ಜನವರಿ 15 ರಿಂದ ಬೆಂಗಳೂರು-ಮೈಸೂರು ಹೆದ್ದಾರಿ ಕಾಮಗಾರಿ ಆರಂಭ: ರೇವಣ್ಣ

ಬೆಂಗಳೂರು 

        ಬೆಂಗಳೂರು-ಮೈಸೂರು ಹೆದ್ದಾರಿ ಕಾಮಗಾರಿಯನ್ನು ಜನವರಿ 15 ರಿಂದ ಆರಂಭಿಸಲಾಗುವುದು ಎಂದು ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ತಿಳಿಸಿದ್ದಾರೆ.

          ವಿಧಾನಸೌಧದಲ್ಲಿಂದು ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ ಕುರಿತು ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, 5,400 ಕೋಟಿ ರೂ. ಮೊತ್ತದ ಕಾಮಗಾರಿ ಇದಾಗಿದ್ದು, 2 ಹಂತದಲ್ಲಿ ಕೆಲಸಗಳನ್ನು ಪ್ರಾರಂಭಿಸಲಾಗುವುದು. 30 ತಿಂಗಳ ಕಾಮಗಾರಿ ಇದಾಗಿದ್ದು, ಅವಧಿಗೂ ಮುನ್ನ ?ಅಂದರೆ 24 ತಿಂಗಳಿನಲ್ಲಿ ಕಾಮಗಾರಿ ಪೂರ್ಣಗೊಳಿಸುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಈಗಾಗಲೇ ಮುಖ್ಯಮಂತ್ರಿಗಳು ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ ಕುರಿತು ಪ್ರತಿ ತಿಂಗಳು ಮುಖ್ಯ ಕಾರ್ಯದರ್ಶಿಗಳ ಜೊತೆ ವಿಶೇಷ ಸಭೆ ನಡೆಸುತ್ತಿದ್ದು, ಹೆದ್ದಾರಿ ಯೋಜನೆಗಳಿಗೆ ವೇಗ ನೀಡಲಾಗುತ್ತಿದೆ ಎಂದರು.

           ಬೆಳಗಾವಿ-ಗೋವಾ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕುರಿತು ಮಾತನಾಡಿದ ಹೆಚ್.ಡಿ.ರೇವಣ್ಣ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಬದಲಿ ಮಾರ್ಗ ನೀಡುವ ಬಗ್ಗೆ ಅಧಿಕಾರಿಗಳ ಜೊತೆ ಸಭೆ ನಡೆಸಲಾಗಿದೆ. ಬದಲಿ ಮಾರ್ಗಕ್ಕೆ ಹೆಚ್ಚು ಸಮಯ ಬೇಕೆಂದು ಗೋವಾ ತಿಳಿಸಿದೆ. ಬದಲಿ ಮಾರ್ಗದಲ್ಲಿ ವಾಹನಗಳ ಸಂಚಾರಕ್ಕೆ ಬೆಳಿಗ್ಗೆ 6 ರಿಂದ ಸಂಜೆ 6 ರವರೆಗೆ ಮಾತ್ರ ಅವಕಾಶ ನೀಡಿರುವುದರಿಂದ ತೊಂದರೆಯಾಗಿದೆ. ಸಂಜೆ 6 ರಿಂದ 9 ರವರೆಗೆ ಸಮಯ ವಿಸ್ತರಣೆಗೆ ಕರ್ನಾಟಕ ಸಿದ್ಧವಿದೆ. ಆದರೆ ಸಮಯ ಬದಲಾವಣೆಗೆ ಸರ್ವೋಚ್ಛ ನ್ಯಾಯಾಲಯದ ಅನುಮತಿಯ ಅಗತ್ಯವಿದೆ ಎಂದರು.

           ಬದಲಿ ಮಾರ್ಗ ಅಭಿವೃದ್ಧಿಗೆ ಕೇಂದ್ರ ಹೆದ್ದಾರಿ ಪ್ರಾಧಿಕಾರಕ್ಕೆ ಮನವಿ ಮಾಡುತ್ತಿದ್ದು, ಬದಲಿ ಮಾರ್ಗದ ರಸ್ತೆಗಳು ಸುಸ್ಥಿತಿಯಲ್ಲಿದ ಕಾರಣ, ಒಂದು ಬಾರಿಗೆ ಅನ್ವಯವಾಗುವಂತೆ ರಸ್ತೆ ಅಭಿವೃದ್ಧಿಗೆ 30 ಕೋಟಿ ರೂ. ಅವಶ್ಯಕತೆಯಿದೆ. ಈ ಕಾಮಗಾರಿಯನ್ನು ಕೇಂದ್ರ ಸರ್ಕಾರವೇ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ ಎಂದರು.

         ಬೆಳಗಾವಿ-ಚೊರಲಾ, ಖಾನಾಪುರ-?ಅಳ್ವಾವರ್-ನಂದಘಡ, ಖಾನಾಪುರ-ಜಾಂಬೋರೆ ರಸ್ತೆಗಳ ಅಭಿವೃದ್ಧಿಯಾಗಬೇಕಿದ್ದು, ಈ ಬಗ್ಗೆ ಗೋವಾ ಮತ್ತು ಕರ್ನಾಟಕ ಎರಡೂ ಸರ್ಕಾರಗಳು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇವೆ ಎಂದರು.

         ಗೋವಾ ಲೋಕೋಪಯೋಗಿ ಸಚಿವ ರಾಮಕೃಷ್ಣ ದಾವಳೀಕರ್ ಮಾತನಾಡಿ, ಬೆಳಗಾವಿ-ಗೋವಾ ಎನ್‍ಹೆಚ್4 ಹೆದ್ದಾರಿ ಕಾಮಗಾರಿಯಿಂದಾಗುತ್ತಿರುವ ಸಮಸ್ಯೆಗಳ ಬಗ್ಗೆ ಸಚಿವ ರೇವಣ್ಣ, ತಮ್ಮ ಜೊತೆ ಚರ್ಚಿಸಿದ್ದಾರೆ. ಕೇಂದ್ರ ಸಚಿವ ನಿತೀನ್ ಗಡ್ಕರಿ, ಮಹಾರಾಷ್ಟ್ರ, ಗೋವಾ, ಕರ್ನಾಟಕಕ್ಕೆ ರಸ್ತೆ ಅಭಿವೃದ್ಧಿಗೆ 1 ಸಾವಿರ ಕೋಟಿ ರೂ ಅನುದಾನ ಮಂಜೂರು ಮಾಡಿದ್ದು, ಎರಡೂ ರಾಜ್ಯಗಳ ಪರ್ಯಾಯ ರಸ್ತೆ ಸಮಸ್ಯೆಗಳ ಬಗ್ಗೆ ಕೇಂದ್ರದ ಜೊತೆ ಚರ್ಚಿಸುವುದಾಗಿ ತಿಳಿಸಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap