ಹೊಸಪೇಟೆ:
ಐತಿಹಾಸಿಕ ನಗರಿಯ ಹೈಟೆಕ್ ಬಸ್ ನಿಲ್ದಾಣದ ಚಹರೆ ಕಳೆದ ನಾಲ್ಕೈದು ತಿಂಗಳಿನಿಂದ ಬದಲಾಗಿದ್ದು ಪ್ರಯಾಣಿಕರು ನಿಟ್ಟುಸಿರು ಬಿಡುವಂತಾಗಿದೆ.
ಕಳೆದ ಆರೇಳು ವರ್ಷಗಳ ಹಿಂದೆ ಲಕ್ಷಾಂತರ ರೂ.ಗಳ ವೆಚ್ಚದಲ್ಲಿ ನಗರದ ಹೃದಯ ಭಾಗದಲ್ಲಿ ನಿರ್ಮಾಣಮಾಡಿರುವ ಹೈಟೆಕ್ ಬಸ್ ನಿಲ್ದಾಣವೂ ಹಲವು ಸಮಸ್ಯೆಗಳ ಆಗರವಾಗಿತ್ತು. ಅಲ್ಲದೇ ಪ್ರಯಾಣಿಕರು ನಾನಾ ಸಮಸ್ಯೆಗಳಿಂದ ಪರಿತಪಿಸುವಂತಾಗಿತ್ತು. ಆದರೆ ಕಳೆದ ನಾಲ್ಕೈದು ತಿಂಗಳಿನಿಂದ ಹೊಸಪೇಟೆ ವಿಭಾಗಕ್ಕೆ ಹೊಸ ವಿಭಾಗೀಯ ನಿಂಯಂತ್ರಣಾಧಿಕಾರಿ ಜಿ. ಶೀನಯ್ಯ ಅವರು ಬಂದ ಬಳಿಕ ಬಸ್ ನಿಲ್ದಾಣಕ್ಕೆ ಹಿಡಿದ ಗ್ರಹಣ ಬಿಟ್ಟಂತಾಗಿದೆ.
ಈಶಾನ್ಯ ಕರ್ನಾಟಕದಲ್ಲಿ ಹೊಸಪೇಟೆ ನಂ.1: ಈಶಾನ್ಯ ಕರ್ನಾಟಕ ವ್ಯಾಪ್ತಿಯ ಬಳ್ಳಾರಿ, ವಿಜಯಪುರ, ಯಾದಗಿರಿ, ರಾಯಚೂರು, ಕಲಬುರಗಿ, ಬೀದರ್, ಕೊಪ್ಪಳ ಸೇರಿದಂತೆ 10 ವಿಭಾಗಗಳ ಪೈಕಿ ಹೊಸಪೇಟೆ ವಿಭಾಗವು ಆದಾಯದಲ್ಲಿ ನಂ. 1 ಸ್ಥಾನಕ್ಕೆ ಏರಿದೆ. ಕಳೆದ ಎರಡ್ಮೂರು ವರ್ಷಗಳಿಂದ ಹೊಸಪೇಟೆ ವಿಭಾಗವು ಆದಾಯ ಗಳಿಕೆಯಲ್ಲಿ ಪಾತಾಳಕ್ಕೆ ಹೋಗಿತ್ತು. ಕಳೆದ ಸಾಲಿನಲ್ಲಿ ವಿಭಾಗವು ಒಂದೂವರೆ ಕೋಟಿ ನಷ್ಟವನ್ನು ಅನುಭವಿಸಿತ್ತು.
ಆದರೆ ಕಳೆದ ಆರು ತಿಂಗಳಿನಲ್ಲಿ ಹೊಸದಾಗಿ ಬಂದಿರುವ ವಿಭಾಗೀಯ ನಿಯಂತ್ರಣಾಧಿಕಾರಿಗಳ ಇಚ್ಛಾಶಕ್ತಿಯಿಂದ ಆದಾಯ ಪ್ರಮಾಣ ಹೆಚ್ಚಿಸಿಕೊಳ್ಳುವುದರ ಜೊತೆಗೆ ಹೊಸಪೇಟೆ ನಿಲ್ದಾಣ ಸೇರಿದಂತೆ ಈ ವಿಭಾಗ ವ್ಯಾಪ್ತಿಯ ಬಸ್ ನಿಲ್ದಾಣಗಳಲ್ಲಿನ ಸಮಸ್ಯೆಗಳನ್ನು ಬಗೆಹರಿಸುವ ಮೂಲಕ ಪ್ರಯಾಣಿಕರ ನೆಮ್ಮದಿಗೆ ಕಾರಣವಾಗಿದ್ದು, ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.
ಬಳ್ಳಾರಿಗೆ ತೆರಳುವ ಪ್ರಯಾಣಿಕರಿಗೆ ತಂಗುದಾಣ!
ಹೊಸ ಬಸ್ ನಿಲ್ದಾಣ ನಿರ್ಮಾಣದ ಬಳಿಕ ಈ ಭಾಗದ ಜನರ ಹಾಗೂ ಪ್ರಯಾಣಿಕರ ಬೇಡಿಕೆಯಾಗಿದ್ದ ಬಳ್ಳಾರಿಗೆ ತೆರಳುವ ಬಸ್‍ಗಳ ನಿಲುಗಡೆ ಸ್ಥಳದಲ್ಲಿ ಪ್ರಯಾಣಿಕರ ಅನುಕೂಲಕ್ಕೆ ತಂಗುದಾಣ ನಿರ್ಮಿಸಲಾಗಿದೆ. ಜೊತೆಗೆ ವಿಭಾಗೀಯ ಅಧಿಕಾರಿಗಳು ಆದಾಯಗಳಿಕೆ ಹೆಚ್ಚಿಸುವ ದೃಷ್ಠಿಯಿಂದ ಚಾಲಕರಿಗೆ ಒಂದು ದಿನಕ್ಕೆ ನಾಲ್ಕು ಟ್ರೀಪ್ ಬದಲಿಗೆ 5 ಟ್ರೀಪ್ ಹೆಚ್ಚಳಮಾಡುವ ಮೂಲಕ ಚಾಲಕ, ನಿರ್ವಾಹಕರಿಗೆ ಬೋನಸ್ ನೀಡಿದ ಪರಿಣಾಮದಿಂದ ಲಾಭಾಂಶ ಹೆಚ್ಚಳಕ್ಕೆ ಕಾರಣವಾಗಿದೆ. ಕಳೆದ ಬಾರಿಗೆ ಹೋಲಿಕೆ ಮಾಡಿದರೆ ಜೂ. 1 ರಿಂದ 10ರವರೆಗೆ ಆದಾಯವೇ 74 ಲಕ್ಷವಾಗಿದ್ದು ದಕ್ಷತೆಗೆ ಹಿಡಿದ ಕನ್ನಡಿಯಾಗಿದೆ.
ಹೈಟೆಕ್ ಸೇವೆ ಆರಂಭಕ್ಕೆ ಚಿಂತನೆ:
ಹೊಸಪೇಟೆಯಿಂದ ವಿಜಯವಾಡ, ಬೆಂಗಳೂರು, ಮಂಗಳೂರು, ಪಣಜಿ ಹಾಗೂ ಧರ್ಮಸ್ಥಳಕ್ಕೆ ಖಾಸಗಿ ಬಸ್‍ಗಳಿಗೆ ಪೈಪೋಟಿ ಹಿನ್ನೆಲೆಯಲ್ಲಿ ಹೊಸದಾಗಿ ಸುಸಜ್ಜಿತ ಹವಾನಿಯಂತ್ರಿತ ಸ್ಲೀಪರ್ ಬಸ್‍ಗಳನ್ನು ಆರಂಭಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಜೊತೆಗೆ ವಿಭಾಗದ ವ್ಯಾಪ್ತಿಯ ಕೊಟ್ಟೂರು, ಎಚ್.ಬಿ.ಹಳ್ಳಿ, ಕಂಪ್ಲಿ, ಹಡಗಲಿ ಸೇರಿದಂತೆ ತಾಲೂಕು ಕೇಂದ್ರಗಳಿಂದ ತಲಾ ಒಂದೊಂದು ಹೈಟೆಕ್ ಬಸ್‍ಗಳ ಸೇವೆಗೂ ಪ್ರಸ್ತಾವನೆ ಕಳುಹಿಸಲಾಗಿದೆ.
ಮೂಲಸೌಲಭ್ಯಕ್ಕೆ ಆದ್ಯತೆ:
ಬಸ್ ನಿಲ್ದಾಣದಲ್ಲಿ ಕಳೆದ ಹಲವು ತಿಂಗಳಿನಿಂದ ಹಾಳಾಗಿದ್ದ ಶುದ್ಧ ಕುಡಿವ ನೀರಿನ ಘಟಕವನ್ನು ದುರಸ್ತಿಗೊಳಿಸಲಾಗಿದೆ. ಜೊತೆಗೆ ಶೌಚಾಲಯದಲ್ಲಿ ನಿರಂತರ ನೀರಿನ ವ್ಯವಸ್ಥೆ ಹಿನ್ನೆಲೆಯಲ್ಲಿ ಹೊಸದಾಗಿ ಪಂಪ್‍ಸೆಟ್ ಅಳವಡಿಸಲಾಗಿದ್ದು ಇದರಿಂದ ಸದ್ಯ ನೀರಿನ ಸಮಸ್ಯೆ ಬಗೆಹರಿದಂತಾಗಿದೆ. ನಗರವು ಪ್ರಮುಖ ಪ್ರವಾಸಿ ಕೇಂದ್ರವಾಗಿರುವುದರಿಂದ ನಿತ್ಯ ಸಾವಿರಾರು ಪ್ರವಾಸಿಗರು ದೇಶ, ವಿದೇಶಗಳಿಂದ ಬರುವ ಹಿನ್ನೆಲೆಯಲ್ಲಿ ಬಸ್ ನಿಲ್ದಾಣದಲ್ಲಿ ಸ್ವಚ್ಛತೆಗೆ ಹೆಚ್ಚು ಒತ್ತು ನೀಡುವ ದೃಷ್ಠಿಯಿಂದ ಸ್ವಚ್ಛತಾ ಸಿಬ್ಬಂದಿ ನೇಮಿಸಲಾಗಿದೆ. ಇಡೀ ಆವರಣದ ಪರಿಸರ ಸ್ವಚ್ಛವಾಗಿರಿಸಲು ಕಾರಣವಾಗಿದೆ. ಅಲ್ಲದೇ ಬಸ್‍ಗಳು ಆಗಮನ, ನಿರ್ಗಮನ ಬಗ್ಗೆ ಮಾಹಿತಿ ನೀಡುವ ವೇಳಾಪಟ್ಟಿ, ಪ್ರಯಾಣಿಕರ ಅನುಕೂಲಕ್ಕೆ ಸುಖಾಸನಗಳನ್ನು ಅಳವಡಿಸಲಾಗಿದೆ.
ಸಿಸಿ ಕ್ಯಾಮೆರಾ ಕಣ್ಗಾವಲು!
ಹೈದ್ರಾಬಾದ್-ಕರ್ನಾಟಕ ಪ್ರದೇಶಾಭಿವೃದ್ಧಿ ಅಡಿಯಲ್ಲಿ ಸಾವಿರಾರು ರೂ.ಗಳ ಮೌಲ್ಯದ 32 ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಇದರಿಂದ ನಿಲ್ದಾಣದಲ್ಲಿನ ನಡೆಯುವ ಸಿಬ್ಬಂದಿಗಳ ಕಾರ್ಯಚಟುವಟಿಕೆ ಹಾಗೂ ಬಸ್‍ಗಳ ಸಂಚಾರ, ಪ್ರಯಾಣಿಕರ ಸುರಕ್ಷತೆ ಹಾಗೂ ಅನುಮಾನಸ್ಪದ ವ್ಯಕ್ತಿಗಳ ಚಲನವಲನಗಳ ಮೇಲೆ ನಿಗಾವಹಿಸಲು ಸಹಕಾರಿಯಾಗಿದೆ.