ಕುದುರೆ ವ್ಯಾಪಾರ ಶುರು ಮಾಡಿದ ಬಿಜೆಪಿ…!!!

ಬೆಂಗಳೂರು

       ಬಿಜೆಪಿ ಕುದುರೆ ವ್ಯಾಪಾರದ ಮೂಲಕ ಶಾಸಕರ ಖರೀದಿಗೆ ಮುಂದಾಗಿದೆ. 25 ರಿಂದ 30 ಕೋಟಿ ರೂ. ಹಣ ಆಫರ್ ಮಾಡಿ ಶಾಸಕರ ಖರೀದಿ ಮಾಡಲು ಹೊರಟಿದ್ದಾರೆ. ಈ ಹಣ ಎಲ್ಲಿಂದ ಬರುತ್ತದೆ,ಇವೆಲ್ಲವು ಭ್ರಷ್ಟಾಚಾರದ ಹಣ ಅಲ್ಲವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

       ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಮೈಸೂರಿಗೆ ಆಗಮಿಸಿದ ಅವರು ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದರು.

       ಬಿಜೆಪಿ ದುರಾಸೆ ಹಾಗು ವಾಮಮಾರ್ಗದಿಂದ ಅಧಿಕಾರ ಹಿಡಿಯಲು ಯತ್ನಿಸುತ್ತಿದೆ. 104 ಸ್ಥಾನಗಳನ್ನಿಟ್ಟುಕೊಂಡು ಅಧಿಕಾರಕ್ಕೆ ಬರಬೇಕೆಂದರೆ ಹೇಗೆ ಸಾಧ್ಯ? ಪ್ರಜಾಪ್ರಭುತ್ವದಲ್ಲಿ ಬಹುಮತ ಇದ್ದರಷ್ಟೇ ಅಧಿಕಾರಕ್ಕೆ ಬರಲು ಸಾಧ್ಯ ಎಂಬ ಪರಿಜ್ಞಾನ ಬಿಜೆಪಿಯವರಿಗೆ ಇರಬೇಕು , ಯಾವುದೇ ಕಾರಣಕ್ಕೂ ಬಿಜೆಪಿಯವರು ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಕೋಮುವಾದಿ ಬಿಜೆಪಿ ಪಕ್ಷಕ್ಕೆ ಯಾವ ಶಾಸಕರೂ ಹೋಗುವುದಿಲ್ಲ. ಶಾಸಕರನ್ನು ಖರೀದಿ ಮಾಡುವಂತಹ ಅವರ ಪ್ರಯತ್ನ ಫಲ ನೀಡುವುದಿಲ್ಲ ಎಂದರು.

       ನಿಗಮ ಮಂಡಳಿ ನೇಮಕಾತಿ ಬಗ್ಗೆ ಅಂತಿಮ ರೂಪುರೇಷೆಗಳನ್ನು ಕೆಲವೇ ದಿನಗಳಲ್ಲಿ ಸಿದ್ಧಪಡಿಲಾಗುವುದು. ಕಾಂಗ್ರೆಸ್ ಪಕ್ಷದಿಂದ ಈಗಾಗಲೇ 20 ಮಂದಿ ಹೆಸರುಗಳನ್ನು ಪಕ್ಷದ ವರಿಷ್ಠರಿಗೆ ನೀಡಲಾಗಿದೆ. ಒಟ್ಟಿಗೆ 30 ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕಾತಿಯನ್ನು ಮಾಡಲಾಗುವುದು ಎಂದು ಹೇಳಿದರು.

       ರಮೇಶ್ ಜಾರಕಿಹೊಳಿ ಅವರು ನನ್ನ ಸಂಪರ್ಕಕ್ಕೂ ಸಿಕ್ಕಿಲ್ಲ,ಅವರು ದೆಹಲಿಯಲ್ಲಿದ್ದಾರೋ, ಮುಂಬೈನಲ್ಲಿದ್ದಾರೋ ಗೊತ್ತಿಲ್ಲ. ಅಲ್ಲಿದ್ದಾರೆ, ಇಲ್ಲಿದ್ದಾರೆ ಎಂಬ ಅಂತೆ ಕಂತೆಗಳಿಗೆಲ್ಲ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ನಿಮಗೇನಾದರೂ ಗೊತ್ತಿದ್ದರೆ ತಿಳಿಸಿ ಎಂದು ಮಾಧ್ಯಮದವರಿಗೆ ಮರುಪ್ರಶ್ನೆ ಹಾಕಿದರು.

        ಸಚಿವ ಎಚ್.ಡಿ.ರೇವಣ್ಣ ಹೇಳಿಕೆಗೆ ಈಗಾಗಲೇ ಸಚಿವ ಆರ್.ವಿ.ದೇಶಪಾಂಡೆ ಅವರು ಉತ್ತರ ನೀಡಿದ್ದಾರೆ.ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ತೆರೆಯುವುದರ ಬಗ್ಗೆ ಮುಖ್ಯಮಂತ್ರಿಯೊಂದಿಗೆ ಚರ್ಚೆ ನಡೆಸಲಿದ್ದೇನೆ, ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ತೆರೆಯುವ ಬಗ್ಗೆ ಸಾಹಿತಿಗಳಿಂದ ,ಕನ್ನಡಪರ ಸಂಘಟನೆಗಳಿಂದ ಪರ-ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ. ಕನ್ನಡ ಭಾಷೆಗೆ ಹೆಚ್ಚು ಒತ್ತು ನೀಡುವ ದೃಷ್ಟಿಯಿಂದ ಇಂಗ್ಲಿಷ್ ಶಾಲೆ ತೆರೆಯಲು ವಿರೋಧ ಕೇಳಿ ಬರುತ್ತಿದೆ. ಹಾಗಾಗಿ ಈ ಬಗ್ಗೆ ಅಂತಿಮ ಮುಖ್ಯಮಂತ್ರಿ ಜೊತೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap