ಬೆಂಗಳೂರು:
2020-21ರ ಶೈಕ್ಷಣಿಕ ವರ್ಷದ ಶುಲ್ಕ ಹೆಚ್ಚಿಸದಂತೆ ರಾಜ್ಯ ಸರ್ಕಾರ ಹೊರಡಿಸಿರುವ ಸುತ್ತೋಲೆ ಪ್ರಶ್ನಿಸಿ ಕರ್ನಾಟಕ ಖಾಸಗಿ ಶಾಲೆಗಳ ಸಮಿತಿ ಸಲ್ಲಿಸಿರುವ ಅರ್ಜಿ ಆಧರಿಸಿ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ನೀಡಿದೆ.’ಹಿಂದಿನ ವರ್ಷ ಸಂಗ್ರಹಿಸಿದ ಮೊತ್ತಕ್ಕಿಂತ ಕಡಿಮೆ ಶುಲ್ಕ ಸಂಗ್ರಹಿಸಬಹುದು ಎಂದು ಸರ್ಕಾರ ಹೇಳಿದೆ. ಹಿಂದಿನ ವರ್ಷದ ಬಾಕಿ ಶುಲ್ಕ ಮತ್ತು ಪ್ರಸಕ್ತ ವರ್ಷದ ಶುಲ್ಕದಲ್ಲಿ ಶೇ 50ರಷ್ಟನ್ನು ಸಂಗ್ರಹಿಸಲು ಮಧ್ಯಂತರ ಅನುಮತಿ ನೀಡಬೇಕು’ ಅರ್ಜಿದಾರರು ಕೋರಿದ್ದಾರೆ.
‘ಶೇ 2ರಿಂದ ಶೇ 3ರಷ್ಟು ಪೋಷಕರು ಮಾತ್ರ ಶುಲ್ಕ ಪಾವತಿಸಿದ್ದಾರೆ. ಸಿಬ್ಬಂದಿ ವೇತನ ಪಾವತಿಸುವುದನ್ನು ಸರ್ಕಾರ ಕಡ್ಡಾಯ ಮಾಡಿದೆ. ಆನ್‌ಲೈನ್ ತರಗತಿ ನಡೆಸುತ್ತಿರುವ ಕಾರಣ ನಿರ್ವಹಣಾ ವೆಚ್ಚ ಹೆಚ್ಚಾಗುತ್ತಿದೆ. ಸಂಸ್ಥೆಗಳನ್ನು ಮುನ್ನಡೆಸುವುದು ಕಷ್ಟವಾಗುತ್ತಿದೆ. ಶೇ 40ರಷ್ಟು ಶುಲ್ಕ ಸಂಗ್ರಹಕ್ಕೆ ಮದ್ರಾಸ್ ಹೈಕೋರ್ಟ್ ಅನುಮತಿ ನೀಡಿದೆ. ರಾಜ್ಯದಲ್ಲೂ ಶುಲ್ಕ ಸಂಗ್ರಹಿಸಲು ಅನುಮತಿ ನೀಡಬೇಕು’ ಎಂದು ಮನವಿ ಮಾಡಿದ್ದಾರೆ.
‘ರಾಜ್ಯ ಸರ್ಕಾರದಿಂದ ವಿವರಣೆ ಪಡೆದ ನಂತರವಷ್ಟೇ ಮಧ್ಯಂತರ ಪರಿಹಾರವನ್ನು ನ್ಯಾಯಾಲಯ ಪರಿಗಣಿಸಲಿದೆ’ ಎಂದು ನ್ಯಾಯಮೂರ್ತಿ ಆರ್. ದೇವದಾಸ್ ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ