ಚಿತ್ರದುರ್ಗ:
ಐತಿಹಾಸಿಕ ಚಿತ್ರದುರ್ಗದಲ್ಲಿ ಭರಮಣ್ಣನಾಯಕ ಆಳ್ವಿಕೆ ನಡೆಸುತ್ತಿದ್ದ ಕಾಲದಲ್ಲಿ ತಮಿಳುನಾಡಿನಿಂದ ಆಗಮಿಸಿದ ಶಾಂತವೀರ ಮುರಿಘೆಸ್ವಾಮಿಗಳನ್ನು ಚಿತ್ರದುರ್ಗದಲ್ಲಿ ಉಳಿಸಿಕೊಂಡು ಮಠಗಳನ್ನು ಕಟ್ಟಿಸಿಕೊಟ್ಟು ಸಲಹೆ ಮಾರ್ಗದರ್ಶನ ಪಡೆಯುತ್ತಿದ್ದರು. ಆದರೆ ಕೆಲವು ಇತಿಹಾಸ ಸಂಶೋಧಕರು ಚಿತ್ರದುರ್ಗದ ಇತಿಹಾಸವನ್ನು ತಿರುಚಿ ಕಳಂಕ ತರುತ್ತಿದ್ದಾರೆ. ನಿಜವಾದ ಇತಿಹಾಸ ಅಧ್ಯಯನ ನಡೆಸಿ ನೈಜ ಇತಿಹಾಸವನ್ನು ಬೆಳಕಿಗೆ ತರಬೇಕೆಂದು ರಾಜ ವಂಶಸ್ಥರಾದ ರಾಜಮದಕರಿ ಜಯಚಂದ್ರನಾಯಕ ಆಗ್ರಹಿಸಿದರು.
ಚಿತ್ರದುರ್ಗದ ಕೋಟೆಯಲ್ಲಿ ಸೋಮವಾರ ನಡೆದ ರಾಜ ಬಿಚ್ಚುಗತ್ತಿ ಭರಮಣ್ಣ ನಾಯಕರ 298 ನೇಪುಣ್ಯಸ್ಮರಣೆಯಲ್ಲಿ ಭಾಗವಹಿಸಿ ಮಾತನಾಡಿದರು.ಮೇ.20, 1721 ರಂದು ದೊಡ್ಡೇರಿ ಕಾಳಗದಲ್ಲಿ ಗಾಯಗೊಂಡು ವೀರಮರಣ ಹೊಂದಿದ ರಾಜ ಬಿಚ್ಚುಗತ್ತಿ ಭರಮಣ್ಣ ನಾಯಕರ ಅಂತ್ಯಕ್ರಿಯೆ ಕೋಟೆಯ ಕಸ್ತೂರಿ ರಂಗಪ್ಪ ನಾಯಕ ಬಾಗಿಲು ಗಣೇಶ ದೇವಸ್ಥಾನಕ್ಕೆ ಹೋಗುವ ಬಲಬದಿಯ ಭೀಮನಕಲ್ಲು ಗಿಡ್ಡಿಯಲ್ಲಿ ನಡೆಯಿತು. ಭರಮಣ್ಣ ನಾಯಕರ ಜನೋಪಕಾರಿ ಕೆಲಸ ಕಾರ್ಯಗಳು ಚಿತ್ರದುರ್ಗದ ಇತಿಹಾಸದಲ್ಲಿ ಇಂದಿಗೂ ಚಿರಸ್ಥಾಯಿಯಾಗಿ ಉಳಿದುಕೊಂಡಿದೆ.
ರಾಜಕೀಯ ಹೋರಾಟಗಳು ಈತನ ಕೆಚ್ಚು ಸಾಮಥ್ರ್ಯವನ್ನು ಸಮರ್ಥಿಸಿವೆ. ತರಿಕೆರೆ, ಬಿದನೂರು, ಆವನೂರು, ಹರಪನಹಳ್ಳಿ, ರಾಯದುರ್ಗ, ನಿಡಗಲ್ಲು, ರತ್ನಗಿರಿ ಪಾಳೆಯಗಾರರು ಚಿತ್ರದುರ್ಗ ಸಂಸ್ಥಾನದ ಅಭಿವೃದ್ದಿ ಸಂಪತ್ತು ನೋಡಿ ಸಹಿಸದೆ ನೆಪವೊಡ್ಡಿ ಆಕ್ರಮಣ ನಡೆಸುತ್ತಿದ್ದಾಗ ವೀರಪರಾಕ್ರಮಿ ಭರಮಣ್ಣನಾಯಕ ಶತ್ರುಗಳನ್ನು ಹಿಮ್ಮೆಟ್ಟಿಸಿ ಸಾಮ್ರಾಜ್ಯವನ್ನು ವಿಸ್ತರಿಸಿದರು ಎಂದು ಗುಣಗಾನ ಮಾಡಿದರು.
ಮದಕರಿನಾಯಕ ಸಾಂಸ್ಕತಿಕ ಕೇಂದ್ರದ ಅಧ್ಯಕ್ಷ ಡಿ.ಗೋಪಾಲಸ್ವಾಮಿ ನಾಯಕ ಮಾತನಾಡಿ ಚಿತ್ರದುರ್ಗದ ಕೋಟೆಯನ್ನು ಆಳಿದ ಶೂರ ರಾಜಬಿಚ್ಚುಗತ್ತಿ ಭರಮಣ್ಣ ನಾಯಕ ಕೋಟೆ, ಕೊತ್ತಲ, ಗುಡಿ, ಗೋಪುರಗಳನ್ನು ಕಟ್ಟಿಸಿದ್ದಾರೆ. ಅಣಜಿ ಕೋಟೆ, ನಲ್ಲಿಕಾಯಿ ಸಿದ್ದಪ್ಪನಕೋಟೆ, ಸಂತೆಬಾಗಿಲು ಸುತ್ತು, ಆಲೂರು ಕೋಟೆ, ಬಸವನಕೋಟೆ, ಆಲಘಟ್ಟದ ಕೋಟೆ, ಸಿದ್ದಯ್ಯನ ಕೋಟೆ, ಏಕನಾಥಿ, ಹಿಡಂಬೇಶ್ವರಿ ಬಾಗಿಲು, ಹನುಮನ ಬಾಗಿಲು, ಒನಕೆ ಕಿಂಡಿ ಬಾಗಿಲು ಇವರ ಕಾಲದಲ್ಲಿ ನಿರ್ಮಾಣವಾಯಿತು ಎಂದು ಸ್ಮರಿಸಿದರು.
ಚಿತ್ರದುರ್ಗದ ಕೆರೆ ಕಟ್ಟೆ, ಆಲುಕೋಟೆ ಬಾವಿ, ಮುರುಘಾಮಠದ ಮುಂಭಾಗ ಹಾಗೂ ಹಿಂಭಾಗದಲ್ಲಿ ಎರಡು ಅರಸನಕೆರೆ, ಭರಮಸಾಗರ, ಭೀಮಸಮುದ್ರ ಕೆರೆ, ಅಣಜಿ ಕೆರೆ, ಜಂಪಣ್ಣನಾಯಕನ ಕೋಟೆ ಕೆರೆ, ಮದಕರಿನಾಯಕ ಕೋಟೆ ಕೆರೆ, ಅನ್ನೆಹಾಳು ಗ್ರಾಮದಲ್ಲಿ ಚಿಕ್ಕಸಿದ್ದವ್ವನಾಗತಿ ಕೆರೆ ನಿರ್ಮಿಸಿ ಸಕಲ ಜೀವರಾಶಿಗಳಿಗೂ ನೀರುಣಿಸಿದ ಕೀರ್ತಿ ಬಿಚ್ಚುಗತ್ತಿ ಭರಮಣ್ಣ ನಾಯಕರಿಗೆ ಸಲ್ಲುತ್ತದೆ ಎಂದು ಹೇಳಿದರು.
ಏಕನಾಥೇಶ್ವರಿ ಪಾದಗುಡಿ, ಭೀಮೇಶ್ವರ ದೇವಸ್ಥಾನ, ಕಂಬದ ರಾಯನಗುಡಿ, ಬಂಜಗೊಂಡನಹಳ್ಳಿ, ಬಿಳಿಚೋಡಿನ ಹನುಮಂತರಾಯ ಗುಡಿ, ನೀಲಕಂಠೇಶ್ವರಸ್ವಾಮಿ ದೇವಸ್ಥಾನ, ಚಂದ್ರಮೌಳೇಶ್ವರ, ವೆಂಕಟರಮಣ ಉತ್ಸವವಾಂಭ ಗುಡಿ, ನಾಗರದೋಣಿ, ಸಂತೆಹೊಂಡ, ರಂಗಯ್ಯನಕೆರೆ, ದ್ಯಾಮವ್ವನಕೆರೆ, ಕರೆಕಲ್ಲುಹೊಂಡ, ಹೀಗೆ ಅನೇಕ ಕಡೆ ದೇವಸ್ಥಾನ, ಕೆರೆಗಳು.
ಚಿತ್ರದುರ್ಗದಲ್ಲಿ ದೊಡ್ಡ ದೊಡ್ಡ ಶೃಂಗಾರ ತೋಟ ನೂರಾರು ಜನೋಪಕಾರಿ ಕಾರ್ಯಗಳು ಬಿಚ್ಚುಗತ್ತಿ ಭರಮಣ್ಣ ನಾಯಕರ ಕಾಲದಲ್ಲಿ ನಡೆದಿವೆ. ಹಾಗಾಗಿ ಇಡೀ ಚಿತ್ರದುರ್ಗದ ಜನ ಭರಮಣ್ಣ ನಾಯಕರನ್ನು ಗೌರವಿಸುವುದು ಆದ್ಯ ಕರ್ತವ್ಯ ಎಂದು ಹೇಳಿದ ಡಿ.ಗೋಪಾಲ ಸ್ವಾಮಿ ನಾಯಕ ಚಿತ್ರದುರ್ಗ ನಗರದಲ್ಲಿ ಎಲ್ಲಿಯಾದರೂ ಬಿಚ್ಚುಗತ್ತಿ ಭರಮಣ್ಣ ನಾಯಕರ ಪ್ರತಿಮೆಯನ್ನು ಅನಾವರಣ ಗೊಳಿಸುವಂತೆ ಜಿಲ್ಲಾಡಳಿತ ಹಾಗೂ ನಗರಸಭೆಯನ್ನು ಒತ್ತಾಯಿಸಿದರು.ಸುರೇಶ್, ಮಹೇಶ್, ಕಿರಣ್ ಈ ಸಂದರ್ಭದಲ್ಲಿ ಹಾಜರಿದ್ದರು.