟ್ಟರೆ ದಾವಣಗೆರೆ, ಹರಿಹರ ತಾಲೂಕಿನ ಕೊನೆ ಭಾಗದ ಬತ್ತ ಬೆಳೆ ಉಳಿದು ರೈತರು ಉಸಿರಾಡುತ್ತಾರೆ.

        ಇಲ್ಲದಿದ್ದರೆ, ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ನೀರಾವರಿ ಇಲಾಖೆ ಅಧಿಕಾರಿ, ಸಿಬ್ಬಂದಿ ನಾಲೆ ಮೇಲೆ ಸುತ್ತಾಡದ್ದರಿಂದ ಅಕ್ರಮ ಪಂಪ್‍ಸೆಟ್‍ಗಳ ಹಾವಳಿ ಮಿತಿ ಮೀರಿದೆ. ಹೀಗಾಗಿ ನ್ಯಾಯಬದ್ಧವಾಗಿ ನೀರು ಪಡೆಯಬೇಕಾದ ಅಚ್ಚುಕಟ್ಟು ಪ್ರದೇಶದ ಕೊನೆ ಭಾಗದ ರೈತರು ಬತ್ತ ಬೆಳೆ ಕಳೆದುಕೊಳ್ಳುವುದರ ಜೊತೆಗೆ ಸಾಲದ ಸುಳಿಗೆ ಸಿಲುಕಬೇಕಾಗುತ್ತದೆ. ಕಳೆದ ಮೂರ್ನಾಲ್ಕು ಬೆಳೆಯೂ ಕೈಗೆ ಬಂದಿಲ್ಲ ಈಗಲು ಇದೇ ಪರಿಸ್ಥಿತಿ ಮುಂದುವರೆದರೆ ನಾವು ಬದುಕುವುದಾದರೂ ಹೇಗೆ? ಎಂದು ಪ್ರಶ್ನಿಸಿದರು.

        ರೈತರು ಹೆದ್ದಾರಿ ತಡೆದಿರುವ ವಿಷಯ ತಿಳಿದು ಸ್ಥಳದಕ್ಕೆ ಧಾವಿಸಿದ ಹೆಚ್ಚುವರಿ ಎಸ್‍ಪಿ ಟಿ.ಜೆ.ಉದೇಶ್ ಪ್ರತಿಭಟನೆ ವಾಪಾಸ್ ಪಡೆಯುವಂತೆ ಒತ್ತಡ ಹೇರಿದರೂ ಸಹ ರೈತರು ಕೊನೆ ಭಾಗಕ್ಕೆ ನೀರು ತಲುಪಿಸುವ ಬಗ್ಗೆ ಅಧಿಕಾರಿಗಳು ಭರವಸೆ ನೀಡುವ ವರೆಗೂ ಪ್ರತಿಭಟನೆ ವಾಪಾಸ್ ಪಡೆಯುವುದಿಲ್ಲ ಎಂದು ಪಟ್ಟುಹಿಡಿದರು.

        ಈ ವೇಳೆ ಮಾತನಾಡಿದ ಎಎಸ್ಪಿ ಉದೇಶ್, ನೀರಾವರಿ ಇಲಾಖೆ ಅಧಿಕಾರಿ, ಸಿಬ್ಬಂದಿ ಹಾಗೂ 10 ಮಂದಿ ರೈತರು ಜಿಲ್ಲಾ ಸಶಸ್ತ್ರ ಮೀಸಲು ಪಡೆಯ 6 ಸಿಬ್ಬಂದಿಗಳೊಂದಿಗೆ ಎರಡು ತಂಡ ರಚಿಸಿಕೊಂಡು ನಾಲೆ ಉದ್ದಕ್ಕೂ ಇರುವ ಅಕ್ರಮ ಪಂಪ್‍ಸೆಟ್ ತೆರವು ಗೊಳಿಸಿ ಕೊನೆಯ ಭಾಗದ ರೈತರಿಗೆ ನೀರು ತಲುಪಿಸಿ, ರೈತರ ಪರವಾಗಿ ಪೊಲೀಸ್ ಇಲಾಖೆ ಇದೆ ಎಂದು ಹೇಳಿದ ಭರವಸೆ ನೀಡಿದ ಹಿನ್ನೆಲೆಯಲ್ಲಿ ರೈತರು ಪ್ರತಿಭಟನೆ ವಾಪಾಸ್ ಪಡೆದರು.

     ಹೆದ್ದಾರಿ ತಡೆಯಲಿ ಮಾಜಿ ಮೇಯರ್ ಎಚ್.ಎನ್.ಗುರುನಾಥ, ಎಪಿಎಂಸಿ ಮಾಜಿ ಅಧ್ಯಕ್ಷ ಕುಂದುವಾಡ ಎಚ್.ಜಿ.ಗಣೇಶಪ್ಪ, ಆವರ ಗೊಳ್ಳ ಬಿ.ಎಂ.ಷಣ್ಮುಖಯ್ಯ, ಹೊಸ ಕುಂದುವಾಡದ ಗೌಡರ ಶಿವಕುಮಾರ, ಮಹೇಶ್ವರಯ್ಯ, ಹಳೇ ಕುಂದುವಾಡ ಹನುಮಂತಪ್ಪ, ದೊಗ್ಗಳ್ಳಿ ವೀರೇಶ, ಎನ್.ಎಂ.ಉಮೇಶ ಬಾತಿ, ಆವರಗೊಳ್ಳ ಗುಳೇದರ ಮುನಿಯಪ್ಪ, ಹಳೇಬಾತಿ ಶಿವಕುಮಾರ, ಶಂಕರಮೂರ್ತಿ, ಮಹೇಶ, ಗೌಡ್ರ ಪರಮೇಶ್ವರಪ್ಪ, ಎಲಿಗಾರ ಕೊಟ್ರಪ್ಪ ಮತ್ತಿತರರು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap