HDK ವಿರುದ್ಧ ಭೂಕಬಳಿಕೆ ಆರೋಪ : ವಿವರಣೆಗೆ ಹೈಕೋರ್ಟ್ ಸೂಚನೆ!!

ಬೆಂಗಳೂರು:

   ಜೆಡಿಎಸ್ ಮುಖಂಡ ಹಾಗು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಡಿ.ಸಿ.ತಮ್ಮಣ್ಣ ಅವರ ಸಂಬಂಧಿ ಸಾವಿತ್ರಮ್ಮ ವಿರುದ್ಧ ಕೇತಗಾನಹಳ್ಳಿ ಅಕ್ರಮ ಭೂ ಕಬಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ಕೈಗೊಂಡಿರುವ ಕ್ರಮಗಳ ವಿವರಣೆ ನೀಡುವಂತೆ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ.

    ಈ ಕುರಿತಂತೆ ಸಮಾಜ ಪರಿವರ್ತನಾ ಸಮಯದಾಯದ ಮುಖ್ಯಸ್ಥ ಎಸ್.ಆರ್. ಹಿರೇಮಠ ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ. ಎಸ್‌. ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಇಂದು ವಿಚಾರಣೆ ನಡೆಸಿ ಪ್ರಕರಣದ ಬಗ್ಗೆ 2014ರಲ್ಲಿ ಲೋಕಾಯುಕ್ತರು ಹೊರಡಿಸಿದ್ದ ಆದೇಶದಂತೆ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಣೆಯನ್ನು ನೀಡುವಂತೆ ಸೂಚಿಸಿದೆ.

    ಅರ್ಜಿದಾರರ ಪರ ವಕೀಲರು, ‘ಕರ್ನಾಟಕ ಲೋಕಾಯುಕ್ತ 2014ರ ಆ.5ರಂದು ಹದಿನೈದು ದಿನಗಳಲ್ಲಿ ಭೂ ಒತ್ತುವರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆದೇಶ ನೀಡಿದ್ದರೂ ಕೇತಗಾನಹಳ್ಳಿಯಲ್ಲಿ ಒತ್ತುವರಿ ಮಾಡಿಕೊಂಡಿರುವ 54 ಎಕರೆ ತೆರವುಗೊಳಿಸಲು ಏನೂ ಕ್ರಮ ಕೈಗೊಂಡಿಲ್ಲ’ ಎಂದು ನ್ಯಾಯಪೀಠಕ್ಕೆ ವಿವರಿಸಿದ್ದಾರೆ. ಅಲ್ಲದೆ ‘ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿರುವ ಆಸ್ತಿ ಮಾರುಕಟ್ಟೆ ಮೌಲ್ಯ ಪ್ರತಿ ಎಕರೆಗೆ ಸುಮಾರು 75 ಲಕ್ಷದಿಂದ 1 ಕೋಟಿ ರೂ. ಇದೆ.
    ಆದಾಗಿಯೂ ಅಲ್ಲಿನ ಎಲ್ಲಾ ಭೂಮಿಯನ್ನು ಕುಮಾರಸ್ವಾಮಿ ಮತ್ತು ಅವರ ಸಹಚರರು ಪ್ರತಿ ಎಕರೆಗೆ ಆಗ ಇದ್ದ ಮಾರುಕಟ್ಟೆ ಮೌಲ್ಯ 25ರಿಂದ 30 ಸಾವಿರ ನೀಡದೆ ಕೇವಲ ಎಕರೆಗೆ 5 ಸಾವಿರ ರೂ.ಗಳಂತೆ ಕರ್ನಾಟಕ ಭೂ ಕಂದಾಯ ಕಾಯ್ದೆಯನ್ನು ಉಲ್ಲಂಘಿಸಿ ಖರೀದಿ ಮಾಡಿದ್ದಾರೆ. ಇದರಿಂದ ಸರಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂ. ನಷ್ಟವಾಗಿದೆ. ಹಾಗಾಗಿ ಲೋಕಾಯುಕ್ತರ ಆದೇಶದ ಮೇಲೆ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಬೇಕು’ ಎಂದು ಅರ್ಜಿದಾರರು ನ್ಯಾಯಾಲಯವನ್ನು ಕೋರಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ