ತುಮಕೂರು: ಹೇಮಾವತಿ ನೀರು ಬಹುತೇಕ ಖಾಲಿ..!!

ತುಮಕೂರು

    ತುಮಕೂರು ನಗರದ ಪ್ರಮುಖ ಜಲಮೂಲವಾದ ಬುಗುಡನಹಳ್ಳಿಯ “ಹೇಮಾವತಿ ಜಲಸಂಗ್ರಹಾಗಾರ”ದಲ್ಲಿ ಹೇಮಾವತಿ ನೀರು ಬಹುತೇಕ ಖಾಲಿ ಆಗುವ ಹಂತ ತಲುಪಿದೆ.

      ಈ ಮೊದಲೇ ಜುಲೈ ಅಂತ್ಯದವರೆಗೆ ಹೇಮಾವತಿ ನೀರು ಲಭಿಸಬಹುದು ಎಂದು ತುಮಕೂರು ಮಹಾನಗರ ಪಾಲಿಕೆಯು ಲೆಕ್ಕಾಚಾರ ಹಾಕಿತ್ತು. ಆ ಹಿನ್ನೆಲೆಯಲ್ಲಿ ಕಳೆದ ಒಂದೆರಡು ತಿಂಗಳುಗಳಿಂದ ಅಲ್ಲಿನ ಅಳಿದುಳಿದ ನೀರನ್ನು ತುಮಕೂರು ಮಹಾನಗರ ಪಾಲಿಕೆಯು ಅತ್ಯಲ್ಪ ಪ್ರಮಾಣದಲ್ಲಿ ತುಮಕೂರು ನಗರಕ್ಕೆ ಸರಬರಾಜು ಮಾಡಿಕೊಳ್ಳಲಾರಂಭಿಸಿತು. ಆದರೆ ಇದೀಗ ಜುಲೈ ಅಂತ್ಯ ಸಮೀಪಿಸಿದ್ದು, ಇನ್ನು ಕೇವಲ ಮುಂದಿನ 15 ದಿನಗಳ ಕಾಲ ಮಾತ್ರ ಆ ನೀರನ್ನು ಉಪಯೋಗಿಸಿಕೊಳ್ಳಬಹುದಾಗಿದೆ ಎಂದು ಅಂದಾಜಿಸಲಾಗುತ್ತಿದೆ.

       ತುಮಕೂರು ನಗರದ ನೀರಿನ ಬೇಡಿಕೆಯು ಜನಸಂಖ್ಯೆಗನುಗುಣವಾಗಿ ಪ್ರತಿನಿತ್ಯ 57 ಎಂ.ಎಲ್.ಡಿ. ಆಗಿದೆಯಾದರೂ, ಜಲಸಂಗ್ರಹಾಗಾರದ ನೀರಿನ ಲಭ್ಯತೆ ಅನುಸರಿಸಿ ಅಲ್ಲಿಂದ ಸರಬರಾಜು ಮಾಡಿಕೊಳ್ಳುವ ನೀರಿನ ಪ್ರಮಾಣವನ್ನು ಪಾಲಿಕೆಯು ಗಣನೀಯ ಪ್ರಮಾಣದಲ್ಲಿ ಇಳಿಕೆ ಮಾಡಿಕೊಂಡು ಬರುತ್ತಿದೆ. 25 ಎಂ.ಎಲ್.ಡಿ.ಗೆ ಇಳಿದ ಸರಬರಾಜು ಪ್ರಮಾಣವು, ಬಳಿಕ 20 ಎಂ.ಎಲ್.ಡಿ.ಗೆ ಬಂತು. ಪ್ರಸ್ತುತ 15 ಎಂ.ಎಲ್.ಡಿ.ಗೆ ಇಳಿದಿದೆ. ಜಲಸಂಗ್ರಹಾಗಾರದಲ್ಲಿ ಲಭ್ಯವಿರುವ ಹೇಮಾವತಿ ನೀರನ್ನು ಸಾಧ್ಯವಾದಷ್ಟು ಹೆಚ್ಚು ದಿನಗಳ ಕಾಲ ನಲ್ಲಿಯ ಮೂಲಕ ಸಾರ್ವಜನಿಕರಿಗೆ ವಿತರಿಸಬೇಕೆಂಬ ಕಾರಣದಿಂದ ಪಾಲಿಕೆಯು ಈ ಕ್ರಮ ಅನುಸರಿಸಿದೆ.

      ಬುಗುಡನಹಳ್ಳಿಯಲ್ಲಿ ಹೇಮಾವತಿ ನೀರು ಖಾಲಿಯಾದರೆ, ಇತ್ತ ನಗರದ ಜನತೆಗೆ ಕೊಳವೆಬಾವಿಗಳು ಮತ್ತು ಮೈದಾಳ ಕೆರೆಯ ನೀರೇ ಆಸರೆಯಾಗುತ್ತದೆ.
ಕೊಳವೆ ಬಾವಿಗಳಿಂದ ನೀರು

     ತುಮಕೂರು ನಗರದಲ್ಲಿ ಮಹಾನಗರ ಪಾಲಿಕೆಗೆ ಸೇರಿದ 433 ಕೊಳವೆ ಬಾವಿಗಳು ಈಗ ಚಾಲನೆಯಲ್ಲಿದ್ದು, ಅವುಗಳ ಮೂಲಕ ಲಭಿಸುತ್ತಿರುವ ನೀರನ್ನು ನಲ್ಲಿಗಳಿಂದ ಸಾರ್ವಜನಿಕರಿಗೆ ಸರಬರಾಜು ಮಾಡಲಾಗುತ್ತಿದೆ. ಅಂತರ್ಜಲದ ಇಳಿಮುಖದಿಂದ ದಿನೇ ದಿನೇ ಈ ಕೊಳವೆ ಬಾವಿಗಳಲ್ಲೂ ನೀರಿನ ಲಭ್ಯತೆ ಪ್ರಮಾಣ ಇಳಿಕೆಯಾಗುತ್ತಿದ್ದು, ಅದೂ ಸಹ ಸಮಸ್ಯೆಯನ್ನು ಹುಟ್ಟುಹಾಕತೊಡಗಿದೆ. ನೀರಿಲ್ಲದೆ ಈಗಾಗಲೇ 242 ಕೊಳವೆಬಾವಿಗಳು ಸ್ಥಗಿತ (ಡೆಡ್)ಗೊಂಡಿವೆ ಎಂಬುದು ಆತಂಕವನ್ನು ಸೃಷ್ಟಿಸಿದೆ.

ಮೈದಾಳ ಕೆರೆ ನೀರು : ಪ್ರತಿದಿನ 3 ವಾರ್ಡ್‍ಗೆ

     ಇದಲ್ಲದೆ ತುಮಕೂರು ನಗರದ ನೀರಿನ ಬೇಡಿಕೆ ಈಡೇರಿಸಲು ಸಮೀಪದ ಮೈದಾಳ ಕೆರೆಯಲ್ಲಿರುವ ನೀರನ್ನೂ ತುಮಕೂರು ಮಹಾನಗರ ಪಾಲಿಕೆಯು ಆಶ್ರಯಿಸಿದೆ. ಆ ಕೆರೆಯಿಂದ ಪ್ರತಿನಿತ್ಯ 6 ರಿಂದ 7 ಎಂ.ಎಲ್.ಡಿ.ಯಷ್ಟು ನೀರನ್ನು ತುಮಕೂರು ನಗರದ ವಿದ್ಯಾನಗರದ ವಾಟರ್ ವರ್ಕ್ಸ್‍ಗೆ ಸರಬರಾಜು ಮಾಡಿಕೊಂಡು, ನೀರನ್ನು ಅಲ್ಲಿ ಶುದ್ಧೀಕರಿಸಿ, ಪ್ರತಿನಿತ್ಯ ಮೂರು ವಾರ್ಡ್‍ಗಳಿಗೆ ನಲ್ಲಿ ಮೂಲಕ ಕುಡಿಯುವ ನೀರನ್ನು ವಿತರಣೆ ಮಾಡಲಾಗುತ್ತಿದೆ.

      ಸರದಿ ಪ್ರಕಾರ ತುಮಕೂರಿನ 16 ವಾರ್ಡ್‍ಗಳಿಗೆ ಪ್ರಸ್ತುತ ಮೈದಾಳ ಕೆರೆಯ ನೀರನ್ನು ಪೂರೈಸಲಾಗುತ್ತಿದೆ ಎಂದು ಮೂಲಗಳು ಹೇಳುತ್ತಿವೆ.ಒಂದು ವೇಳೆ ಬುಗುಡನಹಳ್ಳಿ ಜಲಸಂಗ್ರಹಾಗಾರದಲ್ಲಿ ಹೇಮಾವತಿ ನೀರು ಬದಿದಾದರೆ, ನಗರದಲ್ಲಿ ಟ್ಯಾಂಕರ್‍ಗಳ ಮೂಲಕ ನೀರು ಪೂರೈಕೆ ಮಾಡುವ ಅನಿವಾರ್ಯತೆ ತಲೆಎತ್ತಲಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link