ದಾವಣಗೆರೆ
ಚುನಾವಣೆಯಲ್ಲಿ ಅಕ್ರಮ ನಡೆಸಲಿಕ್ಕಾಗಿಯೇ ಹಾಸನದಲ್ಲಿ ಮುಗಿಯದ ಕಾಮಗಾರಿಗಳಿಗೆ ರಾಜ್ಯ ಸರ್ಕಾರವು ಗುತ್ತಿಗೆದಾರರೊಬ್ಬರಿಗೆ 1,344 ಕೋಟಿ ರೂ. ಹಣ ಜಮೆ ಮಾಡಿದೆ ಎಂದು ಮಾಜಿ ಸಿಎಂ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇರ ಆರೋಪ ಮಾಡಿದ್ದಾರೆ.
ನಗರದ ಜಿಎಂಐಟಿ ಹೆಲಿಪ್ಯಾಡ್ನಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಸನದಲ್ಲಿ ನಡೆಯುತ್ತಿರುವ ಐದು ಕಾಮಗಾರಿಗಳು ಇನ್ನೂ ಪೂರ್ಣವೇ ಗೊಂಡಿಲ್ಲ. ಆದರೆ, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ತಮ್ಮ ಅಧಿಕಾರವನ್ನು ದುರೂಪಯೋಗ ಪಡೆಸಿಕೊಂಡು ಗುತ್ತಿಗೆದಾರರೊಬ್ಬರಿಗೆ ರಾಜ್ಯ ಸರ್ಕಾರದಿಂದ 1,344 ಕೋಟಿ ರೂ. ಹಣವನ್ನು ಜಮೆ ಮಾಡಿಸಿದ್ದಾರೆ. ಈ ಮೂಲಕ ಚುನಾವಣೆಯಲ್ಲಿ ಅಕ್ರಮ ನಡೆಸಲು ವ್ಯವಸ್ಥಿತ ಷಡ್ಯಂತರ ರೂಪಿಸಿದ್ದಾರೆಂದು ಆಪಾದಿಸಿದರು.
20% ಕಮಿಷನ್ ಸರ್ಕಾರ:
ಈ ಸುಳುವಿನ ಹಿನ್ನೆಲೆಯಲ್ಲಿಯೇ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಗುತ್ತಿಗೆದಾರರ ಮನೆಯ ಮೇಲೆ ದಾಳಿ ನಡೆಸಿದ್ದಾರೆ ಎಂದ ಬಿಎಸ್ವೈ, ಇದೊಂದರಿಂದಲೇ ರಾಜ್ಯದಲ್ಲಿರುವ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಬರೀ ಟೆನ್ ಪರ್ಸೆಂಟ್ ಅಲ್ಲ, ಟ್ವೆಂಟಿ ಪರ್ಸೇಂಟ್ ಕಮಿಷನ್ ಸರ್ಕಾರ ಎಂಬುದು ಸಾಬೀತಾಗಿದೆ ಎಂದು ದೂರಿದರು.
ಮುಂದೆ ಕುಮಾರಸ್ವಾಮಿ ಎಲ್ಲಿದಿಯಪ್ಪ:
ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಬಿಜೆಪಿಯವರು ಭಿಕ್ಷೆ ಎತ್ತುವ ಮೂಲಕ ಚುನಾವಣೆ ಮಾಡುತ್ತಾರೆಯೇ ಎಂಬುದಾಗಿ ಲಘುವಾಗಿ ಮಾತನಾಡಿದ್ದಾರೆ. 37 ಸೀಟು ಪಡೆದು ಅವರು ಮುಖ್ಯಮಂತ್ರಿಯಾಗಿರುವುದೇ ಅಕ್ಷಮ್ಯ ಅಪರಾಧವಾಗಿದ್ದು, ಅಧಿಕಾರದ ಮದದಿಂದ ಹಾಗೂ ಸೊಕ್ಕಿನ ದುರಹಂಕಾರದಿಂದ ಬಾಯಿಗೆ ಬಂದದನ್ನು ಮಾತನಾಡುತ್ತಿದ್ದಾರೆ. ಈ ಲೋಕಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿ ಎಲ್ಲಿದಿಯಪ್ಪ ಎಂಬುದಾಗಿ ಹುಡುಕಾಡಬೇಕಾಗುತ್ತದೆ ಎಂದು ಹೇಳಿದರು.
ಗೌಡರ ಸೋಲು ನಿಶ್ಚಿತ:
ಹೆಚ್.ಡಿ.ದೇವೇಗೌಡರ ಕುಟುಂಬ ರಾಜಕಾರಣದಿಂದ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ರಾಜಕಾರಣ ತಾರಕಕ್ಕೆ ಏರಿದೆ. ಅಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಗೆಲುವು ಸಾಧಿಸುವುದು ನಿಶ್ಚಿತ. ಅದರಂತೆಯೇ ತಮಕೂರು ಲೋಕಸಭಾ ಕ್ಷೇತ್ರದಲ್ಲಿಯೂ ದೇವೇಗೌಡರು ಸೋಲುವುದು ಶತಃಸಿದ್ಧ ಎಂದು ಭವಿಷ್ಯ ನುಡಿದರು.
ಮತ್ತೆ ಮೋದಿ ಪ್ರಧಾನಿ:
ದಾವಣಗೆರೆ ಲೋಕಸಭಾ ಕ್ಷೇತ್ರ ಸೇರಿದಂತೆ ರಾಜ್ಯದ 22 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದು, ದೇಶದಲ್ಲಿ 300ಕ್ಕೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ವಿಜಯಿ ಆಗುವ ಮೂಲಕ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಮುರುಗೇಶ್ ನಿರಾಣಿ, ಬಿಜೆಪಿ ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ್ ಅವರ ಪತ್ನಿ ಗಾಯತ್ರಿ ಸಿದ್ದೇಶ್ವರ್, ಪುತ್ರ ಜಿ.ಎಸ್.ಅನೀತ್ಕುಮಾರ್, ಮುಖಂಡರಾದ ಧನಂಜಯ ಕಡ್ಲೇಬಾಳು, ಧನುಷ್ ರೆಡ್ಡಿ, ದೇವಿರಮ್ಮ ರಾಮಚಂದ್ರಪ್ಪ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








