ಅಮಾನಿಕೆರೆಗೆ ಹೇಮಾವತಿ: ಇಚ್ಛಾಶಕ್ತಿ ಬೇಕು

ತುಮಕೂರು

      ‘‘ಹೇಮಾವತಿ ನಾಲೆಯಿಂದ ‘ಬುಗುಡನಹಳ್ಳಿ ಜಲಸಂಗ್ರಹಾಗಾರ’ಕ್ಕೆ ಹೇಮಾವತಿ ನೀರು ಗಣನೀಯವಾಗಿ ಹರಿದುಬಂದಿದೆ. ಇನ್ನೂ ಕೆಲಕಾಲ ನೀರು ಹರಿದು ಬರಲಿದೆ. ಈಗಾಗಲೇ ಪಕ್ಕದ ಹೆಬ್ಬಾಕ ಕೆರೆಗೆ ನೀರನ್ನು ತುಂಬಿಸಿಕೊಳ್ಳುವ ಕಾರ್ಯ ಮುಂದುವರೆದಿದೆ. ಇದರ ಜೊತೆ-ಜೊತೆಯಲ್ಲೇ ಪ್ರಸ್ತುತ ತುಮಕೂರು ನಗರದ ಅಮಾನಿಕೆರೆಗೂ ಹೇಮಾವತಿ ನೀರನ್ನು ತುಂಬಿಸಿಕೊಳ್ಳಬೇಕಾಗಿದ್ದರೆ, ಮೊದಲಿಗೆ ರಾಜಕೀಯ ಇಚ್ಛಾಶಕ್ತಿ ವ್ಯಕ್ತವಾಗಬೇಕಾಗಿದೆ’’ ಎಂದು ವಿವಿಧ ಮೂಲಗಳು ಅಭಿಪ್ರಾಯಪಡುತ್ತಿವೆ.

      ‘‘ಬುಗುಡನಹಳ್ಳಿ ಜಲಸಂಗ್ರಹಾಗಾರ ಮತ್ತು ಹೆಬ್ಬಾಕ ಕೆರೆ ತುಂಬಿದರೆ ಅದರಿಂದ ತುಮಕೂರು ನಗರಕ್ಕೆ ಕುಡಿಯುವ ನೀರಿನ ಪೂರೈಕೆ ಸಾಧ್ಯ. ಆದರೆ ತುಮಕೂರು ನಗರದ ಹೃದಯ ಭಾಗದಲ್ಲಿರುವ ಅಮಾನಿಕೆರೆ ಭರ್ತಿಯಾದರೆ, ಅದರಿಂದ ಸುತ್ತಲಿನ ಸುಮಾರು ನಾಲ್ಕೆ‘ದು ಕಿ.ಮೀ. ಸಲೆಯಲ್ಲಿ ಅಂತರ್ಜಲ ಮರುಪೂರಣ (ಗ್ರೌಂಡ್ ವಾಟರ್ ರೀಚಾರ್ಜ್) ಆಗುತ್ತದೆ. ಇದರಿಂದ ಕೊಳವೆ ಬಾವಿಗಳು, ತೆರೆದ ಬಾವಿಗಳಲ್ಲಿ ನೀರು ಯಥೇಚ್ಛ ಲಭ್ಯವಾಗುತ್ತದೆ.

         ಅಲ್ಲದೆ ಪ್ರಾಕೃತಿಕ ಸೊಬಗೂ ಉಂಟಾಗುತ್ತದೆ. ನಗರದಲ್ಲಿ ತಂಪಾದ ವಾತಾವರಣ ಇರುತ್ತದೆ. ಜಲಚರಗಳಿಗೆ ಮತ್ತು ಪಕ್ಷಿಗಳಿಗೆ ಅನುಕೂಲವಾಗುತ್ತದೆ. ಒಂದು ವೇಳೆ ಕೆರೆ ತುಂಬಿ ಹರಿದರೆ ಅಚ್ಚುಕಟ್ಟು ಪ್ರದೇಶದ ರೈತಾಪಿಗಳಿಗೆ ಸಹಾಯವಾಗುತ್ತದೆ. ನಗರದಲ್ಲಿ ಅಮಾನಿಕೆರೆಯು ಪ್ರಮುಖ ಆಕರ್ಷಣೆಯ ತಾಣ ಆಗುತ್ತದೆ. ಆದ್ದರಿಂದ ಪಟ್ಟು ಹಿಡಿದು ಅಮಾನಿಕೆರೆಯನ್ನು ಈ ಹೊತ್ತಿನಲ್ಲೇ ಹೇಮಾವತಿ ನೀರಿನಿಂದ ತುಂಬಿಸಿಕೊಂಡುಬಿಡಬೇಕು’’ ಎಂದು ಮೂಲಗಳು ಹೇಳುತ್ತಿವೆ.

ಈವರೆಗೆ 400 ಎಂ.ಸಿ.ಎ್.ಟಿ.ನೀರು ಲಭ್ಯ

       ‘‘ಹೇಮಾವತಿ ನಾಲೆ ಮೂಲಕ ತುಮಕೂರು ನಗರಕ್ಕೆ ಕುಡಿಯುವ ನೀರಿಗಾಗಿ ನಿಯಮಾನುಸಾರ ವಾರ್ಷಿಕ 1.135 ಟಿ.ಎಂ.ಸಿ. ಪ್ರಮಾಣದ ನೀರಿನ ಹಂಚಿಕೆ ಆಗಿದ್ದು, ಈ ವರ್ಷ ಈವರೆಗೆ 400 ಎಂ.ಸಿ.ಎ್.ಟಿ.ಯಷ್ಟು ನೀರು ಹರಿದುಬಂದಿದೆ. ಡಿಸೆಂಬರ್‌ವರೆಗೂ ನೀರು ಹರಿದುಬರಲಿದೆ. ಅಷ್ಟರಲ್ಲಿ ಅಮಾನಿಕೆರೆಯನ್ನೂ ತುಂಬಿಸಿಕೊಳ್ಳುವುದು ಒಳ್ಳೆಯದು’’ ಎನ್ನಲಾಗುತ್ತಿದೆ.

9 ಅಡಿಗಳಷ್ಟು ನೀರು
        ‘‘ಬುಗುಡನಹಳ್ಳಿ ಜಲಸಂಗ್ರಹಾಗಾರದ ಏರಿಯ ಎತ್ತರ 12 ಅಡಿಗಳಷ್ಟಿದೆ. ಈಗ 8.5 ರಿಂದ 9 ಅಡಿಗಳಷ್ಟು ನೀರು ಇಲ್ಲಿ ಸಂಗ್ರಹವಾಗಿದೆ. ಈ ನೀರನ್ನು ಹೆಬ್ಬಾಕ ಕೆರೆಗೆ ದಿನಪೂರ್ತಿ ಪಂಪ್ ಮಾಡಲಾಗುತ್ತಿದ್ದು, ಈವರೆಗೆ ಸುಮಾರು 32 ಎಂ.ಸಿ.ಎ್.ಟಿ.ಯಷ್ಟು ನೀರು ಹೆಬ್ಬಾಕ ಕೆರೆಯಲ್ಲಿ ಸಂಗ್ರಹವಾಗಿದೆ. ಇನ್ನು ತುಮಕೂರು ನಗರದ ಕುಡಿಯುವ ನೀರಿನ ಪೂರೈಕೆಗಾಗಿ ಬುಗುಡನಹಳ್ಳಿ ಜಲಸಂಗ್ರಹಾಗಾರದಿಂದ ಪ್ರತಿನಿತ್ಯ 1.5 ಎಂ.ಸಿ.ಎ್.ಟಿ.ಯಷ್ಟು ನೀರನ್ನು ಪಂಪ್ ಮಾಡಲಾಗುತ್ತಿದೆ.’’

ಈಗ ನೀರು ತಾತ್ಕಾಲಿಕ ಸ್ಥಗಿತ

         ‘‘ಹೇಮಾವತಿ ನಾಲೆಯಿಂದ ಬುಗುಡನಹಳ್ಳಿ ಜಲಸಂಗ್ರಹಾಗಾರಕ್ಕೆ ಹರಿದುಬರುತ್ತಿದ್ದ ನೀರು ಈಗ ತಾತ್ಕಾಲಿಕವಾಗಿ ಸ್ಥಗಿತವಾಗಿದೆ. ನೀರನ್ನು ಈಗ ಕುಣಿಗಲ್ ಕಡೆಗೆ ಹರಿಯಬಿಟ್ಟಿರುವುದರಿಂದ ಈ ಕ್ರಮವನ್ನು ಕೈಗೊಳ್ಳಲಾಗಿದೆ. ನಾಲೆಯಲ್ಲಿ ಇನ್ನೂ ಎರಡು ತಿಂಗಳುಗಳ ಕಾಲ ನೀರು ಬರುವುದರಿಂದ ತಕ್ಷಣಕ್ಕೆ ಆತಂಕ ಪಡಬೇಕಾಗಿಲ್ಲ. ಪ್ರಸ್ತುತ ಬುಗುಡನಹಳ್ಳಿಯಲ್ಲಿ ಮುಕ್ಕಾಲು ಭಾಗ ನೀರಿದ್ದು, ಹೆಬ್ಬಾಕ ಕೆರೆಯಲ್ಲೂ ಒಂದಿಷ್ಟು ಪ್ರಮಾಣದ ನೀರು ಶೇಖರಣೆ ಆಗಿರುವುದರಿಂದ ಮುಂದಿನ 5 ತಿಂಗಳುಗಳ ಕಾಲ ತುಮಕೂರು ನಗರಕ್ಕೆ ಹೇಮಾವತಿ ನೀರಿನ ಸಮಸ್ಯೆ ತಲೆದೋರಲಾರದು.’’

        ‘‘ಹೇಮಾವತಿ ನೀರಿನ ಲಭ್ಯತೆ ಹಿನ್ನೆಲೆಯಲ್ಲಿ ಈಗ ನಗರಾದ್ಯಂತ ಹೇಮಾವತಿ ನೀರು ನಲ್ಲಿಗಳ ಮೂಲಕ ಸಾರ್ವಜನಿಕರಿಗೆ ಪೂರೈಕೆಯಾಗುತ್ತಿದೆ. ತಾಂತ್ರಿಕ ಕಾರಣಗಳಿಂದ ಸದಾಶಿವನಗರ, ಮೆಳೆಕೋಟೆ, ರಾಜೀವ್‌ಗಾಂಧಿ ನಗರ, ಗಂಗ ಸಂದ್ರ ಭಾಗದಲ್ಲಿ ಮಾತ್ರ ಹೇಮಾವತಿ ನೀರು ಪೂರೈಕೆಯಾಗುತ್ತಿಲ್ಲ. ಇನ್ನು ನಗರದಲ್ಲಿ ಪಾಲಿಕೆಗೆ ಸೇರಿದ 569 ಕೊಳವೆ ಬಾವಿಗಳು ಕಾರ್ಯನಿರ್ವಹಿಸುತ್ತಿದ್ದು, ಅವುಗಳ ಮೂಲಕವೂ ಅಗತ್ಯ ಪ್ರಮಾಣದಲ್ಲಿ ಸಾರ್ವಜನಿಕರಿಗೆ ನೀರು ಸರಬರಾಜು ಮಾಡಲಾಗುತ್ತಿದೆ. ಈ ಕೊಳವೆ ಬಾವಿಗಳಲ್ಲೂ ಅಂತರ್ಜಲದ ಅಭಾವದಿಂದ ನೀರಿನ ಲಭ್ಯತೆ ಏರುಪೇರಾಗುತ್ತಿರುತ್ತದೆ’’ ಎಂದು ಮೂಲಗಳು ವಿವರಿಸಿವೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

 

Recent Articles

spot_img

Related Stories

Share via
Copy link