ಹಾಳು ಕೊಂಪೆಯಾದ ಹಿರಣ್ಣಯ್ಯ ಬಯಲು ರಂಗಮಂದಿರ..!

ತುರುವೆಕೆರೆ:

    ಪಟ್ಟಣದ ಪ್ರತಿಷ್ಟಿತ ಕೆ.ಹಿರಣ್ಣಯ್ಯ ಬಯಲು ರಂಗಮಂದಿರ ಇದೀಗ ಪಾಳು ಕೊಂಪೆಯಂತಾಗಿದ್ದು ಇದಕ್ಕೆ ತಾಲ್ಲೂಕು ಆಡಳಿತದ ನಿರ್ಲಕ್ಷ್ಯವೇ ಕಾರಣ ಎಂಬುದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.ವರ್ಷಕ್ಕೊಮ್ಮೆ ನಡೆಯುವ ಶಿಕ್ಷಕರ ದಿನಾಚರಣೆ ಸಂಧರ್ಭದಲ್ಲಿ ಮಾತ್ರ ನೆನಪಾಗುವ ಈ ರಂಗ ಮಂದಿರ ಮತ್ತೆ ನೆನಪಾಗುವುದು ಮುಂದಿನ ಶಿಕ್ಷಕರ ದಿನಾಚರಣೆಯಲ್ಲಷ್ಟೇ.

ಹಿನ್ನಲೆ:

    ನಮ್ಮ ತಾಲ್ಲೂಕಿನವರೇ ಅದ ಕಣತೂರಿನ ದಿ|| ನಟರತ್ನಾಕರ ಮಾಸ್ಟರ್ ಹಿರಣ್ಣಯ್ಯ ಅವರ ತಂದೆ ಕಲ್ಚರ್ ಕಮೆಡಿಯನ್ ಕೆ.ಹಿರಣ್ಣಯ್ಯ ಅವರ ಜ್ಞಾಪಕಾರ್ಥವಾಗಿ 1990 ರಲ್ಲಿ ಕಟ್ಟಿದ ಈ ರಂಗಮಂದಿರ ಅಂದಿನ ದಿನಗಳಲ್ಲಿ ತುರುವೇಕೆರೆ ತಾಲ್ಲೂಕ್ ಕಲಾವಿದರಿಂದ ಮೇಳೈಸುತ್ತಿದ್ದ ರಂಗಭೂಮಿಯಿದು.

     ಕಾಲಾನಂತರ ತಾಲ್ಲೂಕು ಆಡಳಿತ ನಿರ್ಲಕ್ಷ್ಯಕ್ಕೆ ಒಳಗಾಗಿ ತನ್ನ ಬಣ್ಣ (ಅಸ್ಥಿತ್ವ) ಕಳೆದುಕೊಳ್ಳುತ್ತಾ ಬಂತು. ನಂತರ 2010 ರಲ್ಲಿ ಅಂದಿನ ಜಿಲ್ಲಾಧಿಕಾರಿ ಡಾ.ಸೋಮಶೇಖರ್ 7 ಲಕ್ಷ ಅನುಧಾನ ನೀಡಿದರಲ್ಲದೆ ತಮ್ಮ ನೇತೃತ್ವದಲ್ಲಿ ಮತ್ತೆ ರಂಗಮಂದಿರ ನವೀಕರಿಸಿ ನಟರತ್ನಾಕರ ಮಾಸ್ಟರ್ ಹಿರಣ್ಣಯ್ಯ ಅವರಿಂದ ಉಧ್ಘಾಟನೆ ಮಾಡಿಸಿದರು.

     ತದ ನಂತರ ಅಂದಿನ ಶಾಸಕರಾದ ಎಂ.ಟಿ.ಕೃಷ್ಣಪ್ಪನವರು 20 ಲಕ್ಷ ಅನುಧಾನದಲ್ಲಿ ಮಂದಿರ ಮುಂಬಾಗದ ಮೇಲ್ಚಾವಣಿ ಹೊದಿಕೆ ಹಾಕಿಸಿ ನೆಲಕ್ಕೆ ಸಿಮೆಂಟ್ ಹಾಸುಗೆ ಹಾಕಿಸಿದ್ದರು. ಆದರೂ ಸಹಾ ಯವುದೇ ಪ್ರಯೋಜನವಾಗಿಲ್ಲ. ಇಲ್ಲಿ ಯಾವುದೇ ನಾಟಕಗಳು ನಡೆಯುತ್ತಿಲ್ಲ.

    ತಾಲ್ಲೂಕಿನಲ್ಲಿ ಅನೇಕ ಕಲಾವಿದರ ಸಂಘಗಳಿದ್ದರೂ ಸಹಾ ಯಾರೂ ಇತ್ತ ಗಮನ ಹರಿಸದಿದ್ದುದು ಶೋಚನೀಯ ಸಂಗತಿ. ಕೇವಲ ಹೆಸರಿಗೆ ಮಾತ್ರ ರಂಗ ಮಂದಿರ. ಈ ರಂಗ ಮಂದಿರವನ್ನು ಕಲಾವಿದರು ಉಪಯೋಗಿಸುವುದೇ ವಿರಳ. ಮಂದಿರದೊಳಗೆ ಸದ್ಯಕ್ಕೆ ನಾಟಕದ ಪರದೆಗಳನ್ನು ಪೈಂಟ್ ಮಾಡುವ ಸಲುವಾಗಿ ಬಳಸಲಾಗುತ್ತಿದೆ. ಮಕ್ಕಳುಗಳ ಆಟದಿಂದಾಗಿ ರಂಗಮಂದಿರದ ಕಬ್ಬಿಣದ ಗೇಟ್‍ಗಳು ಬೆಂಡಾಗಿ, ರಂಗಮಂದಿರದ ನೆಲಹಾಸಿನ ಟೈಲ್ಸ್‍ಗಳು ಒಡೆದಿವೆ. ರಂಗಮಂದಿರದ ಮುಂಬಾಗ ಕೊಳಚೆ ನೀರು ಮತ್ತು ತ್ಯಾಜ್ಯ ವಸ್ತುಗಳಿಂದ ಅನೈರ್ಮಲ್ಯತೆ ಎದ್ದು ಕಾಣಿಸುತ್ತಿದೆ.

ಈಗಿನ ಸ್ಥಿತಿ:

       ಒಂದು ಕಾಲದಲ್ಲಿ ರಂಗಾಸಕ್ತರಿಂದ ವಿರಾಜಮಾನವಾಗಿದ್ದ ಕೆ.ಹಿರಣ್ಣಯ್ಯ ಬಯಲು ರಂಗಮಂದಿರ ಇಂದು ಕಾರು, ಬೈಕು, ಸೈಕಲ್ಲುಗಳ ನಿಲ್ದಾಣವಾಗಿದೆ. ಇಲ್ಲಿ ಎಷ್ಟು ದಿನ ನಿಲ್ಲಿಸಿದರೂ ಈ ಸ್ಥಳದಲ್ಲಿ ಯಾವುದೇ ಶುಲ್ಕವಿಲ್ಲ. ಯಾಕೆ ನಿಲ್ಲಿಸಿದ್ದೀರಿ ಎಂದು ಕೇಳುವವರಿಲ್ಲ. ದೂರದೂರುಗಳಿಗೆ ಹೊಗುವವರು ತಮ್ಮ ವಾಹನಗಳನ್ನು ತಂದು ಈ ಸ್ಥಳ ಸುರಕ್ಷಿತ ಸ್ಥಳವೆಂದು ಇಲ್ಲಿ ನಿಲ್ಲಿಸಿ ಹೋಗುತ್ತಾರೆ. ಇನ್ನು ಮನೆ ಮುಂದೆ ಕಾರು ನಿಲ್ಲಿಸಲು ಸ್ಥಳಾವಕಾಶವಿಲ್ಲದ ಪಟ್ಟಣದ ಅದೆಷ್ಟೋ ನಾಗರೀಕರು ನಿರಾಯಾಸವಾಗಿ ಈ ಸ್ಥಳವನ್ನು ವಾಹನ ಪಾರ್ಕಿಂಗ್ ಆಗಿ ಮಾಡಿಕೊಂಡಿದ್ದಾರೆ.

      ಇನ್ನೂ ಮಳೆಗಾಲದಲ್ಲಿ ಸಿಮೆಂಟ್ ಇತ್ಯಾದಿ ಮಳೆಯಲ್ಲಿ ನೆನೆಯುವಂತ ಪಾರ್ಸಲ್ ವಸ್ತುಗಳನ್ನು ತುಂಬಿ ಬಂದ ಲಾರಿಗಳು ಅಂಗಡಿ ಬಂದಾದ ಸಂಧರ್ಬದಲ್ಲಿ ಸರಿಹೊತ್ತಿನಲ್ಲಿ ಬಂದುವೆಂದರೆ ಅವೂ ಸಹಾ ಈ ಅವರಣದಲ್ಲಿಯೇ ಆಶ್ರಯ ಪಡೆದು ತಾತ್ಕಾಲಿಕ ಉಗ್ರಾಣವಾಗಿದೆ. ಒಗೆದ ಬಟ್ಟೆಗಳನ್ನು ಇದೇ ಸ್ಥಳದಲ್ಲಿಯೇ ಒಣಗಿಸುತ್ತಾರೆ. ಹಗಲೆಲ್ಲಾ ಕೂಲಿ ಮಾಡಿ ರಾತ್ರಿ ಕಂಠ ಪೂರ್ತಿ ಕುಡಿದು ಬರುವ ನಿರ್ಗತಿಕರಿಗೆ ತಂಗಲು ಈ ಸ್ಥಳ ಹೇಳಿ ಮಾಡಿಸಿದಂತ ಆಶ್ರಯತಾಣವಾಗಿದೆ.

      ಒಟ್ಟಿನಲ್ಲಿ ಕೆ.ಹಿರಣ್ಣಯ್ಯ ಬಯಲು ರಂಗ ಮಂದಿರ ಇಷ್ಟೆಲ್ಲಾ ಸಮಸ್ಯೆಗಳನ್ನು ತನ್ನ ಒಡಲಿನಲ್ಲಿ ತುಂಬಿಕೊಂಡು ಅವಸಾನದತ್ತ ಸಾಗುತ್ತಿದ್ದರೂ ಕಣ್ಮುಚ್ಚಿ ಕುಳಿತಿರುವ ತಾಲ್ಲೂಕು ಆಡಳಿತ ಇನ್ನಾದರೂ ಎಚ್ಚೆತ್ತುಕೊಂಡು ರಂಗ ಮಂದಿರದ ಮರು ನಿರ್ವಹಣೆ ಮಾಡಿ ರಂಗಕಲಾವಿದರಿಗೆ ಅನುವು ಮಾಡಿಕೊಡುವುದರ ಮೂಲಕ ಹೆಚ್ಚು ಹೆಚ್ಚು ಸಾಂಸ್ಕೃತಿಕ ಕಾರ್ಯಕ್ರಮಗಳು ಈ ಸ್ಥಳದಲ್ಲಿ ನಡೆಯಲು ಅನುಕೂಲ ಕಲ್ಪಿಸಿಕೊಡಲಿ ಎಂಬುದು ನಾಗರೀಕರ ಆಶಯವಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap