ಸ್ತ್ರೀಯರನ್ನ ಹಿಂಸಿಸುವ ಮನೆಗಳಲ್ಲಿ ದಾರಿದ್ರ್ಯ

ದಾವಣಗೆರೆ

     ಮಹಿಳೆಯರನ್ನು ಹಿಂಸಿಸುವ ಮನೆಯು ದಾರಿದ್ರ್ಯಕ್ಕೆ ತುತ್ತಾಗಲಿದೆ ಎಂದು ಶ್ರೀಕ್ಷೇತ್ರ ಕರ್ಕಿಯ ದೈವಜ್ಞ ಬ್ರಾಹ್ಮಣ ಮಠದ ಪೀಠಾಧ್ಯಕ್ಷ ಶ್ರೀಸಚ್ಚಿದಾನಂದ ಜ್ಞಾನೇಶ್ವರಭಾರತೀ ಸ್ವಾಮೀಜಿ ತಿಳಿಸಿದರು.

       ನಗರದ ಶ್ರೀಮತಿ ಗೌರಮ್ಮ ನರಹರಿ ಶೇಟ್ ಸಭಾ ಭವನದಲ್ಲಿ ದೈವಜ್ಞ ಬ್ರಾಹ್ಮಣ ಮಂಡಳಿ, ಅಖಿಲ ಕರ್ನಾಟಕ ದೈವಜ್ಞ ಬ್ರಾಹ್ಮಣ ಮಹಿಳಾ ಮಂಡಳಿ ಇವುಗಳ ಸಂಯುಕ್ತಶ್ರಯದಲ್ಲಿ ಏರ್ಪಡಿಸಿದ್ದ ರಾಜ್ಯ ಮಟ್ಟದ ದೈವಜ್ಞ ಬ್ರಾಹ್ಮಣ ಮಹಿಳಾ ಸಮಾವೇಶದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಯಾವ ಮನೆಯಲ್ಲಿ ಮಹಿಳೆಗೆ, ಸೊಸೆಗೆ ಹಿಂಸಿಸುತ್ತಾರೋ, ಅಂತಹ ಮನೆಯಲ್ಲಿ ದಾರಿದ್ರ್ಯ ನೆಲೆಸಲಿದ್ದು, ಶಾಂತಿ ಇಲ್ಲದ ಮನೆಯು ಸ್ಮಶಾನಕ್ಕೆ ಸಮವಾಗಿರಲಿದೆ ಎಂದು ಹೇಳಿದರು.

       ಎಲ್ಲಿ ಸ್ತ್ರೀಯರು ಪೂಜಿಸಲ್ಪಡುತ್ತಾರೋ ಅಲ್ಲಿ, ದೇವತಾ ಗಣವೇ ಸ್ಥಿತವಾಗಿರುತ್ತವೆ. ಈ ಜಗತ್ತಿನಲ್ಲಿ ಪ್ರತಿಯೊಂದು ಯಶಸ್ವಿ ಕಾರ್ಯವು ತಾಯಿಂದರಿಂದ ಮಾತ್ರ ಸಾಧ್ಯವಾಗಲಿದೆ ಎಂದ ಶ್ರೀಗಳು, ತಂದೆ-ತಾಯಿ ಹಾಗೂ ಭೂಮಾತೆಗೆ ಸೇವೆ ಸಲ್ಲಿಸುವ ಮಾನವೀಯ ಗುಣವನ್ನು ಬೆಳೆಸಿಕೊಂಡು, ಮೌಲ್ಯಾಧಾರಿತ ಜೀವನ ನಡೆಸಲು ತಾಯಂದಿರ ಮಾರ್ಗದರ್ಶನ ಅತ್ಯವಶ್ಯವಾಗಿದೆ ಎಂದರು.

      ಊರು, ರಾಜ್ಯ, ದೇಶದೆಲ್ಲೆಡೆ ಪ್ರೀತಿ ನೆಲೆಸಬೇಕು. ಸಮಾಜ ಬಾಂಧವರು ಕೂಡಿ ಬಾಳಿ ಪ್ರೀತಿಯಿಂದ ಬಾಳುವುದನ್ನು ಕಲಿಯಬೇಕು. ಎಷ್ಟೇ ದೊಡ್ಡ ಹುದ್ದೆಯಲ್ಲಿದ್ದರೂ, ತಂದೆ-ತಾಯಿಯನ್ನು ಗೌರವಿಸದ, ಪೋಷಿಸದ ಮಕ್ಕಳು ಸಮಾಜಕ್ಕೆ ಮಾರಕವಾಗಲಿದ್ದಾರೆ ಎಂದು ಮಾರ್ಮಿಕವಾಗಿ ನುಡಿದರು.

       ಪ್ರತಿಯೊಬ್ಬರಿಗೂ ಕನಿಷ್ಟ ಶಿಕ್ಷಣ ದೊರೆಯುವಂತವ ವಾತಾವರಣ ಸೃಷ್ಟಿಯಾಗಬೇಕು. ಚಿಂತನಾ ಶಕ್ತಿ, ಧಾರ್ಮಿಕ ಭಾವನೆ ಬೆಳೆಸಿಕೊಳ್ಳುವ ಮೂಲಕ ಸಮಾಜಕ್ಕೆ ಮಂಗಳಕರವಾಗಿರುವ ರೀತಿಯಲ್ಲಿ ಜೀವನ ನಡೆಸುವ ಮುಖೇನ ಸಮಾಜದ ಪ್ರತಿಯೊಬ್ಬರೂ ಇತರರಿಗೆ ಮಾದರಿಯಾಗಿರಬೇಕು. ಆಗ ಮಾತ್ರ ಸಮಾಜದ ಪ್ರಗತಿ, ದೇಶದ ಏಳಿಗೆ ಸಾಧ್ಯ ಎಂದರು.

        ಬೆಂಗಳೂರು ಬೃಹತ್ ಮಹಾನಗರ ಪಾಲಿಕೆ ಸದಸ್ಯೆ ಹೇಮಲತಾ ಸತೀಶ್ ಮಾತನಾಡಿ, ಯಾವುದೇ ಸಮಾಜದ ಅಭಿವೃದ್ಧಿಯು ಆ ಸಮಾಜ ಪಡೆದಿರುವ ರಾಜಕೀಯ ಪ್ರಾತಿನಿಧ್ಯದ ಮೇಲೆ ನಿಂತಿದೆ. ಹೀಗಾಗಿ ನಮ್ಮ ಸಮಾಜವು ರಾಜಕೀಯವಾಗಿ ಬೆಳೆಯಬೇಕಾಗಿದೆ. ಪ್ರಸ್ತುತ ಜಾತಿ ಆಧಾರದ ಮೇಲೆ ರಾಜಕಾರಣ ಸೇರಿದಂತೆ ಎಲ್ಲವೂ ನಡೆಯುತ್ತಿದೆ. ಲಿಂಗಾಯತರು, ಒಕ್ಕಲಿಗರಂತೆ ನಾವು ರಾಜಕೀಯ ಪ್ರಾತಿನಿಧ್ಯ ಪಡೆಯಬೇಕಾದರೆ, ಹಿಂದುಳಿದ ವರ್ಗಗಳನ್ನು ಬಳಸಿಕೊಂಡು ನಾವು ಸಹ ರಾಜಕೀಯ ಮುನ್ನೆಲೆಗೆ ಬರಬೇಕೆಂದು ಕಿವಿಮಾತು ಹೇಳಿದರು.

        ನಮ್ಮ ಸಮಾಜವು ವಿಶ್ವಕರ್ಮ ನಿಗಮದ ವ್ಯಾಪ್ತಿಯಲ್ಲಿ ಬರಲಿದ್ದು, ನಿಗಮದಿಂದ ವಿವಿಧ ಸೌಲಭ್ಯಗಳು ದೊರೆಯಲಿದೆ. ಇವುಗಳ ಸದುಪಯೋಗ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.

         ಶಿವಮೊಗ್ಗದ ಅಪರ ಜಿಲ್ಲಾಧಿಕಾರಿ ಕು.ಅನುರಾಧ ಜಿ. ಮಾತನಾಡಿ, ಒಗ್ಗಟ್ಟಿನಲ್ಲಿ ಬಲವಿದ್ದು, ಸಮಾಜದ ಎಲ್ಲರೂ ಸಂಘಟಿತರಾಗಿ ಯಾವುದೇ ಕಾರ್ಯಗಳನ್ನು ಮಾಡಿದರೆ ಯಶಸ್ಸು ಸಿಗಲಿದೆ. ಸ್ತ್ರೀಯರಿಗೆ ಗೌರವ ಇರುವ ಮನೆಯಲ್ಲಿ ನೆಮ್ಮದಿ ನೆಲೆಯೂರಲಿದೆ. ಮಹಿಳೆ ಅಬಲೆಯಲ್ಲ. ಜಾನ್ಸಿರಾಣಿ ಲಕ್ಷ್ಮೀಬಾಯಿ, ಕಿತ್ತೂರುರಾಣಿ ಚನ್ನಮ್ಮನವರಂತೆ ಸಾಧಿಸುವ ಛಲವಿದ್ದರೆ, ಬೇಕಾದನ್ನು ಸಾಧಿಸಬಹುದಾಗಿದೆ ಎಂದರು.

        ಪ್ರಸ್ತುತ ಯುವಕರು ಫೇಸ್‍ಬುಕ್, ವಾಟ್ಸಾಪ್ ಸೇರಿದಂತೆ ಇತರೆ ಸಾಮಾಜಿಕ ಜಾಲತಾಣದಲ್ಲಿ ಮುಳುಗಿದ್ದಾರೆ. ಅಲ್ಲದೆ, ಸಮಾಜದಲ್ಲಿ ಅತ್ಯಾಚಾರ, ದೌರ್ಜನ್ಯ ಹಾಗೂ ಹೆಣ್ಣು ಭ್ರೂಣಹತ್ಯೆ ನಡೆಯುತ್ತಿದ್ದು, ಇವುಗಳನ್ನು ತಡೆಯುವತ್ತ ದೈವಜ್ಞ ಮಹಿಳಾ ಮಂಡಳಿ ಗಮನ ಹರಿಸಬೇಕೆಂದು ಸಲಹೆ ನೀಡಿದರು.

        ಮೈಸೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಉಪಕುಲಪತಿ ಡಾ.ಸುಧಾರಾವ್ ಮಾತನಾಡಿ, ಬೆಳವಣಿಗೆಯ ದೃಷ್ಟಿಯಿಂದ ಸಮಾಜವು ಸಂಘಟಿತವಾಗುವುದು ಅವಶ್ಯವಾಗಿದೆ. ನಮ್ಮ ಸಮಾಜದವರ ಇತರೆಯವರ ಬಗ್ಗೆಯಾಗಲಿ, ಇನ್ನೊಂದು ಸಮಾಜದವರ ಬಗ್ಗೆಯಾಗಲಿ ಯಾರೂ ಸಹ ಕೆಟ್ಟದಾಗಿ ಮಾತನಾಡಬಾರದು. ಸಮಾಜವನ್ನು ಸಂಘಟಿಸುವ ಸಂಘಟನೆಯ ಗುರಿ, ಧ್ಯೇಯ ಸ್ಪಷ್ಟವಾಗಿರಬೇಕು ಎಂದರು.

      ದೈವಜ್ಞ ಬ್ರಾಹ್ಮಣ ಸಮಾಜದ ಅಧ್ಯಕ್ಷ ಸತ್ಯನಾರಾಯಣ ರಾಯ್ಕರ್ ಮಾತನಾಡಿ, ಸಮಾಜ ಒಗ್ಗೂಡದಿದ್ದರೆ, ಏನನ್ನೂ ಸಾಧಿಸಲಾಗುವುದಿಲ್ಲ. ಆದ್ದರಿಂದ ಸಂಘಟಿತರಾಗುವ ಅವಶ್ಯಕತೆ ಇದೆ. ಸಮಾಜದ ಪೋಷಕರು ಮಕ್ಕಳಿಗೆ ಶಿಕ್ಷಣ ಕೊಡಿಸುವ ಮೂಲಕ ಸಮಾಜದ ಆಸ್ತಿಯನ್ನಾಗಿ ಮಾಡಬೇಕೆಂದು ಸಲಹೆ ನೀಡಿದರು.ಈ ಸಂದರ್ಭದಲ್ಲಿ ಸಮಾಜದ 12 ಜನ ಮಹಿಳೆಯರಿಗೆ ಹೊಲಿಗೆಯಂತ್ರ ವಿತರಿಸಲಾಯಿತು.

      ಕಾರ್ಯಕ್ರಮದಲ್ಲಿ ದೈವಜ್ಞ ಬ್ರಾಹ್ಮಣ ಸಮಾಜದ ರಾಜ್ಯಾಧ್ಯಕ್ಷ ರಾಮರಾವ್ ವಿ. ರಾಯ್ಕರ್, ಕರ್ಕಿಯ ದೈವಜ್ಞ ಬ್ರಾಹ್ಮಣ ಮಠದ ಆರ್.ಎಸ್.ರಾಯ್ಕರ್, ಮಹಾರಾಷ್ಟ್ರದ ಸಂಜಯ್ ಘೋಡಾವತ್ ವಿವಿಯ ಉಪ ಕುಲಪತಿ ಡಾ.ವೆಂಕಟೇಶ್ ಎ. ರಾಯ್ಕರ್, ಅಖಿಲ ಕರ್ನಾಟಕ ದೈವಜ್ಞ ಬ್ರಾಹ್ಮಣ ಮಹಿಳಾ ಮಂಡಳಿ ರಾಜ್ಯಾಧ್ಯಕ್ಷೆ ವಿನಯಾ.ಆರ್. ರಾಯ್ಕರ್, ಜಿಲ್ಲಾ ಘಟಕದ ಅಧ್ಯಕ್ಷೆ ವಿಜಯಾ ಶಂಕರ್ ವಿಠ್ಠಲ್‍ಕರ್ ಮತ್ತಿತರರು ಹಾಜರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap