ಕಷ್ಟದಲ್ಲಿರುವವರ ಕೈಹಿಡಿವುದೇ ನೈಜ ಧರ್ಮ

ದಾವಣಗೆರೆ:

       ಕಷ್ಟದಲ್ಲಿ ಇರುವವರನ್ನು ಕಂಡು ಕನಿಕರ ಪಡುವುದನ್ನು ಬಿಟ್ಟು, ಕೈಹಿಡಿದು ನಡೆಸುವುದೇ ನಿಜವಾದ ಮನುಷ್ಯ ಧರ್ಮ ಎಂದು ಶ್ರೀರಂಗಪಟ್ಟಣದ ಬೇಬಿ ಮಠದ ಡಾ.ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ಪ್ರತಿಪಾದಿಸಿದರು.

        ನಗರದ ಕುವೆಂಪು ಕನ್ನಡಭವನದಲ್ಲಿ ಭಾನುವಾರ ಸಂಸ್ಕಾರ ಭಾರತೀ ಹಾಗೂ ಮಹಂತ ಶಿವಯೋಗಿ ಮಠ ಟ್ರಸ್ಟ್ ಇವುಗಳ ಆಶ್ರಯದಲ್ಲಿ ಏರ್ಪಡಿಸಿದ್ದ ಸಮೃದ್ಧ ಜೀವನ ಹಾಗೂ ವ್ಯಕ್ತಿತ್ವ ವಿಕಸನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಷ್ಟದಲ್ಲಿರುವವರನ್ನು ಕಂಡು ಕನಿಕರ ಪಡುವ ಹಾಗೂ ಮರಗುವ ಬದಲು, ಅವರಿಗೆ ನೆರವು ನೀಡಿ, ಕೈ ಹಿಡಿದು ನಡೆಸುವುದೇ ನಿಜವಾದ ಮನುಷ್ಯ ಧರ್ಮವಾಗಿದೆ ಎಂದು ಹೇಳಿದರು.

         ಜೀವ ಸಂಕುಲದಲ್ಲಿಯೇ ಅತ್ಯಂತ ಶ್ರೇಷ್ಠವಾಗಿರುವುದೇ ಮಾನವ ಜನ್ಮ. ಹಲವು ಪುಣ್ಯದ ಫಲವಾಗಿ ಮನುಷ್ಯರಾಗಿ ಹುಟ್ಟಿರುವ ನಾವು ಅದರ ಶ್ರೇಷ್ಠತೆಯನ್ನು ಅರಿತು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡರೇ ಮಾತ್ರ ನಮ್ಮ ಹುಟ್ಟಿಗೂ ಒಂದು ಸಾರ್ಥಕತೆ ಸಿಗಲಿದೆ ಎಂದರು.

         “ಭಾ” ಎಂದರೆ ಭಾವ, “ರ” ಎಂದರೆ ರಾಗದ್ವೇಷ ಇಲ್ಲದ, “ತ” ಎಂದರೆ ಜಾತಿ, ಮತ ಪಂಥವಿಲ್ಲದವರು ಎಂಬ ಅರ್ಥವನ್ನು ನೀಡಲಿದೆ. ಆದ್ದರಿಂದ ಇಡೀ ಜಗತ್ತಿನಲ್ಲಿಯೇ ಭಾರತೀಯರಾದ ನಾವು ಅತ್ಯಂತ ಭಿನ್ನರಾಗಿದ್ದೇವೆ ಎಂದ ಅವರು, ಜೀವನದಲ್ಲಿ ಆಸ್ತಿ, ಅಂತಸ್ತು, ಅಧಿಕಾರ, ಸಂಬಂಧ ಸೇರಿದಂತೆ ಏನೇ ಕಳೆದುಕೊಂಡರೂ ಮರಳಿ ಸಂಪಾದಿಸಬಹುದು. ಆದರೆ, ಒಮ್ಮೆ ಕಳೆದುಕೊಂಡರೆ ಮತ್ತೆ ಸಮಯವನ್ನು ಪಡೆಯಲಾಗುವುದಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಸಮಯ ಪ್ರಜ್ಞೆ ಬೆಳೆಸಿಕೊಂಡು, ಇರುವ ಸಮಯವನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಬದುಕು ರೂಪಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.

         ನಮಗೆ ದೇವರು ನಮ್ಮದೆಂದು ಕೊಟ್ಟಿರುವುದು ಆಸ್ತಿ, ಸಂಪತ್ತು, ದೇಹ, ಹೆಂಡತಿ, ಮಕ್ಕಳು ಅಲ್ಲ. ಬದಲಿಗೆ, ಸಮಯವನ್ನು ಮಾತ್ರ ನಮಗೆ ದೇವರು ನೀಡಿದ್ದಾನೆ. ಅದನ್ನು ಯಾವ ರೀತಿ ಸದುಪಯೋಗ ಮಾಡಿಕೊಳ್ಳುತ್ತೇವೆ ಎಂಬುದರ ಮೇಲೆ ನಮ್ಮ ಬೆಳವಣಿಗೆ ನಿಂತಿರುತ್ತದೆ ಎಂದರು.

       ಮನುಷ್ಯ ವಸ್ತು, ದಾಖಲೆಗಳನ್ನು ಜೋಪಾನವಾಗಿ ನೋಡಿಕೊಳ್ಳುವಷ್ಟು. ದೇಹದ ಆರೋಗ್ಯದ ಕಡೆ ಗಮನ ಹರಿಸುವುದಿಲ್ಲ. ಅಲ್ಲದೆ, ಮನುಷ್ಯ ತನ್ನ ದೇಹಕ್ಕೆಬೇಕಾದ ಆರೋಗ್ಯ, ಆನಂದ, ಸಂತೃಪ್ತಿ ನೀಡದಿರುವುದು ಸರಿಯಲ್ಲ. ಗಳಿಸಿದ ಹಣದಿಂದ ಹದಗೆಟ್ಟ ಆರೋಗ್ಯವನ್ನು ಸರಿಪಡಿಸಲಾಗುವುದಿಲ್ಲ. ಆದ್ದರಿಂದ ದೇಹದ ಆರೋಗ್ಯದ ಕಾಳಜಿ ವಹಿಸುವುದು ಅತ್ಯವಶ್ಯವಾಗಿದೆ ಎಂದು ನುಡಿದರು.

       ಜೀವನವೆಂಬ ಪಯಣ ಸಂಪೂರ್ಣ ಸಂತೃಪ್ತಿಯಿಂದ ತುಂಬಿರಬೇಕಾದರೇ, ಯಾವುದರಲ್ಲಿ ಆನಂದವಿದೆಯೋ ಅದರಲ್ಲಿಯೇ ಸಾಗಬೇಕು ಎಂದ ಶ್ರೀಗಳು, ಯಶಸ್ಸು, ಸಂತೃಪ್ತಿಯ ಬೆನ್ನು ಹತ್ತಿದಾಗ ಅವಮಾನ, ಅಪಮಾನ ಹಾಗೂ ಸಂಕಷ್ಟಗಳು ಎದರುಗಾವುದು ಸಾಮಾನ್ಯ. ಆದರೆ, ತಿಪ್ಪೆಯಲ್ಲಿ ಬಿದ್ದರೂ ಹಣ ಹೇಗೆ ತನ್ನ ಮೌಲ್ಯ ಕಳೆದುಕೊಳ್ಳುವುದಿಲ್ಲವೋ, ಹಾಗೆಯೇ ಮನುಷ್ಯ ತನ್ನ ತನ, ಸ್ವಾಭಿಮಾನ, ಛಲಬಿಡದೇ ಗುರಿ ಸಾಧಿಸಲು ಮುಂದಾಗಬೇಕೆಂದು ಕಿವಿಮಾತು ಹೇಳಿದರು.

       ಇಂಥಹ ಶಿಬಿರಗಳಲ್ಲಿ ಸಂತೋಷದಿಂದ ಪಾಲ್ಗೊಳ್ಳುವ ಮೂಲಕ ಯಶಸ್ಸಿನ ಹಾದಿಯಲ್ಲಿ ಸಾಗುತ್ತಾ, ನಮ್ಮಲ್ಲಿರುವ ಸೃಜನಶೀಲತೆ, ಹುಮ್ಮಸ್ಸಿಗೆ, ಬುದ್ಧಿವಂತಿಕೆಗೆ ಹಾಗೂ ಉತ್ಸಾಹಕ್ಕೆ ಓರೆ ಹಚ್ಚುವ ಮೂಲಕ ಸಾಧನೆ ಮಾಡೂ ಸ್ಪೂರ್ತಿ ಪಡೆದು ಇತರರಿಗೂ ಸಾಧನೆಗೆ ಪ್ರೇರಣೆ ನೀಡೋಣ ಎಂದು ಕರೆ ನೀಡಿದರು.

        ಈ ಸಂದರ್ಭದಲ್ಲಿ ಸಿದ್ದಗಂಗಾ ವಿದ್ಯಾಸಂಸ್ಥೆಯ ಜಸ್ಟಿನ್ ಡಿಸೋಜಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಸಂಸ್ಕಾರ ಭಾರತೀಯ ಬಿ.ಜಿ. ವೀರಣ್ಣ, ಕುಸುಮಾ ಶ್ರೇಷ್ಠಿ, ತಿಪ್ಪೇಸ್ವಾಮಿ, ಪತಂಜಲಿಯ ಸುನೀಲ್‍ಕುಮಾರ್, ಎ.ಹೆಚ್.ಶಿವಮೂರ್ತಿಸ್ವಾಮಿ ,ಪ್ರಕಾಶ್, ನರಸಿಂಹಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link