ಅರೆ ನೀರಾವರಿ ಬೆಳೆಗೆ ಮಾತ್ರ ಹೇಮಾವತಿ ನೀರು: ಉಪವಿಭಾಗಾಧಿಕಾರಿ

ತುರುವೇಕೆರೆ

         ಹೇಮಾವತಿ ನಾಲೆ ಕೆರೆ ಅಚ್ಚುಕಟ್ಟು ಪ್ರದೇಶಕ್ಕೆ ಹೇಮಾವತಿ ಇಲಾಖೆ ಮತ್ತು ಸಣ್ಣ ನೀರಾವರಿ ಇಲಾಖೆಯಿಂದ ಅರೆ ನೀರಾವರಿ ಬೆಳೆ ಬೆಳೆಯಲು ನೀರು ಹರಿಸಲಾಗುವುದು ಎಂದು ತಿಪಟೂರು ಉಪವಿಭಾಗಾಧಿಕಾರಿ ಎಸ್.ಪೂವಿತ ತಿಳಿಸಿದರು.

         ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ಪತ್ರಿಕಾ ಹೇಳಿಕೆ ನೀಡಿ ಮಾತನಾಡುತ್ತಾ ಹೇಮಾವತಿ ನೀರಿನಿಂದ ತುಂಬಿರುವ ಮಲ್ಲಾಘಟ್ಟ ಕೆರೆಯಿಂದ 226 ಎಂಸಿಎಫ್‍ಟಿ ನೀರನ್ನು 90 ದಿನಗಳವರೆಗೆ, ತುರುವೇಕೆರೆ ಕೆರೆಯಿಂದ 65 ಎಂಸಿಎಫ್‍ಟಿ ನೀರನ್ನು 90 ದಿನಗಳವರೆಗೆ , ಸಾರಿಗೆಹಳ್ಳಿ ಕೆರೆಯಿಂದ 60 ಎಂಸಿಎಫ್‍ಟಿ ನೀರನ್ನು 75 ದಿನಗಳವರೆಗೆ, ಗೋಣಿತುಮಕೂರು ಕೆರೆಯಿಂದ 1.15 ಎಂಸಿಎಫ್‍ಟಿಯನ್ನು 75 ದಿನ ಹಾಗೂ ಕೊಂಡಜ್ಜಿ ಕೆರೆಯಿಂದ 8 ಎಂಸಿಎಫ್‍ಟಿ 75 ದಿನಗಳವರೆಗೆ ಹರಿಸಲಾಗುವುದು. ರೈತರು ಕೆರೆ ಮತ್ತು ನಾಲೆಗಳಿಗೆ ಅತಿಕ್ರಮಣವಾಗಿ ಪಂಪ್‍ಸೆಟ್ ಮೋಟಾರ್‍ಸೆಟ್‍ಗಳನ್ನು ಹಾಕಿ ನೀರನ್ನು ಕದಿಯಬಾರದು. ಇದನ್ನು ಉಲ್ಲಂಘಿಸಿದರೆ ಬೆಸ್ಕಾಂ ಮತ್ತು ನೀರಾವರಿ ಇಲಾಖೆ, ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯವರು ಕ್ರಿಮಿನಲ್ ಮೊಕದ್ದಮೆ ಹೂಡಲಿದ್ದಾರೆ ಎಂದರು. ಈ ಪ್ರದೇಶಗಳಲ್ಲಿ ಅರೇ ನೀರಾವರಿ ಬೆಳೆಗಳಾದ ರಾಗಿ, ಅವರೆ , ಜೋಳ, ಹಲಸಂದೆಯಂತಹ ಬೆಳೆಗಳನ್ನು ಬೆಳೆಯಬೇಕು. ಈಗಾಗಲೇ ರೈತ ಮುಖಂಡರುಗಳ ಜೊತೆ ನೀರು ಹರಿಸುವುದರ ಬಗ್ಗೆ ಸಮಾಲೋಚನೆ ಮಾಡಲಾಗಿದೆ ಎಂದರು.

          ಈಗ ನಿಗದಿಪಡಿಸಿರುವ ನೀರು ದಿನಕ್ಕಿಂತ ಮುಂಚೆಯೇ ಕೆರೆಗಳಲ್ಲಿ ಕಡಿಮೆಯಾದರೆ ಇಲಾಖೆಯವರು ನಿಗದಿಪಡಿಸಿರುವ ದಿನಕ್ಕಿಂತ ಮುಂಚೆಯೇ ನೀರು ನಿಲ್ಲಿಸಲಿದ್ದಾರೆ. ಆದ್ದರಿಂದ ಕೃಷಿ ಇಲಾಖೆ ಅಧಿಕಾರಿಗಳು ಅಚ್ಚುಕಟ್ಟು ಪ್ರದೇಶಕ್ಕೆ ತೆರಳಿ ರೈತರು ಬೆಳೆ ಬೆಳೆಯುವ ಬಗ್ಗೆ ಮಾಹಿತಿ ನೀಡಬೇಕೆಂದರು.

        ಇದೇ ಸಂದರ್ಭದಲ್ಲಿ ಮಾತನಾಡಿದ ನೂತನ ತಹಸೀಲ್ದಾರ್ ನಹೀಮ್‍ಉನ್ನಿಸಾ ಮಾತನಾಡಿ ತಾಲ್ಲೂಕು ಕಚೇರಿಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗೆ ಈಗಾಗಲೇ ಎಚ್ಚರಿಕೆ ನೀಡಿದ್ದು, ರೈತರು ಹಾಗೂ ಸಾರ್ವಜನಿಕರು ಕಚೇರಿಗೆ ಅಲೆಯುವುದನ್ನು ತಪ್ಪಿಸುವುದಾಗಿ ಶೀಘ್ರವೇ ರೈತರ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಹಾಗೂ ಆರ್‍ಆರ್ ಟಿ ಯಲ್ಲಿರುವ ನ್ಯೂನತೆಗಳನ್ನು ಶೀಘ್ರವೇ ಸರಿಪಡಿಸುವ ಭರವಸೆ ನೀಡಿ ಒಂದೇ ಜಾಗದಲ್ಲಿ ಬೀಡು ಬಿಟ್ಟಿರುವ ಸಿಬ್ಬಂದಿಗಳನ್ನು ಬೇರೆ ಬೇರೆ ಕೆಲಸಗಳಿಗೆ ನಿಯೋಜಿಸಲಾಗುವುದೆಂದರು.

           ಕಚೇರಿಯಲ್ಲಿ ಬಹಳ ದಿನಗಳಿಂದ ಇದ್ದ ನೀರಿನ ಸಮಸ್ಯೆ ಮತ್ತು ಶೌಚಾಲಯ ಸಮಸ್ಯೆಯನ್ನು ಪತ್ರಕರ್ತರು ತಹಸೀಲ್ದಾರ್ ಅವರ ಗಮನಕ್ಕೆ ತಂದ ಸಂದರ್ಭದಲ್ಲಿ ಮಾತನಾಡಿ, ನಾನೀಗಾಗಲೇ ಇದಕ್ಕೆ ಸಂಬಂಧಪಟ್ಟಂತೆ ಕಾರ್ಯೋನ್ಮುಖರಾಗಿದ್ದು ಕೆಲವೇ ದಿನಗಳಲ್ಲಿ ಈ ಸಮಸ್ಯೆ ಬಗೆಹರಿವುದಾಗಿ ವಿಶ್ವಾಸ ವ್ಯಕ್ತಪಡಿಸಿದರಲ್ಲದೆ, ಇನ್ನು ಮೂರು ದಿನಗಳೊಳಗಾಗಿ ವಿಕಲಚೇತನರಿಗಾಗಿ ರ್ಯಾಂಪ್‍ನ ಅನುಕೂಲ ಕಲ್ಪಿಸಿಕೊಡಲಾಗುವುದು. ತಾಲ್ಲೂಕ್ ಕಚೇರಿಯಲ್ಲಿ ಶೀಘ್ರವೇ ಎಲ್ಲಾ ಹೋಬಳಿಯ ವ್ಯಾಪ್ತಿಯಲ್ಲಿ ಅದಾಲತ್ ಏರ್ಪಡಿಸಿ ಕಂದಾಯ ಇಲಾಖೆಯಿಂದ ರೈತರಿಗೆ ಆಗ ಬೇಕಾದ ಕೆಲಸಗಳನ್ನು ಶೀಘ್ರವೇ ಮಾಡಿಸಲಾಗುವುದೆಂದರು.

          ಇದೇ ಸಂದರ್ಭದಲ್ಲಿ ದಬ್ಬೇಘಟ್ಟ ರಸ್ತೆ ಅಭಿವೃದ್ಧಿ ಹೋರಾಟ ಸಮಿತಿಯ ಸಂಚಾಲಕರಾದ ಹಿರಿಯ ಪತ್ರಕರ್ತ ಜಿ.ಆರ್.ರಂಗೇಗೌಡ ದಬ್ಬೇಘಟ್ಟ ರಸ್ತೆಯಲ್ಲಿ ಆಗುತ್ತಿರುವ ಸಾಧಕ ಬಾಧಕಗಳ ಬಗ್ಗೆ ಮಾಹಿತಿ ನೀಡಿ ರಸ್ತೆ ಅಗಲೀಕರಣ ಮಾಡುವಂತೆ ಉಪವಿಭಾಗಾಧಿಕಾರಿಗಳಿಗೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಕೃಷಿ ಇಲಾಖೆ ಪ್ರಭಾರಉಪನಿರ್ದೇಶಕ ಹನುಮಂತರಾಯಪ್ಪ ಉಪಸ್ಥಿತರಿದ್ದರು.
 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link