ಬುಗುಡನಹಳ್ಳಿಗೆ ಹೇಮಾವತಿ ಸ್ಥಗಿತ.!!

ತುಮಕೂರು
    ತುಮಕೂರು ನಗರಕ್ಕೆ ಕುಡಿಯುವ ನೀರು ಪೂರೈಸುವ ಬುಗುಡನಹಳ್ಳಿಯ “ಹೇಮಾವತಿ ಜಲಸಂಗ್ರಹಾಗಾರ”ಕ್ಕೆ ಕಳೆದೆರಡು ದಿನಗಳಿಂದ ಹೇಮಾವತಿ ನೀರಿನ ಪೂರೈಕೆ ಸ್ಥಗಿತವಾಗಿದೆಯೆಂಬ ಕಳವಳಕಾರಿ ಸಂಗತಿ ಶನಿವಾರ ಬೆಳಗ್ಗೆ ಬೆಳಕಿಗೆ ಬಂದಿದೆ.
      ಸಂಪೂರ್ಣವಾಗಿ ಬತ್ತಿ ಹೋಗಿದ್ದ ಬುಗುಡನಹಳ್ಳಿ “ಜಲಸಂಗ್ರಹಾಗಾರ”ಕ್ಕೆ ಹೇಮಾವತಿ ನಾಲೆಯಿಂದ ಆಗಸ್ಟ್ 9 ರಿಂದ ಹೇಮಾವತಿ ನೀರು ಹರಿದುಬರತೊಡಗಿತು. ಆಗಸ್ಟ್ 16 ರ ಬೆಳಗಿನವರೆಗೂ ನೀರು ಬಂದಿದೆ. ಬಳಿಕ ಇದ್ದಕ್ಕಿದ್ದಂತೆ ನಾಲೆಯಿಂದ ಬರುವ ನೀರು ಸ್ಥಗಿತವಾಗಿದೆ. ಏಕೆಂಬ ಕಾರಣ ನಿಗೂಢವಾಗಿ ಉಳಿದಿದೆ. ಯಾರೊಬ್ಬರೂ ಚಕಾರ ಎತ್ತುತ್ತಿಲ್ಲ. 
     ಇತ್ತೀಚಿನ ಭಾರಿ ಮಳೆಯಿಂದ ಹಾಸನ ಜಿಲ್ಲೆ ಗೊರೂರಿನ ಹೇಮಾವತಿ ಜಲಾಶಯಕ್ಕೆ ಭಾರಿ ಪ್ರಮಾಣದಲ್ಲಿ ನೀರು ಹರಿದುಬಂತು. ಜಲಾಶಯ ಭರ್ತಿ ಆಗುವಂತಾಯಿತು. ಇದೇ ಹೊತ್ತಿಗೆ ತುಮಕೂರಿನ ಬುಗುಡನಹಳ್ಳಿಯ “ಹೇಮಾವತಿ ಜಲಸಂಗ್ರಹಾಗಾರ” ಬರಿದಾಯಿತು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಸೂಚನೆ ಮೇರೆಗೆ ಜಲಾಶಯದಿಂದ ನಾಲೆಗೆ ನೀರನ್ನು ಹರಿಸಲಾಯಿತು. ಆ ನೀರು ಆಗಸ್ಟ್ 9 ರಂದು ಬುಗುಡನಹಳ್ಳಿ ತಲುಪಿತು. ಜನಪ್ರತಿನಿಧಿಗಳು ಸಂಭ್ರಮಿಸಿದರು. ಆದರೆ ಆ ಸಂಭ್ರಮ ಕೇವಲ 7 ದಿನಗಳೊಳಗೇ ಕೊನೆಗೊಂಡಿದೆ.
    ಆಗಸ್ಟ್ 9 ರಿಂದ ದೈನಿಕ 20 ಎಂ.ಸಿ.ಎï.ಟಿ.ಯಷ್ಟು ಪ್ರಮಾಣದ ನೀರು ನಾಲೆಯ ಮೂಲಕ “ಜಲಸಂಗ್ರಹಾಗಾರ” ತಲುಪಿದೆ. ಆಗಸ್ಟ್ 16 ರ ಬೆಳಗಿನವರೆಗೂ ಸರಿಸುಮಾರು 120 ಎಂ.ಸಿ.ಎï.ಸಿ.ಯಷ್ಟು ನೀರು ಹರಿದಿದೆ. ಇದರಿಂದ “ಜಲಸಂಗ್ರಹಾಗಾರ”ಕ್ಕೆ ಶೇ.35 ರಿಂದ 40 ರಷ್ಟು ನೀರು ತುಂಬಿದಂತಾಗಿದೆ ಎಂದು ಮೂಲಗಳು ಹೇಳಿವೆ.
    ತುಮಕೂರು ನಗರದ ಕುಡಿಯುವ ನೀರಿನ ಬೇಡಿಕೆಯು ಜನಸಾಂದ್ರತೆಗೆ ಅನುಗುಣವಾಗಿ 57 ಎಂ.ಎಲ್.ಡಿ. ಯಷ್ಟಿದೆ. ಆದರೆ ಈಗ 46 ಎಂ.ಎಲ್.ಡಿ.ಯಷ್ಟು ಮಾತ್ರ ಪೂರೈಸಲಾಗುತ್ತಿದೆ. ಕೊಳವೆ ಬಾವಿಗಳಿಂದ 8 ಎಂ.ಎಲ್.ಡಿ., ಮೈದಾಳ ಕೆರೆಯಿಂದ 6 ಎಂ.ಎಲ್.ಡಿ. ಹಾಗೂ ಬುಗುಡನಹಳ್ಳಿಯ “ಹೇಮಾವತಿ ಜಲಸಂಗ್ರಹಾಗಾರ”ದಿಂದ 32 ಎಂ.ಎಲ್.ಡಿ. ಯಷ್ಟು ನೀರನ್ನು ನಗರದ ಜನತೆಗೆ ಸರಬರಾಜು ಮಾಡಲಾಗುತ್ತಿದೆ. ಹೀಗೆ ನೀರಿನ ಕೊರತೆ ಇರುವ ಹೊತ್ತಿನಲ್ಲೇ ಅತ್ತ “ಜಲಸಂಗ್ರಹಾಗಾರ”ಕ್ಕೆ ಹೇಮಾವತಿ ನಾಲೆಯಿಂದ ನೀರು ಬರುವುದು ಸ್ಥಗಿತವಾಗಿದೆಯೆಂಬುದು ಕಳವಳಕ್ಕೆ ಎಡೆಮಾಡಿಕೊಟ್ಟಿದೆ.
.   
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link