ಬೆಂಗಳೂರು
ಡ್ರಗ್ ದಂಧೆಯ ಬಗ್ಗೆ ಯಾವ ಮೂಲಗಳಿಂದಲೂ ಮಾಹಿತಿ ಬಂದರೂ ಅದನ್ನು ಗಂಭೀರವಾಗಿ ಪರಿಗಣಿಸುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡ್ರಗ್ಸ್ ದಂಧೆ ವಿರುದ್ಧ ಸಮರ ರಾಜ್ಯವ್ಯಾಪಿ ನಡೆಯುತ್ತಿದೆ. ಕಲಬುರಗಿಯಲ್ಲಿ 1350 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಕಲಬುರಗಿ, ಬೆಂಗಳೂರು, ಬೀದರ್ ಪೊಲೀಸರ ಸಹಕಾರದಿಂದ ಈ ಕಾರ್ಯಾಚರಣೆ ನಡೆದಿದೆ. ಈ ಕಾರ್ಯಾಚರಣೆ ಮುಂದುವರೆಯಲಿದೆ. ಜಡ್ಡು ಗಟ್ಟಿದ ಡ್ರಗ್ ದಂಧೆ ವಿರುದ್ಧ ನಿರಂತರ ಹೋರಾಟ ನಡೆಯಲಿದೆ. ಯಾವ ಮೂಲಗಳಿಂದ ಮಾಹಿತಿ ಬಂದರೂ ಗಂಭೀರವಾಗಿ ಪರಿಗಣಿಸಲು ಪೊಲೀಸರಿಗೆ ಸೂಚಿಸಿದ್ದೇನೆ. ಮಾಧ್ಯಮಗಳಲ್ಲಿ ಬರುವ ಸುದ್ದಿಗಳನ್ನೂ ಪರಿಗಣಿಸುವಂತೆ ಸೂಚಿಸಿದ್ದೇನೆ. ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ ಎಂದು ಬೊಮ್ಮಾಯಿ ಹೇಳಿದರು.
ಶಾಸಕ ಜಮೀರ್ ಖಾನ್ ಬಂಧನ ಯಾಕೆ ಇನ್ನೂ ಆಗಿಲ್ಲ ಎಂಬ ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ಪ್ರತಿಕ್ರಿಯಿಸಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ದಂಧೆಯಲ್ಲಿ ಯಾವುದೇ ಮೂಲದಿಂದ ಯಾರ ಹೆಸರು ಕೇಳಿ ಬಂದರೂ ತನಿಖೆ ಮಾಡುವಂತೆ ಪೊಲೀಸರಿಗೆ ಸೂಚಿಸಿದ್ದೇನೆ ಎಂದು ಶಾಸಕ ಜಮೀರ್ ಹೆಸರು ಪ್ರಸ್ತಾಪಿಸದೇ ಬೊಮ್ಮಾಯಿ ಹೇಳಿದರು.
ಡ್ರಗ್ಸ್ ಪ್ರಕರಣದ ಆರೋಪಿ ವೀರೇನ್ ಖನ್ನಾ ಆಸ್ತಿ ಸಂಬಂಧ ಜಾರಿ ನಿರ್ದೇಶನಾಲಯ ಮಧ್ಯಪ್ರವೇಶಿಸಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವರು, ಡ್ರಗ್ಸ್ ದಂಧೆಯಲ್ಲಿ ಹಣಕಾಸು ಆಯಾಮವೂ ಇದೆ. ದೇಶದ ಹೊರಗೆ ಇರುವವರ ಸಂಬಂಧಗಳನ್ನೂ ಹೊಂದಿರುವ ಶಂಕೆ ಇದೆ. ಇತರೇ ವ್ಯವಹಾರಗಳನ್ನು ನಡೆಸುವವರ ಜತೆಗೂ ಡ್ರಗ್ಸ್ ದಂಧೆ ಸಂಬಂಧ ಹೊಂದಿದೆ. ಹವಾಲಾ ಸಂಬಂಧವೂ ಇದೆ. ಈ ಎಲ್ಲ ಆಯಾಮಗಳನ್ನು ಪುರ್ಣವಾಗಿ ತನಿಖೆ ನಡೆಸಲು ಇ.ಡಿ.ಬಂದಿದೆ. ಇಡಿ ಪಾತ್ರ ಬಹಳ ಮುಖ್ಯವಾಗಿದೆ. ನಿನ್ನೆ ಇಡಿಯವರು ಬಂದು ಅವರ ವ್ಯಾಪ್ತಿಯ ವಿಷಯಗಳ ತನಿಖೆ ಆರಂಭಿಸಿದ್ದಾರೆ ಎಂದು ಬೊಮ್ಮಾಯಿ ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
