ತುರುವೇಕೆರೆ
ಧಾರಾಕಾರ ಮಳೆಯಿಂದ ಮನೆಯೊಂದು ಮುರಿದು ಬಿದ್ದು ಅದೃಷ್ಟವಶಾತ್ ಕುಟುಂಬದವರು ಸ್ವಲ್ಪದರಲ್ಲಿಯೇ ಪಾರಾಗಿರುವ ಘಟನೆ ಚಿಕ್ಕಪುರ ಗ್ರಾಮದಲ್ಲಿ ಸೋಮವಾರ ಸಂಜೆ ನಡೆದಿದೆ.
ತಾಲ್ಲೂಕಿನ ಮಾಯಸಂದ್ರ ಹೋಬಳಿ ಚಿಕ್ಕಪುರ ಗ್ರಾಮದ ಲಕ್ಷ್ಮಣ ಎಂಬುವವರೇ ಮನೆಯನ್ನು ಕಳೆದುಕೊಂಡ ದುರ್ದೈವಿಗಳು. ಸೋಮವಾರ ಸುರಿದ ಸುರಿದ ಮಳೆಯಿಂದ ಮನೆ ಬಿರುಕು ಬಿಟ್ಟು ಸ್ವಲ್ಪ ಗೋಡೆ ಮಣ್ಣು ಕೆಳಕ್ಕೆ ಬಿದ್ದಿದೆ. ತಕ್ಷಣ ಎಚ್ಚೆತ್ತ ಕುಟುಂಬದವರು ಕೂಡಲೇ ಹೊರಗೋಡಿ ಬಂದಿದ್ದಾರೆ. ಸ್ವಲ್ಪ ಸಮಯದ ನಂತರ ನೋಡ ನೋಡುತ್ತಿದ್ದಂತೆ ಮನೆ ಕಳಚಿ ಬಿದ್ದಿದೆ. 4 ಮೇಕೆಗಳಲ್ಲಿ ಎರಡು ಮೇಕೆಗಳು ಅವಶೇಷದಡಿಯಲ್ಲಿ ಸಿಲುಕಿಕೊಂಡಿದ್ದು ಗ್ರಾಮಸ್ಥರು ಕೂಡಲೇ ಜೀವಾಪಾಯದಿಂದ ಪಾರುಮಾಡಿದ್ದಾರೆ. ಸುಮಾರು 15 ಚೀಲ ರಾಗಿ, ದಿನಸಿ, ಪಾತ್ರೆಗಳು ಸೇರಿದಂತೆ ಅನೇಕ ವಸ್ತುಗಳು ಮಣ್ಣು ಪಾಲಾಗಿವೆ. ಸ್ಪ್ಲೆಂಡರ್ ಬೈಕೊಂದು ಅವಶೇಷದಡಿ ಸಿಲುಕಿದೆ. ಗ್ರಾಮಪಂಚಾಯ್ತಿ ಸದಸ್ಯರಾದ ಅಶೋಕ್ ಹಾಗೂ ನಂಜುಂಡಪ್ಪ ನೆರವಿಗೆ ಬಂದು 6 ಜನರನ್ನು ತಕ್ಷಣ ಬೇರೆ ಮನೆಯಲ್ಲಿ ಆಶ್ರಯ ನೀಡಿದ್ದಾರೆ.
ಲಕ್ಷ್ಮಣನ ಸಂಸಾರ ಮನೆ ಹಾನಿಯಿಂದ ಬೀದಿಗೆ ಬಂದಿದ್ದು ಸಂಬಂಧಿಸಿದವರು ತಕ್ಷಣ ಈತನ ನೆರವಿಗೆ ಧಾವಿಸಿ ಆಶ್ರಯ ನೀಡಬೇಕೆಂದು ಗ್ರಾ.ಪಂ.ಸದಸ್ಯ ಅಶೋಕ್ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ