ತುಮಕೂರು
ಕರ್ನಾಟಕ ಋಣ ಪರಿಹಾರ ಕಾಯ್ದೆ-2018ರ ಅನುಸಾರ ಲೇವಾದೇವಿದಾರರು ಹಾಗೂ ಪಾನ್ ಬ್ರೋಕರ್ಸ್ ವಿರುದ್ಧ ಸದ್ಯದ ಮಟ್ಟಿಗೆ ಆತುರದ ಕ್ರಮ ಕೈಗೊಳ್ಳದಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ.ಗಿರವಿ ವ್ಯಾಪಾರಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟಿನ ನ್ಯಾಯಮೂರ್ತಿ ಅಲೋಕ್ ಆರಾಧೆ ಅವರಿದ್ದ ಏಕಸದಸ್ಯ ನ್ಯಾಯಪೀಠವು ಸರ್ಕಾರಕ್ಕೆ ಈ ನಿರ್ದೇಶನ ನೀಡಿದೆ.
ರಾಜ್ಯ ಸರ್ಕಾರ ಋಣ ಪರಿಹಾರ ಕಾಯ್ದೆಯನ್ನು ಜಾರಿಗೆ ತಂದು ಗಿರವಿ ವ್ಯಾಪಾರಿಗಳು ಹಾಗೂ ಲೇವೇದೇವಿದಾರರಿಂದ ಪಡೆದ ಸಾಲವನ್ನು ಸಾಲಗಾರರು ಮರುಪಾವತಿ ಮಾಡುವ ಅಗತ್ಯವಿಲ್ಲ ಎಂದು ಹೇಳಿದೆ. ಆದರೆ, ಪಡೆದ ಹಣ ಮನ್ನಾ ಮಾಡುವುದಾಗಿ ಹೇಳಿರುವ ಸರ್ಕಾರ ಸಾಲ ನೀಡಿದ ಗಿರವಿ ಹಾಗೂ ಲೇವಾದೇವಿದಾರರಿಗೆ ಪರಿಹಾರ ನೀಡುವ ಕುರಿತು ಯಾವುದೇ ಪ್ರಸ್ತಾಪ ಮಾಡಿಲ್ಲ.
ನ್ಯಾಯಾಲಯದ ಈ ಆದೇಶ ಹಾಗೂ ಕಾಯ್ದೆ ಬಗ್ಗೆ ಸರ್ಕಾರದ ನಿಲುವುಗಳು ಸಾರ್ವಜನಿಕರಲ್ಲಿ ಗೊಂದಲ ಉಂಟುಮಾಡುತ್ತವೆ, ಈ ಪರಿಸ್ಥಿತಿಯಲ್ಲಿ ಋಣ ಪರಿಹಾರ ಕಾಯ್ದೆ ಊರ್ಜಿತವಾಗುವುದೇ ಅನುಮಾನ ಎಂಬ ಮಾತುಗಳು ಕೇಳಿಬರುತ್ತಿವೆ. ಗಿರವಿ ವ್ಯಾಪಾರಿಗಳು ಹಾಗೂ ಲೇವಾದೇವಿದಾರರಿಗೆ ಸರ್ಕಾರ ಕಾನೂನು ಪ್ರಕಾರ ಪರವಾನಗಿ ನೀಡಿದೆ. ಅವರಿಂದ ತೆರಿಗೆಯನ್ನೂ ಸಂಗ್ರಹಿಸುತ್ತಿದೆ. ಹೀಗಿದ್ದೂ ಋಣ ಪರಿಹಾರ ಕಾಯ್ದೆ ಜಾರಿಗೆ ತಂದು ಇವರಿಂದ ಪಡೆದ ಸಾಲವನ್ನು ಸಾಲಗಾರರು ಮರುಪಾವತಿ ಮಾಡುವ ಅಗತ್ಯವಿಲ್ಲ ಎಂದು ಹೇಳುವ ಮೂಲಕ ಗಿರವಿ ವ್ಯಾಪಾರಿಗಳಿಗೆ ನಷ್ಟ ಉಂಟು ಮಾಡುತ್ತಿದೆ.
ಸಾಲಗಾರರಿಗೆ ನೆರವಾಗುವ ಉದ್ದೇಶಕ್ಕಿಂತಾ ಹೆಚ್ಚಾಗಿ ಪಾನ್ ಬ್ರೋಕರ್ಸ್ ಸಮುದಾಯವನ್ನು ಹತ್ತಿಕ್ಕಲು, ಅವರ ವಹಿವಾಟು ನಿರ್ಬಂಧಿಸಲು ಕಾಯ್ದೆಯನ್ನು ಬಳಸಲಾಗುತ್ತಿದೆ. ಅಲ್ಲದೆ, ಋಣ ಪರಿಹಾರ ಕಾಯ್ದೆಯಿಂದ ಹಲವಾರು ವರ್ಷಗಳಿಂದ ನಡೆಸಿಕೊಂಡು ಬಂದಿರುವ ಗಿರವಿ ಹಾಗೂ ಲೇವಾದೇವಿ ವೃತ್ತಿಗೆ ಧಕ್ಕೆಯಾಗಿದೆ ಎಂದು ಅರ್ಜಿದಾರರ ಪರ ವಕೀಲರು ಕಾಯ್ದೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.
ಬ್ಯಾಂಕುಗಳಲ್ಲಿ ರೈತರು ಪಡೆದ ಸಾಲ ಮನ್ನಾ ಮಾಡಿ, ನಂತರ ಬ್ಯಾಂಕಿನ ಸಾಲದ ಹಣವನ್ನು ಸರ್ಕಾರ ಮರುಪಾವತಿ ಮಾಡುತ್ತದೆ. ಆದರೆ ಗಿರವಿ ವ್ಯಾಪಾರಿ ಹಾಗೂ ಲೇವಾದೇವಿದಾರಿಂದ ಪಡೆದ ಹಣ ಮನ್ನಾ ಮಾಡಲಿರುವ ಸರ್ಕಾರ ಅವರಿಗೆ ಯಾವುದೇ ರೀತಿಯ ಪರಿಹಾರ ನೀಡಿಲ್ಲ, ಆದುದರಿಂದ ಈ ಕಾಯ್ದೆ ಅಸಂವಿಧಾನಿಕ ಎಂಬುದಾಗಿ ಘೋಷಿಸುವಂತೆ ಅರ್ಜಿದಾರರು ಕೋರಿದ್ದಾರೆ.
ಭೂರಹಿತ ಕೃಷಿ ಕಾರ್ಮಿಕರು, ದುರ್ಬಲ ವರ್ಗದವರು, ಸಣ್ಣ ರೈತರಿಗೆ ಸಾಲ ನೀಡಿ ಅಧಿಕ ಬಡ್ಡಿ ವಿಧಿಸಿ ಕಾನೂನುಬಾಹಿರ ಕ್ರಮಗಳಿಂದ ಅವರನ್ನು ಶೋಷಿಸುತ್ತಿರುವುದನ್ನು ತಪ್ಪಿಸುವ ಉದ್ದೇಶ ಹೊಂದಿ ಸರ್ಕಾರ ಋಣ ಮುಕ್ತ ಪರಿಹಾರ ವಿಧೇಯಕವನ್ನು ಜಾರಿ ಮಾಡಿದೆ. ಈ ಕಾಯ್ದೆ ಪ್ರಕಾರ ಸಣ್ಣ ರೈತರು, ಭೂರಹಿತ ಕೃಷಿ ಕಾರ್ಮಿಕರು ಮತ್ತು ದುರ್ಬಲ ವರ್ಗಕ್ಕೆ ಸೇರಿದ ವ್ಯಕ್ತಿ ಅರ್ಜಿ ಸಲ್ಲಿಸಬಹುದು. ಎಲ್ಲ ಮೂಲಗಳಿಂದ ವಾರ್ಷಿಕ 1.2 ಲಕ್ಷ ರೂ.ಗಳಿಗಿಂತ ಕಡಿಮೆ ವರಮಾನ ಇರಬೇಕು. ಖಾಸಗಿ ಲೇವಾದೇವಿದಾರರು ಮತ್ತು ಗಿರವಿದಾರರಿಂದ 2019 ರ ಜುಲೈ 23 ಕ್ಕೆ ಮೊದಲು ಪಡೆದಿರುವ ಸಾಲಕ್ಕೆ ಈ ಕಾಯ್ದೆ ಅನ್ವಯವಾಗುತ್ತದೆ.
ಸಹಕಾರ ಸಂಘಗಳು, ಸೌಹಾರ್ದ ಸಹಕಾರ ಸಂಘಗಳು, ಆರ್.ಬಿ.ಐ. ಕಾಯ್ದೆಯಡಿ ನಿಯಂತ್ರಿಸಲ್ಪಡುವ ಬ್ಯಾಂಕೇತರ ಹಣಕಾಸು ಸಂಸ್ಥೆಗಳು, ಬ್ಯಾಂಕುಗಳು, ಸಹಕಾರ ಸಂಘಗಳ ನೋಂದಣಿ ಕಾಯ್ದೆ 1960 ರ ಅಧಿನಿಯಮ 17 ರಲ್ಲಿ ನೋಂದಾಯಿತವಾಗಿರುವ ಅತಿಸಣ್ಣ ಹಣಕಾಸು ಸಂಸ್ಥೆಗಳು, ಚಿಟ್Àಫಂಡ್ ಕಾಯ್ದೆಯಲ್ಲಿ ನೋಂದಣಿಗೊಂಡ ಚಿಟ್ ಕಂಪನಿಗಳಿಂದ ಪಡೆದಿರುವ ಸಾಲವು ಪರಿಹಾರಕ್ಕೆ ಅರ್ಹವಿರುವುದಿಲ್ಲ.
ಚಿಟ್‍ಫಂಡ್, ಮತ್ತಿತರ ಹಣಕಾಸು ಸಂಸ್ಥೆಗಳು ಚೆಕ್, ಆಸ್ತಿ ಪತ್ರ, ಒಡವೆ, ವಾಹನ ಮತ್ತಿತರ ಪದಾರ್ಥಗಳನ್ನು ಅಡವಿಟ್ಟುಕೊಂಡು ಸಾಲ ನೀಡಿ ಬಡ್ಡಿ ವ್ಯವಹಾರ ಮಾಡುತ್ತಿವೆ, ಸಾಲ ಪಡೆದವರಿಗೆ ಅವರಿಂದ ಆಗದ ಅನ್ಯಾಯ ಗಿರವಿ ವ್ಯಾಪಾರಿಗಳಿಂದ ಆಗುತ್ತದೆಯೆ ಎಂದು ಗಿರವಿ ವ್ಯಾಪಾರಿಗಳು ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದಾರೆ. ಗಿರವಿ ವ್ಯವಹಾರಸ್ಥರ ವಿರುದ್ಧ ದುರುದ್ದೇಶದಿಂದಲೇ ಋಣ ಪರಿಹಾರ ಕಾಯ್ದೆ ಜಾರಿ ಮಾಡಲಾಗಿದೆ ಎಂದು ಆಪಾದಿಸಿದ್ದಾರೆ.
ಈ ನಡುವೆ ಋಣ ಪರಿಹಾರ ಕಾಯ್ದೆಯಡಿ ಸಾಲ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸುವುದು ಎಲ್ಲಾ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಮುಂದುವರೆದಿದೆ. ರಾಜ್ಯಾದ್ಯಂತ ಲಕ್ಷಾಂತರ ಜನ ಈಗಾಗಲೇ ಅರ್ಜಿ ಸಲ್ಲಿಸಿದ್ದಾರೆ. 2019 ರ ಜುಲೈ 23 ರಿಂದ 90 ದಿನಗಳೊಳಗೆ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಅರ್ಜಿ ನಮೂನೆ-2 ರಲ್ಲಿ ಸಾಲ ಪಡೆದವರು ಹಾಗೂ ಜಾಮೀನುದಾರರು ಅರ್ಜಿಯನ್ನು ಸಲ್ಲಿಸಲು ಅವಕಾಶವಿದೆ.
ನ್ಯಾಯಾಲಯ ಸರ್ಕಾರಕ್ಕೆ ನೀಡಿರುವ ಆದೇಶದ ನಡುವೆ ಅರ್ಜಿ ಸಲ್ಲಿಸಿದವರಲ್ಲಿ ಮುಂದೇನು ಎಂಬ ಗೊಂದಲವಿದೆ. ಈ ಬಗ್ಗೆ ಸರ್ಕಾರ ಯಾವ ತೀರ್ಮಾನ ತೆಗೆದುಕೊಳ್ಳುವುದೋ ಎಂಬ ಆತಂಕವೂ ಇದೆ. ಈ ಸ್ಥಿತಿಯಲ್ಲಿ ಸರ್ಕಾರ ಸ್ಪಷ್ಟ ತೀರ್ಮಾನ ಪ್ರಕಟಿಸಿ ಗೊಂದಲ ನಿವಾರಿಸಬೇಕಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








