ಶೈಕ್ಷಣಿಕ ನಗರಿಯಲ್ಲಿ ಹಾಸ್ಟೆಲ್‍ಗಳ ಕೊರತೆ: ವಿದ್ಯಾರ್ಥಿಗಳ ಪರದಾಟ

ತುಮಕೂರು

     ತುಮಕೂರಿನ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಪ್ರವೇಶ ಪಡೆಯುವಷ್ಟು ಸುಲಭವಲ್ಲ ನಗರದ ಹಾಸ್ಟೆಲ್‍ಗಳಲ್ಲಿ ಪ್ರವೇಶ ಪಡೆಯುವುದು. ಇಲ್ಲಿನ ಇಲಾಖೆಗಳ ಹಾಸ್ಟೆಲ್ ಸೀಟು ಪಡೆಯುವುದೆಂದರೆ ಸರ್ಕಾರಿ ಕೆಲಸ ಪಡೆದಷ್ಟೇ ಶ್ರಮ, ಸಮಾಧಾನ ಎನ್ನುವುದು ಅನುಭವಿ ವಿದ್ಯಾರ್ಥಿಗಳ ಅಭಿಪ್ರಾಯ. ನಗರದಲ್ಲಿರುವ ಕಡಿಮೆ ಹಾಸ್ಟೆಲ್‍ಗಳಲ್ಲಿ ಸೀಟು ಪಡೆಯಲು ವಿದ್ಯಾರ್ಥಿಗಳು ಹೋರಾಟ ನಡೆÀಸಬೇಕಾದ ಪರಿಸ್ಥಿತಿ. ಇದು ಪ್ರತಿ ಶೈಕ್ಷಣಿಕ ವರ್ಷಾರಂಭದಲ್ಲಿ ಎದುರಾಗುವ ಸಮಸ್ಯೆ.

      ಕಾಲೇಜುಗಳು, ಅಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಇಲ್ಲಿ ಹಾಸ್ಟೆಲ್‍ಗಳ ಸೌಕರ್ಯವಿಲ್ಲ. ಪ್ರತಿ ವರ್ಷ ಸುಮಾರು 8-10 ಸಾವಿರ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಬೇಡಿಕೆ ಇದೆ. ಆದರೆ ಸರ್ಕಾರ ಅಗತ್ಯವಿರುವಷ್ಟು ವಿದ್ಯಾರ್ಥಿನಿಲಯಗಳನ್ನು ತೆರೆಯುವ ಪ್ರಯತ್ನ ಮಾಡಿಲ್ಲ.

    ಶೈಕ್ಷಣಿಕ ನಗರಿ ತುಮಕೂರಿನಲ್ಲಿ ಪ್ರತಿ ವರ್ಷ ಹೊಸ ಕಾಲೇಜುಗಳು, ಹೊಸ ಕೋರ್ಸುಗಳು ಆರಂಭವಾಗುತ್ತಲೇ ಇವೆ. ತಮ್ಮ ಮಕ್ಕಳನ್ನು ತುಮಕೂರಿನ ಕಾಲೇಜುಗಳಲ್ಲಿ ಓದಿಸಬೇಕೆಂಬುದು ಪೋಷಕರ ಅಪೇಕ್ಷೆ. ವಿದ್ಯಾರ್ಥಿಗಳದ್ದೂ ಇದೇ ಹಂಬಲ. ಹೀಗಾಗಿ, ತುಮಕೂರಿನ ಕಾಲೇಜುಗಳ ಪ್ರವೇಶ ಸಂಖ್ಯೆ ಹೆಚ್ಚಾಗಿ ಹಾಸ್ಟೆಲ್‍ಗಳಗೆ ಬೇಡಿಕೆ ಬಂದಿದೆ. ಹತ್ತಿರದ ತಾಲ್ಲೂಕು, ಹೋಬಳಿ ಕೇಂದ್ರದ ಅನೇಕ ಕಾಲೇಜಗಳಲ್ಲಿ ಪ್ರವೇಶ ಪಡೆಯದೆ ವಿದ್ಯಾರ್ಥಿಗಳು ಜಿಲ್ಲಾ ಕೇಂದ್ರಕ್ಕೆ ಮುಗಿಬೀಳುತ್ತಿರುವುದೂ ಇದಕ್ಕೆ ಕಾರಣ. ತಾಲ್ಲೂಕು ಕೇಂದ್ರಗಳ ಎಷ್ಟೋ ಕಾಲೇಜುಗಳು ವಿದ್ಯಾರ್ಥಿಗಳ ಕೊರತೆ ಎದುರಿಸುತ್ತಿವೆ. 

     ಇದರ ಜೊತೆಗೆ, ಹೊರ ಜಿಲ್ಲೆಗಳ ಹಿರಿಯೂರು, ಚಳ್ಳಕೆರೆ, ಹೊಸದುರ್ಗ, ನೆಲಮಂಗಲ, ಮಾಗಡಿ, ದೊಡ್ಡಬಳ್ಳಾಪುರ ಮುಂತಾದ ಕಡೆಗಳ ವಿದ್ಯಾರ್ಥಿಗಳು ಇಲ್ಲಿನ ಕಾಲೇಜುಗಳಲ್ಲಿ ಪ್ರವೇಶ ಪಡೆಯುತ್ತಾರೆ. ಅವರು ನಿರೀಕ್ಷಿಸುವಷ್ಟು ಹಾಸ್ಟೆಲ್ ಸೌಕರ್ಯ ತುಮಕೂರಿನಲ್ಲಿ ಇಲ್ಲ.

ಹಾಸ್ಟೆಲ್ ಆದ್ಯತೆಯಾಗಲಿ

     ಎಸ್ಸಿ, ಎಸ್ಟಿ ವಿದ್ಯಾರ್ಥಿಗಳ ಹಾಸ್ಟೆಲ್ ಸಮಸ್ಯೆ ಅಷ್ಟಾಗಿ ಇಲ್ಲ. ಹೆಚ್ಚುಕಮ್ಮಿ ಅರ್ಜಿ ಸಲ್ಲಿಸುವ ಎಲ್ಲಾ ವಿದ್ಯಾರ್ಥಿಗಳಿಗೂ ಹಾಸ್ಟೆಲ್ ಸೀಟು ಸಿಗುತ್ತದೆ. ಓಬಿಸಿ ವರ್ಗದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ನಿಲಯಗಳಿಲ್ಲದೆ ದೊಡ್ಡ ಸಮಸ್ಯೆಗಾಗಿದೆ. ಕೆಲವು ಜಾತಿ ಸಮುದಾಯದ ಹಾಸ್ಟೆಲ್‍ಗಳು ನಗರದಲ್ಲಿದ್ದರೂ ಅಲ್ಲಿ ಸೀಮಿತ ಪ್ರವೇಶಾವಕಾಶವಿದೆ. ಅವರ ಜಾತಿಯ ಎಲ್ಲಾ ವಿದ್ಯಾರ್ಥಿಗಳಿಗೂ ಅಲ್ಲಿ ಊಟ. ವಸತಿ ಕಲ್ಪಿಸಲು ಅವರಲ್ಲಿ ಮೂಲಭೂತ ಸೌಲಭ್ಯಗಳಿಲ್ಲ.

      ಹೊಸ ಕಾಲೇಜು ಸ್ಥಾಪನೆಯಾಗುವಾಗ ಅಲ್ಲಿ ಕಟ್ಟಡ, ಉಪನ್ಯಾಸಕರು, ಗ್ರಂಥಾಲಯ ಮುಂತಾದ ಸೌಲಭ್ಯಗಳ ಜೊತೆಗೆ ಅಲ್ಲಿನ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಕರ್ಯವೂ ಆದ್ಯತೆಗಾಗಬೇಕು. ಕೆಲ ಶಿಕ್ಷಣ ಸಂಸ್ಥೆಗಳು ತಮ್ಮ ಕಾಲೇಜುಗಳು ವಿದ್ಯಾರ್ಥಿಗಳಿಗೆ ಪೇಯಿಂಗ್ ಹಾಸ್ಟೆಲ್ ನಡೆಸುತ್ತಿವೆ. ಜೊತೆಗೆ ನಗರದಲ್ಲಿ ಖಾಸಗಿ ಪೇಯಿಂಗ್ ಹಾಸ್ಟೆಲ್‍ಗಳೂ ಇವೆ. ಎಲ್ಲವೂ ದುಬಾರಿ ಬಡ ವಿದ್ಯಾರ್ಥಿಗಳ ಕೈಗೆಟಕುವುದಿಲ್ಲ.

      ತುಮಕೂರಿಗೆ ಸಮೀಪವಿರುವ ಊರುಗಳ ವಿದ್ಯಾರ್ಥಿಗಳು ನಿತ್ಯ ಬಸ್ಸಿನಲ್ಲಿ ಬಂದು ಹೋಗಬಹುದು, ದೂರದೂರಿನವರು ನಗರದಲ್ಲೇ ಊಟ, ವಸತಿ ವ್ಯವಸ್ಥೆ ಮಾಡಿಕೊಳ್ಳಬೇಕಾಗಿದೆ. ಈ ಹಿಂದೆ ಇದ್ದಂತೆ ಈಗ ತುಮಕೂರಿನಲ್ಲಿ ಸ್ಟೂಡೆಂಟ್ ರೂಂಗಳನ್ನು ಕಟ್ಟಿ ಬಾಡಿಗೆಗೆ ಕೊಡುವವರು ಕಮ್ಮಿಯಾಗಿದ್ದಾರೆ. ಬಾಡಿಗೆದಾರರಿಗೆ ನೀರು ಹೊಂದಿಸುವುದು, ಅವರನ್ನು ನಿಭಾಯಿಸುವುದು ಕಷ್ಟ. ಅದರ ಬದಲು ಸಣ್ಣ ಮನೆ ಕಟ್ಟಿ ಸಂಸಾರಸ್ಥರಿಗೆ ಬಾಡಿಗೆ ನೀಡುವುದು ಮೇಲು ಎಂದು ಮನೆ ಮಾಲೀಕರು ವಿದ್ಯಾರ್ಥಿಗಳಿಗೆ ಕೊಠಡಿ ಕಟ್ಟುವುದನ್ನು ಕೈಬಿಟ್ಟಿದ್ದಾರೆ. ಹೀಗಾಗಿ ನಗರದಲ್ಲಿ ವಿದ್ಯಾರ್ಥಿಗಳಿಗೆ ಬಾಡಿಗೆ ಕೊಠಡಿಗಳು ಸಿಗುವುದೂ ಕಷ್ಟ. ಸಣ್ಣ ಮನೆ ಹಿಡಿಯಬೇಕೆಂದರೆ ದುಬಾರಿ ಬಾಡಿಗೆ. ಹೀಗಾಗಿ ಬಡ ವಿದ್ಯಾರ್ಥಿಗಳಿಗೆ ತುಮಕೂರು ವಾಸ್ತವ್ಯ ಕಷ್ಟವಾಗಿದೆ.

ಬಿಸಿಎಂ ಹಾಸ್ಟೆಲ್‍ಗೆ ಬೇಡಿಕೆ

     ತುಮಕೂರಿನಲ್ಲಿ ಎಸ್ಸಿ ಎಸ್ಟಿ ವರ್ಗದ ಬಾಲಕ, ಬಾಲಕಿಯರ 20 ಹಾಸ್ಟೆಲ್‍ಗಳಿವೆ. ಈ ವರ್ಗದ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸಮಸ್ಯೆ ಅಷ್ಟಾಗಿ ಇಲ್ಲ. ಆದರೆ, ಹೆಚ್ಚು ಬೇಡಿಕೆ ಇರುವ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಅಷ್ಟೂ ಸಂಖ್ಯೆಯ ವಿದ್ಯಾರ್ಥಿ ನಿಲಯಗಳಿಲ್ಲ. ಓಬಿಸಿ ವರ್ಗದವರ 17 ಹಾಸ್ಟೆಲ್‍ಗಳು ತುಮಕೂರಿನಲ್ಲಿವೆ. ಇದರಲ್ಲಿ ಮೂರು ಮೆಟ್ರಿಕ್ ಪೂರ್ವ, ಉಳಿದ 14 ಮೆಟ್ರಿಕ್ ನಂತರದ ಕಾಲೇಜು ವಿದ್ಯಾರ್ಥಿಗಳಿಗೆ. ಈ ಪೈಕಿ 11 ಬಾಲಕಿಯರಿಗೆ, 6 ಬಾಲಕರ ವಿದ್ಯಾರ್ಥಿನಿಲಯಗಳು. ಬಿಸಿಎಂ ಹಾಸ್ಟೆಲ್ ಪ್ರವೇಶ ಬಯಸಿ ಪ್ರತಿ ವರ್ಷ ಸುಮಾರು ನಾಲ್ಕೈದು ಸಾವಿರದಷ್ಟು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುತ್ತಾರೆ. ಅವರಲ್ಲಿ ಗರಿಷ್ಠ 800 ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ನೀಡಲಷ್ಟೇ ಸಾಧ್ಯವಾಗುತ್ತದೆ, ಉಳಿದ ವಿದ್ಯಾರ್ಥಿಗಳ ಪಾಡೇನು ಎಂಬುದು ಪ್ರತಿ ವರ್ಷದ ಪ್ರಶ್ನೆ.

       ಬಿಸಿಎಂ ಇಲಾಖೆಯ 17 ಹಾಸ್ಟೆಲ್‍ಗಳಲ್ಲಿ 7 ಮಾತ್ರ ಸ್ವಂತ ಕಟ್ಟಡ. ಉಳಿದ 10 ವಿದ್ಯಾರ್ಥಿ ನಿಲಯಗಳನ್ನು ಬಾಡಿಗೆ ಕಟ್ಟಡದಲ್ಲಿ ನಡೆಸಲಾಗುತ್ತದೆ. ಅಂತರಸನಹಳ್ಳಿ, ದಿಬ್ಬೂರು, ಕ್ಯಾತ್ಸಂದ್ರದಲ್ಲಿ ಒಂದೊಂದು ಬಿಸಿಎಂ ಹಾಸ್ಟೆಲ್ ಕಟ್ಟಡ ನಿರ್ಮಿಸಲಾಗುತ್ತಿದೆ. ಒಂದೆರಡು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಂಡು ಈ ಶೈಕ್ಷಣಿಕ ವರ್ಷದಿಂದಲೇ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವ ಪ್ರಯತ್ನ ನಡೆದಿದೆ.

      ನಗರದ ಬಹುತೇಕ ಹಾಸ್ಟೆಲ್‍ಗಳಲ್ಲಿ ನೀರಿನ ಸಮಸ್ಯೆ ಇದೆ. ಇಲ್ಲಿ ಕೊರೆದಿರುವ ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಕೆಲವು ಬತ್ತಿ ಹೋಗಿದೆ. ಇಂತಹ ಕಡೆ ಟ್ಯಾಂಕರ್‍ಗಳಲ್ಲಿ ನೀರು ಖರೀದಿಸಿ ಸರಬರಾಜು ಮಾಡಲಾಗುತ್ತಿದೆ. ಒಂದು ಹಾಸ್ಟೆಲ್‍ಗೆ ನಿತ್ಯ 3-4 ಟ್ಯಾಂಕರ್ ನೀರು ಬೇಕು. ಇದು ಹೆಚ್ಚವರಿ ಹೊರೆಯಾಗಿದೆ. ಹಾಸ್ಟೆಲ್‍ಗಳ ಊಟ, ತಿಂಡಿ ಇನ್ನಿತರೆ ಸೌಲಭ್ಯಗಳ ಬಗ್ಗೆ ಆಗಿದ್ದಾಗ್ಯೆ ವಿದ್ಯಾರ್ಥಿಗಳಿಂದ ದೂರು ಬರುತ್ತಲೇ ಇರುತ್ತವೆ. ಕೆಲವೆಡೆ ಸಿಬ್ಬಂದಿ ಉತ್ತಮವಾಗಿ ನಿರ್ವಹಣೆ ಮಾಡುತ್ತಿದ್ದಾರೆ. ದೊಡ್ಡ ಮನೆ, ಗೋಡೌನ್ ಮಾದರಿಯ ಕಟ್ಟಡಗಳನ್ನು ಹಾಸ್ಟೆಲ್‍ಗೆ ಬಾಡಿಗೆ ಪಡೆಯಲಾಗಿದೆ. ಹಾಸ್ಟೆಲ್ ಲಕ್ಷಣವಿಲ್ಲದ ಅಂತಹ ಕಟ್ಟಡಗಳು ವಿದ್ಯಾರ್ಥಿಗಳಿಗೆ ಅನಾನುಕೂಲವಾಗಿವೆ.

ಪ್ರವೇಶ ಸುಲಭವಲ್ಲ:

     ಈಗ ಎಲ್ಲಾ ಹಾಸ್ಟೆಲ್ ಪ್ರವೇಶಕ್ಕೂ ವಿದ್ಯಾರ್ಥಿಗಳು ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಬೇಕು. ಆಯಾ ಶಾಸಕರು, ತಹಶೀಲ್ದಾರರು, ತಾಲ್ಲೂಕು ಪಂಚಾಯ್ತಿ ಇಓ, ಸಂಬಂಧಿಸಿದ ಇಲಾಖೆ ತಾಲ್ಲೂಕು ಅಧಿಕಾರಿ ವಿದ್ಯಾರ್ಥಿ ನಿಲಯ ಸಮಿತಿಯಲ್ಲಿದ್ದಾರೆ. ವಿದ್ಯಾರ್ಥಿ ಶಾಲಾ, ಕಾಲೇಜು ಪರೀಕ್ಷೆಯಲ್ಲಿ ಪಡೆದ ಅಂಕ, ಕುಟುಂಬದ ವರಮಾನ, ಜಾತಿ ಪ್ರಮಾಣ ಪತ್ರ ಆಧರಿಸಿ ಹಾಸ್ಟೆಲ್ ಸಮಿತಿ ಪ್ರವೇಶ ನೀಡುತ್ತದೆ. ಆದರೆ, ಮಾನದಂಡದ ಎಲ್ಲಾ ಅರ್ಹತೆ ಇದ್ದರೂ ಬಿಸಿಎಂ ಹಾಸ್ಟೆಲ್‍ನಲ್ಲಿ ಸೀಟು ಸಿಗುತ್ತದೆ ಎಂದು ನಿರೀಕ್ಷಿಸುವಂತಿಲ್ಲ.

     ಮುಖ್ಯಮಂತ್ರಿ, ಮಂತ್ರಿ, ಶಾಸಕರಿಂದ ಜಿಲ್ಲಾ ಪಂಚಾಯ್ತಿ ಸದಸ್ಯರವರೆಗೆ ಹಾಸ್ಟೆಲ್ ಸೀಟಿಗೆ ಶಿಫಾರಸ್ಸುಗಳು ಬರುತ್ತವೆ. ಇಂತಹ ಒತ್ತಡ ನಿಭಾಯಿಸಿ ಸಾಮಾನ್ಯ ವಿದ್ಯಾರ್ಥಿಗಳು ಸೀಟು ಪಡೆಯುವುದು ಸುಲಭಸಾಧ್ಯವಲ್ಲ. ಹಾಸ್ಟೆಲ್ ಸೀಟು ಸಿಗದಿದ್ದ ವಿದ್ಯಾರ್ಥಿಗಳಿಗೆ ಸರ್ಕಾರ ಊಟ, ವಸತಿಗೆಂದು 15 ಸಾವಿರ ರೂ.ಗಳ ಸ್ಕಾಲರ್‍ಶಿಪ್ ನೀಡುತ್ತದೆ. ಆದರೆ ಈ ಹಣ ಬರುವುದು ಪರೀಕ್ಷೆಯ ಹೊತ್ತಿಗೆ.

      ಹಲವು ಕಾಲೇಜುಗಳಲ್ಲಿ ಈಗಾಗಲೇ ತರಗತಿಗಳು ಆರಂಭವಾಗಿವೆ. ಆದರೆ, ಹಾಸ್ಟೆಲ್‍ಗಳಲ್ಲಿ ಇನ್ನೂ ಪ್ರವೇಶ ಪ್ರಕ್ರಿಯೆ ನಡೆಯುತ್ತಿದೆ. ಕೆಲ ಖಾಸಗಿ ಕಾಲೇಜುಗಳು ಅವಧಿಗೆ ಮೊದಲೇ ತರಗತಿ ಪ್ರಾರಂಭಿಸಿವೆ. ಕಾಲೇಜುಗಳಲ್ಲಿ ಅಟೆಂಡೆನ್ಸ್ ಕಡ್ಡಾಯ ಮಾಡಲಾಗಿದೆ. ವಿದ್ಯಾರ್ಥಿ ನಿಲಯಗಳು ಆರಂಭವಾಗುವವರೆಗೆ ವಿದ್ಯಾರ್ಥಿಗಳು ಊಟ, ವಸತಿಗೆ ಪರದಾಡಬೇಕಾಗಿದೆ.

      ತುಮಕೂರಿನಲ್ಲಿ ಹಾಸ್ಟೆಲ್ ಬೇಡಿಕೆ ಹೆಚ್ಚಾಗಿರುವ ಕಾರಣ ಹೆಚ್ಚುವರಿ ವಿದ್ಯಾರ್ಥಿನಿಲಯ ಮಂಜೂರು ಮಾಡಬೇಕು ಎಂದು ಶಾಸಕ ಜಿ ಬಿ ಜ್ಯೋತಿಗಣೇಶ್ ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿದ್ದಾರೆ, ಉಪ ಮುಖ್ಯಂತ್ರಿ ಡಾ. ಪರಮೇಶ್ವರ್ ಹಾಗೂ ಸಂಬಂಧಿಸಿದ ಸಚಿವರ ಗಮನ ಸೆಳೆದಿದ್ದಾರೆ. ಸದ್ಯಕ್ಕೆ ಸಮಸ್ಯೆ ಮುಂದುವರೆದಿದೆ, ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಲೇ ಇದ್ದಾರೆ.
 

  ತುಮಕೂರು ವಿವಿಯಲ್ಲಿ ಬಿಸಿಎಂ ಹಾಸ್ಟೆಲ್ ಇಲ್ಲದೆ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ. ನಗರದ ಹೆಚ್ಚಿನ ಹಾಸ್ಟೆಲ್‍ಗಳು ಹೊರವಲಯದಲ್ಲಿವೆ. ವಿದ್ಯಾರ್ಥಿಗಳು ಕಾಲೇಜಿಗೆ ಬಂದು ಹೋಗಲು ತೊಂದರೆಯಾಗುತ್ತದೆ. ನಗರದಲ್ಲಿ ಇನ್ನಷ್ಟು ಬಿಸಿಎಂ ವಿದ್ಯಾರ್ಥಿ ನಿಲಯಗಳ ಸ್ಥಾಪನೆ ಆಗಬೇಕಾಗಿದೆ

 ಬಿ. ಕರಿಯಣ್ಣ ವಿವಿಯ ಕಲಾ ಕಾಲೇಜಿನ ಸಹ ಪ್ರಾಧ್ಯಾಪಕ.

   ಕಾಲೇಜು ಆರಂಭವಾಗುವ ದಿನದಂದೇ ಹಾಸ್ಟೆಲ್‍ಗಳು ಆರಂಭವಾಗುವುದಿಲ್ಲ. ಈ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಊಟ, ವಸತಿಗೆ ತೊಂದರೆಯಾಗುತ್ತದೆ. ಇಲಾಖೆಗಳು ಮೊದಲೇ ಯೋಜನೆ ಮಾಡಿ ಸಕಾಲದಲ್ಲಿ ಹಾಸ್ಟೆಲ್ ತೆರೆಯಲು ಕ್ರಮ ತೆಗೆದುಕೊಳ್ಳಬೇಕು.

ಎನ್. ನಾಗಪ್ಪ, ನಿವೃತ್ತ ಪ್ರಾಚಾರ್ಯ.

 
  ಕಾಲೇಜುಗಳು ಆರಂಭದ ವೇಳೆಗೇ ಹಾಸ್ಟೆಲ್ ಶುರುಮಾಡಲಾಗುತ್ತದೆ. ಎಷ್ಟೇ ವಿದ್ಯಾರ್ಥಿಗಳಿರಲಿ ಅವರ ಪರೀಕ್ಷೆಗಳು ಮುಗಿಯುವ ತನಕ ಅವರಿಗೆ ಹಾಸ್ಟೆಲ್‍ನಲ್ಲಿ ಊಟ, ವಸತಿ ಒದಗಿಸಲಾಗುತ್ತದೆ.

ಡಾ. ಜಿ.ಪಿ. ದೇವರಾಜು, ಜಂಟಿ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap