ಬೆಂಗಳೂರು
ಲಾಕ್‌ಡೌನ್ ಅವಧಿಯಲ್ಲಿ ಜನರು ಮನೆಗಳಿಂದ ಹೊರಗೆ ಬರಬಾರದಂತೆ ತಡೆಯುವ ಉದ್ದೇಶದಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಇಂದಿನಿಂದ ಮನೆ ಬಾಗಿಲಿಗೆ ಅಗತ್ಯ ವಸ್ತುಗಳನ್ನು ಪೂರೈಸುವ ಯೋಜನೆ ಆರಂಭಿಸಲಾಗಿದೆ.
ಬಸವನಗುಡಿ, ಜಯನಗರ, ಪದ್ಮನಾಭನಗರ ಹಾಗೂ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರಗಳ ಸಹಾಯವಾಣಿಗೆ ಕಂದಾಯ ಸಚಿವ ಆರ್. ಅಶೋಕ್ ಈ ಕುರಿತ ಸಹಾಯವಾಣಿಗೆ ಚಾಲನೆ ನೀಡಿದರು.ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಆರ್. ಅಶೋಕ್, ಲಾಕ್ ಡೌನ್ ಸಂದರ್ಭದಲ್ಲಿ ಮನೆಯಲ್ಲಿರುವಂತೆ ಸೂಚಿಸಿದ್ದರೂ ಸಹ ಕಾಲ್ನಡಿಗೆಯಲ್ಲಿ ಮತ್ತು ವಾಹನಗಳಲ್ಲಿ ಜನ ಸಂಚರಿಸುವುದನ್ನು ತಪ್ಪಿಸುವುದು ಕಷ್ಟ ಸಾಧ್ಯವಾಗಿದೆ.
ಈ ಕುರಿತು ಪೊಲೀಸರು ಪ್ರಶ್ನಿಸಿದಾಗ ಅಗತ್ಯ ವಸ್ತು ಖರೀದಿಸಲು ಹೊರಬಂದಿರುವುದಾಗಿ ಸಾರ್ವಜನಿಕರು ಉತ್ತರಿಸುತ್ತಿದ್ದಾರೆ. ಕೊರೊನಾ ಸೋಂಕು ಹರಡದಂತೆ ಎಚ್ಚರವಹಿಸಲು ಜನಜಂಗುಳಿಯನ್ನು ಕಡಿಮೆ ಮಾಡುವುದೊಂದೇ ಸದ್ಯದ ಉಪಾಯವಾಗಿರುವ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳನ್ನು ಜನರಿಗೆ ಮನೆ ಬಾಗಿಲಲ್ಲೇ ತಲುಪಿಸುವ ಮೂಲಕ ಅವರು, ಹೊರಗೆ ಬರದಂತೆ ನೋಡಿಕೊಳ್ಳಬೇಕಾಗಿದೆ ಎಂದರು.
ಈ ಉದ್ದೇಶದಿಂದಲೇ ದಿನಬಳಕೆಯ ಅಗತ್ಯ ವಸ್ತುಗಳು, ದಿನಸಿ, ತರಕಾರಿ, ಔಷಧಿ ಸಾಮಗ್ರಿಗಳನ್ನು ಮನೆ ಬಾಗಿಲಿಗೆ ತಲುಪಿಸುವ ಹೋಮ್ ಡಿಲವರಿ ಸಹಾಯವಾಣಿ ಸೇವೆಯನ್ನು ಬೆಂಗಳೂರು ದಕ್ಷಿಣ ಪೊಲೀಸ್ ಇಲಾಖೆಯ ವ್ಯಾಪ್ತಿಯಲ್ಲಿ ಈ ಸೇವೆ ಲಭ್ಯವಿದೆ. ಒಂದು ಕುಟುಂಬ ವಾರಕ್ಕೆ ಎರಡು ಬಾರಿ ಈ ಸೇವೆಯನ್ನು ಪಡೆಯಬಹುದು. 080-6191 4960 ಸಹಾಯವಾಣಿ ಸಂಖ್ಯೆಗೆ ಕರೆ ಮಾಡುವ ಮೂಲಕ ಅಥವಾ ಇದೇ ಸಂಖ್ಯೆಗೆ ವಾಟ್ಸಾಪ್ ಮೂಲಕ ಮನವಿ ಕಳುಹಿಸಿ ಸೇವೆ ಪಡೆಯಬಹುದಾಗಿದೆ ಎಂದರು.
ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ಈಗ ಹೇಳಿದ ನಾಲ್ಕು ಬಡಾವಣೆಗಳ ಎರಡೂವರೆ ಲಕ್ಷ ಮನೆಗಳ ಏಳೂವರೆ ಲಕ್ಷ ಜನರಿಗೆ ಸುಮಾರು 2 ಸಾವಿರ ಅಂಗಡಿಗಳ ಮೂಲಕ ಅಗತ್ಯ ವಸ್ತುಗಳನ್ನು ಮನೆಬಾಗಿಲಿಗೆ ತಲುಪಿಸಲಾಗುವುದು ಎಂದು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ