ಬೆಂಗಳೂರು
ಬಿಜೆಪಿಯ ಮಾಜಿ ಸಚಿವರನ್ನು ಹನಿಟ್ರ್ಯಾಪ್ ಮಾಡಿ ಖಾಸಗಿ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡುವುದಾಗಿ ಬೆದರಿಕೆಯೊಡ್ಡಿ ಕೋಟಿ ಕೋಟಿ ಹಣ ಸುಲಿಗೆಗೆ ಮುಂದಾಗಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಪರಪ್ಪನ ಅಗ್ರಹಾರದ ರಾಘವೇಂದ್ರ ಬಂಧಿತ ಆರೋಪಿಯಾಗಿದ್ದಾನೆ ಬಿಜೆಪಿಯ ಮಾಜಿ ಸಚಿವರ ಖಾಸಗಿ ವಿಡಿಯೋ ಇಟ್ಟುಕೊಂಡು ಹಣಕ್ಕಾಗಿ ಬೇಡಿಕೆ ಇಟ್ಟಿದ್ದನು. ಕಳೆದ ಒಂದು ವರ್ಷದಿಂದ ಮಾಜಿ ಸಚಿವರ ವಿಡಿಯೋ ಸೆರೆ ಹಿಡಿಯಲು ರಾಘವೇಂದ್ರ ಕಾಯುತ್ತಿದ್ದನು.
ಕೊನೆಗೆ ತನ್ನ ಗೆಳತಿ ಮೂಲಕ ಸಚಿವರ ವಿಡಿಯೋ ಸೆರೆ ಹಿಡಿದಿದ್ದನು. ವಿಡಿಯೋ ತೋರಿಸಿ ರಾಘವೇಂದ್ರ 10 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದನು. ಈ ಸಂಬಂಧ ಮಾಹಿತಿ ಪಡೆದ ಪೊಲೀಸರು ಆರೋಪಿಯನ್ನು ಬಂಧಿಸಲು ಕಾರ್ಯಾಚರಣೆ ಕೈಗೊಂಡಿದ್ದರು.
ಮೊದಲಿಗೆ ಆರೋಪಿ ಹಿನ್ನೆಲೆಯನ್ನು ಪರಿಶೀಲಿಸಿದಾಗ ರಾಘವೇಂದ್ರ ಮೊದಲಿನಿಂದಲೂ ಈ ರೀತಿಯ ಸೈಬರ್ ಕ್ರೈಂನಲ್ಲಿ ಭಾಗಿಯಾಗಿದ್ದನು ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ.ಹಾಗಾಗಿ ಶಾಸಕರ ಪರವಾಗಿ ಡೀಲ್ ಮಾಡುವ ರೀತಿ ಪೊಲೀಸರು ರಾಘವೇಂದ್ರನನ್ನು ಸಂಪರ್ಕಿಸಿದ್ದಾರೆ. ರಾಘವೇಂದ್ರ ಒಂದೇ ಕಂತಿನಲ್ಲಿ 10 ಕೋಟಿ ರೂ. ನೀಡಬೇಕೆಂದು ಬೇಡಿಕೆ ಇಟ್ಟಿದ್ದನು. ರಾಘವೇಂದ್ರ ಜೊತೆ ಮಾತನಾಡಿದ ಪೊಲೀಸರು ಆತನಿಗೆ ಹಣ ನೀಡುತ್ತೇವೆ ಎಂದು ನಂಬಿಸಿದ್ದರು. ಪೊಲೀಸರ ಮಾತನ್ನು ನಂಬಿದ್ದ ರಾಘವೇಂದ್ರ ಭೇಟಿಯಾಗಲು ಬಂದಾಗ ಆತನನ್ನು ಬಂಧಿಸಿದ್ದಾರೆ.
ಶಿವಮೊಗ್ಗ ಮೂಲದ ಆರೋಪಿ ರಾಘವೇಂದ್ರ ತಾಯಿಯೊಂದಿಗೆ ಪರಪ್ಪನ ಅಗ್ರಹಾರದಲ್ಲಿ ವಾಸವಾಗಿದ್ದನು. ಸೈಬರ್ ಕ್ರೈಂಗಳನ್ನು ಹೇಗೆ ಮಾಡಬೇಕು ಎಂಬ ಬಗ್ಗೆ ಪರಿಣಿತಿ ಹೊಂದಿದ್ದನು ಎಂಬುವುದು ಪೊಲೀಸ್ ತನಿಖೆಯ ವೇಳೆ ತಿಳಿದು ಬಂದಿದೆ.ಸಣ್ಣ ಪುಟ್ಟ ಕ್ರೈಂ ಮಾಡಿದ್ರೆ ಸ್ವಲ್ಪ ಹಣ ಸಿಗುತ್ತದೆ. ಹೆಚ್ಚು ಹಣಕ್ಕಾಗಿ ಹನಿಟ್ರ್ಯಾಪ್ ಮಾಡಲು ಮುಂದಾಗಿದ್ದನು. ತನ್ನ ಗೆಳತಿ ಮೂಲಕ ಶಾಸಕರ ಖಾಸಗಿ ವಿಡಿಯೋ ಮಾಡಿಕೊಂಡು ಬ್ಲ್ಯಾಕ್ ಮೇಲ್ ಮಾಡತೊಡಗಿದ್ದನು ಎಂಬ ಆರೋಪ ಕೇಳಿ ಬಂದಿದೆ.
ರಾಘವೇಂದ್ರ ತಾಯಿ, ನನ್ನ ಮಗ ಅಂತಹವನಲ್ಲ. ಮೊದಲಿಗೆ ಮೊಬೈಲ್ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದನು. ಅಲ್ಲಿ ಕೆಲಸದಿಂದ ಹೊರಬಂದು ಬೇರೆ ಕಡೆ ಉದ್ಯೋಗ ಹುಡುಕುತ್ತಿದ್ದಾನೆ. ರಾತ್ರಿ ಮನೆಗೆ ಬಂದ ಪೊಲೀಸರು, ಮನೆ ಪರಿಶೀಲನೆ ನಡೆಸಿದರು. ರಾತ್ರಿಯೆಲ್ಲ ಮನೆಯಲ್ಲಿಯೇ ಕುಳಿತಿದ್ದರೂ, ನಮಗೆ ಏನೂ ಹೇಳಲಿಲ್ಲ. ಮೊಬೈಲ್ ಕಿತ್ತುಕೊಂಡು ಮಗನಿಗೆ ಬರುವಂತೆ ಹೇಳುವಂತೆ ಹೇಳಿದರು.
ಮತ್ತೆ ಬಂದು ಮನೆಯಲ್ಲಿದ್ದ ಮೆಮೊರಿ ಕಾರ್ಡ್, ಪೆನ್‌ಡ್ರೈವ್ ರೀತಿಯಲ್ಲಿರುವ ಒಂದು ವಸ್ತು ಚಿಕಿತ್ಸೆಗಾಗಿ ತೆಗೆದಿಟ್ಟಿದ್ದ 50 ಸಾವಿರ ರೂ. ಮತ್ತು ದೇವರ ಮನೆಯಲ್ಲಿಟ್ಟಿದ್ದ ಒಲೆಯನ್ನು ಮಹಿಳಾ ಪೇದೆ ತೆಗೆದುಕೊಂಡು ಹೋಗಿದ್ದಾರೆ. ಮಾದ್ಯಮದ ಮೂಲಕ ಮಗನ ಬಂಧನ ಸುದ್ದಿ ತಿಳಿಯಿತು. ಮನೆಯಲ್ಲಿ ವಯಸ್ಸಾದ ತಾಯಿಯೊಂದಿಗೆ ಇದ್ದೇನೆ. ನಾವಿಬ್ಬರು ಹೆಣ್ಣು ಮಕ್ಕಳೇ ಮನೆಯಲ್ಲಿದ್ದೇವೆ. ನಾನು ಮುಗ್ಧ ಮತ್ತು ಅಮಾಯಕ. ಬೇರೆಯವರ ಸಂಚಿಗೆ ಮಗ ಬಲಿಯಾಗಿರಬೇಕು ಎಂದು ರಾಘವೇಂದ್ರ ತಾಯಿ ಅನುಮಾನ ವ್ಯಕ್ತಪಡಿಸಿದ್ದಾರೆ.
ಆತ ಯಾರೊಂದಿಗೆ ಹೆಚ್ಚು ಸೇರಲ್ಲ. ನಮಗೆ ಇಲ್ಲಿ ಯಾರು ಸಂಬಂಧಿಕರಿಲ್ಲ. ಎಲ್ಲಿ ಹೋಗಬೇಕು ಮತ್ತು ಯಾರನ್ನ ಸಂಪರ್ಕಿಸಬೇಕು ಎಂಬುವುದು ನಮಗೆ ಗೊತ್ತಿಲ್ಲ. ಇರೋ ಒಬ್ಬ ಮಗ ಯಾರ ತಂಟೆಗೂ ಹೋಗದವನು. ಆತ ತಪ್ಪು ಮಾಡಿಲ್ಲ ಎಂಬುವುದು ನನ್ನ ನಂಬಿಕೆ. ಒಂದು ವೇಳೆ ಪೊಲೀಸ್ ತನಿಖೆ ವೇಳೆ ತಪ್ಪಿತಸ್ಥ ಎಂದು ಸಾಬೀತಾದ್ರೆ ಮಗನೊಂದಿಗಿನ ಸಂಬಂಧವನ್ನು ಕಳೆದುಕೊಂಡು, ಅನಾಥಳಂತೆ ಮುಂದಿನ ಜೀವನ ನಡೆಸುತ್ತೇನೆ ಎಂದು ರಾಘವೇಂದ್ರ ತಾಯಿ ಸ್ಪಷ್ಟಪಡಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ