ತೆಲಂಗಾಣ ಮಾದರಿಯಲ್ಲಿ ಮರಳು ನೀತಿ:ರಾಜಶೇಖರ ಬಿ. ಪಾಟೀಲ್

ದಾವಣಗೆರೆ:

    ತೆಲಂಗಾಣ ಮಾದರಿಯಲ್ಲಿ ಹೊಸ ಮರಳು ನೀತಿ ರೂಪಿಸಲು ಚಿಂತನೆ ನಡೆಸಲಾಗಿದೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವ ರಾಜಶೇಖರ ಬಿ. ಪಾಟೀಲ್ ತಿಳಿಸಿದ್ದಾರೆ.

     ಹರಿಹರ ತಾಲೂಕಿನ ರಾಜನಹಳ್ಳಿ ಬಳಿಯ ಮರಳು ಸ್ಟಾಕ್ ಯಾರ್ಡ್‍ಗೆ ಮಂಗಳವಾರ ಭೇಟಿ ನೀಡಿ, ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಹೊಸ ಮರಳು ನೀತಿ ಜಾರಿಗೆ ತರಬೇಕೆಂಬ ಉದ್ದೇಶದಿಂದ ಹತ್ತು ಜನ ಅಧಿಕಾರಿಗಳ ತಂಡವನ್ನು ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರಕ್ಕೆ ಕಳುಹಿಸಿ, ಅಲ್ಲಿಯ ಮರಳು ನೀತಿಯನ್ನು ಅಧ್ಯಯನ ಮಾಡಿಕೊಂಡು ಬರಲು ಕಳುಹಿಸಲಾಗಿತ್ತು .

      ಈ ತಂಡ ಈಗಾಗಲೇ ವರದಿ ನೀಡಿದ್ದು, ಸಾರ್ವಜನಿಕರಿಗೆ ಸುಲಭವಾಗಿ ಮತ್ತು ಕೈಗೆಟಕುವ ದರದಲ್ಲಿ ಮರಳು ಸಿಗಬೇಕೆಂಬ ಉದ್ದೇಶದಿಂದ ತೆಲಂಗಾಣ ಮಾದರಿಯಲ್ಲಿ ಹೊಸ ಮರಳು ನೀತಿ ರೂಪಿಸಲು ಚಿಂತನೆ ನಡೆದಿದೆ ಎಂದು ಮಾಹಿತಿ ನೀಡಿದರು.
ಹೊಸ ಮರಳು ನೀತಿ ರೂಪಿಸುವ ಬಗ್ಗೆ ಈಗಾಗಲೇ ಒಮ್ಮೆ ಸಭೆ ನಡೆದಿದ್ದು, ರಾಜ್ಯದಲ್ಲಿ ಪ್ರಸ್ತುತ ಇರುವ ಮರಳು ನೀತಿಗೆ ಏನೇನು ಬದಲಾಣೆ ತರಬೇಕೆಂಬುದರ ಬಗ್ಗೆ ಚರ್ಚಿಸಲಾಗಿದ್ದು, ಶೀಘ್ರದಲ್ಲಿಯೇ ಮತ್ತೊಂದು ಸಭೆ ಸೇರಿ, ಹೊಸ ಮರಳು ನೀತಿಯ ರೂಪುರೇಷೆಯನ್ನು ಸಿದ್ಧ ಪಡಿಸಲಾಗುವುದು ಎಂದು ಹೇಳಿದರು.

     ಅಲ್ಲದೇ, ಇಂದಿನ ಸಭೆಯಲ್ಲೂ ಶಾಸಕ ರೇಣುಕಾಚಾರ್ಯರವರು ದೇವಸ್ಥಾನ, ಮನೆ, ಶೌಚಾಲಯ ನಿರ್ಮಾಣಕ್ಕೆ ಎತ್ತಿನ ಬಂಡಿಯಲ್ಲಿ ಮರಳು ತೆಗೆದುಕೊಂಡು ಹೋಗುವ ಸಾರ್ವಜನಿಕರ ವಿರುದ್ಧ ಯಾವುದೇ ದೂರು ದಾಖಲಿಸಬಾರದು. ಹಾಗೂ ಈ ಉದ್ದೇಶಕ್ಕೆ ಮರಳನ್ನು ರಾಯಲ್ಟಿ ದರದಲ್ಲಿ ಮರಳು ನೀಡಬೇಕೆಂದು ಕೋರಿದ್ದು, ಈ ಬಗ್ಗೆಯೂ ಸಭೆಯಲ್ಲಿ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

     ಜಿಲ್ಲೆಯಲ್ಲಿ ಈ ವರೆಗೂ ಮರಳು ಗಣಿಗಾರಿಕೆ ನಡೆಸುತ್ತಿರುವ ಗುತ್ತಿಗೆದಾರರಿಗೆ ಒಟ್ಟು 20 ಕೋಟಿ ರೂ. ರಾಯಲ್ಟಿ ಹಣ ಸರ್ಕಾರಕ್ಕೆ ಜಮೆಯಾಗಿದೆ ಎಂದರು.ಮರಳು ಲಭ್ಯ ಪ್ರಮಾಣ ಕಡಿಮೆಯಾಗಿರುವುದರಿಂದ ಎಂ ಸ್ಯಾಂಡ್ ಬಳಕೆಯ ಬಗ್ಗೆಯೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕಾಗಿದೆ. ಪ್ರಸ್ತುತ ಇರುವ ಮರಳು ನೀತಿಯಲ್ಲಿ ಕೆಲ ತಾಂತ್ರಿಕ ತೊಂದರೆಗಳಿದ್ದು, ಒಂದೊಂದು ಜಿಲ್ಲೆಯಲ್ಲೂ ಒಂದೊಂದು ಸಮಸ್ಯೆ ಇದೆ ಎಂದು ಹೇಳಿದರು.

     ಈ ಸಂದರ್ಭದಲ್ಲಿ ಅಧಿಕಾರಿಗಳು, ರಾಜನಹಳ್ಳಿ ಮರಳು ಬ್ಲಾಕ್‍ನಲ್ಲಿ ಈಗ ಮರಳು ಎತ್ತುವುದನ್ನು ಸ್ಥಗಿತಗೊಳಿಸಲಾಗಿದ್ದು, ಹಾಲಿ ಸ್ಟಾಕ್ ಯಾರ್ಡ್‍ನಲ್ಲಿ ಸಂಗ್ರಹಿಸಿರುವ ಎರಡು ಸಾವಿರ ಮೆಟ್ರಿಕ್ ಟನ್ ಮರಳನ್ನು ವಿತರಿಸಲಾಗುತ್ತಿದೆ ಎಂದರು.ಈ ಸಂದರ್ಭದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳಾದ ಕೊದಂಡರಾಮ, ಪ್ರದೀಪ್, ಹರಿಹರ ತಹಶೀಲ್ದಾರ್ ರೆಹಾನ್ ಪಾಷ, ರಾಜನಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಮಹಾಂತೇಶ್, ಪಿಡಿಒ ವಿಜಯಲಕ್ಷ್ಮೀ, ಸದಸ್ಯ ಮಂಜುನಾಥ್ ಮತ್ತಿತರರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap