ಬೆಂಗಳೂರು:
ಬಿಬಿಎಂಪಿ ಚುನಾವಣೆ ಸಮೀಪಿಸುಯತ್ತಿರುವ ಹಿನ್ನೆಲೆಯಲ್ಲಿ ಮಾ.31ರೊಳಗೆ ವಾರ್ಡ್ ಮರು ವಿಂಗಡಣೆ ಹಾಗೂ ಮೀಸಲು ಪಟ್ಟಿಯನ್ನು ಒದಗಿಸಲು ವಿಫಲವಾದರೆ ದಿನಕ್ಕೆ ರೂ.5 ಲಕ್ಷ ದಂಡ ವಿಧಿಸಬೇಕಾಗುವುದು ಎಂದು ಸರ್ಕಾರಕ್ಕೆ ಹೈಕೋರ್ಟ್ ಶುಕ್ರವಾರ ಎಚ್ಚರಿಕೆ ನೀಡಿದೆ.
ವಾರ್ಡ್ ಮರು ವಿಂಗಡಣೆ ಮತ್ತು ಮೀಸಲು ಪಟ್ಟಿ ನೀಡಲು ಸರ್ಕಾರ ವಿಳಂಬ ಮಾಡುತ್ತಿದೆ ಎಂದು ಆಕ್ಷೇಪಿಸಿ ರಾಜ್ಯ ಚುನಾವಣಾ ಆಯೋಗ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಎಚ್ಚರಿಕೆ ನೀಡಿತು. ದಂಡದ ಮೊತ್ತವನ್ನು ರಾಜ್ಯ ಚುನಾವಣಾ ಆಯೋಗಕ್ಕೆ ಪಾವತಿಸಬೇಕಾಗುತ್ತದೆ ಎಂದು ಹೇಳಿತು.
ಇದಕ್ಕೆ ಪ್ರತಿಕ್ರಿಯೆ ನೀಡಿದ ನ್ಯಾಯಪೀಠ, ಯಾವಾಗ ಅಂತಿಮ ಮೀಸಲು ಪಟ್ಟಿ ಹಾಗೂ ಮರು ವಿಂಗಡಣೆ ಪಟ್ಟಿ ಒದಗಿಸಲಾಗುತ್ತದೆ ಎಂಬ ಬಗ್ಗೆ ಮಾ.31ಕ್ಕೆ ತಿಳಿಸಬೇಕೆಂಗು ಸರ್ಕಾರಕ್ಕೆ ಹೈಕೋರ್ಟ್ ಈ ಹಿಂದೆ ಸೂಚಿಸಿತ್ತು. ಆದರೆ, ಇಂದು ಸರ್ಕಾರ ಮತ್ತೆ ಕಾಲಾವಕಾಶ ಕೇಳುತ್ತಿದೆ. ಚುನಾವಣೆಯಂತಹ ಮಹತ್ವದ ವಿಚಾರದಲ್ಲಿ ಸರ್ಕಾರ ಇಂತಹ ಧೋರಣೆ ಪ್ರದರ್ಶಿಸುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿತು.
ಅಲ್ಲದೆ, ತನ್ನ ಸಾಂವಿಧಾನಿಕ ಹೊಣೆಗಾರಿಕೆಯನ್ನು ಸಕಾಲದಲ್ಲಿ ನಿರ್ವಹಿಸಲು ಅವಕಾಶ ಮಾಡಿಕೊಡುವಂತೆ ಸಾಂವಿಧಾನಿಕ ಮತ್ತು ಸ್ವಾಯತ್ತ ಸಂಸ್ಥೆಯಾಗಿರುವ ಚುನಾವಣಾ ಆಯೋಗ ನ್ಯಾಯಾಲಯದ ಮೊರೆ ಹೋಗುವ ಸನ್ನಿವೇಶ ಸೃಷ್ಟಿಯಾಗಿರುವುದು ದುರಾದೃಷ್ಟಕರ ಸಂಗತಿ. ಸರ್ಕಾರವು ಮಾ.31ರೊಳಗೆ ವಾರ್ಡ್ ಮರು ವಿಂಗಡಣೆ ಮತ್ತು ಮೀಸಲು ಪಟ್ಟಿ ಅಂತಿಮಗೊಳಿಸಿ ಆಯೋಗಕ್ಕೆ ಸಲ್ಲಿಸಬೇಕು. ತಪ್ಪಿದರೆ, ಮಾ.31ರ ಬಳಿಕ ಪ್ರತಿ ದಿನ ರೂ.5 ಲಕ್ಷ ದಂಡವನ್ನು ಪಾವತಿಸುವಂತೆ ಆದೇಶ ಮಾಡಬೇಕಾಗುತ್ತದೆ ಎಂದು ಸರ್ಕಾರಕ್ಕೆ ಮೌಖಿಕವಾಗಿ ಎಚ್ಚರಿಕೆ ನೀಡಿದೆ.