ಹಾವೇರಿ
ಜಿಲ್ಲೆಯಲ್ಲಿ ಕಳೆದ ಮೂರು ದಿನಗಳ ವ್ಯಾಪಕ ಮಳೆ ಹಾಗೂ ಪ್ರವಾಹದಿಂದ ಹಾನಿಗೊಳಗಾದ ಮನೆಗಳ ಸಮೀಕ್ಷೆ ಹಾಗೂ ಬೆಳೆಹಾನಿ ಪ್ರಾಥಮಿಕ ಸಮೀಕ್ಷೆ ನಡೆಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮನೆ ಹಾನಿಗೆ ತಕ್ಷಣವೇ ರೂ.10 ಸಾವಿರ ಪರಿಹಾರ ನೀಡಲಾಗುವುದು ಎಂದು ಗೃಹ ಸಚಿವರು ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಸವರಾಜ ಬೊಮ್ಮಾಯಿ ಅವರು ಹೇಳಿದರು.
ಶನಿವಾರ ಹಾನಗಲ್ ತಾಲೂಕು ಕೂಡಲ ಹಾಗೂ ಸವಣೂರ ತಾಲೂಕು ಕುಣಿಮೆಳ್ಳಿಹಳ್ಳಿ ಗ್ರಾಮಗಳ ಮಳೆ ಹಾಗೂ ಪ್ರವಾಹದಿಂದ ಸಂಭವಿಸಿದ ಹಾನಿಯ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದವರು ಮಾಧ್ಯಮದರೊಂದಿಗೆ ಮಾತನಾಡಿದರು.ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಆಗಸ್ಟ್ ತಿಂಗಳ ವಾಡಿಕೆ ಮಳೆಗಿಂತ ಅಧಿಕ ಪ್ರಮಾಣದಲ್ಲಿ ಮಳೆಯಾಗಿದೆ. ಗಾಳಿ ಕೂಡ ಹೆಚ್ಚಾಗಿ ಬಿಸುತ್ತಿದೆ.
ಕರಾವಳಿಯಲ್ಲಿ ಮೂರುಪಟ್ಟು ಅಧಿಕ ಪ್ರಮಾಣದಲ್ಲಿ ಗಾಳಿ ಬಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಆತಂಕ ಉಂಟಾಗಿದೆ. ಶಿಗ್ಗಾಂವ, ಸವಣೂರ ಹಾಗೂ ಹಾನಗಲ್ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮನೆಗಳು ಭಾಗಶಃ ಹಾಗೂ ಪೂರ್ಣ ಪ್ರಮಾಣದಲ್ಲಿ ಬಿದ್ದಿವೆ. ಗೋವಿನಜೋಳದ ಬೆಳೆ ನೆಲಕ್ಕುರುಳಿದೆ. ಬೆಳೆಹಾನಿಯ ಪ್ರಾಥಮಿಕ ಸರ್ವೇಗೆ ಕೃಷಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಕಳೆದಬಾರಿ ಅನುಭವದಿಂದ ನದಿಪಾತ್ರದ ಗ್ರಾಮಗಳಾದ ಕೂಡಲ, ನಾಗನೂರು, ಕುಣಿಮೆಳ್ಳಿಹಳ್ಳಿ, ತೆವರಮೆಳ್ಳಿಹಳ್ಳಿ, ಹಲಸೂರ, ಮೆಳ್ಳಾಗಟ್ಟಿ ಇತರೆ ಗ್ರಾಮಗಳ ಜನರ ರಕ್ಷಣೆಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಹಾಗೂ ಪೂರಕ ವ್ಯವಸ್ಥೆಗೆ ಸೂಚಿಸಲಾಗಿದೆ. ಕಳೆದ ಭಾರಿ ಕೂಡಲ ಮಠದಲ್ಲಿ ನೀರು ನುಗ್ಗಿತ್ತು. ಹಾಗಾಗಿ ಸಾರ್ವಜನಿಕರ ಕ್ಷಣೆಗೆ ಪೂರ್ವಭಾವಿ ವ್ಯವಸ್ಥೆ ಕೈಗೊಳ್ಳಲಾಗುವುದು ಹಾಗೂ ಇಲ್ಲಿಗೆ ಒಂದು ಎಸ್.ಡಿ.ಆರ್.ಎಫ್. ತಂಡ ಕಳುಹಿಸಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಗ್ರಾಮಗಳ ಸ್ಥಳಾಂತರ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಗ್ರಾಮಗಳ ಸ್ಥಳಾಂತರಕ್ಕೆ ಗುರುತಿಸಿದ ಜಾಗಳಿಗೆ ಜನರು ಹೋಗಲು ತಯಾರಿಲ್ಲ. ತಾವು ಇರುವ ಸ್ಥಳದಲ್ಲೇ ಮನೆ ಕಟ್ಟಿಕೊಳ್ಳಲು ಅವಕಾಶ ನೀಡಲು ಕೇಳಿಕೊಳ್ಳುತ್ತಿದ್ದಾರೆ. ಗ್ರಾಮಸ್ಥರೊಂದಿಗೆ ಚರ್ಚಿ ಅಂತಿಮ ತೀರ್ಮಾನಕೈಗೊಳ್ಳಲಾಗುವುದು. ಬರುವ ದಿನಗಳಲ್ಲಿ ಜನಸಂಖ್ಯೆ ಹೆಚ್ಚಳ ಹಾಗೂ ಪ್ರವಾಹದ ಕಾರಣದಿಂದ 8 ರಿಂದ 10 ಗ್ರಾಮಗಳ ಸ್ಥಳಾಂತರಕ್ಕೆ ಜಾಗ ಕಾಯ್ದಿರುವುದು ಹಾಗೂ ಅಭಿವೃದ್ಧಿ ಕಾರ್ಯ ಮುಂದುವರೆದಿದೆ ಎಂದು ತಿಳಿಸಿದರು.
ಕಳೆದಸಾಲಿನಲ್ಲಿ ನೆರೆ, ಅತಿವೃಷ್ಟಿಯಿಂದ ಹಾನಿಯಾದ ಮನೆಗಳಿಗೆ ಜಿಲ್ಲೆಗೆ ಎನ್.ಡಿ.ಆರ್.ಎಫ್.ನಲ್ಲಿ ರೂ.38 ಕೋಟಿ ಅನುದಾನ ಬಿಡುಗಡೆಯಾಗಿದೆ. ರಾಜೀವಗಾಂಧಿ ಹೌಸಿಂಗ್ ಬೋರ್ಡ್‍ನಿಂದ ಸೋಮವಾರದಿಂದ ಹಣ ಬಿಡುಗಡೆಯಾಗಲಿದೆ ಎಂದು ತಿಳಿಸಿದರು.
ಕೋವಿಡ್ ಸೋಂಕಿತರಿಗೆ ವಿಶೇಷ ಕೋವಿಡ್ ಸೆಂಟರ್, ಬೆಡ್ ಕಾಯ್ದಿರಿಸುವಿಕೆ, ಕೂಡಲೇ ಪರೀಕ್ಷೆ, ಹಣಕಾಸು ನೆರವು ಹಾಗೂ ಕುಟುಂಬ ರಕ್ಷಣೆ ವ್ಯವಸ್ಥೆಗೆ ಮುಂಜಾಗ್ರತಾ ಕ್ರಮಕೈಗೊಳ್ಳಲಾಗಿದೆ. ಪಾಸಿಟಿವ್ ದೃಢಪಟ್ಟ ಅಧಿಕಾರಿ ಹಾಗೂ ಸಿಬ್ಬಂದಿಗಳು ಗುಣಮುಖರಾಗಿ ಮನೆಗಳಿಗೆ ತೆರಳಿದ್ದಾರೆ ಎಂದು ಮಾಧ್ಯಮದವರು ಈ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದರು.
ಯೂರಿಯಾ ಗೊಬ್ಬರ ಸಮಸ್ಯೆ ಬಗೆಹರಿಸಲು ಕೃಷಿ ಸಚಿವರು ಹಾಗೂ ಕೇಂದ್ರ ಫರ್ಟಿಲೈಸರ್ ಸಚಿವರೊಂದಿಗೆ ಮಾತನಾಡಿದ್ದೇನೆ. ಮಕ್ಕೆಜೋಳ ಬೆಳೆದ ಪ್ರತಿ ಜಿಲ್ಲೆಗೆ ಕನಿಷ್ಠ ಐದು ಸಾವಿರ ಟನ್ ಪೂರೈಸಲು ತೀರ್ಮಾನಿಸಲಾಗಿದೆ ಹಾಗೂ 15 ರೇಖಗಳು ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ. ಸೋಮವಾರ ದಾವಣಗೆರೆ ರೇಖ ಬರುತ್ತಿದ್ದು, ಎಂ.ಸಿ.ಎ.ಯಿಂದ ರೈಲ್ವೆ ಹಾಗೂ ರಸ್ತೆ ಮೂಲಕ ಯೂರಿಯಾ ಬರಲಿದ್ದು, ಎಲ್ಲ ಸೊಸೈಟಿಗಳ ಮೂಲಕ ವಿತರಣೆಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಸ್ಥಳೀಯರೊಂದಿಗೆ ಚರ್ಚೆ: ಅತಿವೃಷ್ಟಿ ಬಾಧಿತ ನರೇಗಲ್, ಕೂಡಲ, ಕುಣಿಮೆಳ್ಳಿಹಳ್ಳಿ ಗ್ರಾಮಗಳಿಗೆ ವರದಾ ನದಿಯ ಪ್ರವಾಹ ಹಾಗೂ ಬೆಳೆಹಾನಿ ಪ್ರದೇಶ ಹಾಗೂ ಮನೆ ಹಾನಿ ಸ್ಥಳಗಳಿಗೆ ಭೇಟಿ ನೀಡಿ ಸ್ಥಳೀಯರಿಂದ ಮಾಹಿತಿ ಪಡೆದರು. ಶೀಘ್ರವೇ ಮನೆಹಾನಿಗೆ ಪರಿಹಾರ ಒದಗಿಸಲಾಗುವುದ. ಅಪಾಯದ ಮಟ್ಟ ಹೆಚ್ಚಾದರೆ ಸ್ಥಳಾಂತಕ್ಕೆ ಸೂಕ್ತ ವ್ಯವಸ್ಥೆ ಮಾಡಲಾಗುವುದು. ಹಾನಿಯಾದ ಬೆಳೆಯ ಸಮೀಕ್ಷೆಗೆ ಈಗಾಗಲೇ ಕೃಷಿ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಮಾಧಾನಪಡಿಸಿದರು.ಸಂಸದ ಶಿವಕುಮಾರ ಉದಾಸಿ, ಶಾಸಕರಾದ ವಿರುಪಾಕ್ಷಪ್ಪ ಬಳ್ಳಾರಿ, ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣನವರ, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಣಾಧಿಕಾರಿ ರಮೇಶ ದೇಸಾಯಿ ಇತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
