ಶಿರಾ
ಶಿರಾ ನಗರಕ್ಕೆ ಕುಡಿಯಲು ಹೇಮಾವತಿಯ ನೀರೊದಗಿಸುವ ದೊಡ್ಡ ಕೆರೆಯ ಜಲ ಸಂಗ್ರಹಾಗಾರದ ಕಾರ್ಯಕ್ಕೆ ಬುಧವಾರ ಶಾಸಕ ಬಿ.ಸತ್ಯನಾರಾಯಣ್ ಚಾಲನೆ ನೀಡಿದರು.
ಕಳೆದ ಎರಡು ತಿಂಗಳಿಂದಲೂ ಕಳ್ಳಂಬೆಳ್ಳ ಹಾಗೂ ಶಿರಾ ನಗರಕ್ಕೆ ಹೇಮಾವತಿ ನೀರನ್ನು ಹರಿಯಬಿಡಲಾಗಿದೆ. ನೀರಿನ ಪ್ರಮಾಣ ಕಡಿಮೆಯಾಗಿದ್ದರಿಂದ ಕಳ್ಳಂಬೆಳ್ಳ ಕೆರೆಯಿಂದ ಶಿರಾ ಕೆರೆಗೆ ನೀರನ್ನು ಹರಿಸಿಕೊಳ್ಳಲಾಗುತ್ತಿದೆ. ನಗರದಲ್ಲಿ ನೀರಿನ ಬವಣೆ ಹೆಚ್ಚಾದ್ದರಿಂದ ಹಾಗೂ ಶರನ್ನವರಾತ್ರಿ ಹಬ್ಬದ ಅಂಗವಾಗಿ ನಗರದ ಜನತೆಗೆ ಹೇಮಾವತಿ ನೀರನ್ನು ಪೂರೈಸಲು ಕ್ರಮ ಕೈಗೊಳ್ಳಲಾಗಿದೆ.
ಕುಡಿಯುವ ನೀರಿನ ಯಂತ್ರಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ಬಿ.ಸತ್ಯನಾರಾಯಣ್, ನಗರದ ಜನತೆಗೆ ನೀರನ್ನು ಪೂರೈಸಲು ಶಿರಾ ಕೆರೆಗೆ ಕಳ್ಳಂಬೆಳ್ಳ ಕೆರೆಯಿಂದ ನೀರು ಬಿಡಲಾಗಿದ್ದು, ಡಿಸೆಂಬರ್ ಅಂತ್ಯದವರೆಗೂ ಹೇಮಾವತಿ ನೀರನ್ನು ಎಸ್ಕೇಪ್ ಗೇಟ್‍ನಿಂದ ನೀಡಲಾಗುತ್ತದೆ. ಶಿರಾ ಕೆರೆಯನ್ನು ಭರ್ತಿ ಮಾಡಿಕೊಳ್ಳಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗಿದೆ ಎಂದರು.
ಪ್ರತಿ ವರ್ಷವೂ ಹೇಮಾವತಿ ಹರಿಯುವ ಸಂದರ್ಭದಲ್ಲಿ ವರುಣನ ಕೃಪೆಯಿಂದ ಶಿರಾ ಕೆರೆಯು ಭರ್ತಿಯಾಗುತಿತ್ತು. ಈ ವರ್ಷ ವರುಣ ಕರುಣೆ ತೋರಿದಲ್ಲಿ ಹೇಮಾವತಿಯ ನೀರಿನ ಜೊತೆಗೆ ಕೆರೆಯನ್ನು ತುಂಬಿಸಿಕೊಳ್ಳಲು ಸಾಧ್ಯವಿದೆ. ಈ ನಡುವೆ ಶಿರಾ ಕೆರೆಗೆ ಹೇಮಾವತಿಯ ಅಗತ್ಯ ನೀರನ್ನು ಹರಿಸಿಕೊಳ್ಳಲು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳಿಗೆ ಒತ್ತಡ ತರಲಾಗಿದೆ ಎಂದರು.
ನಗರಸಭಾಧ್ಯಕ್ಷ ಅಮಾನುಲ್ಲಾಖಾನ್ ಮಾತನಾಡಿ, ನಗರದಲ್ಲಿ ಕುಡಿಯುವ ನೀರಿಗಾಗಿ ಜನತೆ ಪರಿತಪಿಸುತ್ತಿರುವ ಕಾರಣದಿಂದಾಗಿ, ಕೆರೆಯಲ್ಲಿ ಸಂಗ್ರಹಗೊಂಡ ಹೇಮಾವತಿ ನೀರನ್ನು ಪೂರೈಸಲಾಗುತ್ತಿದೆ. ಕುಡಿಯುವ ನೀರಿನ ಸಮಸ್ಯೆ ನೀಗಿಸಲು ನಗರಸಭೆಯು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಿದೆ ಎಂದರು.
ನಗರಸಭಾ ಸದಸ್ಯರಾದ ಆರ್.ಉಗ್ರೇಶ್, ಆರ್.ರಾಮು, ಮಂಜುನಾಥ್, ಆಂಜಿನಪ್ಪ, ಶ್ರೀನಿವಾಸಗುಪ್ತ, ಎಸ್.ಜೆ.ರಾಜಣ್ಣ, ಶಾರದಾ ಶಿವಕುಮಾರ್, ರೇಣುಕಮ್ಮ, ಇಸ್ಮಾಯಿಲ್, ಅಹಮದಿ, ಪುರಸಭೆಯ ಮಾಜಿ ಅಧ್ಯಕ್ಷ ಆರ್.ರಾಘವೇಂದ್ರ, ವಾಜಿದ್ ಅಹಮದ್, ಶ್ರೀರಂಗಪ್ಪ ಯಾದವ್, ಜೆ.ಡಿ.ಎಸ್. ಮುಖಂಡರಾದ ರೆಹಮತ್, ನಾಗಭೂಷಣ್, ಮಂಜುನಾಥ್, ಕೋಟೆ ರವಿ, ಶಿರಾ ರವಿ, ಎಸ್.ಎಲ್.ಗೋವಿಂದರಾಜು , ಜಾಫರ್, ಬೂವನಹಳ್ಳಿ ನಟರಾಜ್ ಸೇರಿದಂತೆ ಅನೇಕ ಪ್ರಮುಖರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ