ಬೆಂಗಳೂರು
ಬೆಂಗಳೂರು – ಮೈಸೂರು ಆರು ಪಥದ ಹೆದ್ದಾರಿ ಕಾಮಗಾರಿಗೆ ಜನವರಿ 8 ರಂದು ಚಾಲನೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ತಿಳಿಸಿದ್ದಾರೆ.
ನಗರದಲ್ಲಿಂದು ರಾಜ್ಯದ ಹೆದ್ದಾರಿ ಯೋಜನೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವಾಲಯದ ಅಧಿಕಾರಿಗಳ ಜತೆ ಚರ್ಚಿಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಕುಮಾರ ಸ್ವಾಮಿ, ಬೆಂಗಳೂರು-ಮೈಸೂರು ಹೆದ್ದಾರಿ ಕಾಮಗಾರಿಗೆ ಎದುರಾಗಿರುವ ಅಡಚಣೆ ದೂರ ಮಾಡಲು ಕೇಂದ್ರದ ಅಧಿಕಾರಿಗಳು ಸಹಕಾರ ನೀಡುತ್ತಿದ್ದಾರೆ ಎಂದರು.
ರಾಜ್ಯದಲ್ಲಿ ಒಟ್ಟು 7622 ಕಿ.ಮೀ. ಉದ್ದದ ರಸ್ತೆಯಿದ್ದು, ಈ ಪೈಕಿ 3348 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ರಾಜ್ಯದಲ್ಲಿದೆ. 1954 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪ್ರಗತಿಯಲ್ಲಿದ್ದು, ಪ್ರಸಕ್ತ ಸಾಲಿನಲ್ಲಿ 516 ಕಿ.ಮೀ. ರಸ್ತೆ ನಿರ್ಮಾಣ ಕಾರ್ಯವನ್ನು ಹೊಸದಾಗಿ ಯೋಜಿಸಲಾಗಿದೆ ಎಂದರು.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಅಗತ್ಯವಿರುವ ಭೂ ಸ್ವಾಧೀನ ಪ್ರಕ್ರಿಯೆ ಶೇ.80ರಷ್ಟು ಮುಗಿದಿದ್ದು, ಅರಣ್ಯ , ಇಂಧನ, ಕೆಆರ್‍ಡಿಸಿಎಲ್ ಹಾಗೂ ಸಂಬಂಧಪಟ್ಟ ಜಿಲ್ಲಾಧಿಕಾರಿಗಳು, ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣಕ್ಕೆ ಇರುವ ತೊಡಕುಗಳನ್ನು ನಿವಾರಿಸಬೇಕೆಂದು ಮುಖ್ಯಮಂತ್ರಿಗಳು ಸೂಚಿಸಿದರು.
ತುಮಕೂರು- ಶಿವಮೊಗ್ಗ ಪ್ಯಾಕೇಜ್ 1, 2, 3 , ಬೈರಾಪುರ ಚಳ್ಳಕೆರೆ ಪ್ಯಾಕೇಜ್ 2, ಬಳ್ಳಾರಿ ಬೈರಾಪುರ ಪ್ಯಾಕೇಜ್ 1 , ಚಳ್ಳಕೆರೆ ಹಿರಿಯುರು ಪ್ಯಾಕೇಜ್ 3 ಚತುಷ್ಪಥ ರಸ್ತೆ ಕಾಮಗಾರಿಗಳ ಅರಣ್ಯ ಇಲಾಖೆಯ ಅನುಮತಿಯನ್ನು ತ್ವರಿತವಾಗಿ ನೀಡುವಂತೆ ಸೂಚಿಸಿದರು. ಖಾಲಿ ಇರುವ ಸ್ಥಳಗಳಲ್ಲಿ ಭೂ ಸ್ವಾಧೀನ ಅಧಿಕಾರಿಗಳನ್ನು ತಕ್ಷಣವೇ ನೇಮಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.
ಕೆಲವು ಯೋಜನೆಗಳಿಗೆ ಶೀಘ್ರದಲ್ಲೇ ಗುದ್ದಲಿ ಪೂಜೆ ನೆರವೇರಿಸಬೇಕಾಗಿದೆ. ಇನ್ನೂ ಕೆಲವು ಯೋಜನೆಗಳ ಭೂ ಸ್ವಾಧೀನ ಕುರಿತು ಸಮಸ್ಯೆಗಳಿವೆ. ರಾಜ್ಯದಲ್ಲಿ ಹೆದ್ದಾರಿ ಯೋಜನೆಗಳ ವಿಚಾರದಲ್ಲಿ ರಾಜ್ಯದಿಂದ ಉತ್ತಮ ಸ್ಪಂದನೆ ದೊರೆತಿರುವುದಾಗಿ ಕೇಂದ್ರದ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಾವು ಮುಖ್ಯಮಂತ್ರಿಯಾದ ನಂತರ ರಾಷ್ಟ್ರೀಯ ಹೆದ್ದಾರಿ ಪ್ರಧಿಕಾರದೊಂದಿಗೆ ಇದು ನಾಲ್ಕನೇ ಸಭೆಯಾಗಿದೆ ಎಂದು ತಿಳಿಸಿದರು.
ಕಾವೇರಿ ನದಿ ಪಾತ್ರದ ಮೇಕೆದಾಟು ಯೋಜನೆಗೆ ಅಗತ್ಯವಾಗಿರುವ ಸಮಗ್ರ ಯೋಜನಾ ವರದಿಯನ್ನು ಸಿದ್ಧಪಡಿಸಲಾಗುತ್ತಿದೆ. ಯೋಜನೆಗೆ ಕೇಂದ್ರ ಜಲ ಆಯೋಗ ಅನುಮತಿ ನೀಡಿರುವುದನ್ನು ವಿರೋಧಿಸಿ ತಮಿಳುನಾಡು ಸುಪ್ರೀಂಕೋರ್ಟ್ ಮೊರೆ ಹೋಗಿದೆ. ಮುಂದಿನ ಸಾಧಕ – ಬಾಧಕಗಳ ಬಗ್ಗೆ ನೀರಾವರಿ ಸಲಹೆಗಾರರ ಜತೆ ಸಭೆ ನಡೆಸಲಾಗಿದೆ. ತಮಿಳುನಾಡಿನ ಆಕ್ಷೇಪಣೆಗಳ ಕುರಿತೂ ಮಾಹಿತಿ ಪಡೆದುಕೊಂಡಿರುವುದಾಗಿ ಹೇಳಿದರು.
ಆಶ್ರಯ ಯೋಜನೆಯಡಿ ಶೇಷಗಿರಿ ಹಳ್ಳಿ ಮತ್ತು ಹುಳ್ತಾರ್ ಅರಣ್ಯ ಪ್ರದೇಶದಲ್ಲಿ ಭೂಮಿಯನ್ನು ಕಳೆದುಕೊಂಡವರಿಗೆ ರಾಜ್ಯ ಸರ್ಕಾರವು ಪರ್ಯಾಯ ಭೂಮಿಯನ್ನು ಗುರುತಿಸಿದ್ದು, ಸದರಿ ಪ್ರಸ್ತಾವನೆಗೆ ಅನುಮೋದನೆ ನೀಡುವಂತೆ ರಾಮನಗರ ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿಗಳು ಸೂಚಿಸಿದರು.
ಸಭೆಯಲ್ಲಿ ಲೋಕೋಪಯೋಗಿ ಇಲಾಖೆ ಸಚಿವರ ಹೆಚ್.ಡಿ.ರೇವಣ್ಣ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮಹಾನಿರ್ದೇಶಕ ಬಿ.ಎನ್.ಸಿಂಗ್, ಎನ್‍ಹೆಚ್‍ಎಐ ಸದಸ್ಯರಾದ ತಾವಡೆ, ಲೋಕೋಪಯೋಗಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐಎಸ್‍ಎನ್ ಪ್ರಸಾದ್, ಅರಣ್ಯ , ಇಂಧನ, ಕೆಆರ್‍ಡಿಸಿಎಲ್ ಇಲಾಖೆಗಳ ಮುಖ್ಯಸ್ಥರು, ಬೆಂಗಳೂರು, ರಾಮನಗರ, ಮಂಡ್ಯ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ