ಹೊನ್ನಾಳಿ:
ಜೀವನದಲ್ಲಿ ಯಾವುದೇ ಸಮಸ್ಯೆಗಳು ಬಂದರೂ ರೈತರು ಧೃತಿಗೆಡಬಾರದು ಎಂದು ತಾಲೂಕು ರೈತ ಸಂಘದ ಅಧ್ಯಕ್ಷ ಎಚ್. ಕಡದಕಟ್ಟೆ ಎಂ.ಎಸ್. ಜಗದೀಶ್ ಹೇಳಿದರು.
ತಾಲೂಕಿನ ಎಚ್. ಕಡದಕಟ್ಟೆ ಗ್ರಾಮದಲ್ಲಿ ಶ್ರೀ ನಂದಿ ಯುವಕರ ಸಂಘ ಮತ್ತು ಗ್ರಾಮಸ್ಥರ ಸಂಯುಕ್ತಾಶ್ರಯದಲ್ಲಿ ಭಾನುವಾರ ಹಮ್ಮಿಕೊಂಡ ಹೋರಿ ಬೆದರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಾಲ ಬಾಧೆ, ಬೆಳೆ ಹಾನಿ ಮತ್ತಿತರ ಜ್ವಲಂತ ಸಮಸ್ಯೆಗಳಿಂದ ರೈತಾಪಿ ವರ್ಗದವರು ಆತಂಕಗೊಂಡು ಆತ್ಮಹತ್ಯೆಯಂಥ ಕಠಿಣ ನಿರ್ಧಾರಗಳನ್ನು ಕೈಗೊಳ್ಳಬಾರದು. ಯಾವುದೇ ಸಮಸ್ಯೆಗಳಿಗೂ ಹೆದರದೇ, ಜೀವನೋತ್ಸಾಹದಿಂದ ಮುನ್ನಡೆಯಬೇಕು ಎಂದು ತಿಳಿಸಿದರು.
ನಮ್ಮ ಸರಕಾರಗಳು ರೈತ ಸ್ನೇಹಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಮೂಲಕ ಕೃಷಿಗೆ ಬೆಂಬಲವಾಗಿ ನಿಲ್ಲಬೇಕು. ಬೆಳೆಗಳಿಗೆ ಸಮರ್ಪಕ ಬೆಂಬಲ ಬೆಲೆ ನೀಡಬೇಕು ಎಂದು ಒತ್ತಾಯಿಸಿದರು. ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಂಬಲ ಬೆಲೆ ನೀಡಿದರೆ ರೈತರು ಸಾಲ ಮನ್ನಾಕ್ಕಾಗಿ ಯಾರನ್ನೂ ಬೇಡುವುದಿಲ್ಲ ಎಂದು ಅಭಿಪ್ರಾಯಪಟ್ಟರು.
ಹಿಂದೂಗಳು ವಿವಿಧ ಹಬ್ಬಗಳನ್ನು ಅತ್ಯಂತ ಶ್ರದ್ಧಾ, ಭಕ್ತಿಯಿಂದ ಆಚರಿಸುತ್ತಾರೆ. ಆ ಪೈಕಿ ಮಣ್ಣಿನ ಮಕ್ಕಳ ವಿಶಿಷ್ಟ ಹಬ್ಬವಾಗಿರುವ ಹೋರಿ ಬೆದರಿಸುವ ಹಬ್ಬ ರೈತನಲ್ಲಿ ಹೊಸ ಉತ್ಸಾಹ ನೀಡುವ ಹಬ್ಬವಾಗಿದೆ. ತಮ್ಮ ಬದುಕಿನ ಒಡನಾಡಿಗಳಾದ ಹೋರಿಗಳನ್ನು ಅತ್ಯಂತ ಸುಂದರವಾಗಿ ವಿವಿಧ ಬಣ್ಣಗಳು, ಜೂಲಾ ಮುಂತಾದ ವಸ್ತುಗಳಿಂದ ರೈತಾಪಿ ಸಮುದಾಯದವರು ಶೃಂಗರಿಸಿ ಹೋರಿ ಬೆದರಿಸುವ ಅಂದರೆ ಓಡಿಸುವ ಕಾರ್ಯಕ್ರಮ ನಡೆಸುತ್ತಾರೆ. ಗ್ರಾಮೀಣ ಮತ್ತು ಜಾನಪದ ಸಂಸ್ಕøತಿಯ ಪ್ರತೀಕವಾದ ಹೋರಿ ಬೆದರಿಸುವ ಕಾರ್ಯಕ್ರಮ ರೈತರಿಗೆ ಹರ್ಷ ನೀಡುತ್ತದೆ. ರೈತರು ಇದರಲ್ಲಿ ಪಾಲ್ಗೊಳ್ಳುವ ಮೂಲಕ ಖುಷಿಪಡುತ್ತಿದ್ದಾರೆ ಎಂದು ವಿವರಿಸಿದರು. ಉತ್ತಮ ಪ್ರದರ್ಶನ ನೀಡಿದ ಹೋರಿಗಳಿಗೆ ಬಹುಮಾನಗಳನ್ನು ಕೂಡ ನೀಡಲಾಗುತ್ತದೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ, ಕಾಗಿನೆಲ್ಲಿ, ನ್ಯಾಮತಿ ತಾಲೂಕಿನ ಕುಂಕುವ, ಜೀನಹಳ್ಳಿ, ಕೆಂಚಿಕೊಪ್ಪ, ಬೆಳಗುತ್ತಿ, ಮಲ್ಲಿಗೇನಹಳ್ಳಿ, ಹೊನ್ನಾಳಿ ತಾಲೂಕಿನ ದೊಡ್ಡೆರೇಹಳ್ಳಿ, ಸೊರಟೂರು ಸೇರಿದಂತೆ ಸುತ್ತಮುತ್ತಲಿನ ಸುಮಾರು 20ಕ್ಕೂ ಅಧಿಕ ಗ್ರಾಮಗಳ ರೈತರು 100ಕ್ಕೂ ಅಧಿಕ ಹೋರಿಗಳೊಂದಿಗೆ ಆಗಮಿಸಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಬಿಜೆಪಿ ಮುಖಂಡ ಎಂ.ಪಿ. ರಾಜು ನ್ಯಾಮತಿ ತಾಲೂಕಿನ ಹೊಸಜೋಗ ಗ್ರಾಮದ ಸತೀಶ್ ಎಂಬ ರೈತನಿಗೆ ಪ್ರಥಮ ಬಹುಮಾನವಾಗಿ 1.5 ತೊಲದ ಬೆಳ್ಳಿ ಕಡಗ ವಿತರಿಸಿದರು. ಸಮಾಧಾನಕರ ಬಹುಮಾನವಾಗಿ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ 100 ಹೋರಿಗಳ ಮಾಲೀಕರಿಗೆ 10 ಲೀಟರ್ ಸಾಮಥ್ರ್ಯದ ಸ್ಟೇನ್‍ಲೆಸ್ ಸ್ಟೀಲ್‍ನ ಹಾಲಿನ ಕ್ಯಾನ್‍ಗಳನ್ನು ವಿತರಿಸಲಾಯಿತು. ಬೆಳ್ಳಿ ಕಡಗವನ್ನು ಸಿ.ಟಿ. ಸುನಿಲ್ ಮತ್ತು ಇತರ ಬಹುಮಾನಗಳನ್ನು ಗ್ರಾಮಸ್ಥರು ಪ್ರಾಯೋಜಿಸಿದರು.ಮುಖಂಡರಾದ ಬಸವಣ್ಯಪ್ಪ, ಟಿ. ಬಸಪ್ಪ, ಬಸವರಾಜಪ್ಪ, ಸಿ.ಡಿ. ಬಸವನಗೌಡ, ನಾಗಪ್ಪ, ಕೆ.ಟಿ. ಹನುಮಗೌಡ, ಶಂಕರಮೂರ್ತಿ, ಎಂ.ಎಚ್. ತಿಮ್ಮನಗೌಡ, ಶಿವಪ್ಪ ಮತ್ತಿತರರು ಭಾಗವಹಿಸಿದ್ದರು.
ಹೋರಿ ಬೆದರಿಸುವ ಹಬ್ಬವನ್ನು ದೀಪಾವಳಿ ಹಬ್ಬದ ಬಳಿಕ ಎರಡು ಇಲ್ಲವೇ ಮೂರನೇ ವಾರ ಆಚರಿಸಲಾಗುತ್ತದೆ. ಆದರೆ, ಎಚ್. ಕಡದಕಟ್ಟೆ ಗ್ರಾಮದಲ್ಲಿ ಕಾರಣಾಂತರಗಳಿಂದ ದೀಪಾವಳಿ ಹಬ್ಬದ ನಂತರ ಆಚರಿಸಿದ್ದಿಲ್ಲ. ಅಲ್ಲದೇ, 12 ವರ್ಷಗಳ ಬಳಿಕ ಈ ವರ್ಷ ಎಚ್. ಕಡದಕಟ್ಟೆ ಗ್ರಾಮದಲ್ಲಿ ಹೋರಿ ಬೆದರಿಸುವ ಹಬ್ಬವನ್ನು ಭಾನುವಾರ ವಿಶಿಷ್ಟವಾಗಿ ಆಚರಿಸಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
