ಅಕ್ರಮ ಕಟ್ಟಡಗಳ ಸಮಗ್ರ ವರದಿ ನೀಡಲು ಹೈಕೋರ್ಟ್ ಸೂಚನೆ..!

ಬೆಂಗಳೂರು:

    ಸಾರ್ವಜನಿಕ ಸ್ಥಳಗಳಲ್ಲಿ ಅತಿಕ್ರಮಿಸಿ ನಿರ್ಮಾಣ ಮಾಡಿಕೊಂಡಿರುವ ಸ್ವತ್ತು, ಜಮೀನುಗಳ ಬಗ್ಗೆ ಗಂಭೀರ ಪರಿಗಣನೆ ಕೈಗೊಂಡಿರುವ ರಾಜ್ಯ ಉಚ್ಛ ನ್ಯಾಯಾಲಯವು ಈ ಸಂಬಂಧ ಅ.25ರ ಒಳಗೆ ಸಮಗ್ರ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.ಉದ್ಯಾನವನ, ಶಾಲೆ ಮತ್ತಿತರ ಸಾರ್ವಜನಿಕ ಉಪಯೋಗಕ್ಕೆ ಸಂಬಂಧಿಸಿದ ಜಾಗಗಳನ್ನು ಹಲವೆಡೆ ಅತಿಕ್ರಮಿಸಿ ಅಂತಹ ಕಡೆ ಖಾಸಗಿ ವ್ಯಕ್ತಿಗಳು ಹಲವು ಕಟ್ಟಡಗಳನ್ನು ಸಾರ್ವಜನಿಕ ಉಪಯೋಗದ ಹೆಸರಿನಲ್ಲಿ ನಿರ್ಮಿಸಿಕೊಂಡಿದ್ದಾರೆ.

    ಇನ್ನು ಕೆಲವು ಕಡೆ ಇದೇ ಸಾರ್ವಜನಿಕ ಸ್ಥಳಗಳನ್ನು ದೇವಸ್ಥಾನ,ಚರ್ಚ್, ಮಸೀದಿ ಮತ್ತಿತರ ಧಾರ್ಮಿಕ ಕೇಂದ್ರಗಳನ್ನು ನಿರ್ಮಿಸಲು ಬಳಸಿಕೊಂಡಿದ್ದಾರೆ. ಎಲ್ಲೆಲ್ಲಿ ಇಂತಹ ಅಕ್ರಮ ಕಟ್ಟಡಗಳು ತಲೆ ಎತ್ತಿ ನಿಂತಿವೆಯೋ ಅಂತಹುಗಳನ್ನು ಗುರುತಿಸಬೇಕು. ಆ ಕೇಂದ್ರಗಳನ್ನು ತೆರವು ಮಾಡಲು ತ್ವರಿತ ಕ್ರಮ ಕೈಗೊಳ್ಳಬೇಕು. ನ್ಯಾಯಾಲಯದ ಆದೇಶ ಪಾಲನೆ ಮಾಡುತ್ತಿರುವ ಬಗ್ಗೆ ಇದೇ 25ರ ಒಳಗೆ ವರದಿ ಸಲ್ಲಿಸಬೆಕು ಎಂದು ಹೈಕೋರ್ಟ್ ಸೂಚಿಸಿದೆ.

    ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಪರಿಗಣಿಸಿ ವಿಚಾರಣೆ ನಡೆಸುತ್ತಿರುವ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಅಭಯ್ ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠವು ಈ ಆದೇಶ ನೀಡಿದೆ. ಸುಪ್ರೀಂ ಕೋರ್ಟ್ 2009ರ ಸೆ.29 ರಂದು ನೀಡಿರುವ ತೀರ್ಪಿನ ಪ್ರಕಾರ ಸಾರ್ವಜನಿಕ ಪ್ರದೇಶಗಳಲ್ಲಿರುವ ಅನಧಿಕೃತ ಧಾರ್ಮಿಕ ಕೇಂದ್ರಗಳನ್ನು ತೆರವುಗೊಳಿಸುವ ನಿಟ್ಟಿನಲ್ಲಿ ಕೈಗೊಂಡಿರುವ ಕ್ರಮಗಳ ಕುರಿತಂತೆ ವರದಿ ಸಲ್ಲಿಸಿ ಎಂದು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿತ್ತು.

    ತನ್ನ ಆದೇಶದ ಪಾಲನೆಯ ಬಗ್ಗೆ ನ್ಯಾಯಾಂಗ ನಿಂದನೆ ಅಸ್ತ್ರ ಪ್ರಯೋಗಿಸಲು ರಾಜ್ಯ ಹೈಕೋರ್ಟ್ ಮುಂದಾಗಿದ್ದು, ಇದರಿಂದ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರವು ರಸ್ತೆ, ಉದ್ಯಾನವನ ಇತ್ಯಾದಿ ಪ್ರದೇಶಗಳಲ್ಲಿ ಅನಧಿಕೃತವಾಗಿ ನಿರ್ಮಾಣವಾಗಿರುವ ಧಾರ್ಮಿಕ ಕಟ್ಟಡಗಳ ತೆರವು ಪ್ರಕ್ರಿಯೆಗೆ ಮತ್ತೆ ಚಾಲನೆ ನೀಡಿದೆ.

    2010 ರಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ಆದೇಶದ ಹೊರತಾಗಿಯೂ ಇಂತಹ ಅನಧಿಕೃತ ಕಟ್ಟಡಗಳ ತೆರವಿಗೆ ಸರ್ಕಾರ ಮುಂದಾಗಿಲ್ಲ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಸಲ್ಲಿಕೆಯಾಗಿದ್ದವು. ಹೈಕೋರ್ಟ್ ಈ ಹಿಂದೆ ನೀಡಿದ್ದ ಸೂಚನೆಯ ಮೇರೆಗೆ ಬಾಗಲಕೋಟೆ, ಚಿಕ್ಕಬಳ್ಳಾಪುರ, ರಾಯಚೂರು, ಶಿವಮೊಗ್ಗ ಜಿಲ್ಲೆಗಳ ವಿವರಗಳನ್ನು ಹೊರತುಪಡಿಸಿ ಉಳಿದ 26 ಜಿಲ್ಲೆಗಳ ಮಾಹಿತಿ ಕ್ರೋಢೀಕರಿಸಿ ವರದಿ ಸಲ್ಲಿಸಲಾಗಿದೆ. ಈ ಮಾಹಿತಿ ಪ್ರಕಾರ 151 ತಾಲ್ಲೂಕುಗಳಲ್ಲಿ 4366 ಅನಧಿಕೃತ ಧಾರ್ಮಿಕ ಕಟ್ಟಡಗಳಿವೆ. ಸುಪ್ರೀಂಕೋರ್ಟ್ ಆದೇಶದ ನಂತರ 1706 ಕಟ್ಟಡಗಳನ್ನು ತೆರವುಗೊಳಿಸಲಾಗಿದೆ. 122 ನಿರ್ಮಾಣಗಳನ್ನು ಸ್ಥಳಾಂತರಿಸಲಾಗಿದೆ. 483 ಕಟ್ಟಡಗಳನ್ನು ಸಕ್ರಮಗೊಳಿಸಲಾಗಿದೆ ಎಂದು ಸರ್ಕಾರ ಹೈಕೋರ್ಟ್‍ಗೆ ಮಾಹಿತಿ ನೀಡಿದೆ.

    ಅ.25ರ ಒಳಗೆ ವರದಿ ನೀಡುವಂತೆ ಹೈಕೋರ್ಟ್ ಸೂಚಿಸುತ್ತಿದ್ದಂತೆಯೇ ಎಚ್ಚೆತ್ತಿರುವ ರಾಜ್ಯ ಸರ್ಕಾರ ಹಾಗೂ ಪೌರಾಡಳಿತ ನಿರ್ದೇಶನಾಲಯವು ತನ್ನ ಅಧೀನ ಇಲಾಖೆಗಳಿಗೆ ಸುತ್ತೋಲೆ ಹೊರಡಿಸಿದೆ. ಪೌರಾಡಳಿತ ನಿರ್ದೇಶಾಲಯದ ವ್ಯಾಪ್ತಿಗೆ ಒಳಪಡುವ ಎಲ್ಲ ಸಂಸ್ಥೆಗಳಿಗೆ ನಿರ್ದೇಶನ ನೀಡಲಾಗಿದೆ. ಸರ್ಕಾರದ ಸೂಚನೆ ಹಾಗೂ ಮುಂದೆ ಆಗಬಹುದಾದ ತೊಂದರೆಗಳನ್ನು ನಿವಾರಿಸಲು ಈಗಲೇ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನಾ ಪತ್ರದಲ್ಲಿ ತಿಳಿಸಲಾಗಿದೆ.

    9.10.2019ರಂದು ರಾಜ್ಯದ ಎಲ್ಲ ಆಯುಕ್ತರು, ಪೌರಾಯುಕ್ತರು, ಮುಖ್ಯಾಧಿಕಾರಿ, ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿಗಳಿಗೆ ಸುತ್ತೋಲೆಯೊಂದನ್ನು ರವಾನಿಸಿದೆ. ಪೌರಾಡಳಿತ ನಿರ್ದೇಶನಾಲಯವು ಕಳುಹಿಸಿರುವ ಈ ಸುತ್ತೋಲೆಯಲ್ಲಿ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸರ್ಕಾರಿ ಜಾಗಗಳ ಒತ್ತುವರಿಯನ್ನು ತೆರವುಗೊಳಿಸುವ ಬಗ್ಗೆ ಕ್ರಮ ವಹಿಸುವುದು, ಪ್ರತಿ 3 ತಿಂಗಳಿಗೊಮ್ಮೆ ವರದಿ ನೀಡುವಂತೆ ಸೂಚಿಸಲಾಗಿದೆ.

    ಅನಧಿಕೃತ ಬೆಳವಣಿಗೆಗಳನ್ನು ತಡೆಗಟ್ಟುವುದು ಸ್ಥಳೀಯ ಸಂಸ್ಥೆಗಳ ಪ್ರಮುಖ ಕರ್ತವ್ಯವಾಗಿದ್ದು, ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961, ಕರ್ನಾಟಕ ಮಹಾನಗರ ಪಾಲಿಕೆಗಳ ಕಾಯ್ದೆ 1976 ಹಾಗೂ ಕರ್ನಾಟಕ ಮುನಿಸಿಪಲ್ ಕಾಯ್ದೆ 1964 ರಲ್ಲಿ ಅನಧಿಕೃತ ಬೆಳವಣಿಗೆಗಳ ವಿರುದ್ಧ ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಉಲ್ಲೇಖಿಸಲಾಗಿದೆ .ಅನಧಿಕೃತ ಕಟ್ಟಡ ಬೆಳವಣಿಗೆಗಳನ್ನು ನಿರ್ಮಾಣದ ಸಂದರ್ಭದಲ್ಲಿಯೇ ತಡೆಗಟ್ಟಬೇಕಿದ್ದು, ತದನಂತರದಲ್ಲಿ ಅವುಗಳನ್ನು ನೆಲೆಸಮ ಮಾಡುವುದು ಕಷ್ಟಸಾಧ್ಯವಾಗಿದ್ದು, ಕೂಡಲೇ ಮುಲಾಜಿಲ್ಲದೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link