ಹಿಂದುಳಿದವರಿಗೆ ಸಿದ್ದರಾಮಯ್ಯರ ಕೊಡುಗೆ ಏನು?

ದಾವಣಗೆರೆ:

      ಹೆಜ್ಜೆ, ಹೆಜ್ಜೆಗೂ ಅಹಿಂದ ಮಂತ್ರ ಜಪಿಸುವ ಮಾಜಿ ಸಿಎಂ ಸಿದ್ದರಾಮಯ್ಯನವರು ಹಿಂದುಳಿದ ಸಮುದಾಯಗಳಿಗೆ ಯಾವುದೇ ವಿಶೇಷ ಕೊಡುಗೆ ನೀಡಿಲ್ಲ ಎಂದು ಬಿಜೆಪಿ ಮುಖಂಡ ಬಿ.ಎಂ.ಸತೀಶ್ ಆರೋಪಿಸಿದ್ದಾರೆ.

      ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರು ಅಹಿಂದ ವರ್ಗದವರು ಬಿಜೆಪಿಗೆ ಒಂದೇ, ಒಂದು ಮತ ಹಾಕಬೇಡಿ ಎಂದಿದ್ದಾರೆ. ಹೆಜ್ಜೆ, ಹೆಜ್ಜೆಗೂ ಅಹಿಂದ ಮಂತ್ರ ಜಪಿಸುವ ಸಿದ್ದರಾಮಯ್ಯನವರು ಹಿಂದುಳಿದ ವರ್ಗದವರಿಗೆ ಏನು ಕೊಡುಗೆ ನೀಡಿದ್ದಾರೆಂದು ಪ್ರಶ್ನಿಸಿದರು.

      ಸಿದ್ದರಾಮಯ್ಯನವರು ಅಧಿಕಾರದಲ್ಲಿದ್ದಾಗ, ಸುಮಾರು 300 ಕೋಟಿಗೂ ಹೆಚ್ಚು ಅನುದಾನ ಖರ್ಚು ಮಾಡಿ, ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿಯ ಜಾತಿವಾರು ಜನಗಣತಿ ನಡೆಸಿದ್ದರು. ಈ ಜನಗಣತಿಯ ಆಧಾರದ ಮೇಲೆ ಸೌಲಭ್ಯ ಕಲ್ಪಿಸುವುದಾಗಿಯೂ ಹೇಳಿದ್ದರು. ಆದರೆ, ಕಾಂಗ್ರೆಸ್ ಹೈಕಮಾಂಡ್ ಒತ್ತಡಕ್ಕೆ ಮಣಿದ ಸಿದ್ದರಾಮಯ್ಯ ಜಾತಿವಾರು ಜನಗಣತಿಯ ವರದಿಯನ್ನು ಬಿಡುಗಡೆ ಮಾಡದೇ, ಹಾಗೆಯೇ ಮುಚ್ಚಿಟ್ಟಿದ್ದಾರೆಂದು ಆರೋಪಿಸಿದರು.

      ಹಿಂದುಳಿದ ವರ್ಗಗಳ ಬಗ್ಗೆ ಮೊಸಳೆ ಕಣ್ಣೀರು ಸುರಿಸುವ ಸಿದ್ದರಾಮಯ್ಯನವರು ಹಿಂದುಳಿದ ವರ್ಗಕ್ಕೆ ಪ್ರಸ್ತುತ ಇರುವ ಶೇ.50ರಷ್ಟು ಮೀಸಲಾತಿಯನ್ನು ಶೇ.75 ರಷ್ಟು ಹೆಚ್ಚಿಸುವುದಾಗಿ ಹೇಳಿಕೊಂಡೇ ಕಾಲ ಕಳೆದರು. ಆದರೆ, ಪ್ರಧಾನಿ ನರೇಂದ್ರ ಮೋದಿ ಹಿಂದುಳಿದವರಿಗಿದ್ದ ಮೀಸಲಾತಿಯನ್ನು ಶೇ.50ರಿಂದ 60ಕ್ಕೆ ಹೆಚ್ಚಿಸಿದ್ದಾರೆ. ಇತರೆ ಹಿಂದುಳಿದ ವರ್ಗಗಳಲ್ಲಿರುವ ಕಟ್ಟಕಡೆಯ ವ್ಯಕ್ತಿಗೂ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಗಾಂಧಿ ಜಯಂತಿಯಂದು ನ್ಯಾಯಮೂರ್ತಿ ಜಿ.ರೋಹಿಣಿ ಅವರ ನೇತೃತ್ವದಲ್ಲಿ ಸಮಿತಿ ರಚಿಸಿದ್ದಾರೆ. ಇದು ಸಾಮಾಜಿಕ ನ್ಯಾಯದ ಕಡೆಗೆ ಇಡುವ ಹೆಜ್ಜೆ ಎಂದರು.

      ಶಾಶ್ವತ ಹಿಂದುಳಿದ ವರ್ಗಗಳ ಆಯೋಗಕ್ಕೆ ಮೋದಿ ಸರ್ಕಾರ ಸಾಂವಿಧಾನಿಕ ಸ್ಥಾನಮಾನ ನೀಡಿದೆ ಎಂದ ಅವರು, ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸುವ ಉದ್ದೇಶದಿಂದ ಮೋರಾರ್ಜಿ ದೇಸಾಯಿ ನೇಮಿಸಿದ್ದ ಮಂಡಲ್ ಕಮಿಷನ್‍ಗೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿತ್ತು. ಮಂಡಲ್ ಕಮಿಷನ್ ವರದಿಯನ್ನು ಇಂದಿರಾಗಾಂಧಿ ಹಾಗೂ ರಾಜೀವ್ ಗಾಂಧಿ ಸರ್ಕಾರ ಅನುಷ್ಠಾನ ಗೊಳಿಸದೇ ಕಸದ ಬುಟ್ಟಿಗೆ ಹಾಕಿತ್ತು. ಆದರೆ, ನಂತರ ಬಿಜೆಪಿ ಬೆಂಬಲದೊಂದಿಗೆ ಅಧಿಕಾರಕ್ಕೆ ಬಂದ ವಿ.ಪಿ.ಸಿಂಗ್ ಸರ್ಕಾರ ವರದಿಯನ್ನು ಅನುಷ್ಠಾನಗೊಳಿಸಿತು. ಹೀಗಾಗಿ ಕಾಂಗ್ರೆಸ್‍ಗೆ ಹಿಂದುಳಿದ ವರ್ಗದವರ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ ಎಂದು ಆರೋಪಿಸಿದರು.

       ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಮಾತನಾಡಿ, ಕಾಂಗ್ರೆಸ್ ಸಮಾಜವನ್ನು ಒಡೆದು, ಅಧಿಕಾರಕ್ಕೆ ಬರಲು ಹವಣಿಸುತ್ತಿದೆ. ಪ್ರಧಾನಿ ಮೋದಿಯವರು ಸಹ ಹಿಂದುಳಿದ ವರ್ಗದವರಾಗಿದ್ದು, ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಹಿಂದುಳಿದ ವರ್ಗದವರು ಸೇರಿದಂತೆ ಎಲ್ಲಾ ವರ್ಗದವರು ಸಂಕಲ್ಪ ಮಾಡಿದ್ದಾರೆಂದು ಹೇಳಿದರು.

      ಬಿಜೆಪಿಯ ಜೊತೆಯಲ್ಲಿ ಹಿಂದುಳಿದ ವರ್ಗದವರ ದಂಡೇ ಇದ್ದು, ಸಮಾಜವನ್ನು ಒಡೆದಾಳುವ ಕಾಂಗ್ರೆಸ್ ಕನಸು ನನಸಾಗುವುದಿಲ್ಲ. ದೇಶದ ಅಭಿವೃದ್ಧಿಗಾಗಿ ಹಾಗೂ ಭದ್ರತೆಗಾಗಿ ಹಿಂದುಳಿದವರು ಬಿಜೆಪಿಯ ಜೊತೆಗೆ ಇದ್ದಾರೆ ಎಂದರು.ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಹೆಚ್.ಸಿ.ಜಯಮ್ಮ, ಜಿಲ್ಲಾ ಬಿಜೆಪಿ ಖಜಾಂಚಿ ಕೆ.ಹೇಮಂತಕುಮಾರ್, ಜಿಲ್ಲಾ ಎಸ್ಸಿ ಮೋರ್ಚಾ ಅಧ್ಯಕ್ಷ ಎಲ್.ಡಿ.ಗೋಣೆಪ್ಪ, ಕೆ.ಪ್ರಸನ್ನಕುಮಾರ್, ಧನುಷ್‍ರೆಡ್ಡಿ ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link