ದಾವಣಗೆರೆ:
ವಿಶೇಷ ವರದಿ:ವಿನಾಯಕ ಪೂಜಾರ್
ಹಿಂದಿನ ಸಿದ್ದರಾಮಯ್ಯ ಸರ್ಕಾರವು 2013-14ನೇ ಶೈಕ್ಷಣಿಕ ವರ್ಷದಲ್ಲಿ ಅರ್ಜಿ ಸಲ್ಲಿಸಿದ ಪರಿಶಿಷ್ಟ ಜಾತಿ, ಪಂಗಡದ ಎಲ್ಲ ವಿದ್ಯಾರ್ಥಿಗಳಿಗೂ ಹಾಸ್ಟೆಲ್ ಸೌಲಭ್ಯ ಕಲ್ಪಿಸಬೇಕು ಆದೇಶ ಹೊರಡಿಸಿತ್ತು. ಆದರೆ. ಈಗಿನ ರಾಜ್ಯದ ಮೈತ್ರಿ ಸರ್ಕಾರವು ಈ ಆದೇಶವನ್ನು ರದ್ದು ಪಡಿಸಿದ ಪರಿಣಾಮ ಹಾಸ್ಟೆಲ್ ಸೌಲಭ್ಯದಿಂದ ವಂಚಿತವಾಗುವ ಆತಂಕ ಪರಿಶಿಷ್ಟ ವಿದ್ಯಾರ್ಥಿಗಳಲ್ಲಿ ಮನೆ ಮಾಡಿದೆ.
ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅಂದರೆ, 2013ರಲ್ಲಿ ಅರ್ಜಿಸಲ್ಲಿಸಿದ ಎಲ್ಲರಿಗೂ ಹಾಸ್ಟೆಲ್ ನೀಡಬೇಕೆಂದು ಆದೇಶಿಸಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಆದ್ಯತೆ ನೀಡಿತ್ತು. ಹೀಗಾಗಿ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಲಭ್ಯವಿರುವ ಮೆಟ್ರಿಕ್ ನಂತರದ ಹಾಸ್ಟೆಲ್‍ಗಳಲ್ಲಿ ಸೀಟು ನೀಡಿ, ಉಳಿದ ವಿದ್ಯಾರ್ಥಿಗಳಿಗೆ ಬಾಡಿಗೆ ಕಟ್ಟಡ ಪಡೆದು ವಸತಿ, ಊಟ ಕಲ್ಪಿಸುವಂತೆ ಆದೇಶಿಸಿತ್ತು.
ಆದ್ದರಿಂದ ಅರ್ಜಿ ಸಲ್ಲಿಸಿದ ಎಲ್ಲರಿಗೂ ಹಾಸ್ಟೆಲ್ ಸೌಲಭ್ಯ ದೊರಕಿತ್ತು. ಈ ಸುತ್ತೋಲೆಯನ್ನು ರದ್ದುಪಡಿಸಿರುವ ಸಮ್ಮಿಶ್ರ ಸರ್ಕಾರ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಹಾಸ್ಟೆಲ್‍ಗಳಲ್ಲಿನ ಮಂಜೂರಾತಿ ಸಂಖ್ಯೆಗೆ ಅನುಗುಣವಾಗಿ ಮಾತ್ರ ಸೀಟು ಭರ್ತಿ ಮಾಡಬೇಕು ಹಾಗೂ ಮಂಜೂರಾತಿ ಆಗಿರುವ ಸಂಖ್ಯೆಯಷ್ಟು ಪರಿಶಿಷ್ಟ ವಿದ್ಯಾರ್ಥಿಗಳು ಪ್ರವೇಶ ಪಡೆಯದಿದ್ದರೆ, ಎಸ್ಸಿ-ಎಸ್ಟಿ ಹಾಸ್ಟೆಲ್‍ಗಳಲ್ಲಿ ಬೇರೆ ವರ್ಗದ ವಿದ್ಯಾರ್ಥಿಗಳಿಗೂ ಪ್ರವೇಶ ನೀಡಬೇಕೆಂಬ ಆದೇಶ ಹೊರಡಿಸಿರುವುದು ಅತ್ಯಂತ ಅವೈಜ್ಞಾನಿಕವಾಗಿದೆ.
ಏಕೆಂದರೆ, ಒಂದು ಹಾಸ್ಟೆಲ್‍ನಲ್ಲಿ 100 ಮಂಜೂರಾದ ಸೀಟುಗಳಿದ್ದರೆ, ಅಲ್ಲಿ ಸಿದ್ದರಾಮಯ್ಯನವರ ಸರ್ಕಾರದ ಅವಧಿಯಲ್ಲಿ ಮಾಡಿದ ಆದೇಶದ ಪರಿಣಾಮದಿಂದಾಗಿ 200 ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿತ್ತು. ಹಿಂದಿನ ವರ್ಷ ದ್ವಿತೀಯ ಪಿಯು, ಪದವಿ ಅಥವಾ ಸ್ನಾತಕೋತ್ತರ ಪದವಿ ಮುಗಿಸಿ ಹೊರಗೆ ಹೋದವರ ಸಂಖ್ಯೆ 50 ರಷ್ಟಿದೆ. ಹೀಗಾಗಿ ಆ ಹಾಸ್ಟೆಲ್‍ಗಳಲ್ಲಿ 150 ವಿದ್ಯಾರ್ಥಿಗಳು ಉಳಿದಿರುತ್ತಾರೆ.
ವಾಸ್ತವ ಪರಿಸ್ಥಿತಿ ಹೀಗಿರುವಾಗ ಸರ್ಕಾರದ ಹೊಸ ಆದೇಶದ ಪ್ರಕಾರ ಈ ಶೈಕ್ಷಣಿಕ ಸಾಲಿನಲ್ಲಿ ಇಂತಹ ಹಾಸ್ಟೆಲ್‍ಗಳಲ್ಲಿ ಒಬ್ಬ ವಿದ್ಯಾರ್ಥಿಗೂ ಪ್ರವೇಶ ನೀಡಲು ಸಾಧ್ಯವಿಲ್ಲ. ಪರಿಶಿಷ್ಟ ಜಾತಿಯವರಿಗೆ ಅಲ್ಲಿ ಸೀಟು ಸಿಗುವುದು ದುಸ್ತರವಾಗಿರುವಾಗ ಇನ್ನೂ ಬೇರೆ ಸಮುದಾಯದ ಮಕ್ಕಳಿಗೆ ಹೇಗೆ ಹಾಸ್ಟೆಲ್ ಸೌಲಭ್ಯ ನೀಡಲು ಸಾಧ್ಯ ಎಂದು ಹೆಸರು ಹೇಳಲಿಚ್ಚಸದ ವಾರ್ಡ್‍ನ್ ಒಬ್ಬರು ಸರ್ಕಾರದ ಕ್ರಮವನ್ನು ಪ್ರಶ್ನಿಸಿದ್ದಾರೆ.
ದಾವಣಗೆರೆ ಜಿಲ್ಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ಒಟ್ಟು 28 ಮೆಟ್ರಿಕ್ ನಂತರದ ಹಾಸ್ಟೆಲ್‍ಗಳಿದ್ದು, 3,289 ಮಂಜೂರಾತಿ ಸೀಟುಗಳಿವೆ. ಆದರೆ, ಸರ್ಕಾರದ ಹಿಂದಿನ ಆದೇಶದ ಪ್ರಕಾರ ಈ ಹಾಸ್ಟೆಲ್‍ಗಳಲ್ಲಿ ಮಂಜೂರಾತಿ ಸೀಟಿಗೆ ದ್ವಿಗುಣವಾಗಿ ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗಿತ್ತು. ಆದರೆ, ಈ ವಿದ್ಯಾರ್ಥಿಗಳ ಪೈಕಿ ಶೇ.30 ರಷ್ಟು ವಿದ್ಯಾರ್ಥಿಗಳು ವ್ಯಾಸಂಗ ಮುಗಿಸಿ ಹೊರ ಹೋಗಿರಬಹುದು.
ಹೀಗಾಗಿ ಇನ್ನುಳಿದ ಶೇ.70 ರಷ್ಟು ವಿದ್ಯಾರ್ಥಿಗಳು ಈ ಹಾಸ್ಟೆಲ್‍ಗಳಲ್ಲಿದ್ದುಕೊಂಡು ವ್ಯಾಸಂಗ ಮುಂದುವರೆಸಿದ್ದು, ಮಂಜೂರಾತಿ ಸೀಟ್‍ಗಿಂತ ಹೆಚ್ಚುವರಿ ವಿದ್ಯಾರ್ಥಿಗಳು ಹಾಸ್ಟೆಲ್‍ಗಳಲ್ಲಿದ್ದಾರೆ.
ಆದ್ದರಿಂದ ಪ್ರಸಕ್ತ ವರ್ಷ ಪ್ರಥಮ ಪಿಯು, ಪದವಿ ಅಥವಾ ಸ್ನಾತಕೋತ್ತರ ಪದವಿ ಕಾಲೇಜುಗಳಿಗೆ ಪ್ರವೇಶ ಪಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ಹಾಸ್ಟೆಲ್ ಸೇರುವ ಕನಸಿಗೆ ಸರ್ಕಾರದ ಹೊಸ ಆದೇಶದಿಂದ ತಣ್ಣೀರು ಎರಚಿದಂತಾಗಿದೆ.
ಹಾಸ್ಟೆಲ್ ಸಿಗುವ ಭರವಸೆ ಇಟ್ಟುಕೊಂಡು ದೂರದ ಊರುಗಳಿಂದ ನಗರ, ಪಟ್ಟಣಗಳಿಗೆ ಬಂದ ವಿದ್ಯಾರ್ಥಿಗಳು ಹಾಸ್ಟೆಲ್‍ಗಳಿಗಾಗಿ ಅರ್ಜಿ ಸಲ್ಲಿಸಿ, ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಸ್ಟೆಲ್‍ಗೆ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಲು ಜುಲೈ 31 ಕೊನೆಯ ದಿನಾಂಕವಾಗಿದ್ದು, ಸಮಾಜ ಕಲ್ಯಾಣ ಇಲಾಖೆಯು ಹಾಸ್ಟೆಲ್‍ಗೆ ಆಯ್ಕೆಯಾದ ವಿದ್ಯಾರ್ಥಿಗಳ ಪಟ್ಟಿಯನ್ನು ಆಗಸ್ಟ್ 1ರಂದು ಆಯಾ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಕಚೇರಿಯಲ್ಲಿ ಪ್ರಕಟಿಸಲು ಸಿದ್ಧತೆ ನಡೆಸಿದೆ.
ಆದರೆ, ವಿದ್ಯಾರ್ಥಿಗಳಲ್ಲಿ ತಮಗೆ ಹಾಸ್ಟೆಲ್ ಸಿಗುತ್ತೋ, ಇಲ್ಲವೋ ಎಂಬ ಆತಂಕ ಕಾಡಲಾರಂಭಿಸಿದೆ. ಅಕಸ್ಮಾತ್ ಹಾಸ್ಟೆಲ್ ಸೌಲಭ್ಯ ಸಿಗದೇ ಇದ್ದಲ್ಲಿ ಜಿಲ್ಲೆಯ ನೂರಾರು ವಿದ್ಯಾರ್ಥಿಗಳು ವ್ಯಾಸಂಗ ಅರ್ಧಕ್ಕೆ ಮೊಟಕು ಗೊಳಿಸುವ ಸಾಧ್ಯತೆಯೂ ಇದೆ. ಹೀಗಾಗಿ ಸಮಾಜ ಕಲ್ಯಾಣ ಇಲಾಖೆ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಹಾಸ್ಟೆಲ್ ಸಂಖ್ಯೆ ಹಾಗೂ ಅವುಗಳ ಮಂಜೂರಾತಿ ಸೀಟ್‍ಗಳ ಸಂಖ್ಯೆಯನ್ನು ಹೆಚ್ಚಿಸಬೇಕೆಂದು ಹಾಸ್ಟೆಲ್‍ಗೆ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.