ಎಸಿಬಿ ಬಲೆಗೆ ಬಿದ್ದ ಹಾಸ್ಟಲ್ ವಾರ್ಡನ್

ಬೆಂಗಳೂರು

         ಆದಾಯ ಮೀರಿ 250 ಕೋಟಿಗೂ ಹೆಚ್ಚಿನ ಮೌಲ್ಯದ ಆಸ್ತಿಯನ್ನು ಅಕ್ರಮವಾಗಿ ಸಂಪಾದಿಸಿರುವ ಆರೋಪದ ಮೇಲೆ ಹಾಸ್ಟೆಲ್ ವಾರ್ಡನ್ ಬಿ.ನಟರಾಜ್ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ಅಧಿಕಾರಿಗಳು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

        ಕನಕಪುರ ತಾಲೂಕು ಕೋಡಿಹಳ್ಳಿ ಹೋಬಳಿ ವ್ಯಾಪ್ತಿಯ ಹುಣಸನಹಳ್ಳಿ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದ ಜೂನಿಯರ್ ವಾರ್ಡನ್ ಬಿ.ನಟರಾಜ್ ವಿರುದ್ಧ ಆದಾಯಕ್ಕಿಂತ ಹೆಚ್ಚಾಗಿ ಅಕ್ರಮ ಆಸ್ತಿಗಳಿಕೆ ಪ್ರಕರಣದ ಸಂಬಂಧ ನ್ಯಾಯಾಲಯದ ನಿರ್ದೇಶನದ ಮೇರೆಗೆ ಪ್ರಕರಣ ದಾಖಲಾಗಿದೆ.

         ನಟರಾಜ್ ಅವರು ತನ್ನ ಹಾಗೂ ಸಹೋದರ,ಸಂಬಂಧಿಕರ ಹೆಸರಲ್ಲಿ ಕನಕಪುರ ತಾಲೂಕಿನಲ್ಲಿ 40 ಎಕರೆಗೂ ಹೆಚ್ಚು,ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನಲ್ಲಿ 15.44 ಎಕರೆ ಹಾಗೂ ಬೆಂಗಳೂರು ಸೇರಿದಂತೆ ವಿವಿಧೆಡೆ 250 ಕೋಟಿ ಮೌಲ್ಯದ ಅಕ್ರಮ ಆಸ್ತಿ ಸಂಪಾದಿಸಿ ಎನ್ನುವ ದೂರು ಬಂದಿದ್ದು ಪ್ರಕರಣವನ್ನು ವಿಚಾರಣೆ ನಡೆಸಿದ ನ್ಯಾಯಾಲಯ ನ.22 ರಂದು ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ಎಸಿಬಿ ಪೊಲೀಸರಿಗೆ ನಿರ್ದೇಶನ ನೀಡಿದೆ.

         ನ್ಯಾಯಾಲಯದ ನಿರ್ದೇಶನದ ಮೇರೆಗೆ ಭ್ರಷ್ಟಾಚಾರ ನಿಗ್ರಹ ದಳದ ಡಿವೈಎಸ್ಪಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ .ನಟರಾಜ್ ಅಕ್ರಮ ಆಸ್ತಿಯ ಬಗ್ಗೆ ಸಾಮಾಜಿಕ ಕಾರ್ಯಕರ್ತ ರವಿಕುಮಾರ್ ಕನಕಪುರ 2ನೇ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯಕ್ಕೆ  2/11-2018 ರಂದು ಪಿಸಿಆರ್ ಪ್ರಕರಣ ದಾಖಲಿಸಿದ್ದರು.

ನಟರಾಜ್ ಅಕ್ರಮ

       ಬಿ.ನಟರಾಜು 1995 ರಲ್ಲಿ ಚನ್ನಪಟ್ಟಣ ತಾಲೂಕು, ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯದಲ್ಲಿ ಜೂನಿಯರ್ ವಾರ್ಡನ್ ಆಗಿ ಕೆಲಸಕ್ಕೆ ಸೇರಿದ್ದಾರೆ. ದಿನಗೂಲಿ ಆಧಾರದಲ್ಲಿ ಮಾಸಿಕ 700 ರೂ.ವೇತನಕ್ಕೆ ಉದ್ಯೋಗಕ್ಕೆ ಸೇರಿದ ಇವರು ನಂತರ ಕನಕಪುರ ತಾಲೂಕಿಗೆ ವರ್ಗಾವಣೆಗೊಂಡು ಕಾಯಂ ನೌಕರರಾಗಿ ಕರ್ತವ್ಯ ನಿರ್ವಹಿಸುತ್ತಿರುತ್ತಾರೆ.ಇವರು ತಮ್ಮ ಸೇವಾವಧಿಯಲ್ಲಿ ಆದಾಯಕ್ಕೂ ಮೀರಿದ ಅಪಾರ ಪ್ರಮಾಣದ ಅಕ್ರಮ ಆಸ್ತಿ ಸಂಪಾದಿಸಿದ್ದಾರೆ ಎಂದು ದೂರಲಾಗಿದೆ.

       ನಟರಾಜ್ ಅವರಿಗೆ ಪಿತ್ರಾರ್ಜಿತ ಆಸ್ತಿಯಾಗಿ ಕನಕಪುರ ತಾಲೂಕಿನ ಕೋಡಿಹಳ್ಳಿ ಹೋಬಳಿಯ ಎರಂಗೆರೆ ಗ್ರಾಮದ ಸರ್ವೆ ನಂಬರ್ 40ರಲ್ಲಿ 40 ಎಕರೆ ಖುಷ್ಕಿ ಜಮೀನು ಮಾತ್ರ ಇದೆ. ಸರ್ಕಾರಿ ಸಂಬಳ ಹೊರತುಪಡಿಸಿ ನಟರಾಜ್ ಅವರಿಗೆ ಮತ್ಯಾವುದೇ ಆದಾಯ ಮೂಲಗಳು ಇರಲಿಲ್ಲ.

       ಕನಕಪುರಕ್ಕೆ ವರ್ಗಾವಣೆಯಾದ ನಂತರ ನಟರಾಜು ಅವರು ಹಂತ ಹಂತವಾಗಿ ಏರಂಗೆರೆ,ಎಡಮಡು, ಹಾರೋಹಳ್ಳಿ, ಚಿಕ್ಕಏರಂಗೆರೆ, ಕಗ್ಗಲಹಳ್ಳಿ, ಕೊಳ್ಳೇಗಾಲ ತಾಲೂಕಿನ ಮಣಹಳ್ಳಿ ಗ್ರಾಮಗಳಲ್ಲಿ ಎಕರೆಗಟ್ಟಲೆ ಜಮೀನು ಖರೀದಿಸುತ್ತಾರೆ. ಕೆಲವನ್ನು ತಮ್ಮ ಹೆಸರಿಗೆ ನೇರವಾಗಿ ನೊಂದಾಯಿಸಿಕೊಂಡಿದ್ದಾರೆ. ಇನ್ನು ಕೆಲವು ಜಮೀನನ್ನು ಸಹೋದರ ನಾಗರಾಜು ಮತ್ತು ತನ್ನ ಹೆಸರಿಗೆ ಜಂಟಿಯಾಗಿ ಖಾತೆ ಮಾಡಿಸಿಕೊಂಡಿದ್ದಾರೆ. ಮತ್ತೆ ಕೆಲವನ್ನು ತಂದೆ ಹೆಸರಿಗೆ ಮಾಡಿ ನಂತರ ದಾನ ಪತ್ರದ ಮೂಲಕ ತನ್ನ ಹಾಗೂ ಸಹೋದರನ ಹೆಸರಿಗೆ ಖಾತೆಗಳನ್ನು ಮಾಡಿಸಿಕೊಂಡಿದ್ದು, ಇವರ ಬೇನಾಮಿ ಆಸ್ತಿ ಸಂಬಂಧಿಕರ ಹೆಸರಲ್ಲಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

       ಅಲ್ಲದೆ ಏರಂಗೆರೆಯಲ್ಲಿ 2 ಕೋಟಿಗೂ ಅಧಿಕ ಬಂಡವಾಳವನ್ನು ಹೂಡಿ ಇಟ್ಟಿಗೆ ಕಾರ್ಖಾನೆ, ಜ್ಯೂಸ್ ಫ್ಯಾಕ್ಟರಿ, ವಾಸದ ಮನೆ ಸೇರಿದಂತೆ ವಿವಿಧ ಕಟ್ಟಡಗಳನ್ನು ನಿರ್ಮಾಣ ಮಾಡಿರುತ್ತಾರೆ. ಬೆಂಗಳೂರಿನ ಜೆಪಿ ನಗರದಲ್ಲಿ ಮೂರಂತಸ್ತಿನ ಮನೆ ಮತ್ತು ಕನಕಪುರದಲ್ಲಿ ಮಹಡಿ ಮನೆಯನ್ನು ನಿರ್ಮಿಸಿದ್ದಾರೆ. ಇವೆಲ್ಲವೂ ಅಕ್ರಮ ಆಸ್ತಿ ಎಂದು ದೂರಲಾಗಿದೆ.

250 ಕೋಟಿ ಬೇನಾಮಿ ಆಸ್ತಿ

        ಸ್ಕಾರ್ಪಿಯೋ ವಾಹನ, ಟಾಟಾ ಸುಮೋ ಕಾರು, ಮೂರು ಬೈಕ್ ಸೇರಿದಂತೆ ಹಲವು ವಾಹನಗಳನ್ನು ಹೊಂದಿದ್ದಾರೆ. ಅಲ್ಲದೇ ಮಕ್ಕಳು ಮತ್ತು ಸಂಬಂಧಿಕ ಹೆಸರಲ್ಲೂ ಹಲವು ವಾಹನಗಳಿವೆ. ಆರೋಪಿ ಒಟ್ಟಾರೆ ಕನಕಪುರ ತಾಲೂಕಿನಲ್ಲಿ 40 ಎಕರೆಗೂ ಹೆಚ್ಚು ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ 15 ಎಕರೆ ಜಮೀನು ಹೊಂದಿದ್ದಾರೆ ಎನ್ನಲಾಗಿದೆ.

         ಚಿನ್ನಾಭರಣ ಖರೀದಿ, ವಿವಿಧ ಬ್ಯಾಂಕ್‍ಗಳಲ್ಲಿ ತನ್ನ ಹಾಗೂ ಸಹೋದರರ ಹೆಸರಿನಲ್ಲಿ 250 ಕೋಟಿ ಮೌಲ್ಯದ ಬೇನಾಮಿ ಆಸ್ತಿಯನ್ನು ಮಾಡಿದ್ದಾರೆ ಎಂಬ ಆರೋಪದ ಮೇರೆಗೆ ಕನಕಪುರ ನ್ಯಾಯಾಲಯದಲ್ಲಿ ಪಿಸಿಆರ್ ಪ್ರಕರಣ ದಾಖಲಾಗಿದೆ.

         ಪಿಸಿಆರ್ ಸಂಖ್ಯೆ 5003/2018ರ ದೂರಿನನ್ವಯ ಭ್ರಷ್ಟಾಚಾರ ನಿಗ್ರಹ ಕಾಯ್ದೆ (ಪಿ.ಸಿ.ಆಕ್ಟ್ 1998ರನ್ವಯ) ಅಡಿ ಪ್ರಕರಣ ದಾಖಲಿಸಿ ವರದಿ ಸಲ್ಲಿಸುವಂತೆ ನ್ಯಾಯಾಲಯ ಆದೇಶಿಸಿ, ಡಿ. 3 ರೊಳಗೆ ವರದಿ ಸಲ್ಲಿಸುವಂತೆ ಸೂಚಿಸಿದೆ. ಪ್ರಥಮ ವರ್ತಮಾನ ವರದಿ ಪೊದಾಖಲಿಸಿಕೊಂಡಿರುವ ಕುರಿತು ಲೀಸರು ನ್ಯಾಯಾಲಯದ ಗಮನಕ್ಕೆ ತಂದಿದ್ದು, ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap