ಜಿಲ್ಲೆಯ 49 ಸರ್ಕಾರಿ ಶಾಲೆಗಳಲ್ಲಿ ಹೈಟೆಕ್ ಶೌಚಾಲಯ: ಸಿಇಓ

ತುಮಕೂರು
 
       ತುಮಕೂರು ಶೈಕ್ಷಣಿಕ ಜಿಲ್ಲೆಯ 22 ಹಾಗೂ ಮಧುಗಿರಿ ಶೈಕ್ಷಣಿಕ ಜಿಲ್ಲೆಯ 27 ಸೇರಿದಂತೆ ಒಟ್ಟು 49 ಸರ್ಕಾರಿ ಶಾಲೆಗಳಲ್ಲಿ ಹೈ-ಟೆಕ್ ಶೌಚಾಲಯಗಳನ್ನು  ನಿರ್ಮಾಣ ಮಾಡಲಾಗುವುದು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾ ಕಲ್ಯಾಣ್ ತಿಳಿಸಿದರು. 
        ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿಂದು ಜರುಗಿದ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದ ಅವರು ನಗರ ಪ್ರದೇಶದ ಶಾಲೆಗಳಲ್ಲಿದ್ದಂತೆ ಗ್ರಾಮೀಣ ಪ್ರದೇಶದ ಶಾಲೆಗಳಲ್ಲಿಯೂ ಸುವ್ಯವಸ್ಥಿತ ಮಾದರಿ ಶೌಚಾಲಯಗಳನ್ನು ನಿರ್ಮಿಸಲು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು ಸ್ವಚ್ಛ ಭಾರತ್ ಮಿಷನ್(ಗ್ರಾ)ನಡಿ 49 ಶಾಲೆಗಳ ಪೈಕಿ ಪ್ರತಿ ಶಾಲೆಗೆ 2ಲಕ್ಷ ರೂ.ಗಳಂತೆ ಒಟ್ಟು 98ಲಕ್ಷ ರೂ.ಗಳನ್ನು ಈಗಾಗಲೇ ಆಯಾ ಶಾಲೆಯ ಎಸ್‍ಡಿಎಂಸಿ ಸಮಿತಿ ಖಾತೆಗೆ ಬಿಡುಗಡೆ ಮಾಡಿದೆ. 
 
       ಶೌಚಾಲಯ ನಿರ್ಮಾಣಕ್ಕೆ ಸಂಬಂಧಿಸಿದ ನೀಲನಕ್ಷೆ ಹಾಗೂ ಅಂದಾಜು ಪಟ್ಟಿ ತಯಾರಿಸಿ ಇಲಾಖೆಯ ವೆಬ್‍ಸೈಟ್‍ಗೆ ಅಪ್‍ಲೋಡ್ ಮಾಡಲಾಗುವುದು. ಆಯಾ ಶಾಲಾ ಮುಖ್ಯ ಶಿಕ್ಷಕರು ತಮ್ಮ ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷರ ಸಭೆ ಕರೆದು ಕಾಮಗಾರಿಗಳನ್ನು ತಕ್ಷಣವೇ ಪ್ರಾರಂಭಿಸಲು ಸೂಚಿಸಬೇಕು. ಶೌಚಾಲಯ ನಿರ್ಮಾಣ ಕಾಮಗಾರಿಗಳನ್ನು ಇಲಾಖೆಯ ಮಾರ್ಗಸೂಚಿಯನ್ವಯ ಕೈಗೊಳ್ಳಬೇಕು ಎಂದು ಸೂಚಿಸಿದರು. 
ರೋಟರಿ ಸಹಕಾರದಲ್ಲಿ ಹೈ-ಟೆಕ್ ಶೌಚಾಲಯ:- 
      ಶೌಚಾಲಯ ನಿರ್ಮಾಣಕ್ಕಾಗಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು ಪ್ರತಿ ಶಾಲೆಗೆ ಬಿಡುಗಡೆ ಮಾಡಿರುವ ತಲಾ 2ಲಕ್ಷ ರೂ.ಗಳ ಜೊತೆಗೆ ರೋಟರಿ ಸಂಸ್ಥೆಯು 2ಲಕ್ಷ ರೂ.ಗಳನ್ನು ನೀಡಲು ಮುಂದೆ ಬಂದಿದೆ. ಆಯಾ ಶಾಲೆಯ ಎಸ್‍ಡಿಎಂಸಿ ಸಮಿತಿಯು ಒಪ್ಪಿದಲ್ಲಿ ರೋಟರಿ ಸಂಸ್ಥೆಯ 2ಲಕ್ಷ ರೂ.ಗಳನ್ನು ಬಳಸಿಕೊಂಡು ಒಟ್ಟು 4ಲಕ್ಷ ರೂ.ಗಳ ವೆಚ್ಚದಲ್ಲಿ ಹೈ-ಟೆಕ್ ಶೌಚಾಲಯ ನಿರ್ಮಾಣ ಮಾಡಲಾಗುವುದು.
 
       ಈ ಹೈಟೆಕ್ ಶೌಚಾಲಯಗಳನ್ನು ವಿದೇಶಿ ಮಾದರಿಯಲ್ಲಿ ಟೈಲ್ಸ್ ಬಳಸಿ ವಿಶಾಲ ಅಳತೆಯಲ್ಲಿ ನಿರ್ಮಿಸಲಾಗುವುದಲ್ಲದೆ, ವಿದ್ಯಾರ್ಥಿಗಳು ಕೈತೊಳೆಯಲು ವಿಶೇಷವಾಗಿ ಪ್ರತ್ಯೇಕ ವಾಶ್-ಬೇಸಿನ್, ಗಾಳಿ-ಬೆಳಕಿನ ವ್ಯವಸ್ಥೆಯನ್ನು ಕಲ್ಪಿಸಲಾಗುವುದು.  ಶೌಚಾಲಯಗಳು ಸ್ವಚ್ಛತೆಯಿಂದ ಕೂಡಿದ್ದರೆ ಮಾತ್ರ ಮಕ್ಕಳಿಗೆ ಬಳಸಲು ಮನಸ್ಸಾಗುತ್ತದೆ.  ಈ ನಿಟ್ಟಿನಲ್ಲಿ ಎಲ್ಲಾ ಶಾಲಾ ಶೌಚಾಲಯಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕೆಂದು ಶಾಲಾ ಮುಖ್ಯೋಪಾಧ್ಯಾಯರಿಗೆ ಅವರು ಸೂಚನೆ ನೀಡಿದರು.   
       ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ ಕೃಷ್ಣಪ್ಪ ಮಾತನಾಡಿ, ಚುನಾವಣೆ ಘೋಷಣೆಯಾಗಿದ್ದರಿಂದ ಶೌಚಾಲಯ ನಿರ್ಮಾಣ ಅನುಷ್ಟಾನವನ್ನು ಶೀಘ್ರ ಕೈಗೊಳ್ಳಲಾಗಲಿಲ್ಲ.  ಜಿಲ್ಲೆಯ ಕೆಲವು ಶಾಲೆಗಳಲ್ಲಿ ನೀರಿನ ಅವ್ಯವಸ್ಥೆ, ಸಮರ್ಪಕ ಶೌಚಾಲಯ ನಿರ್ವಹಣೆ ಇಲ್ಲದಿರುವುದರಿಂದ ಶೌಚಾಲಯಗಳ ಸೂಕ್ತ ಬಳಕೆಯಾಗುತ್ತಿಲ್ಲ.  ಶಾಲಾ ಮುಖ್ಯೋಪಾಧ್ಯಾಯರು ಪ್ರತಿದಿನ ಶೌಚಾಲಯ ಸ್ವಚ್ಛತೆಯನ್ನು ಪರಿಶೀಲಿಸುವ ಅಭ್ಯಾಸ ರೂಢಿಸಿಕೊಳ್ಳಬೇಕು.
 
       ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶಿಕ್ಷಣ ಎಷ್ಟು ಮುಖ್ಯವೋ, ಆರೋಗ್ಯವೂ ಅಷ್ಟೇ ಮುಖ್ಯ. ಶಿಕ್ಷಕರು ಮಕ್ಕಳಿಗೆ ಶೌಚಾಲಯಗಳನ್ನು ಬಳಸುವ ಮುನ್ನ ಹಾಗೂ ಬಳಸಿದ ನಂತರ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಅರಿವು ಮೂಡಿಸಬೇಕು.  ಪ್ರತಿದಿನ ಶೌಚಾಲಯ ಸ್ವಚ್ಛಗೊಳಿಸುವುದು ಪ್ರಮುಖ ಅಂಶ ಎಂದು ತಿಳಿಯದಿದ್ದಲ್ಲಿ ಎಷ್ಟೇ ಮಾದರಿ ಶೌಚಾಲಯಗಳನ್ನು ನಿರ್ಮಾಣ ಮಾಡಿದರೂ, ಸಾರ್ಥಕವಾಗುವುದಿಲ್ಲ ಎಂದು ತಿಳಿಸಿದರು. 
     ತುಮಕೂರಿನ ಶಿರಾಗೇಟ್ ಬಳಿ ಇರುವ ಅರಳೀಮರದಪಾಳ್ಯ ಸರ್ಕಾರಿ ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷ ಸಿದ್ದರಾಮಯ್ಯ ಮಾತನಾಡಿ, ಶಾಲೆಗಳಲ್ಲಿರುವ ಶೌಚಾಲಯಗಳನ್ನು ಸಮರ್ಪಕ ರೀತಿಯಲ್ಲಿ ನಿರ್ವಹಣೆ ಮಾಡಲು ಕ್ಲಸ್ಟರ್ ಮಟ್ಟದಲ್ಲಿ ಸಂಚಾರಿ ಶೌಚಾಲಯ ನಿರ್ವಹಣಾ ಸಿಬ್ಬಂದಿಯನ್ನು ನೇಮಕ ಮಾಡಬೇಕೆಂದು ಸಲಹೆ ನೀಡಿದರು. 
ಸಭೆಯಲ್ಲಿ ಡಿಡಿಪಿಐಗಳಾದ ಎಂ.ಆರ್.ಕಾಮಾಕ್ಷಿ, ರವಿಶಂಕರ್ ರೆಡ್ಡಿ, ವಿವಿಧ ಶಾಲೆಗಳ ಎಸ್‍ಡಿಎಂಸಿ ಅಧ್ಯಕ್ಷರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಾಲಾ ಮುಖ್ಯೋಪಾಧ್ಯಾಯರು, ಮತ್ತಿತರರು ಹಾಜರಿದ್ದರು. 
ಶೌಚಾಲಯ ನಿರ್ಮಾಣ ಮಂಜೂರಾದ ಶಾಲೆಗಳು:- 
        ಜಿಲ್ಲೆಯ 49 ಸರ್ಕಾರಿ ಶಾಲೆಗಳಿಗೆ ಶೌಚಾಲಯಗಳನ್ನು ನಿರ್ಮಾಣ ಮಾಡಲು ಮಂಜೂರಾತಿ ದೊರೆತಿದೆ. ಈ ಪೈಕಿ ತುಮಕೂರು ದಕ್ಷಿಣ ಜಿಲ್ಲೆ ವ್ಯಾಪ್ತಿ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಮಲಗೊಂಡನಹಳ್ಳಿ, ಆಶ್ರಿಹಾಳ್, ಚಿಕ್ಕರಾಂಪುರ, ಚಿಕ್ಕನಾಯಕನಹಳ್ಳಿ(ಉರ್ದು), ದಸೂಡಿ, ಓಟಿಕೆರೆ, ಮತಿಘಟ್ಟ, ಮರೆನಡುಪಾಳ್ಯ ಹಾಗೂ ಬೆಳ್ಳಾರ; ಗುಬ್ಬಿ ತಾಲ್ಲೂಕಿನ ಚಿಕ್ಕಹೆಡಗೆಹಳ್ಳಿ, ಹರದಗೆರೆಗೊಲ್ಲರಹಟ್ಟಿ, ಗುಡ್ಡದಹಳ್ಳಿಹಟ್ಟಿ; ಕುಣಿಗಲ್ ತಾಲ್ಲೂಕಿನ ಕೋಡಿಪಾಳ್ಯ(ಉರ್ದು), ಮಾಗಡಿಪಾಳ್ಯ(ಉರ್ದು); ತಿಪಟೂರು ತಾಲ್ಲೂಕಿನ ಚಿಕ್ಕಮಾರ್ಪನಹಳ್ಳಿ, ರಂಗಾಪುರ;ತುಮಕೂರು ತಾಲ್ಲೂಕಿನ ಸಿರವಾರ, ಜಕ್ಕೇನಹಳ್ಳಿ, ಕ್ಯಾತ್ಸಂದ್ರ, ಅರಳೀಮರದಪಾಳ್ಯ, ಹೆಗ್ಗೆರೆ, ಬೆಳಧರ; ಮಧುಗಿರಿ ಶೈಕ್ಷಣಿಕ ಜಿಲ್ಲೆ ವ್ಯಾಪ್ತಿ
      ಕೊರಟಗೆರೆ ತಾಲ್ಲೂಕು ಸಿ.ಎನ್.ದುರ್ಗ, ಶಕುನಿತಿಮ್ಮನಹಳ್ಳಿ, ಕಾಟೇನಹಳ್ಳಿ, ಎಂ.ವೆಂಕಟಾಪುರ, ನೇಗಲಾಲ, ಹೊಸಕೋಟೆ, ಮಲ್ಲೇಕಾವು, ಎಲೆರಾಂಪುರ, ಹೊಳವನಹಳ್ಳಿ; ಪಾವಗಡ ತಾಲ್ಲೂಕಿನ ದಾಸರಮ್ಮನಹಳ್ಳಿ, ಹನುಮಂತನಹಳ್ಳಿ, ಚಿಕ್ಕಜಾಲೋಡು, ಜೆ.ಅಚ್ಚಮ್ಮನಹಳ್ಳಿ, ಕೊಡಮಡಗು, ಅರಸೀಕೆರೆ,
    ಪಾವಗಡ; ಮಧುಗಿರಿ ತಾಲ್ಲೂಕಿನ ಮಧುಗಿರಿ, ಎಂ.ಎನ್.ಕೆರೆ, ಹುಣಸವಾಡಿ, ಕವನದಾಳ, ಯೆಲ್ಕೂರ್, ತಿಪ್ಪಾಪುರ, ದೊಡ್ಡಮಾಲೂರು; ಶಿರಾ ತಾಲ್ಲೂಕಿನ ಬೆಂಚೆ, ಹುಲಿದೊರೆಕಾವಲ್, ಕೆಂಪನಹಳ್ಳಿ, ದೊಡ್ಡಅಗ್ರಹಾರ ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ ನಿರ್ಮಾಣಕ್ಕೆ ಮಂಜೂರಾತಿ ದೊರೆತಿದ್ದು, ಪ್ರತಿ ಶಾಲೆಗೆ ತಲಾ 2ಲಕ್ಷ ರೂ.ಗಳಂತೆ  ಅನುದಾನ ಬಿಡುಗಡೆ ಮಾಡಲಾಗಿದೆ. 
   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap