ದಾವಣಗೆರೆ:
ವಿಶ್ವ ಮಧ್ವ ಮಹಾ ಪರಿಷತ್ ವತಿಯಿಂದ ದಾವಣಗೆರೆ ನಗರದ ಕೆ.ಎ.ಬಡಾವಣೆ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಯುಪಿಎಸ್‍ಸಿ ಪರೀಕ್ಷೆಯಲ್ಲಿ 336 ನೇ ರ್ಯಾಂಕ್‍ಗಳಿಸಿದ ಮಿರ್ಜಾ ಖಾದಿರ್ ಬೇಗ್ ಅವರನ್ನು ಸನ್ಮಾನಿಸಲಾಯಿತು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪರಿಷತ್ ಅಧ್ಯಕ್ಷ ವೆಂಕಟಗಿರೀಶಾಚಾರ್, ವಿಶ್ವ ಮಧ್ವ ಪರಿಷತ್ ಇಂದು ಯಾವುದೇ ಜಾತಿ ಮತವನ್ನು ನೋಡದೆ ಅಸಾಧಾರಣ ಪ್ರತಿಭೆಯನ್ನು ಗುರುತಿಸುವ ಕಾರ್ಯವನ್ನು ಯಶಸ್ವಿಯಾಗಿ ಮಾಡುತ್ತಿದೆ ಎಂದು ತಿಳಿಸಿ ಪರಿಷತ್ ಪರವಾಗಿ ಮಿರ್ಜಾ ಖಾದಿರ್ ಬೇಗ್ ಅವರನ್ನು ಅಭಿನಂದಿಸಿದರು.
ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಮಿರ್ಜಾ ಖಾದಿರ್ ಬೇಗ್‍ರವರು ಪರಿಷತ್ತಿನ ಈ ಕಾರ್ಯಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಾ ಸಮಾಜ ಸೇವೆಯನ್ನು ಮಾಡುವ ಉದ್ದೇಶದಿಂದ ತಾವು ಜರ್ಮನಿಯಲ್ಲಿ ಎಬಿಬಿ ಎನ್ನುವ ಸಂಸ್ಥೆಯಲ್ಲಿ ಸಂಶೋಧನಾ ಮತ್ತು ಅಭಿವೃದ್ಧಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರೂ ಆ ಹುದ್ದೆಗೆ ರಾಜೀನಾಮೆ ನೀಡಿ ಪುನಃ ಭಾರತಕ್ಕೆ ಮರಳಿ ಐ.ಎ.ಎಸ್. ಪರೀಕ್ಷೆಯಲ್ಲಿ 336 ನೇ ರ್ಯಾಂಕ್‍ಗಳಿಸಿ ತಮ್ಮನ್ನು ತಾವು ಸಮಾಜ ಸೇವೆಗೆ ಸಂಪೂರ್ಣವಾಗಿ ತೊಡಗಿಸಿಕೊಳ್ಳುವುದಾಗಿ ತಿಳಿಸಿದರು.
ಇವರ ತಂದೆ ಹಾಗೂ ನಗರದ ಪ್ರಸಿದ್ಧ ವಕೀಲರಾದ ಮಿರ್ಜಾ ಇಸ್ಮಾಯಿಲ್ ಅವರ ಆಸೆಯೂ ಕೂಡಾ ಇದೇ ಆಗಿದ್ದು ಅವರ ಈ ಮನೋಭಿಲಾಶೆಯನ್ನು ಈಡೇರಿಸಿದ ತೃಪ್ತಿ ತಮಗಾಗಿದೆ ಎಂದು ಹೇಳಿದರು. ಅನನ್ಯ ಪಾಟೀಲ್ ಪಾರ್ಥಿಸಿದರು. ರಘುನಾಥರಾವ್ ಸ್ವಾಗತಿಸಿದರು. ಎಲ್.ರಾಮಚಂದ್ರ ರಾವ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಂಧ್ಯಾ ಶ್ರೀಧರ್ ಘಟಿಕರ್ ನಿರೂಪಿಸಿದರು.