ಹುಳಿಯಾರು:
ಪಟ್ಟಣದಲ್ಲಿ ಕಳೆದೊಂದು ವಾರದಿಂದ ಬಿಟ್ಟು ಬಿಡದೆ ಬರುತ್ತಿದ್ದ ಮಳೆಗೆ ನೆನೆದಿದ್ದ ವಾಸದ ಮನೆಯು ಸಂಪೂರ್ಣವಾಗಿ ಕುಸಿದು ಬಿದ್ದು ಮನೆ ಮಂದಿ ಬೀದಿಪಾಲಾಗಿದ್ದಾರೆ. ಹುಳಿಯಾರಿನ ವಸಂತನಗರ ಬಡಾವಣೆಯ ಒಣ ಕಾಲುವೆ ಬಳಿ ಗ್ರಾಂಟ್ ಮನೆಯಲ್ಲಿದ್ದ ತಿಪ್ಪೇಸ್ವಾಮಿ ಉರ್ಫ್ ತಿಪ್ಪಯ್ಯ ಎಂಬಾತನೇ ಮನೆ ಕಳೆದುಕೊಂಡ ನತದೃಷ್ಟನಾಗಿದ್ದಾನೆ.
ಕೂಲಿನಾಲಿ ಮಾಡಿಕೊಂಡಿರುವ ಈತ ತನ್ನ ಮೊಮ್ಮಕ್ಕಳೊಂದಿಗೆ ಈ ಮನೆಯಲ್ಲಿ ವಾಸವಿದ್ದ ಎನ್ನಲಾಗಿದೆ. ಶನಿವಾರ ರಾತ್ರಿ 1.30 ರ ಸಮಯದಲ್ಲಿ ಮನೆ ಕುಸಿದು ಬಿದ್ದಿದ್ದು ಮನೆಯಲ್ಲಿ ಮಲಗಿದ್ದ ತಿಪ್ಪಯ್ಯ ಹಾಗೂ ಮೊಮ್ಮಗಳು ಮನೆಯಿಂದ ಆಚೆ ಓಡಿ ಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮನೆಯಲ್ಲಿದ್ದ ಪಾತ್ರೆ ಪಡಗ, ದಿನಸಿ ಪದಾರ್ಥ, ಬಟ್ಟೆಬರೆ ಮಣ್ಣು ಪಾಲಾಗಿದೆ. ತೀರಾ ನಿರ್ಗತಿಕರಾಗಿರುವ ಈತ ವಾಸ ಮಾಡಲು ಮನೆ ಇಲ್ಲದೆ ಇದೀಗ ಪರದಾಡುತ್ತಿದ್ದು ತಾಲ್ಲೂಕು ಆಡಳಿತ ಹಾಗೂ ಸ್ಥಳೀಯ ಪಟ್ಟಣ ಪಂಚಾಯಿತಿ ಈತನ ನೆರವಿಗೆ ಬರಬೇಕಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ