ತುಮಕೂರು

ಸರ್ಕಾರಿ ಅಧಿಕಾರಿಯೊಬ್ಬರ ಮೊಬೈಲ್ ಫೋನ್‍ಗೆ ಕರೆ ಮಾಡಿರುವ ಅನಾಮಧೇಯ ವ್ಯಕ್ತಿಯೊಬ್ಬ ಅವರಿಂದ ಓಟಿಪಿ ಸಂಖ್ಯೆ ಪಡೆದು ಆನ್‍ಲೈನ್‍ನಲ್ಲೇ ಒಟ್ಟು ಆರು ಲಕ್ಷ ರೂ.ಗಳನ್ನು “ಗುಳುಂ” ಮಾಡಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ತಿಪಟೂರು ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಪ್ರಭಾರ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿರುವ ಎಸ್.ಬಿ.ನ್ಯಾಮಗೌಡ ಎಂಬುವವರೇ ಈಗ ವಂಚನೆಗೆ ಒಳಗಾಗಿರುವ ನತದೃಷ್ಟರು. ಅ.11 ರಂದು ಸಂಜೆ ಸುಮಾರು 4 ರಿಂದ 4-40 ರ ನಡುವೆ ಇವರು ಎ.ಪಿ.ಎಂ.ಸಿ. ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ, ಇವರ ಮೊಬೈಲ್ ಫೋನ್‍ಗೆ ಎಸ್.ಬಿ.ಐ. ಕೆ.ವೈ.ಸಿ. (ನೋ ಯುವರ್ ಕಸ್ಟಮರ್) ಎಂದು 8759018370 ಎಂಬ ಸಂಖ್ಯೆಯಿಂದ ಕರೆ ಬಂತು.
ಇವರು ಕರೆಯನ್ನು ಸ್ವೀಕರಿಸಿದಾಗ ಅತ್ತ ಕಡೆಯಿಂದ ಅನಾಮಧೇಯ ವ್ಯಕ್ತಿ ಮಾತನಾಡಿ ಓಟಿಪಿ (ಒನ್ ಟೈಮ್ ಪಾಸ್‍ವರ್ಡ್) ಸಂಖ್ಯೆ ತಿಳಿಸುವಂತೆ ಕೋರಿದ್ದಾನೆ. ತಕ್ಷಣವೇ ಇವರು ತಮ್ಮ ಮೊಬೈಲ್‍ಗೆ ಬಂದಿದ್ದ ಓಟಿಪಿ ಸಂಖ್ಯೆಯನ್ನು ತಿಳಿಸಿದ್ದಾರೆ. ಇದಾದ ಕೆಲವೇ ಕ್ಷಣಗಳಲ್ಲಿ ಇವರಿಗೆ ಸೇರಿದ ಮೂರು ಬ್ಯಾಂಕ್ ಅಕೌಂಟ್‍ಗಳಿಂದ ತಲಾ 2 ಲಕ್ಷ ರೂ.ಗಳಂತೆ ಒಟ್ಟು 6 ಲಕ್ಷ ರೂ.ಗಳು ಆನ್‍ಲೈನ್‍ನಲ್ಲೇ ಡ್ರಾ ಆಗಿರುವುದು ಹಾಗೂ ತಾವು ವಂಚನೆಗೆ ಒಳಗಾಗಿರುವುದು ಇವರ ಗಮನಕ್ಕೆ ಬಂದಿದೆ.
ಈ ಹಿನ್ನೆಲೆಯಲ್ಲಿ ಎಸ್.ಬಿ.ನ್ಯಾಮಗೌಡ ಅವರು ಅ.11 ರಂದು ರಾತ್ರಿ 7-30 ರಲ್ಲಿ ಪೊಲೀಸರಿಗೆ ದೂರನ್ನು ಸಲ್ಲಿಸಿದ್ದಾರೆ. ತಿಪಟೂರು ನಗರ ಪೊಲೀಸ್ ಠಾಣೆಯ ಪೊಲೀಸರು ಐಪಿಸಿ ಕಲಂ 420 ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ ಕಲಂ 66 (ಸಿ) (ಡಿ) ಪ್ರಕಾರ ಮೊಕದ್ದಮೆ ದಾಖಲಸಿ, ಮುಂದಿನ ತನಿಖೆ ಆರಂಭಿಸಿದ್ದಾರೆ.
